ಅಕ್ಕನೆಡೆಗೆ- ವಚನ – 40

ಗಿರಿಯಲ್ಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೇ ನವಿಲು?
ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ?
ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ?
ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ ಅನ್ಯಕ್ಕೆಳಸುವುದೆ ಎನ್ನ ಮನ?
ಪೇಳಿರೆ ಕೆಳದಿಯರಿರಾ?

ಗಿರಿಯಲ್ಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೇ ನವಿಲು?

ಭೂಮಿಯು ಅಲ್ಲಲ್ಲಿ ತಗ್ಗು ದಿನ್ನೆಗಳಾಗಿ ಒಂದೊಂದು ಕಡೆ ಎತ್ತರದ ಗುಡ್ಡಗಳಾಗಿರುತ್ತವೆ, ಕೆಲವು ಕಡೆ ಆಳ ಕಣಿವೆಗಳಾಗಿರುತ್ತವೆ. ಇದು ನೈಸರ್ಗಿಕವಾಗಿ ಆಗಿರುವ ಪ್ರಕೃತಿ ಸೌಂದರ್ಯದ ಒಂದು ಭಾಗ. ಇಂತಹ ಎತ್ತರ, ವಿಶಾಲವಾದ ಸ್ಥಳದಲ್ಲಿ ನವಿಲು ಮೈಮರೆತು ನೃತ್ಯ ಮಾಡುತ್ತದೆ. ಅದರೆ ಮನುಷ್ಯ ನಿರ್ಮಿಸಿದ ಹುಲ್ಲಿನ ರಾಶಿಯ ಮಧ್ಯೆ ಹಾಗೆ ಮಾಡಲು ಸಾಧ್ಯವಿಲ್ಲ.

ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ?

ಕೊಳ ಎಂದರೆ ಸರೋವರ. ಅದಕ್ಕೆ ಸಮೀಪದಲ್ಲೆ ಜಲಾಶಯವೂ ಇರುತ್ತದೆ. ಇಂತಹ ಸುಂದರ ವಿಶಾಲ ಜಲಪ್ರದೇಶದಲ್ಲಿ ಹಂಸೆ ಪಕ್ಷಿ ಅಷ್ಟೆ ಅಲ್ಲ ಬೇರೆ ಬೇರೆ ಪಕ್ಷಿಗಳೂ ವಲಸೆ ಬರುತ್ತವೆ. ಭೂಮಿಯ ಮೇಲ್ಪದರು ತಗ್ಗಾಗಿ, ನೀರು ನಿಲ್ಲುತ್ತದೆ. ನಂತರ ಆದೊಂದು ಚಿಕ್ಕ ಹಳ್ಳವಾಗುತ್ತದೆ. ಇಂತಹ ಹಳ್ಳ ಹಂಸೆಯನ್ನು ಎಂದೂ ಆರ್ಷಿಸುವುದಿಲ್ಲ.

ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ?

ಒಂದು ವರ್ಷದಲ್ಲಿ ಆರು ಋತುಗಳು, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ. ಇವುಗಳಲ್ಲಿ ವಸಂತ ಋತು ಎಂದರೆ ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಜೂನ್‌ನಲ್ಲಿ ಅಂತ್ಯಗೊಳ್ಳುತ್ತದೆ. ವಸಂತ ಋತುವನ್ನು ಋತುಗಳ ರಾಜ ಎಂದೂ ಕರೆಯುತ್ತಾರೆ. ಈ ಕಾಲದಲ್ಲಿ ಪ್ರಕೃತಿ ತನ್ನ ಮೈಯೊಡ್ಡಿ ಕಂಗೊಳಿಸುವ ಪರಿಯಲ್ಲಿ ಅರಳಿ ನಿಲ್ಲುತ್ತದೆ. ಗಿಡ, ಮರ, ಹೂ, ಹಣ್ಣುಗಳು ಚಿಗುರಿ ನಳನಳಿಸುತ್ತವೆ. ಇಂತಹ ಸಮಯದಲ್ಲಿ ಮಾವಿನ ಮರವು ಚಿಗುರಿ, ಹೂವಾಗಿ, ಕಾಯಾಗಿ, ಹಣ್ಣಾಗುವ ಹೊತ್ತಲಿ, ಕೋಗಿಲೆ ತನ್ನ ಇಂಪಾದ ಸ್ವರದಲ್ಲಿ ಹಾಡಲು ಆರಂಭಿಸುತ್ತದೆ. ಇಷ್ಟೊಂದು ಆಹ್ಲಾದಕರ ವಾತಾವರಣ ಇಲ್ಲದಿದ್ದರೆ ಅದು ಹಾಡಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಅಕ್ಕ ಎತ್ತಿದ್ದಾಳೆ.

ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ?

ಭ್ರಮರ ಅಂದರೆ ತುಂಬಿ ಅಥವಾ ದುಂಬಿ. ಅದು ಸುವಾಸನೆಯುಳ್ಳ ಹೂವಿನತ್ತ ಆಕರ್ಷಣೆಗೆ ಒಳಗಾಗುತ್ತದೆಯೆ ಹೊರತು, ಪರಿಮಳವಿಲ್ಲದ ಹೂವಿನತ್ತ ಅದು ಸುಳಿಯುವುದಿಲ್ಲ.

ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ ಅನ್ಯಕ್ಕೆಳಸುವುದೆ ಎನ್ನ ಮನ?

ಪ್ರಕೃತಿಯಲ್ಲಿರುವ ವಿವಿಧ ಗಿಡ, ಮರ, ಪ್ರಾಣಿ, ಪಕ್ಷಿ ಇತ್ಯಾದಿಗಳ ಹೋಲಿಕೆಯ ಉದಾಹರಣೆ ಕೊಡುತ್ತ, ಅಕ್ಕ ತಾನೂ ಈ ಪ್ರಕೃತಿಯ ಒಂದು ಅಂಶ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿದ್ದಾಳೆ. ಮನುಷ್ಯನ ಗುಣ, ಸ್ವಭಾವ, ಮನೋಧರ್ಮ ಸಮಯದ ಜೊತೆಯಲ್ಲಿಯೇ ಬದಲಾಗುವ ಮುಖವಾಡ ಹೊತ್ತಿರುತ್ತಾನೆ. ಆದರೆ ನಿಸರ್ಗ ಯಾವತ್ತೂ ಬಣ್ಣ ಬದಲಿಸುವುದಿಲ್ಲ. ಅದಕ್ಕೆ ಒಂದೇ ಒಂದು ಮುಖ ಎನ್ನುವ ಸತ್ಯವನ್ನು ಅರುಹುವ ಪ್ರಯತ್ನ ಅಕ್ಕನ ಮನದಲ್ಲಿದ್ದಂತೆ ತೋರುತ್ತದೆ. ಅಕ್ಕನಿಗೆ ತನ್ನ ಹುಡುಕಾಟದ ಗಮ್ಯ ದೇವ ಚೆನ್ನಮಲ್ಲಿಕಾರ್ಜುನ ಎನ್ನುವುದು ಮೊದಲೇ ತಿಳಿದಿತ್ತು. ಅವನಲ್ಲದೆ ಬೇರೆ ಕಡೆಗೆ ತನ್ನ ಮನಸು ಹರಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾಳೆ.

ಪೇಳಿರೆ ಕೆಳದಿಯರಿರಾ?

ಇಡೀ ವಚನದಲ್ಲಿ ಅಕ್ಕಮಹಾದೇವಿ ತನ್ನ ಗೆಳತಿಯರಿಗೆ ಪ್ರಶ್ನೆ ಕೇಳುತ್ತಲೇ ಸವಾಲು ಹಾಕುತ್ತಾಳೆ. ಅದರೊಂದಿಗೆ ತನ್ನ ಬದುಕಿನ ಬದ್ಧತೆಯನ್ನು ದೃಢೀಕರಿಸುತ್ತ ಸಾಗುತ್ತಾಳೆ.

ಈ ವಚನದಲ್ಲಿ ಅದ್ಭುತ ಪ್ರತಿಮೆಗಳನ್ನು ಬಳಸಿ ಹೋಲಿಸುವ ಅಕ್ಕನ ಶೈಲಿ ಅನನ್ಯ. ಪ್ರತಿ ಸಾಲಿನ ಅರ್ಥವನ್ನು ಒಂದೊಂದಾಗಿ ನೋಡುತ್ತ ಆನಂದಿಸಲು ಅಕ್ಕನ ಕಾವ್ಯ ಕಟ್ಟುವ ಕಲೆಯೆ ಕಾರಣ. ಗಿರಿ ಮತ್ತು ನವಿಲು, ಕೊಳ ಮತ್ತು ಹಂಸೆ, ಮಾಮರ ಮತ್ತು ಕೋಗಿಲೆಯ ಗಾನ, ಹೂವಿನ ಪರಿಮಳ ಮತ್ತು ದುಂಬಿ, ಹೀಗೆ ಇವೆಲ್ಲವನ್ನೂ ಹೇಳುತ್ತ ತನ್ನ ಮತ್ತು ಆತ್ಮ ಸಂಗಾತಿ ಚೆನ್ನಮಲ್ಲಿಕಾರ್ಜುನನ ಸಂಬಂಧವನ್ನು ಅನಾವರಣ ಮಾಡುವ ಪರಿ ಸಂಮ್ಮೋಹನಗೊಳಿಸುವಂತಿದೆ. ಮನುಷ್ಯ ಮತ್ತು ನಿಸರ್ಗದ ಅವಿನಾಭಾವ ಸಂಬಂಧವನ್ನು ಇಲ್ಲಿ ಗ್ರಹಿಸುತ್ತೇವೆ. ಅಕ್ಕ ಹುಟ್ಟಿನಿಂದಲೇ ವಿರಾಗಿಣಿಯಾಗಿರಲು ಮೂಲ ಪ್ರಕೃತಿಯೊಂದಿಗಿನ ಬಿಡಿಸಲಾಗದ ಬಾಂಧವ್ಯ ಎನ್ನುವುದೂ ಸ್ಪಷ್ಟವಾಗುತ್ತದೆ. ಹೀಗೆ ಅವಳಲ್ಲಿರುವ ನಿಷ್ಠೆ ಮನುಕುಲಕ್ಕೆ ಅನುಕರಣೀಯ.

ಸಿಕಾ

Don`t copy text!