ಇಸ್ಲಾಂ ಧರ್ಮ–ಮೋಹರಮ್
ಜಗತ್ತಿನ ಹಲವು ಧರ್ಮಗಳ ಉದಯದ ಇತಿಹಾಸವನ್ನು ಅವಲೋಕಿಸಿದಾಗ ಕಂಡುಬಂದ ಸತ್ಯವೇನೆಂದರೆ ಆಯಾ ಪ್ರಾದೇಶಿಕ ಸಮಸ್ಯೆಗಳಾದ ದೌರ್ಜನ್ಯ, ಶೋಷಣೆ, ಅಂದಕಾರ,ಅಜ್ಞಾನ ಕ್ರೌರ್ಯ ಮುಂತಾದವುಗಳನ್ನು ಬೇರು ಸಹಿತ ಕಿತ್ತು ಹಾಕಲು ಜನ್ಮ ತಾಳಿದವು. ಬೌದ್ಧ ಧರ್ಮ, ಜೈನ ಧರ್ಮ, ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ,ಝರತುಷ್ಟ್ರ, ಸಿಖ್ ಧರ್ಮ, ಲಿಂಗಾಯತ ಧರ್ಮ ಇನ್ನೂ ಹಲವಾರು ಧರ್ಮಗಳು ಮಾನವನ ಉದ್ಧಾರಕ್ಕಾಗಿ ಜನ್ಮ ತಾಳಿದವು. ಆದರೆ ದುರ್ದೈವದ ಸಂಗತಿ ಎಂದರೆ ಮೂಲ ಧರ್ಮದ ತತ್ವ ಸಿದ್ಧಾಂತಗಳನ್ನು ಬಿಟ್ಟು ಯಾವ ಯಾವ ಧರ್ಮವು ಯಾವ ಯಾವ ತತ್ವ ಸಿದ್ಧಾಂತಗಳನ್ನು ಹೇಳಿದ್ದವೋ ಅವುಗಳಿಗೆ ವಿರುದ್ಧವಾಗಿ ಇಂದು ಆಚರಣೆಗಳಲ್ಲಿ ನಾವು ಕಾಣುತ್ತಿದ್ದೇವೆ.
ಅವುಗಳಲ್ಲಿ ಇಂದು ಇಸ್ಲಾಂ ಧರ್ಮದ ಆಚರಣೆಗಳಲ್ಲಿ ಒಂದಾದ ಮೋಹರಂ ಹಬ್ಬದ ಬಗೆಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಸಾವಿರಾರು ವರ್ಷಗಳ ಹಿಂದೆ ಅರಬ್ ದೇಶಗಳಲ್ಲಿ ಜನರು ಸ್ವೇಚ್ಛೆಯಿಂದ ವರ್ತಿಸುತ್ತಿದ್ದರು.ಅವರಲ್ಲಿ ಬಹುತೇಕರು ಅನಕ್ಷರಸ್ಥರಾಗಿದ್ದರು.ಜ್ಞಾನ ವಿಜ್ಞಾನದ ಗಂಧಗಾಳಿ ಗೊತ್ತಿರಲಿಲ್ಲ. ವ್ಯಭಿಚಾರ, ಮದ್ಯಪಾನ, ಜೂಜಾಟ, ಕಳ್ಳತನ, ಲೂಟಿ ಮುಂತಾದ ಸಮಾಜ ದ್ರೋಹಿ ಚಟುವಟಿಕೆಗಳು ವ್ಯಾಪಕವಾಗಿದ್ದವು. ವಿಗ್ರಹ ಆರಾಧನೆ ವ್ಯಾಪಕವಾಗಿ ಹರಡಿತ್ತು. ಇಂತಹ ಸಂದರ್ಭದಲ್ಲಿ ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಇವರು ದೇವವಾಣಿಯನ್ನು ಅತ್ಯಂತ ಸರಳ ರೂಪದಲ್ಲಿ ಬೋಧನೆ ಮಾಡಿ ಇಸ್ಲಾಂ ಧರ್ಮದ ಪುನರುಜ್ಜೀವನಕ್ಕೆ ನಾಂದಿ ಹಾಡಿದರು.
ಅರಬೀ ಭಾಷೆಯಲ್ಲಿ ಇಸ್ಲಾಮ್ ಎಂದರೆ ಅನುಸರಣೆ ಅಥವಾ ವಿಧೇಯನಾಗಿರು.
ಇಸ್ಲಾಂ ಧರ್ಮದ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಮೊಹರಂ ಒಂದು ವಿಶಿಷ್ಟವಾದ ಹಬ್ಬವಾಗಿದೆ.
ಹಜರತ್ ಮುಹಮ್ಮದ್ ಪೈಗಂಬರ್ ಅವರ ಉತ್ತರಾಧಿಕಾರಿಗಳಾಗಿ ಹಸೇನ್ ಮತ್ತು ಹುಸೇನ್ ಕಾರ್ಯ ಮಾಡುತ್ತಿದ್ದರು.ಆಗ ಇವರ ವಿರೋಧಿ ಬಣ ಹುಟ್ಟಿಕೊಂಡಿತು. ಖಲೀಫರು ಇವರ ತತ್ವ ಸಿದ್ಧಾಂತಗಳನ್ನು ವಿರೋಧಿಸಲಾರಂಭಿಸಿದರು. ಯಾಜೀದ್ ನಾ ಪಡೆಗಳು ಹಸನ್ ಮತ್ತು ಹುಸೇನರ ಮೇಲೆ ಯುದ್ಧ ಸಾರಿದರು. ಯುದ್ಧದಲ್ಲಿ ಹಸನ್ ಈತನ ರುಂಡವನ್ನು ಕತ್ತರಿಸಿ ಕುಡಿದ ಮತ್ತಿನಲ್ಲಿ ಒಂದು ಕೋಲಿಗೆ ಸಿಕ್ಕಿಸಿ ಕುಣಿದು ತಮ್ಮ ಜಯವನ್ನು ವಿಜ್ರಂಭಿಸಿದರು.
ನಂತರ ದೀರ್ಘ ಕಾಲದ ನಂತರ ಹುಸೇನ್ ನನ್ನು ಬಂಧಿಸಿ ಹತ್ತು ದಿನಗಳ ಕಾಲ ಜೈಲಿನಲ್ಲಿ ಇಟ್ಟು ಅನ್ನ ನೀರು ಕೊಡದೆ ಅತ್ಯಂತ ಕ್ರೂರವಾಗಿ ಕೊಲೆ ಮಾಡುತ್ತಾರೆ.ಇದನ್ನೇ ಅಶುರಾ ದಿನ ಎಂದು ಕರೆಯಲಾಗುತ್ತದೆ.
ಈ ಹಬ್ಬ ಸಂಭ್ರಮದಿಂದ ಆಚರಿಸುವ ಹಬ್ಬವಲ್ಲ. ಮುಹರ್ ಈ ಪದದ ಅರ್ಥವೇ ನಿಷಿದ್ಧ ಎಂಬುದಾಗಿದೆ.
ಕನ್ನಡದ ಮೊಟ್ಟಮೊದಲ ಮಹಮ್ಮದೀಯ ಕವಿ ಸಂತ ಶಿಶುನಾಳ ಶರೀಫರು ಹೀಗೆ ಹೇಳಿದ್ದಾರೆ.
ಮಾಡಬಾರದು ಮೊಹರಂದ ಹಬ್ಬ
ಮಾಡಬಾರ್ದೋ ಈ ಮೊಹರಮ್ ದ್ಹಬ್ಬ
ಮಾಡಲಿದು ಕೇಡಲಿದು ಕಾಡ ಕರ್ಬಲ
ಕಡಿದಾಡುವ ಹಬ್ಬ ಮಾಡಬಾರ್ದೋ
ಕತ್ತಲ ಶಹಾದತ್ ಮಥದೋನ್ಮತಗತಿ
ಶರಣರ ಸಮ್ಮತವಾಗದ ಹಬ್ಬ ಮಾಡಬಾರ್ದೋ
ತಾನೇ ಶಿಶುವಿನಾಳ ಜ್ಞಾನ ದಲಾವಿಯ
ಮೌನ ರಿವಾಯತ ಮಂತ್ರ ಓದಿ ಹಬ್ಬ ಮಾಡಬಾರ್ದೋ
ತಾಬೂತಿ ನೊಳಗೊಂದು ತಗಡಿನ ಹಸ್ತವ ಕಂಡು ಶಿಶುನಾಳಧೀಶಗ ನಗಿ ಬಂತು
ಸಾಲ ತುರುಕರು ಜತ್ತು ಮೇಲೆ ಡೋಲಿಯ ಹೊತ್ತು
ಅಲ್ಬಿದಾ ಹೇಳುವಾಗ ಜೊಲ್ಲು ಬಿತ್ತು ಗಡ್ಡದ ಮ್ಯಾಲ
ವಲ್ಲಭ ಶಿಶುನಾಳ ಬಲಿದ ಗುರುವಿನ
ಮುಲ್ಲಾ ಓದಿಕಿಮಾಡಿ ಬೆಲ್ಲ ಹಂಚೋದು ಕಂಡು
ಭಾರತದಲ್ಲಿ ಮೋಹರಂ
ಶಿಯಾಪಂಗಡಿಕ್ಕೆ ಸೇರಿದ ಚಕ್ರವರ್ತಿ ತೈಮೂರ್ ಲ್ಯಾಂಗ್ ಎಂಬವನು ಟರ್ಕಿ ದೇಶದ ಒಬ್ಬ ಶ್ರೇಷ್ಠ ಅರಸ ಈತ 1398ರಲ್ಲಿ ಭಾರತಕ್ಕೆ ದಂಡೆತ್ತಿ ಬಂದು ಕೆಲ ಸಾಮ್ರಾಜ್ಯಗಳನ್ನು ವಶಪಡಿಸಿಕೊಂಡು ಇಲ್ಲಿಯೇ ಇರಲಾರಂಭಿಸಿದನು.
ಆದರೆ ಆತನಿಗೆ ಇರಾಕ್ ನ ಕರ್ಬಲದಲ್ಲಿ ನಿರ್ಮಿಸಲಾದ ಇಮಾಮ್ ಹುಸೇನರ ಸಮಾಧಿಯ ದರ್ಶನ ಮಾಡಲು ಸಾಧ್ಯವಾಗದಿದ್ದಾಗ ಇಲ್ಲಿಯೇ ಬಿದಿರು ಮತ್ತು ಬಣ್ಣದ ಹಾಳಿಗಳಿಂದ ಸಮಾಧಿಯ ಪ್ರತಿಕೃತಿಯನ್ನು ಮಾಡಿ ಪೂಜಿಸಲಾರಂಭಿಸಿದ. ಆಗ ದೆಹಲಿ ಮತ್ತು ಆತನ ಸಾಮ್ರಾಜ್ಯದ ಸುತ್ತಮುತ್ತಲಿನ ಜನ ಆತನ ಆಜ್ಞೆಯಂತೆ ಮೊಹರಂ ಹಬ್ಬವನ್ನು ಅತ್ಯಂತ ಪೂಜ್ಯ ಭಾವದಿಂದ ಆಚರಿಸಲು ಪ್ರಾರಂಭಿಸಿದರು. ಹಿಂದುಗಳು ಕೂಡಾ ಆಚರಿಸಲಾಂಭಿಸಿದರು. ಬಲಿದಾನಕ್ಕೆ ಗೌರವ ಸೂಚಿಸಿ ತಮ್ಮ ಆರಾಧ್ಯ ದೈವ, ಪೌರಾಣಿಕ ಪುರುಷರನ್ನು ಹೋಲಿಕೆ ಮಾಡಿ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದರು. ಆಗಲೇ ಇಸ್ಲಾಂ ಧರ್ಮದ ಮೂರ್ತಿ ಪೂಜೆ ವಿರೋಧ ಸಿದ್ಧಾಂತಕ್ಕೆ ಪೆಟ್ಟು ಬಿತ್ತು.
ಹಿಂದೂ ಮುಸಲ್ಮಾನ್ ಹದಿನೆಂಟು ಜಾತಿಗೆ
ಕುಂದನಿಡಿಸಿ ಕುಣಿದಾಡುವ ಮೊಹರಂ
ರೂಢಿಪ ಶಿಶುನಾಳಧೀಶಗ ಸಲ್ಲದ
ಖೋಡಿ ರಿವಾಯತ್ ಹಾಡುವ ಮೊಹರಂ
ಸಾಂಪ್ರದಾಯಿಕ ಇಸ್ಲಾಂ ಧರ್ಮಿಯರು ಈ ಮೊಹರಂ ಹಬ್ಬವನ್ನು ಅತ್ಯಂತ ನಿಷ್ಠೆಯಿಂದ ದುಃಖದ ದಿನವೆಂದು ಭಾವಿಸಿ ಉಪವಾಸ ವೃತ ಕೈಕೊಂಡು ಮನೆ ಮಸಿದಿಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ.
ಇದು ನಿಜವಾದ ಮೋಹರಂ. ಇಸ್ಲಾಂ ಧರ್ಮವನ್ನು ದೂಷಿಸುವ ಜನ ಮೊದಲು ಕುರ್ ಆನ್ -ಹದೀಸ್ ಗಳನ್ನು ಓದಬೇಕು.
ಜಗತ್ತಿನ ಯಾವ ಧರ್ಮವೂ ಕೆಟ್ಟಿಲ್ಲ ಆಚರಣೆ ನೆಪದಲ್ಲಿ ದುರ್ಮಾರ್ಗದಲ್ಲಿ ನಡೆಯುತ್ತಿರುವ ಮನಸ್ಸುಗಳು ಬದಲಾಗಬೇಕು.
ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲ ಸಂಗಯ್ಯನಂತಲ್ಲ ದೊಲ್ಲನಯ್ಯಾ
ರವೀಂದ್ರ. ಆರ್. ಪಟ್ಟಣ.
ಮುಳಗುಂದ-ರಾಮದುರ್ಗ