ಆಡಬಹುದು ಪಾಡಬಹುದಲ್ಲದೆ ನುಡಿದಂತೆ
ಆಡಬಹುದು ಪಾಡಬಹುದಲ್ಲದೆ ನುಡಿದಂತೆ
ನಡಿಯಬಾರದು ಎಲೆ ತಂದೆ.
ಲಿಂಗಕ್ಕೆ ಶರಣೆನ್ನಬಹುದಲ್ಲದೆ,
ಜಂಗಮಕ್ಕೆ ಶರಣೆನ್ನಬಾರದೆಲೆ ತಂದೆ.
ಚೆನ್ನಮಲ್ಲಿಕಾರ್ಜುನದೇವಾ,ನಿಮ್ಮ ಶರಣರು ನುಡಿದಂತೆ ನಡೆಯಬಲ್ಲರು ಎಲೆ ತಂದೆ.
ಸ್ತ್ರೀ ಕುಲದ ತಿಲಕ ಶಿರೋಮಣಿ ವೈರಾಗ್ಯದ ತವ ನಿಧಿ ಅಕ್ಕ ಮಹಾದೇವಿಯವರು.ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ತೊರೆದು ಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾ ಹೊರಟ ಇವರಿಗೆ ಅನೇಕ ರೀತಿಯ ಬಯಂಕರ ಕಷ್ಟಗಳು,ಪರೀಕ್ಷೆಗಳು ಎದುರಾಗುತ್ತವೆ.ಆ ಎಲ್ಲಾ ಪರೀಕ್ಷೆಗಳನ್ನು ಎದುರಿಸುತ್ತಾ ಅಪ್ಪ ಬಸವಣ್ಣನವರ ಮತ್ತು ಬಸವಾದಿ ಶರಣರ ಅನುಭಾವ ಮಂಟಪಕ್ಕೆ ಬರುತ್ತಾರೆ. ಅಕ್ಕ ಅಲ್ಲಿನ ಶರಣತ್ವದ ಸಾದ್ರಶ್ಯ ಸ್ವರೂಪ ಕಂಡು ಈ ವಚನ ಹೇಳಿರಬಹುದು ಎಂದು ನನಗೆ ಅನಿಸುತ್ತದೆ.
ಮಾತು ಆಡುವುದು ಸುಲಭ, ಅದನ್ನು ಇನ್ನೊಬ್ಬರಿಗೆ ಹೇಳುವುದು ಅದಕ್ಕಿಂತ ಸುಲಭ,
ಆದರೆ ಆಡಿದಂತೆ ,ಇನ್ನೊಬ್ಬರಿಗೆ ಹೇಳಿದಂತೆ ನಡೆದುಕೊಳ್ಳುವದು ಅತ್ಯಂತ ಕಠಿಣ. ಇದು ಕೇವಲ ನಿಮ್ಮ ಶರಣರಿಗೆ ಮಾತ್ರ ಸಾಧ್ಯ ಎಂದು ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನಿಗೆ ಶರಣರ ದ್ರಡಸಂಕಲ್ಪವನ್ನು ವರ್ಣಿಸುತ್ತಾಳೆ ಅಕ್ಕಮಹಾದೇವಿ.
ಲಿಂಗಕ್ಕೆ ಶರಣೆನ್ನಬಹುದಲ್ಲದೆ ಜಂಗಮಕ್ಕೆ ಶರಣೆನ್ನುವದು ಸಾಮಾನ್ಯ ಅಲ್ಲ, ಅದು ಕೇವಲ ಶರಣರಾದವವರಿಗೆ ಸಾಧ್ಯ ಎಂಬುದನ್ನು ಹೇಳುವಲ್ಲಿ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಸ್ಥಾವರಗಳಿಗೆ ಜೊತು ಬಿದ್ದು ದೊಡ್ಡವರೆನ್ನಿಸಿಕೊಳ್ಳಬಹುದು.
ಜಂಗಮಕ್ಕೆ ಶರಣೆನ್ನುವದು ಬಹು ಕಠಿಣ.
ಈ ತತ್ವವನ್ನು ತಮ್ಮ ಬದುಕಿನಲ್ಲಿ ಪರಿಪಾಲಿಸುವ ನಿಷ್ಠೆ, ಶರಣರಾದವವರಿಗೆ ಮಾತ್ರ ಸಾಧ್ಯ ಎಂಬುದನ್ನು ಯಾವ ಮುಲಾಜಿಲ್ಲದೆ ಹೇಳುತ್ತಾರೆ ಅಕ್ಕ ಮಹಾದೇವಿ.
.ಕಷ್ಟ-ನಷ್ಟಗಳನ್ನು , ದುಃಖ-ದುರಿತಗಳನ್ನು ಎದುರಿಸುವ ಸ್ಥಿತಪ್ರಜ್ಞೆ ಸ್ಥಿತಿ ಶರಣನಾದವನಿಗೆ ಮಾತ್ರ ಇರುವುದು.
ನುಡಿದಂತೆ ನಡೆ, ನಡೆದಂತೆ ನುಡಿ
ಇದು ಶರಣರ ಮೂಲಮಂತ್ರ.
ಅಕ್ಕನ ದ್ರಷ್ಟಿಯಲ್ಲಿ “ಶರಣತ್ವ” “ಶರಣ” ಅಂದರೆ ಹೇಗೆ ಇರುವನು.
ಅರಿದಡೆ ಶರಣ ಮರೆದಡೆ ಮಾನವ
ಈ ಮಾತನ್ನು ಪುಷ್ಟೀಕರಿಸುವ ಇನ್ನೊಂದು ಅಕ್ಕನ ವಚನ ನೋಡೋಣ ಬನ್ನಿ ಬಂಧುಗಳೇ…!
ಮುತ್ತು ನೀರಲಾಯಿತ್ತು,
ವಾರಿಕಲ್ಲು ನೀರಲಾಯಿತ್ತು,
ಉಪ್ಪು ನೀರಲಾಯಿತ್ತು.
ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು,
ಮುತ್ತು ಕರಗಿದುದನಾರೂ ಕಂಡವರಿಲ್ಲ.
ಈ ಸಂಸಾರಿಮಾನವರು ಲಿಂಗವಮುಟ್ಟಿ
ಭವಭಾರಿಗಳಾದರು.
ನಾ ನಿಮ್ಮಮುಟ್ಟಿ ಕರಿಗೊಂಡೆನಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ
ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಅನುಭಾವ ಚಿಂತನ ಮಹಾಮನೆಯ ನಿತ್ಯ ನಡೆಯುವ ಪರಿ, ಇಂದಿನ ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಬೇರು ಅದಾಗಿತ್ತು.
“ವೀರ ವೀರಾಗಿಣಿ, ಸ್ತ್ರೀ ಕುಲದ ತಿಲಕ ಶಿರೋಮಣಿ” ವೈರಾಗ್ಯ ನಿಧಿಯಾದ ಅಕ್ಕಮಹಾದೇವಿ ವಯಸ್ಸಿನಲ್ಲಿ ಅತ್ಯಂತ ಚಿಕ್ಕವಳು ಮತ್ತು ಅವಳು ಶರಣರ ಸಾಂಗತ್ಯದಲ್ಲಿ ಸ್ವಲ್ಪೇ ಕಾಲವಿದ್ದರೂ ಅವಳ ಅರಿವು ಮೇರು ಪರ್ವತ.
ಅದರ ಒಂದು ಸಾಕ್ಷ್ಯಚಿತ್ರ ಈ ಮೇಲಿನ ಸುಳ್ನೂಡಿ.
ಸ್ವಾತಿ ಮಳೆಯ ನೀರಿನ ಹನಿಯೊಂದು ಚಿಪ್ಪಿನಲ್ಲಿ ಬಿದ್ದರೆ* ‘ಮುಂದೆ ‘ ಮುತ್ತಾ’ ಗಿ ರೂಪುಗೊಳ್ಳುತ್ತದೆ. ಅಂದರೆ ಮುತ್ತು ನೀರಿನಿಂದಲೇ ಆಗುತ್ತದೆ. ಅದೇ ನೀರಿನಿಂದಲೇ ಉಪ್ಪು, ನೀರ್ಗಲ್ಲು, ಹಿಮ ಬಂಡೆಗಳು ನಿರ್ಮಾಣಗೊಳ್ಳುತ್ತವೆ. ಹೀಗೆ ಮುತ್ತು, ಹಿಮ ಬಂಡೆ ಮತ್ತು ಉಪ್ಪು ಇವುಗಳ ಮೂಲ ದ್ರವ್ಯ ನೀರು.
ನೀರಿಲ್ಲದೆ ಇವು ರೂಪಗೊಳ್ಳಲಾರವು. ವಿಚಿತ್ರವೆಂದರೆ ನೀರಿನಿಂದಲೇ ಹುಟ್ಟಿದ ಈ ಮೂರು ವಸ್ತುಗಳೆಲ್ಲಾ, ಹಿಮ ಬಂಡೆ, ಉಪ್ಪು, ಇವೆರಡು ಅದೇ ನೀರಿನಲ್ಲಿ ಕರಗಿಬಿಡುತ್ತವೆ. ಆದರೆ ಇವುಗಳ ಜೊತೆಗೆ ನೀರಿನಿಂದ ರೂಪುಗೊಂಡ* ‘ ಮುತ್ತು‘ ಕರಗುವುದಿಲ್ಲ, ಕಂದುವುದಿಲ್ಲ, ಕುಂದುವುದಿಲ್ಲ.
ಇದೇ ರೀತಿ ಈ ಸಾಂಸಾರಿಕ ಜೀವನದಲ್ಲಿ ಬದುಕುತ್ತಿರುವ ಮಾನವರು ಲಿಂಗವನ್ನು ಧರಿಸಿ ಸ್ಥಾವರ ಪೂಜೆ ಅರ್ಚನೆ ಮಾಡಿ ಭವಭಾರಿಗಳಾದರು. ಅಂದರೆ ಲಿಂಗವನ್ನು ಆಯತ ‘ ಮಾಡಿಕೊಂಡರೆ ಹೊರತು ಅದು ಮುಂದೆ ಅವರಿಗೆ ‘ ಸ್ವಾಯತ ‘ , ‘ಸನ್ನಿಹಿತ ‘ ವಾಗಲೇ ಇಲ್ಲ. ಅಂಗದಲ್ಲಿ ಲಿಂಗ ಧರಿಸಿ ಲಿಂಗಧಾರಿಗಳಾಗಿ ಅದನ್ನೇ ದೇವರ ನಿಜ ಸ್ವರೂಪವೆಂದು ಬಗೆದು ‘ಸ್ಥಾವರ ‘ ವಾಗಿಸಿ ಈ ಭವದ ಚಕ್ರದಲ್ಲಿ ಸಿಲುಕಿ ಭಾರವಾಗಿ ಬಿಟ್ಟರು. ಆದರೆ ನಾನು ನಿಮ್ಮ ಸಂಗ ಮಾಡಿ (ಸನ್ನಿಹಿತ ಮಾಡಿಕೊಂಡು) ಈ ಲೌಕಿಕ ಸಂಸಾರದ ಬಂಧನಗಳನ್ನು ದಹಿಸಿಕೊಂಡು ಪರಿಶುದ್ಧಳಾದೆನಯ್ಯ ಚೆನ್ನಮಲ್ಲಿಕಾರ್ಜುನ ಎಂಬುದಾಗಿ ಅಕ್ಕ ನುಡಿಯುತ್ತಾಳೆ.
ಲೌಕಿಕ ಸಂಸಾರವೆಂಬುದೊಂದು ಮಹಾಸಾಗರ . ಇಲ್ಲಿ ಉಪ್ಪು ಹಿಮಬಂಡೆಗಳಂತಹ ಆಶಾಶ್ವತವಾದ ವಸ್ತುಗಳ ಬೆನ್ನಟ್ಟಿ ಅದೇ ಪರಮ ಸತ್ಯವೆಂದು ಅಪ್ಪಿಕೊಂಡು ಬಿಡುತ್ತೇವೆ. ಆದರೆ ಉಪ್ಪು, ಹಿಮ, ಕರಗಿ ನೀರಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಂತೆ, ಶಾಶ್ವತವೆಂದು ನಾವು ನಂಬಿದವುಗಳು ನಾಶವಾದುದರ ಫಲವಾಗಿ ಪುನಃ ಅದೇ ಭವಬಂಧನದಲ್ಲಿ ಬೀಳುತ್ತೇವೆ. ಹೀಗೆ ಕ್ಷಣಿಕ ಸುಖದ ಬೆನ್ನಟ್ಟಿ ಭವಚಕ್ರದಲ್ಲಿ ಸಿಲುಕುತ್ತಿರುವ ಮನುಜರನ್ನು ಕಂಡು ಮರುಗುವ ಅಕ್ಕ , ಮಾರ್ಗದರ್ಶನ ತೋರಬಲ್ಲ ಅರಿವೆಂಬ ಗುರು ದೊರೆತಾಗ ಮಾತ್ರ ಇವರಿಗೆ ಮುಕ್ತಿ ಸಾಧ್ಯವೆನ್ನುತ್ತಾಳೆ. ಅಂತಹ ಸತ್ಪಥ ತೋರಬಲ್ಲ ಗುರುವನ್ನು (ಅರಿವು) ಹುಡುಕುವ ಅಭೀಪ್ಸೆ ನಮ್ಮಲ್ಲಿ ಜಾಗೃತಗೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. ತನಗೆ ಚೆನ್ನಮಲ್ಲಿಕಾರ್ಜುನನೆಂಬ ಅರಿವೆಂಬ ಗುರು ದೊರೆತು ಮುಕ್ತಳಾದೆ ಎನ್ನುತ್ತಾಳೆ.
ಅರಿವೇ ಗುರು ಆಚಾರವೇ ಲಿಂಗ ಅನಭಾವವೇ ಜಂಗಮ ಈ ಸಿದ್ಧಾಂತ ಶರಣರದ್ದು.
ಅಕ್ಕ ನಮ್ಮೇಲ್ಲರಂತೆಯೇ…….ಇದೇ ಲೌಕಿಕ ಸಂಸಾರದಲ್ಲಿ ಜನಿಸಿದ್ದರೂ ಸಹ ವಾರಿಕಲ್ಲು, ಉಪ್ಪಿನಂತಹ ಕ್ಷಣಿಕ ಸುಖದ ವಸ್ತುಗಳನ್ನು ಬಯಸದೆ ಶಾಶ್ವತವಾದ *’ಮುತ್ತಿ’* ನಂಥ ಪರಮಸತ್ಯ ಸುಖವನ್ನರಸಿ ಅಪ್ಪಿಕೊಂಡು ಪರಮ ಸುಖಿಯಾದರು ವೈರಾಗ್ಯ ನಿಧಿ ಅಕ್ಕ ಮಹಾದೇವಿ.
ಭಗವಂತ ಪ್ರತಿನಿತ್ಯವೂ ನಮ್ಮ ಮುಂದೆ, ಕ್ಷಣಿಕ ಹಾಗೂ ಶಾಶ್ವತ ಸುಖ ನೀಡುವ ವಸ್ತುಗಳನ್ನು ಹರವುತ್ತಾನೆ. ಆಯ್ಕೆ ನಮ್ಮದೇ. ಅಂದರೆ ಭವಿಗಳಾಗುವುದೋ, ಭವಮುಕ್ತರಾಗಿ ಅರಿವಿನ ಮಹಾ ಬೆಳಗಿನಲ್ಲಿ ಬೆಳಗಾಗಿ ಲೀನವಾಗುವದೋ, ಎಲ್ಲವೂ ನಮ್ಮ ಕೈಯಲ್ಲಿಯೇ ಇದೆ.
ಇದನ್ನೇ ಅಪ್ಪ ಬಸವಣ್ಣನವರು ಹೇಳುತ್ತಾರೆ
ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ
ದೂರ, ದುರ್ಜನರ ಸಂಗವದು ಭಂಗವಯ್ಯಾ
ಸಂಗವೆರಡುಂಟು: ಒಂದ ಬಿಡು, ಒಂದ ಹಿಡಿ,
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ.
ನಮ್ಮ ಎದುರಿಗೆ ಎಲ್ಲವೂ ಇದೆ ಒಳ್ಳೆಯದು, ಕೆಟ್ಟದ್ದು. ಆಯ್ಕೆ ಮಾತ್ರ ನಮ್ಮದು.ಶರಣರ ಆಯ್ಕೆ ಯಾವಾಗಲೂ ಸರ್ವೋತೊಮುಖ, ಶಾಶ್ವತ ಸತ್ಯವೇ ಆಗಿರುತ್ತದೆ.
ಇದುವೇ ಶರಣರ ಪರಿಪೂರ್ಣ ತತ್ವ. ಆದ್ದರಿಂದಲೇ ಶರಣರು ನಿತ್ಯ ತತ್ಪರರು, ಶರಣರ ವಚನಗಳು ಮನುಜನಿಗೆ ನಿತ್ಯ ಬದುಕಿನ ಮಾರ್ಗ ಸೂಚಿಗಳು.ಇವುಗಳನ್ನು ಅಧ್ಯಯನ ಮಾಡುವುದು, ಅವುಗಳ ಮೌಲ್ಯಗಳನ್ನು ಆಚರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಅಂದಾಗ ಮಾತ್ರ ನಾವು ಈ ಶರಣ ಸಂಸ್ಕೃತಿಯ ಶಾಶ್ವತ ಮುತ್ತುಗಳಾಗಲು ಸಾದ್ಯ.
ಎಲ್ಲರಿಗೂ ಶರಣುಶರಣಾರ್ಥಗಳು
–ಸುಜಾತಾ ಪಾಟೀಲ ಸಂಖ