ಕಚುಗುಳಿ ನೀಡುವ ‘ನನ್ನ ಪ್ರಯಾಸದ ಕಥನಗಳು
‘ನನ್ನ ಪ್ರಯಾಸದ ಕಥನಗಳು’
ಲಲಿತ ಪ್ರಬಂಧಗಳ ಸಂಕಲನ
ಲೇಖಕರು:ಮಂಡಲಗಿರಿ ಪ್ರಸನ್ನ
ಪ್ರಕಟಣಾ ವರ್ಷ:೨೦೨೨
ಪ್ರಕಾಶಕರು:ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ
ಪ್ರಬಂಧ ಸಾಹಿತ್ಯ ಇಂಗ್ಲೀಷ್ ಮೂಲದ್ದಲ್ಲ. ಫ್ರಾನ್ಸಿನ ಖ್ಯಾತ ಲೇಖಕ ಮಾಂಟೇನ ಇದರ ಹುಟ್ಟು ಹಾಕಿದನು. ಬೇಕನ್‌ಗೂ ಹಿಡಿಸಿತು, ಆ ಮೂಲಕ ಇಂಗ್ಲೀಷ್ ಭಾಷೆಯಲ್ಲಿ ಮೈತಳೆಯಲು ಕಾರಣವಾಯಿತು. ‘ಪ್ರಬಂಧ’ ಪದ ಕನ್ನಡಕ್ಕೂ ಹೊಸದಲ್ಲ. ನಮ್ಮ ಪ್ರಾಚೀನ ಕಾವ್ಯಗಳಲ್ಲೂ ಉಲ್ಲೇಖಗೊಂಡಿರುವಂತದ್ದು. ‘ನಾಟಕ’ ಪದದೊಳಗೆ ಎಲ್ಲಾ ಸಾಹಿತ್ಯ ಪ್ರಕಾರಗಳು ಅಡಗಿರುವ ಹಾಗೆ ಪ್ರಬಂಧದಲ್ಲೂ ಹುದುಗಿವೆ. ಗದ್ಯರೂಪದ ಭಾವಗೀತೆ ಎಂದೆ ಈ ಪ್ರಕಾರವನ್ನು ಬಿಂಬಸಲ್ಪಡುತ್ತದೆ. ತೀ.ನಂ.ಶ್ರೀಯವರು ‘ಪ್ರಬಂಧಗಳು ಮಂದ ಶೃತಿಯ ಭಾವಗೀತೆಗಳು’ ಎಂದು ಹೇಳಿರುವುದು ಇದೆ ಅರ್ಥದಲ್ಲಿಯೆ. ಕತೆ ಕಾವ್ಯದಿಂದ ಸಂತೋಷ ಅಥವಾ ದುಃಖ ಅಥವಾ ಕೋಪ ಮೊದಲಾದ ಭಾವಗಳು ಮೂಡಬಹುದು ಆದರೆ ಒಂದು ಲಲಿತ ಪ್ರಬಂಧಗಳನ್ನು ಓದಿದಾಗ ಇಂತಹ ಯಾವ ಗೊಂದಲಗಳು ಉಂಟಾಗದೆ ಒಂದು ಅಮಿತಾನಂದದ ಲೋಕದಲ್ಲಿ ಸಾಗಿಬಂದ ಹಾಗಾಗುತ್ತದೆ. ಲಲಿತ ಪ್ರಬಂಧಗಳು ಬಹುತೇಕ ಎಲ್ಲರ ಅನುಭವಗಳೇ ಆಗಿರುವುದರಿಂದ ಬಹು ಆಪ್ತವಾಗಿ ಮುದನೀಡುತ್ತವೆ.
ಕನ್ನಡದಲ್ಲಿ ಪ್ರಬಂಧ ಸಾಹಿತ್ಯ ೧೮೯೮ ರಲ್ಲಿ ಬಂದ ಬಿ.ವೆಂಕಟಾಚಾರ್ಯರ ಲೋಕರಹಸ್ಯ ಎಂಬ ಬಂಕಿಮ ಚಂದ್ರರ ಪ್ರಬಂಧಗಳನ್ನು ಕನ್ನಡಕ್ಕೆ ತಂದಾಗ. ಮೂರ್ತಿರಾಯರು, ರಾ.ಶಿ. ಗೊರೂರು, ಆನಂದರು, ಪು.ತಿ.ನ ಕುವೆಂಪು ಮೊದಲಾದವರು ಈ ಪ್ರಕಾರವನ್ನು ಬೆಳಸಿದರು. ಪ್ರಸಿದ್ಧಿಗೊಳಿಸಿದರು. ಪ್ರಬಂಧ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಕಥೆ,ಕಾವ್ಯ,ನಾಟಕಗಳ ಬರವಣಿಗೆ ಜೊತೆಯಲ್ಲಿ ಇದು ಒಂದು ಭಾಗವಾಗಿ ಪರಿಗಣಿಸಿದವರೆ ಹೆಚ್ಚು. ಕಥೆ ನಾಟಕದಂತೆ ಇದನ್ನೆ ಪ್ರಮುಖವಾಗಿಸಿಕೊಂಡವರು ಕೆಲವರು ಮಾತ್ರ.. ಆ ಹಿನ್ನಲೆಯಲ್ಲಿ ಸಾಹಿತ್ಯ ಪ್ರಕಾರಕ್ಕೆ ಕಥೆ,ಕಾವ್ಯಕ್ಕೆ ಸಿಕ್ಕ ಬೆಲೆ ಸಿಗಲಿಲ್ಲ. ಇವತ್ತಿಗೂ, ಪ್ರಬಂಧ, ಹಾಸ್ಯ, ವಿಡಂಬನ ಸಾಹಿತ್ಯ ತೃತೀಯ ದರ್ಜೆಯ ಸಾಹಿತ್ಯ ಎಂದು ಪರಿಗಣಿಸಲಾಗುತ್ತಿರುವುದು ನಿಜಕ್ಕೂ ಸಾಹಿತ್ಯಿಕ ದುರಂತ.
ನಮ್ಮ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಈ ಲಲಿತ ಪ್ರಬಂಧ ಸಾಹಿತ್ಯ ಬೆಳವಣಿಗೆ ಇದ್ದರೂ ರಾಯಚೂರು ಜಿಲ್ಲೆಯ ಸಾಹಿತ್ಯ ದೃಷ್ಟಿಯಲ್ಲಿ ಬಹಳ ಕಡಿಮೆ. ಸಂಖ್ಯಾ ದೃಷ್ಟಿಯಿಂದ ಕಡಿಮೆ ಇದ್ದಾಗ್ಯೂ ಗಟ್ಟಿತನಕ್ಕೆನೂ ಕಡಿಮೆ ಇಲ್ಲ. ಅಂತಹವರ ಸಾಲಿನಲ್ಲಿ ಮಂಡಲಗಿರಿ ಪ್ರಸನ್ನ ಅವರ ‘ನನ್ನ ಪ್ರಯಾಸದ ಕಥನಗಳು’ ಪ್ರಮುಖವಾದ ಲಲಿತ ಪ್ರಬಂಧ ಸಂಕಲನವಾಗಿದೆ.
ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಪ್ರಕಟಿಸಿರುವ ಪ್ರಸುತ ಸಂಕಲನದಲ್ಲಿ ೧೭ ಪ್ರಬಂಧಗಳು ಅವರು ತಮ್ಮ ಪುಸ್ತಕದ ಶೀರ್ಷಿಕೆಗೆ ಇಟ್ಟ ಹೆಸರಿನಂತೆ ಅವರಿಗೆ ಪ್ರಯಾಸದ ಕಥನಗಳಾದರೂ ಓದುಗರನ್ನು ಆಪ್ತವಾಗಿ ಒಂದು ಸುತ್ತ ಕರೆದುಕೊಂಡು ಹೋಗಿ ಬದುಕಿನ ನಾನಾ ಮಜಲುಗಳನ್ನು ತಿಳಿಸಿಕೊಡುವ ಸಹ್ಯ ಕಥನ ಎನಿಸುತ್ತವೆ
ಸಾಹಿತ್ಯ ಓದಿದವರು ಮಾತ್ರ ಸಾಹಿತ್ಯ ರಚನೆ ಮಾಡಬಲ್ಲರು ಎನ್ನುವ ಮಾತೇ ಈಗ ಔಟ್ ಡೇಟೆಡ್. ಹಾಗೆ ನೋಡಿದರೆ ಸಾಹಿತ್ಯವನ್ನು ಅಂತರ್ ಶಿಸ್ತೀಯವಾಗಿ ಅಧ್ಯಯನ ಮಾಡಿದವರೆ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಸಾಹಿತ್ಯದಿಂದ ದೂರವಾಗುತ್ತಿದ್ದರೆ ಸಾಹಿತ್ಯ ಅಧ್ಯಯನ ನಡೆಸದ ತಾಂತ್ರಿಕ, ವ್ಯವಹಾರಿಕ, ಪತ್ರಿಕೋದ್ಯಮ,ಔದ್ಯೋಗಿಕ ಇನ್ನಿತರ ಸೇವಾಕ್ಷೇತ್ರದ ಅನೇಕರು ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿದ್ದಾರೆ. ಅದೆ ಹಾದಿಯಲ್ಲಿಯ ಮಂಡಲಗಿರಿ ಪ್ರಸನ್ನ ವೃತ್ತಿಯಲ್ಲಿ ಪ್ರತಿಷ್ಠಿತ ಕಂಪನಿಯ ಇಂಜಿನಿಯರಾಗಿ, ಕಂಪನಿಯ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ವಿಶ್ರಾಂತ ಜೀವನ ನಡೆಸುತ್ತಿರುವ ಮಂಡಲಗಿರಿ ಪ್ರಸನ್ನ ಅವರು ಈಗಾಗಲೇ ಕಾವ್ಯ, ಗಜಲ್, ನಾಟಕ, ಪತ್ರಿಕಾ ಬರಹಗಳ ಮೂಲಕ ಅಕ್ಷರ ಲೋಕದಲ್ಲಿ ಹಿರಿತನ ಮೆರೆದವರು. ಅವರು ಮಕ್ಕಳ ಸಾಹಿತ್ಯಕ್ಕೆ ಕೈ ಹಾಕಿದ್ದು ನನಗೆ ಈ ಹೊತ್ತಿನ ಅಚ್ಚರಿ ಕೂಡಾ. ಹೌದು. ಅಂತಹ ಪ್ರಸನ್ನ ಅವರು ಲಲಿತ ಪ್ರಬಂಧದಲ್ಲೂ ತಮ್ಮ ಪ್ರಸನ್ನತೆಯನ್ನು ತೋರಿದ್ದಾರೆ.
ನನ್ನ ಪ್ರಯಾಸದ ಕಥನಗಳ ಪ್ರತಿಯೊಂದು ಪ್ರಬಂಧಗಳ ವಿಶ್ಲೇಷಣೆಗಿಂತ ಅದರ ಭಾವವನ್ನು ಓದಿಯೇ ಸವಿಯಬೇಕು ಎನ್ನುವುದು ನನ್ನ ಅಭಿಪ್ರಾಯ. ಇಲ್ಲಿಯ ಹದಿನೇಳು ಪ್ರಬಂಧಗಳ ಹೆಸರೆ ಆಕರ್ಷಕ. ಹೆಸರಿನ ಮೂಲಕವೇ ಕುತೂಹಲ ಹೆಚ್ಚಿಸುವ ಶಕ್ತಿ ಪ್ರಬಂಧಕನ ಶಕ್ತಿಯೂ ಹೌದು. ಪ್ರಬಂಧವೆAದರೆ ಕೈಗೆತ್ತಿಕೊಂಡ ಸಂಗತಿಯ ಸುತ್ತ ಗಿರಿಕಿ ಹೊಡೆಯುವ ತಾಕತ್ತು ಇರಬೇಕು. ಆ ಅಂಶ ಇಲ್ಲಿಯ ಬಹುತೇಕ ಪ್ರಬಂಧಗಳಲ್ಲಿವೆ. ಗದ್ಯ ಬರೆದಾದ ಮೇಲೆ ಅಕ್ಷರರೂಪದಲ್ಲಿ ನಿರ್ವಹಿಸುವಾಗ ದಕ್ಕಬೇಕಾದ ಲವಲವಿಕೆ, ಕಾಲಪ್ರಜ್ಞೆ, ಸ್ವವಿಡಂಬನೆ, ಲಹರಿ ಎಲ್ಲವೂ ಇವೆ.
ಪ್ರಬಂಧ ಸಂಕಲನದಲ್ಲಿ ತಮ್ಮ ಹರೆಯದ ದಿನಗಳಿದಿಂದ ಹಿಡಿದು ಲೇಖಕರು ತಾತನಾಗುವರೆಗೂ ನಡೆದ ಬದುಕಿನ ಸ್ವಾರಸ್ಯ ಘಟನೆಗಳ ಮೆಲಕು ಇದೆ. ಕಾವ್ಯ ಮನಸ್ಸಿನ ಪ್ರಸನ್ನರವರು ತಮ್ಮ ಬರವಣಿಗೆ ಶೈಲಿಯಿಂದ ಪ್ರಬಂಧವನ್ನೆ ಕಾವ್ಯವಾಗಿಸಿದ್ದಾರೆ.
ಕಲಬುರ್ಗಿಯ ಖಾಸಗಿ ಕಂಪನಿಯ ವೃತ್ತಿ ಹಿನ್ನಲೆಯ ‘ನನ್ನ ಪ್ರಯಾಸ ಕಥನಗಳು’ ‘ನನ್ನ ಕೊಯಮತ್ತೂರಿನ ಪ್ರವಾಸ’ ‘ಕಿಟಕಿಯ ಪ್ರಸಂಗ’ ‘ಇದು ವೃತ್ತಿ ಮಾತ್ಸರ್ಯವಲ್ಲ’ ‘ಒಂದು ಬ್ರಿಫ್ ಕೇಸ್ ಪ್ರಕರಣ’ ಇವುಗಳೆಲ್ಲವೂ ಪ್ರವಾಸದ ಹಾಗೂ ಕಂಪನಿಯ ಸಂದರ್ಭದಲ್ಲಿ ನಡೆಯುವ ಸ್ವಾರಸ್ಯ ಘಟನೆಗಳ ಮೂಲಕ ಸೆಳೆಯುತ್ತವೆ. ಮನೆಯಾಕೆ ಸಾಕಿದ ನಾಯಿ ಸತ್ತ ಮೇಲೆ ಅದಕ್ಕೊಂದು ಪೋಕರಣದ ಶಕ್ತಿಸೌಧದಂತೆ ಶ್ವಾನ ಸೌಧ ಕಟ್ಟಿಸುವ ಚರ್ಚೆಯ ‘ಪೋಖರಣದ ಪ್ರಭಾವ’ ಒಂದು ಬಗೆಯಾದರೆ, ಪಕ್ಕದ ಮನೆಯವರು ಬಿಟ್ಟು ಹೋದ ನಾಯಿಯಿಂದ ಪಡುವ ತಾಪತ್ರಯಗಳು, ಮನಯಾಕೆ ಮಾಡಿದ ಉಪಾಯದ ಬಗ್ಗೆ ಸ್ವಾರಸ್ಯಕರ ಅನುಭವವನ್ನು ‘ಎದುರು ಮನೆ ನಾಯಿ’ ಕೊಡುತ್ತದೆ, ಕತಾ ಸ್ಪರ್ಧೆಯ ಕಥೆ, ಇತಿ ಸಂಪದಾಯಣ ಈ ಎರಡು ಪ್ರಬಂಧಗಳು ಸಾಹಿತ್ಯದ ಒಟನಾಟದಲ್ಲಿ ನಡೆಯುವ ಖುಷಿ ಹಾಗೂ ಮುಜುಗರ ಸನ್ನಿವೇಶದ ಸಂದರ್ಭದ ಘಟನೆಗಳನ್ನು ತಿಳಿಸುವಂತಹವು.
s ಹರಟೆ ಮತ್ತು ತಲೆ ಹರಟೆ ಚಹಾರಾಧನೆ, ಆ ಸಣ್ಣಸಂಗತಿ, ಒಂದು ಬ್ರೀಫ್ ಕೇಸ್ ಪ್ರಕರಣ ಕಚುಗುಳಿ ನೀಡುವ ಪ್ರಬಂಧಗಳು. ಸಾಫ್ವೇವೇರ್ ಜಗತ್ತಿನ ಬದುಕನ್ನು ತೋರಿಸುವ ‘ಜಗತ್ತಿನಲ್ಲೊಂದು ಜಗತ್ತು’ ವಿಶೇಷ ಪ್ರಬಂಧ. ಒಂದು ದಿನ ಕಳೆಯಲು ಹತ್ತು ಸಾವಿರ ಖರ್ಚು ಮಾಡಿಸಿದ ದೀಪಾವಳಿಯ ಅಳಿತನದ ಬಗೆಗಿರುವ ‘ಶೌಚಾಲಯ ಪ್ರಸಂಗ’ ಪತ್ನಿಯ ಹೆಸರಲ್ಲೆ ಸೊಗಸಾಗಿ ಚಿತ್ರಿಸಿದ ಮಮತಾ ನಿಂದ ಮಮ್ಸ್ ವರೆಗೂ ಹೆಸರಿನ ದಶಾವತಾರ ಕತೆಗಳನ್ನು ತಿಳಿಸುವ ‘ನಮ್ಮ ಹೆಸರಲ್ಲೇನಿದೆ? ಪ್ರಬಂಧ ಇವರೆಡು ಸಂಕಲನದ ಮಹತ್ವದ ಪ್ರಬಂಧಗಳು.
ಈ ಸಂಕಲನದ ಮೂಲಕ ಮೂಲಕ ಸಿಹಿಕಹಿ ಅನುಭವನಗಳನ್ನು ಬಹು ಆಪ್ತವಾಗಿ ಕಟ್ಟಿಕೊಟ್ಟಿರುವ ಮಂಡಲಗಿರಿ ಪ್ರಸನ್ನ ಅವರಲ್ಲಿ ಬಾಲ್ಯದ ದಟ್ಟ ಅನುಭವಗಳ ಜೊತೆಗೆ ದೇಶ ಸುತ್ತಿದಾಗ ಕಂಡ ಅಪಾರ ಅನುಭವಗಳ ಖಜಾನೆ ಇದೆ. ಬರವಣಿಗೆಲ್ಲೂ ಲಾಲಿತ್ಯ, ಪ್ರಬಂಧಬೇಕಾದ ಕ್ಯಾನವಸ್ ಜೋಡಿಸುವ ಕಲೆ ಅವರಿಗೆ ಸಿದ್ಧಿಸಿರುವುದರಿಂದ ಮುಂದೆ ಅವರಿಂದ ದೀರ್ಘ ಪ್ರಬಂಧಗಳ ಬರಲಿ ಎಂದು ನಾನು ಆಶಿಸುತ್ತೇನೆ.
–ಗುಂಡೂರಾವ್ ದೇಸಾಯಿ,ಮಸ್ಕಿ