ಗುಂಡಯ್ಯನ ಪುಣ್ಯಸ್ತ್ರೀ ಕೇತಲದೇವಿ
ಹನ್ನೆರಡನೇ ಶತಮಾನದ ಶಿವಶರಣರನ್ನು ಗಮನಿಸಿದಾಗ, ಅವರಲ್ಲಿ ಅನೇಕರು ಶರಣ ದಂಪತಿಗಳಾಗಿ ಸಾಮರಸ್ಯದ ಬದುಕನ್ನು ಸಾಗಿಸಿದ ದಾಖಲೆಗಳಿವೆ. ಸಮಗಾರ ಹರಳಯ್ಯ ಮತ್ತು ಕಲ್ಯಾಣಮ್ಮ, ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ, ಉರಿಲಿಂಗಪೆದ್ದಿ ಮತ್ತು ಕಾಳವ್ವೆ, ಮೋಳಿಗೆ ಮಾರಯ್ಯ ಮತ್ತು ಮಹಾದೇವಿ ಮುಂತಾದವರು ದಾಂಪತ್ಯದೊಂದಿಗೆ ಅನುಭಾವದ ಮೆಟ್ಟಿಲೇರಿದವರು. ಹಾಗೆಯೆ ಕುಂಬಾರ ಗುಂಡಯ್ಯ ಮತ್ತು ಕೇತಲದೇವಿಯೂ ಇದ್ದಾರೆ.
ಘಟ ಕಾಯಕದ ಗುಂಡಯ್ಯನು ‘ಭಲ್ಲುಂಕೆ‘ ಎಂಬ ಊರಿನವನೆಂದು ಹರಿಹರ ಕವಿ ‘ಗುಂಡಯ್ಯನ ರಗಳೆ’ಯಲ್ಲಿ ದಾಖಲಿಸಿರುವುದು ಲಭ್ಯ. ಶಾಸನಗಳ ಪ್ರಕಾರ ಈ ಪಟ್ಟಣವು ಭಲ್ಲೂ ನಗರ, ಭಲ್ಲುಂಕ, ಭಾಲಿಕ, ಭಾಲಕ ಎಂದಿದೆ. ಇಂದಿನ ಬೀದರ ಜಿಲ್ಲೆಯ ಭಾಲ್ಕಿ ತಾಲೂಕು ಅದೇ ಸ್ಥಳವಾಗಿದೆ ಎಂದು ವಿದ್ವಾಂಸರ ಅಭಿಮತ.
ಏಕೆಂದರೆ ಆ ಊರಿನ ಕುಂಬಾರ ಓಣಿಯಲ್ಲಿರುವ ಕುಂಭೇಶ್ವರ ದೇವಾಲಯವು ಇಂದಿಗೂ ಸಾಕ್ಷಿಯಾಗಿ ನಿಂತಿದೆ. ಹನ್ನೆರಡನೇ ಶತಮಾನದ ಶರಣರ ಸಮಕಾಲೀನರಾದ ಇವರು ಕ್ರಿ.ಶ.೧೧೬೦ ರಲ್ಲಿ ಬಾಳಿದವರು. ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿಯ ಬಗೆಗೆ ತಿಳಿದುಕೊಳ್ಳಬೇಕಾದರೆ ಮೊದಲು ಅವಳ ಪತಿ ಗುಂಡಯ್ಯನ ಕುರಿತು ತಿಳಿಯುವುದು ಅವಶ್ಯಕ.
ಕುಂಬಾರ ಗುಂಡಯ್ಯನ ಹೆಸರೇ ಹೇಳುವಂತೆ ಅವನ ಕಾಯಕವೇ ಘಟಕಾಯಕ, ಕುಂಬಾರಿಕೆ, ಮಡಿಕೆ ಮಾಡುವುದು. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರ ಪ್ರಭಾವದಲ್ಲಿ ಅರಳಿದ ಲಿಂಗವಂತ. ತನ್ನ ಕಾಯಕದಲ್ಲಿ ಅಪಾರ ಶ್ರದ್ಧೆ ಇಟ್ಟುಕೊಂಡು, ತನ್ನನ್ನು ತಾನು ಮರೆತು ದೈವತ್ವಕ್ಕೆ ಏರಿಬಿಡುತ್ತಿದ್ದ. ಅವನ ತನ್ಮಯತೆಯನ್ನು ಈ ತ್ರಿಪದಿಯಿಂದ ಗ್ರಹಿಸಬಹುದು.
“ಕುಂಬಾರ ಗುಂಡಯ್ಯ | ತುಂಬಿ ತಿಗರಿಗೆಕೆಸರ
ಶಂಬು ಹರನೆಂದು ತಿರುಗಿಸಲು | ಶಿವಕುಣಿದ
ಹಂಬಲಿಸಿ ಜಂಗ ಕಟಗೊಂಡು”
ಅದೇ ಭಾವವನ್ನು ರಗಳೆಯಲ್ಲಿ ಹರಿಹರ ಹೀಗೆ ವರ್ಣಿಸುತ್ತಾನೆ.
“ಕುಣಿದಾಡುತ ಮಡಕೆಗಳಂ ಬಾರಿಸಿ
ಕುಣಿದಾಡುತ ಕುಡಿಕೆಗಳಂ ಬಾರಿಸಿ
ಶಿವನಂ ಸುತ್ತಿ ಬರುತ್ತುಂ ಬಾರಿಸಿ
ಕುಣಿವುತ ಕೊರಲೆತ್ತುತ ನೆರೆಕೂಗುತ
ತೊನೆವುತ ತೂಗಾಡುತ ಸುಖಿಯಾಗುತ
ಆಡುವ ಗುಂಡಯ್ಯನ ಹೊಸ ನೃತ್ಯಂ
ನೋಡುವ ಶಿವನಂ ಮುಟ್ಟಿತು ಸತ್ಯಂ”
ಹರಿಹರ ಕವಿ ಹೇಳುವಂತೆ, ಗುಂಡಯ್ಯನು ಕಾಯಕದಲ್ಲಿ ನಿರತನಾಗಿರುವಾಗ, ಅವನ ಕುಣಿತ, ಭಾವಪರವಶತೆ ಕಂಡು ಕೈಲಾಸದಿಂದ ಶಿವ ಧರೆಗಿಳಿದು ಬರುತ್ತಾನೆ. ಅವನನ್ನು ಕೈಲಾಸಕ್ಕೆ ಆಹ್ವಾನಿಸಿ ಗಣಪದವಿ ಕೊಡುವುದಾಗಿ ಹೇಳುತ್ತಾನೆ.
‘ಅಂದರೆ ಅಲ್ಲಿ ಯಾವ ಕಾಯಕ ಮಾಡಬೇಕು?’ ಎಂದು ಪ್ರಶ್ನಿಸುತ್ತಾನೆ.
‘ಇಲ್ಲ ಏನೂ ಕಾಯಕವಿಲ್ಲ. ಅರಾಮಾಗಿ ಇರುವುದು.’
‘ಹಾಗಾದರೆ ನನಗೆ ಕೈಲಾಸ ಬೇಡ.’
ಹೀಗೆ ಗುಂಡಯ್ಯ ತನ್ನ ಕಾಯಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಇದನ್ನು ಜನಪದರು ತ್ರಿಪದಿಯಲ್ಲಿ ಹೀಗೆ ಸೆರೆ ಹಿಡಿದಿದ್ದಾರೆ,
“ಬೇಡೆನಗೆ ಕೈಲಾಸ ಬಾಡುವುದು ಕಾಯಕವು
ನೀಡೆನಗೆ ಶಿವನೆ ಕಾಯಕವ ಕುಣಿದಾಡಿ
ನಾಡ ಹಂದರಕೆ ಹಬ್ಬಿಸುವೆ”
ಒಂದು ದೃಷ್ಟಾಂತ ಹರಿಹರನ ರಗಳೆಯಲ್ಲಿದೆ. ಕುಂಬಾರ ಗುಂಡಯ್ಯ ತನ್ನ ಕುಂಬಾರಿಕೆಯಲ್ಲಿ ತನ್ಮಯನಾಗಿ ಮಣ್ಣು ತುಳಿಯುತ್ತ, ಶಿವನನ್ನು ಆರಾಧಿಸುತ್ತಿರುತ್ತಾನೆ. ನಂತರ ಮಡಿಕೆ ಸಿದ್ಧವಾದ ಬಳಿಕ ಅದನ್ನು ಹದವಾಗಿ ಸುಡುತ್ತಾನೆ. ಮತ್ತೆ ಮಡಿಕೆ ಸುಟ್ಟದನ್ನು ಪರೀಕ್ಷಿಸಲು ಅದರ ಮೇಲೆ ತಾಳ ಹಾಕುತ್ತಾನೆ. ಆಗ ಅವನ ಕುಣಿತ ಮತ್ತು ತಾಳಕ್ಕೆ ಕೈಲಾಸದಲ್ಲಿದ್ದ ಶಿವನು ಸ್ಪಂದಿಸುತ್ತಾನೆ. ಅಲ್ಲೇ ಪಕ್ಕದಲ್ಲಿ ಕುಳಿತ ಗಿರಿಜೆಗೆ ಆಶ್ಚರ್ಯ. ಯಾರು ಈ ಭಕ್ತ ಎಂದು ಕುತೂಹಲ ಹುಟ್ಟುತ್ತದೆ. ಶಿವ ನಡೆ ಎಂದು ಕರೆದುಕೊಂಡು ಭೂಲೋಕಕ್ಕೆ ಹೊರಡುತ್ತಾನೆ. ದಾರಿಯಲ್ಲಿ ಶಿವ, ಗಿರಿಜೆಗೆ ಮೇಲಿಂದ ನೋಡಲು ತಿಳಿಸಿ ಹೋಗುತ್ತಾನೆ. ಗಿರಿಜೆ ಗುಂಡಯ್ಯನ ತಾಳ ಮತ್ತು ಶಿವನ ನೃತ್ಯ ನೋಡಿ ಬೆರಗಾಗುತ್ತಾಳೆ. ಇನ್ನು ಶಿವನ ತಾಂಡವ ಮಿತಿ ಮೀರಿದರೆ ಅನಾಹುತ ತಪ್ಪಿದ್ದಲ್ಲ ಎಂದು, ಶಿವನನ್ನು ಎಚ್ಚರಿಸುತ್ತಾಳೆ.
“ಜಗವೆಲ್ಲವ ಆಡಿಸುವ ಶಿವನನ್ನು ಗುಂಡಯ್ಯ ಮಡಿಕೆಯ ದನಿಯಿಂದ ಆಡಿಸಿದ” ಎಂದು ಹರಿಹರ ಬರೆಯುತ್ತಾನೆ. ಅವನ ಕಾಯಕ ನಿಷ್ಠೆ ಮತ್ತು ಶಿವ ಭಕ್ತಿಯ ಪರಾಕಾಷ್ಠೆಯನ್ನು ಕವಿ ವರ್ಣಿಸುವ ಪರಿ ಹೀಗಿತ್ತು, “ಶಿವಪೂಜೆಯ ಕರಡಿಗೆಯಂತಿರ್ದಂ ಶಿವಪೂಜೆಯ ಗವಸಣಿಗೆಯೊಳಿರ್ದಂ.”
ಇದೇ ಕತೆಯನ್ನು ಸಂಕ್ಷಿಪ್ತವಾಗಿ ತ್ರಿಪದಿಯಲ್ಲಿ ಜನಪದರು ಕಟ್ಟಿ ಕೊಟ್ಟಿದ್ದಾರೆ,
ಗುಂಡ ಕುಣಿದನು ಹೆಜ್ಜೆ ರುಂಡಧಾರಿಯ ಕೂಡ
ತಂಡಾಗಿ ಬಂದು ಶಿವಗಣವು ಕುಣಿಯುತಲಿ
ಕಂಡು ಜಗವೆಲ್ಲ ಚೇತರಿಸಿ
ಇನ್ನೊಂದು ಜನಪದ ಕತೆ ಹೀಗಿದೆ. ಒಬ್ಬ ತಾಯಿ ತನ್ನ ಮಗನಿಗೆ ಒಳ್ಳೆಯ ಬುದ್ಧಿ ಕಲಿಸಲು ಪ್ರಯತ್ನಿಸುತ್ತಿರುತ್ತಾಳೆ. ಆದರೆ ಆ ಮಗು ಮಾತು ಕೇಳುವುದೇ ಇಲ್ಲ. ಕೊನೆಗೆ ಬೇಸತ್ತು ಮಗನಿಗೆ ಹೇಳುತ್ತಾಳೆ, ‘ದಿನಾ ಬೆಳಿಗ್ಗೆ ಗುಂಡಯ್ಯ ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ, ಹಣೆಯ ಮೇಲೆ ವಿಭೂತಿ ಹಚ್ಚಿಕೊಂಡು, ಮನೆ ಎದುರಿನಿಂದಲೇ, ಘಟ ಕಾಯಕಕ್ಕಾಗಿ ಮಣ್ಣು ತರಲು ಹೋಗುತ್ತಿರುತ್ತಾನೆ. ಆಗ ಅವನ ಹಣೆಯ ಮೇಲೆ ಹಚ್ಚಿದ ವಿಭೂತಿಯ ದರ್ಶನ ಮಾಡು. ಅಷ್ಟೇ ಸಾಕು.’
ತಾಯಿಯ ಈ ಮಾತನ್ನು ಮಗ ಚಾಚೂ ತಪ್ಪದೆ ನಡೆಸುತ್ತಾನೆ. ಒಂದು ದಿನ ಹುಡುಗನಿಗೆ ಸ್ವಲ್ಪ ತಡವಾಗುತ್ತದೆ. ಮನೆ ಬಾಗಿಲಿಗೆ ಬರುವುದರಲ್ಲಿ ಗುಂಡಯ್ಯ ಹಾದು ಹೋಗಿರುತ್ತಾನೆ. ಹುಡುಗ ವಿಭೂತಿ ನೋಡುವ ಹಟದಿಂದ ಬೆನ್ನು ಹತ್ತುತ್ತಾನೆ. ಗುಂಡಯ್ಯನ ತೀವ್ರ ನಡಿಗೆಯ ಮುಂದೆ ಬಾಲಕ ಓಡುತ್ತಲೇ ಹಿಂಬಾಲಿಸುತ್ತಾನೆ. ಅಷ್ಟರಲ್ಲಿ ಗುಂಡಯ್ಯ ಮಣ್ಣು ಅಗೆದು ತೆಗೆಯುತ್ತಿರಲು, ನಿಧಿಯೊಂದು ಕೈಗೆ ಸಿಗುತ್ತದೆ. ಮೇಲೆ ಏಳುವ ಹೊತ್ತಿಗೆ ಬಾಲಕ ‘ಕಂಡಿತು ಕಂಡಿತು’ ಎಂದು ಕೂಗುತ್ತಾನೆ. ಆಗ ಗುಂಡಯ್ಯ, ‘ನೀನೇ ತೆಗೆದುಕೊ ಈ ನಿಧಿಯನ್ನು’ ಎಂದಾಗ, ‘ಇಲ್ಲ ಇಲ್ಲ. ನಾನು ವಿಭೂತಿ ಕಂಡಿತು ಎಂದು ಹೇಳಿದೆ. ನಿನ್ನನ್ನು ದಿನಾ ನೋಡಿ ನೋಡಿ ನನ್ನ ಮನಸು ಪರಿವರ್ತನೆಯಾಗಿದೆ. ಏನೂ ಬೇಡ.’ ಹೀಗೆ ಹೇಳುತ್ತ ಬಾಲಕ ನಿರ್ಗಮಿಸುತ್ತಾನೆ.
ಈ ಎಲ್ಲಾ ದೃಷ್ಟಾಂತಗಳಿಂದ ಗುಂಡಯ್ಯನು ಅಪ್ಪಟ ಶರಣ ಎಂದು ತಿಳಿದು ಬರುತ್ತದೆ. ಆದರೆ ಇವನು ವಚನ ಬರೆದ ದಾಖಲೆ ಎಲ್ಲಿಯೂ ಲಭ್ಯವಾಗಿಲ್ಲ. ಒಂದೇ ವಚನ ದೊರಕಿದ್ದರೂ ಗುಂಡಯ್ಯನೇ ಆದ್ಯ ವಚನಕಾರನಾಗುತ್ತಿದ್ದ. ಏಕೆಂದರೆ ಇವನ ಬಗ್ಗೆ ಒಂದು ವಚನದಲ್ಲಿ ಶಿವಯೋಗಿ ಸಿದ್ಧರಾಮಯ್ಯ ಉಲ್ಲೇಖಿಸಿದ್ದಾನೆ.
‘ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?’
ಅಂಬಿಗರ ಚೌಡಯ್ಯನ ವಚನದಲ್ಲಿ, ‘ಕುಂಬಾರ ಗುಂಡಯ್ಯ ಮಾಡುವ ಭಕ್ತಿ ಊರೆಲ್ಲಾ ಮಾಡಬಹುದಯ್ಯಾ’ ಎಂದು ಬರೆದಿದ್ದಾನೆ.
ಇಂತಹ ವ್ರತಾಚಾರಿಯಾದವನನ್ನು ಕೈ ಹಿಡಿದವಳು ಕೇತಲದೇವಿ. ಇವಳು ತನ್ನ ಪತಿಯೊಂದಿಗೆ ಸಾಮರಸ್ಯದ ದಾಂಪತ್ಯ ಜೀವನ ಸಾಗಿಸಿದಳು ಎಂದು ಜನಪದರು ತ್ರಿಪದಿಯಲ್ಲಿ ಹೀಗೆ ಹೇಳುತ್ತಾರೆ,
“ಮಡದಿ ಕೇತಲದೇವಿ ಒಡನಾಡಿ ಗುಂಡನಿಗೆ
ಎಡೆಬಿಡದೆ ಸೇವೆ ಮಾಡುತಲಿ ಬತ್ತಿಯೊಳು
ಬಿಡದೇರಿ ಎಣ್ಣೆಯುರಿದಂತೆ”
ಹೀಗೆ ಗುಂಡಯ್ಯ ಮತ್ತು ಕೇತಲದೇವಿ ಅನ್ಯೋನ್ಯವಾಗಿ ಘಟ ಕಾಯಕ ಮಾಡುತ್ತ ಜೀವನ ಸಾಗಿಸುತ್ತಾರೆ. ಪತಿಯಂತೆ ಇವಳೂ ಶಿವ ಭಕ್ತೆ ಹಾಗು ಲಿಂಗವಂತೆ. ಹಾಗೆಯೆ ಗುಂಡಯ್ಯ ಮಾಡಿಟ್ಟ ಮಡಿಕೆಗಳ ಮೇಲೆ ಬಣ್ಣದ ಚಿತ್ರ ಬಿಡಿಸುತ್ತಿದ್ದಳು. ಜನಪದರದನು ಹೀಗೆ ಬಣ್ಣಿಸುತ್ತಾರೆ,
“ಕುಂಬಾರಣ್ಣನ ಮಡದಿ ಕಡಗಾದ ಕೈಯಿಕ್ಕಿ
ಕೊಡದಾ ಮೇಲೇನ ಬರದಾಳ | ಬರದಾಳ
ಕಾಯಕದ ಶರಣ ಬಸವಣ್ಣ”
‘ಶಿವಶರಣೆಯರ ಕಥಾರತ್ನ ಕೋಶ’ ಮತ್ತು ‘ಭುವನಕೋಶ’ದಲ್ಲಿ ಕೇತಲದೇವಿಯ ವಿವರಗಳು ಸಿಗುತ್ತವೆ. ಅವಳ ಭಕ್ತಿ ಪರಾಕಾಷ್ಠೆಯನ್ನು ಬಿಂಬಿಸುವ ಕತೆಯೂ ಇದೆ.
ಅವಳ ಲಿಂಗೆ ಪೂಜೆ ಮತ್ತು ಲಿಂಗದ ಪಾವಡಕ್ಕೆ ಸಂಬಂಧಿಸಿದ ಕತೆ ಪ್ರಸಿದ್ಧ ಹಾಗೂ ರೋಚಕವಾಗಿದೆ.
ಕೇತಲದೇವಿ ನಿತ್ಯ ಲಿಂಗಪೂಜೆ ಮಾಡುತ್ತಿದ್ದಳು. ನಂತರ ಲಿಂಗಕ್ಕೆ ಪಾವಡ ಹಾಕುವ ನಿಯಮ ಇಟ್ಟುಕೊಂಡಿದ್ದಳು. ಒಂದು ದಿನ ಲಿಂಗ ಪೂಜೆಯಾದ ಮೇಲೆ ಪಾವಡ ಸಿಗುವುದೇ ಇಲ್ಲ. ಆಗ ತನ್ನ ಎದೆಯ ಚರ್ಮವನ್ನೇ ಪಾವಡವಾಗಿಸಿದ ಭಕ್ತೆಯಾಗುತ್ತಾಳೆ. ಆಗ ಶಿವನು ಇವಳ ಭಕ್ತಿಗೆ ಕರಗಿ ಪ್ರತ್ಯಕ್ಷನಾಗಿ ದರ್ಶನ ನೀಡುತ್ತಾನೆ ಎನ್ನುವ ನಂಬಿಕೆಯ ಕತೆಯಿದೆ. ಇದು ಪವಾಡದ ಕತೆಯಂತೆ ಕಂಡು ಬಂದರೂ, ಅದರ ತರ್ಕ ಮಾಡುತ್ತ ಸತ್ಯದ ಹುಡುಕಾಟದಲ್ಲಿ ತೊಡಗುವುದಕ್ಕಿಂತ, ಕೇತಲದೇವಿಯ ಭಕ್ತಿ, ಭಾವ ತೀವ್ರತೆಯನ್ನು ಅರಿಯುವುದು ಸೂಕ್ತ. ಅವಳೊಬ್ಬ ಮಹತ್ವದ ಮಹಾನ್ ಶರಣೆ ಎನ್ನುವುದನ್ನು ಈ ಘಟನೆ ಸಾಬೀತು ಪಡಿಸುತ್ತದೆ.
ಜನಪದೀಯರು ಜನಪದ ಕಾವ್ಯದಲ್ಲಿ ಗುಂಡಯ್ಯ ಹಾಗೂ ಕೇತಲದೇವಿಯ ಅನೇಕ ತ್ರಿಪದಿಗಳನ್ನು ರಚಿಸಿದ್ದಾರೆ.
ಡಾ.ಬಿ.ಎಸ್.ಗದ್ದಗಿಮಠ ಅವರ “ಕನ್ನಡ ಜಾನಪದ ಗೀತೆಗಳು” ಕೃತಿಯಲ್ಲಿ ಈ ದಂಪತಿಗಳ ಕುರಿತಾದ ತ್ರಿಪದಿಗಳು ದೊರೆಯುತ್ತವೆ.
ಕೇತಲದೇವಿ ವಚನಕಾರಳೂ ಆಗಿದ್ದಳು ಎನ್ನುವುದಕ್ಕೆ ಅವಳ ಎರಡು ವಚನಗಳು ಲಭ್ಯ. ‘ಕುಂಭೇಶ್ವರಾ’ ಎಂಬ ಅಂಕಿತದಲ್ಲಿ ದೊರೆತಿವೆ. ಆ ವಚನಗಳನ್ನು ಓದಿ ಅದರ ಆಳ ತಿಳಿದಾಗ, ಕೇವಲ ಎರಡೇ ಎರಡು ವಚನ ಬರೆದಿರಲು ಸಾಧ್ಯವಿಲ್ಲ, ಇನ್ನೂ ಇದ್ದಿರಬೇಕು ಎನಿಸುತ್ತದೆ. ಬಹುಶಃ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಕಳೆದಿರಬಹುದು. ಲಭ್ಯವಿರುವ ಆ ವಚನಗಳು ಹೀಗಿವೆ,
ಹದ ಮಣ್ಣಲ್ಲದೆ ಮಡಿಕೆಯಾಗಲಾರದು
ವ್ರತ ಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರ
ಕೇತಲದೇವಿ ತನ್ನ ಪತಿಯೊಂದಿಗೆ ಕುಂಬಾರಿಕೆ ಮಾಡುತ್ತ ವೈಚಾರಿಕ ಚಿಂತನೆ ಮಾಡುತ್ತಾಳೆ. ಒಂದು ಮಡಿಕೆ ಸಿದ್ಧಗೊಳಿಸಲು, ಮೊದಲು ಶುದ್ಧ ಮಣ್ಣು ಬೇಕು. ಆ ಮಣ್ಣು ಕಸ, ಕಡ್ಡಿಯಂತಹ ಕಲ್ಮಶದಿಂದ ಮುಕ್ತವಾಗಿರಬೇಕು. ನುಣುಪಾದ ಮಣ್ಣನ್ನು ನೀರಿನಲ್ಲಿ ಕಲೆಸಿ, ಸರಿಯಾಗಿ ತುಳಿದು, ಹದ ಮಾಡಿದ ಮೇಲೆ, ಆ ಮಣ್ಣು ಮಡಿಕೆ ಮಾಡಲು ಸಜ್ಜಾಗುತ್ತದೆ. ತಿಗರಿಯಲ್ಲಿ ಮಣ್ಣು ತುಂಬಿ ಗುಂಡಯ್ಯ ತಿರುಗಿಸಿ ಮಡಕೆಯ ಆಕಾರ ಕೊಡಲು ಮುಂದಾಗುತ್ತಿದ್ದ. ಇದೇ ಉದಾಹರಣೆಯನ್ನು ಕೇತಲದೇವಿ ವಚನದ ಮೊದಲ ಸಾಲಿನಲ್ಲಿ ಬಳಸಿದ್ದಾಳೆ.
ವ್ರತಾಚಾರವನ್ನು ಕುರಿತು ವೃತ್ತಿ ಪರಿಭಾಷೆಯಲ್ಲಿ ತುಂಬ ಸೊಗಸಾಗಿ ನಿರೂಪಿಸಿದ್ದಾಳೆ. ವ್ರತ ಹೀನರು ಎಂದರೆ ಶರಣ ಸಂಸ್ಕೃತಿ ಇಲ್ಲದವರು ಎಂದರ್ಥ. ಹೀಗೆ ಸಂಸ್ಕಾರವಿಲ್ಲದವರೊಂದಿಗೆ ಸಂಬಂಧ ಮಾಡಲು ಸಾಧ್ಯವಾಗದು ಎಂದು ನಿಷ್ಠುರವಾಗಿ ಹೇಳುತ್ತಾಳೆ. ಒಂದು ವೇಳೆ ಬೆರೆತರೆ ಅದು ನರಕಕ್ಕೆ ಸಮಾನ. ಇಂಥ ಸಮಯದಲ್ಲಿ ಎಲ್ಲಾ ಬಲ್ಲವರಾಗಿ, ಒಲ್ಲೆ ಎಂದು ನಿರಾಕರಿಸುವ ಸಾಮರ್ಥ್ಯ ಹೊಂದಬೇಕು ಎನ್ನುವುದೇ ಈ ವಚನದಲ್ಲಿ ಕೇತಲದೇವಿಯ ಆಶಯ. ಇಲ್ಲಿ ನಿರಾಕರಣೆಯ ತತ್ವವನ್ನು ಹೇಳಿದ್ದಾಳೆ. ಅದರಂತೆ ಅವಳು ಗುಂಡಯ್ಯನಂತಹ ಶರಣನನ್ನು ವರಿಸಿದ್ದಳು.
ಇನ್ನೊಂದು ವಚನ ಹೀಗಿದೆ,
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು
ಅದೆಂತೆಂದಡೆ
‘ಭಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ |
ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ |
ಇಂತೆಂದುದಾಗಿ
ಕಾಣದುದನೆ ಚರಿಸದೆ, ಕಂಡುದನು ನುಡಿಯದೆ.
ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ ಕುಂಭೇಶ್ವರ ಲಿಂಗವೆಂಬೆನು
ಹನ್ನೆರಡನೇ ಶತಮಾನದಲ್ಲಿ, ಮಹಾ ಮಾನವತಾವಾದಿ ಬಸವಣ್ಣ ಸಮಾಜದಲ್ಲಿ ಜಾತಿಯನ್ನು ಕಿತ್ತೊಗೆಯಬೇಕೆಂದು ಬಯಸಿದನು. ಆಗ ಆ ಪ್ರಯತ್ನವು ಸಫಲವಾಯಿತು. ಯಾರು ಲಿಂಗವನ್ನು ಕಟ್ಟಿಕೊಂಡಿರುತ್ತಾರೊ, ಅಂತಹ ಲಿಂಗವಂತರ ಮನೆಗೆ ಹೋದಾಗ, ಯಾವುದೇ ಸಂಶಯವಿಲ್ಲದೆ ಪ್ರಸಾದ ಸ್ವೀಕರಿಸಬೇಕು.
ಇಲ್ಲಿ ಕೇತಲದೇವಿ ಸಂಸ್ಕೃತದ ಎರಡು ಸಾಲುಗಳಲ್ಲಿ ಹೇಳುತ್ತಾಳೆ, ಆಹಾರ ಲಿಂಗಾರ್ಪಿತವಾದ ನಂತರ ಅದು ಭಿಕ್ಷೆಯಾಗಿ ಉಳಿಯುವುದಿಲ್ಲ, ಪ್ರಸಾದವಾಗಿರುತ್ತದೆ. ಆ ಮನೆಯ ಭಕ್ತ ಎಂದರೆ ದೇವಾಲಯಕ್ಕೆ ಸಮಾನ. ಜಾತಿ ಕಸಕ್ಕೆ ಸಮಾನ. ಅದು ಪ್ರೇತದಂತೆ ಮಾಯವಾಗುತ್ತದೆ. ಏಕೆಂದರೆ ಲಿಂಗಪೂಜೆಯಲ್ಲಿ ಆ ಶಕ್ತಿ ಇದೆ.
ಲಿಂಗಪೂಜೆ ಮಾಡುವುದೆಂದರೆ ಶಿವಯೋಗದ ಲಿಂಗ ಧ್ಯಾನದಲ್ಲಿ ತಲ್ಲೀನರಾಗುವುದು. ಅಂಗೈಯೊಳಗಿನ ಲಿಂಗದ ಮೇಲೆ ಅನಿಮಿಷ ದೃಷ್ಟಿಯನ್ನು ನೆಟ್ಟು, ಸುಧೀರ್ಘವಾಗಿ, ಶಾಂತವಾಗಿ ಲೀನವಾಗುವುದು. ಆಗ ಏನೋ ಕಂಡಂತೆ, ಏನೋ ಕಾಣದಂತೆ, ಅನುಭವವಾಗುತ್ತದೆ. ಅದನ್ನು ಲೆಕ್ಕಿಸದೆ ಪ್ರತಿ ನಿತ್ಯ ಸಾಧನೆಗೆ ಕೂರಬೇಕು. ಆಗ ತನ್ನಿಂದ ತಾನೆ ಅರಿವಿಗೆ ಬರುತ್ತದೆ. ಆ ಅನುಭವವನ್ನು ಹೇಳಿಕೊಳ್ಳಲು ಬಾರದು, ಹೇಳಿಕೊಳ್ಳಬಾರದು ಕೂಡ. ಹಾಗೆಂದು ಕೇತಲದೇವಿಯ ಅಭಿಪ್ರಾಯ. ಅದೊಂದು ‘ಲಿಂಗಾಂಗ ಸಾಮರಸ್ಯ’ದ ಅರಿವಿನ ಸಾಕ್ಷಾತ್ಕಾರ.
ಹೀಗೆ ಗುಂಡಯ್ಯ ಮತ್ತು ಕೇತಲದೇವಿಯ ಜೀವನವನ್ನು ಬಹಿರಂಗವಾಗಿ ವಿವೇಚಿಸಿದೆವು. ಆದರೆ ಅವರು ಅಂತರಂಗದಿಂದ ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಅವರು ಈ ದೇಹವನ್ನೇ ಮಣ್ಣಿನ ಮಡಕೆಯಾಗಿಸಿ ಅಂತರ ದೃಷ್ಟಿಯಿಂದ ಮೌಲ್ಯಮಾಪನ ಮಾಡುತ್ತಾರೆ. ಈ ಕಾಯವನ್ನು ಶುದ್ಧೀಕರಿಸಲು ಮಣ್ಣಿನ ಹದ ಮಾಡಿದಂತೆ, ಲಿಂಗಪೂಜೆಯ ಸಹಾಯದಿಂದ ಹದ ಮಾಡಬೇಕೆಂದು ಬಯಸುತ್ತಾರೆ. ಗುಂಡಯ್ಯನ ಮತ್ತು ಕೇತಲದೇವಿಯ
ಕಾಯಕ ಹಾಗೂ ವ್ರತಾಚಾರಣೆ ಈ ಸಂದೇಶವನ್ನು ನೀಡುತ್ತದೆ.
ಇಂದಿನ ಆಧುನಿಕ ಜಗತ್ತಿನಲ್ಲಿ ವ್ರತಾಚಾರಿಗಳು ದುರ್ಲಭ. ಆದರೆ ಒಳ್ಳೆಯ ಹವ್ಯಾಸ ಇರುವವರು, ಇಲ್ಲದವರು ಎಂದು ಎರಡು ಭಾಗವಾಗಿಸಿ ನೋಡಬಹುದು. ದುಶ್ಚಟಗಳಿಂದ ಕೂಡಿದ ವ್ಯಕ್ತಿ ಜೀವನದಲ್ಲಿ ಬಂದರೆ ನರಕವೇ ಆಗುತ್ತದೆ. ಉತ್ತಮ ಹವ್ಯಾಸವಿರುವವರ ಸಂಬಂಧ ಮಾಡುವುದು ಸೂಕ್ತ ಎಂದು ಕೇತಲದೇವಿಯ ವಚನಗಳಿಂದ ತಿಳಿಯಬಹುದಾದ ನೀತಿ.
ಸಿಕಾ