ಪ್ರವಚನ ಸಂತ ಬಿಜಾಪುರದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಪ್ರವಚನ ಸಂತ ಬಿಜಾಪುರದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಮನಸ್ಸು ಮಲ್ಲಿನವಾದರೆ ಮಾತು ಕಲ್ಮಶವಾಗಿ ಹೊರಡುತ್ತದೆ. ಅದಕ್ಕೆ ಅಪ್ಪಾಜಿಯ ವಾಣಿಯಂತೆ

ಹೃದಯ ಪರಿಮಳ
ಮಾತು ಮಕರಂದ” ಆದರೆ ವಿಪರ್ಯಾಸ ಏನೆಂದರೆ ನಾವು ನಮ್ಮ್ ನಡುವೆ ಇಂಥ ದೇವರನ್ನು ನೋಡಿ ಕೇಳಿ ಕೂಡ ಇಂದು ಮನಸ್ಸಿಂದ ಬಡವರಾಗಿದ್ದೇವೆ.

ಹೌದು!!!!!!

ಪ್ರವಚನ ಎಂಬ ಶಬ್ದ ನಮ್ಮ ಕಿವಿಗೆ ಬಿದ್ದ ತಕ್ಷಣ ಮೊದಲು ನೆನಪಾಗುವ ಹೆಸರು ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ. ಪ್ರಾಯಶಃ ಪ್ರವಚನದ ಪರಂಪರೆ ಹುಟ್ಟು ಹಾಕಿದವರು ಇವರೇ ಇರಬಹುದು. ಇವರ ಜೀವಿತದ ಕಾಲದಲ್ಲಿ ಇವರನ್ನು ಮೀರಿಸುವ ಮತ್ತೊಬ್ಬ ವ್ಯಕ್ತಿ ದುರ್ಬೀನು ಹಾಕಿ ಹುಡುಕಿದರೂ ಪ್ರಾಯಶಃ ಸಿಗುವುದಿಲ್ಲ.

ಇವರು ಲಿಂಗೈಕ್ಯ ಆದಮೇಲೆ ತಮ್ಮ ಪ್ರವಚನದಿಂದಲೇ ಖ್ಯಾತರಾದವರೆಂದರೆ ಒಬ್ಬರು ಬಿಜಾಪುರದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು, ಮತ್ತೊಬ್ಬರು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಗಳು. ಇವರಿಬ್ಬರ ಪ್ರವಚನಕ್ಕೆ ಓತಪ್ರೋತವಾಗಿ ಜನರು ಹರಿದು ಬರುತ್ತಿತ್ತು. ಪೂಜ್ಯ ನಿಜಗುಣಾನಂದ ಸ್ವಾಮೀಜಿಗಳದ್ದು ರಬಸದ ಮಳೆಯಾದರೆ, ಸಿದ್ದೇಶ್ವರ ಶ್ರೀಗಳದ್ದು ತುಂತುರು ಹನಿಗಳು ಇದ್ದಂತೆ.

ಇವರಿಬ್ಬರೂ ಜನರನ್ನು ಗಂಟೆಗಟ್ಟಲೆ ಹಿಡಿದು ಇಡುತ್ತಿದ್ದರು. ಅದೊಂದು ಪವಾಡವೇ ಸರಿ.

ಮೊನ್ನೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳು ದೈಹಿಕವಾಗಿ ನಮ್ಮನ್ನು ಅಗಲಿದ್ದು ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸ್ಥಾನವನ್ನು ಮತ್ತೊಬ್ಬರು ತುಂಬಲು ಸಾಧ್ಯವೇ ಇಲ್ಲ. ಅವರು ನುಡಿದಂತೆ ನಡೆದವರು, ನಡೆದಂತೆ ನುಡಿದವರು. ನಡೆನುಡಿ ಒಂದಾಗಿಸಿಕೊಂಡು ಸರಳವಾಗಿ ಬದುಕಿದ ನಿಜ ಶರಣರು. ಅವರ ಹೆಸರು ಹೇಳುವುದಕ್ಕೂ ಬಹುಶಃ ನಾವು ಅರ್ಹರಲ್ಲ.

ಅವರು ಪ್ರವಚನ ಮಾಡುತ್ತಿದ್ದಾಗ ಇಡೀ ಮೈದಾನ ನಿಶಬ್ದ ವಾಗುತ್ತಿತ್ತು. ಸಮಯದ ಪಾಲನೆ , ವಿಷಯವನ್ನು ದಾಟಿಸುವ ಪರಿ ಅವರಿಗೆ ಅವರೇ ಸರಿಸಾಟಿ. ಅವರ ಮಾತಿನಲ್ಲಿ ಶರಣರು, ಸಂತರು, ದಾರ್ಶನಿಕರು, ದಾಸರು ಬರುತ್ತಿದ್ದರು. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿ, ಜಗತ್ತಿನ ಎಲ್ಲಾ ಜ್ಞಾನವನ್ನು ತನ್ನದಾಗಿಸಿಕೊಂಡಿದ್ದರು. ಇಂಥವರನ್ನು ಕೇಳಿ ಕೂಡ ಆತ್ಮ ಸಾಕ್ಷಿ ಇಲ್ಲದೆ ಬದುಕುತ್ತೇವೆ.

ಅವರ ಆರೋಗ್ಯ ಹದೆಗೆಟ್ಟಾಗ ಅವರ ಆಪ್ತರು, ಸರ್ಕಾರ ಅವರನ್ನು ಉನ್ನತ ಚಿಕಿತ್ಸೆಗೆ ಒಳಗಾಗಿ ಎಂದು ಪರಿಪರಿಯಾಗಿ ವಿನಂತಿಸಿಕೊಂಡಿದ್ದರು. ಆದರೆ ಶ್ರೀಗಳು ‘ಮರಣವೇ ಮಹಾನವಮಿ’ ಎಂಬ ಬಸವ ಸಂದೇಶವನ್ನು ಚಾಚು ತಪ್ಪದೆ ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದರು. ಯಾವ ಚಿಕಿತ್ಸೆಗೂ ಒಳಗಾಗದೆ ಸಾವಿಗೆ ಹೆದರದೆ ಇಚ್ಛಾಮರಣಿಗಳಾಗಿ ಸಂತೋಷದಿಂದ ಇಹಲೋಕ ತ್ಯಜಿಸಿದರು.

ತನ್ನ ಒಂದು ಸಮಾಧಿಯೂ/ಗದ್ದುಗೆಯೂ ಆಶೆ ಪಡದೆ ಬಯಲಿನಲ್ಲಿ ಬಯಲಾದರು. ಇಂತಹ ಅಪರೂಪದ ಸಂತ ಯುಗಕ್ಕೊಬ್ಬರು ಹುಟ್ಟಬಹುದು ಅನಿಸುತ್ತದೆ. ಅವರ ನುಡಿಗಳನ್ನು ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿ ಕೊಂಡರೆ ನಮ್ಮ ಜೀವನ ಪಾವನವಾಗಬಹುದೇನೋ!

ಸಿದ್ದೇಶ್ವರ ಸ್ವಾಮೀಜಿಗಳು ಬಸವ ತತ್ವವನ್ನು ಪಸರಿಸಬೇಕಾಗಿತ್ತು ಎಂಬ ಸಣ್ಣ ಅಸಮಾಧಾನವೂ ನಮ್ಮಂತಹ ಬಸವಾನುಯಾಯಿಗಳಲ್ಲಿ ಇರುವುದು ಸುಳ್ಳಲ್ಲ. ಆದರೆ ಅವರು ಹೇಳಿದ್ದೆಲ್ಲವೂ ಪರೋಕ್ಷವಾಗಿ ಬಸವ ತತ್ವವೆ.

ಮೇನಕಾ ಎನ್ ಪಾಟೀಲ್
ಬೀದರ

Don`t copy text!