ಶರಣ ಸಾಹಿತ್ಯ ಸಂಶೋಧನೆಗೆ ಕಾದಿರುವ ಅನೇಕ ಮಹತ್ತರ ಸಂಗತಿಗಳು

ಶರಣ ಸಾಹಿತ್ಯ ಸಂಶೋಧನೆಗೆ ಕಾದಿರುವ ಅನೇಕ ಮಹತ್ತರ ಸಂಗತಿಗಳು
ಹನ್ನೆರಡನೆಯ ಶತಮಾನದಲ್ಲಿ ನಡೆದ ಅಪೂರ್ವ ವೈಚಾರಿಕ ಕ್ರಾಂತಿ ಒಂದು ಪವಾಡವೇ ಎನ್ನ ಬಹುದು. ಶತಮಾನದಿಂದ ಜಿಡ್ಡು ಗಟ್ಟಿ ಮೃತಪ್ರಾಯವಾದ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಮೂಲಾಗ್ರವಾಗಿ ಬದಲಾಯಿಸಿದ ಹೆಗ್ಗಳಿಕೆ ಶರಣರಿಗೆ ಸಲ್ಲಬೇಕು.

ಇಂತಹ ಒಂದು ಅಪೂರ್ವ ಕ್ರಾಂತಿಯಲ್ಲಿ ಸಾಕಷ್ಟು ಮಹಿಳೆಯರು ಪಾಲ್ಗೊಂಡಿದ್ದಾರೆ.

ಮಸಣಯ್ಯ ಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನಕಾರ್ತಿ

ಇವಳ ಒಂದು ವಚನವು ಅತ್ಯಂತ ಕಠೋರ ವಚನವು ದಿಟ್ಟ ಗಣಾಚಾರದ ಆಶಯವನ್ನು ಹೊಂದಿದೆ .
ಶಿವ ಶರಣೆಯರ ವಚನಗಳು.ಸಮಗ್ರ ವಚನ ಸಂಪುಟ 5-ಪುಟ 416 .ಇಲ್ಲಿ ಕಂಡು ಬರುವ ಒಬ್ಬ ಅನಾಮಿಕ ವಚನಕಾರಾರ ಸಂಶೋಧನೆ ಹುಡುಕಾಟವು ನನ್ನನ್ನು ಅತಿಯಾಗಿ ಕಾಡ ಹತ್ತಿತು.

ಮಸಣಯ್ಯ ಪ್ರಿಯ ಎಂಬ ಅಂಕಿತ ಹೊಂದಿರುವದರಿಂದ ವಚನಕಾರರು ಶರಣೆ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಆದರೆ ಈ ಶರಣೆ ಯಾರು ಎಂಬುದು
ಇತ್ಯರ್ಥಕ್ಕೆ ಬರುವುದು ಒಂದು ಸಾತ್ವಿಕ ಕರ್ತವ್ಯ ಮತ್ತು ಸಂಶೋಧಕರ ಜವಾಬ್ದಾರಿ.
ಹಸ್ತ ಪ್ರತಿ ನೋಡಿದಾಗ ಇದು ಪ್ರಕ್ಷಿಪ್ತ ವಚನಕಾರ್ತಿಯರ ವಚನ ಅಲ್ಲವೆಂದು ತಿಳಿದು ಬರುತ್ತದೆ . ಹಾಗಿದ್ದರೆ ಯಾರು ಆ ಮಸಣಯ್ಯ ನಮ್ಮ ಮುಂದಿನ ಪ್ರಶ್ನೆಯಾಗಿದೆ ?.

ಮುಖ್ಯವಾಗಿ ವಚನಕಾರರಲ್ಲಿ ಗಜೇಶ ಮಸಣಯ್ಯ ಮತ್ತು ತೆಲುಗೇಶ ಮಸಣಯ್ಯ ಎಂಬ ಇಬ್ಬರು ವಚನಕಾರರು ಕಂಡು ಬರುತ್ತಾರೆ.
ತೆಲುಗೇಶ ಮಸಣಯ್ಯ ಮೂಲ ಆಂಧ್ರ ಪ್ರದೇಶದವನಾಗಿದ್ದು ಕಲ್ಯಾಣ ವಚನ ಆಂದೋಲನ ,ಅನುಭಾವದ ಸಂಪ್ರೀತಿಗೆ ಬೆರಗಾಗಿ ಇಂತಹ ಚಳುವಳಿಯಲ್ಲಿ ಭಾಗವಹಿಸಲು ಕಲ್ಯಾಣಕ್ಕೆ ಬಂದಿರುವುದು ಕಾಣುತ್ತದೆ .ವೃತ್ತಿಯಲ್ಲಿ ತೆಲುಗೇಶ ಮಸಣಯ್ಯ ಶರಣರ ಗೋವುಗಳನ್ನು ಕಾಯೋದು . ಇವನು ಒಟ್ಟು ಏಳು ವಚನಗಳನ್ನು ರಚಿಸಿದ್ದಾನೆ. ಅತ್ಯಂತ ಕೆಳ ಸ್ತರದ ದಲಿತನಾದ ತೆಲುಗೇಶ ಮಸಣಯ್ಯ ದನ ಕರಗಳನ್ನು ಮೇಯಿಸಿಕೊಂಡು ಬರುವುದು ,ಅವುಗಳಿಗೆ ನೀರು ಕುಡಿಸಿ ಶರಣರ ಮನೆಯಲ್ಲಿ ಅವುಗಳನ್ನು ಜೋಪಾನವಾಗಿ ಕಟ್ಟುವುದು ಕಾರ್ಯವಾಗಿತ್ತು .

ಮಸಣಯ್ಯ ಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನಕಾರ್ತಿಯು ತೆಲುಗು ಮಸಣಯ್ಯನವರ ಪುಣ್ಯ ಸ್ತ್ರೀಯಾಗಿರಬಹುದು. ಮೂಲತಃ ದಲಿತ ಕುಟುಂಬದಿಂದ ಬಂದ ಈ ಮಹಿಳೆಯು ಬಸವಾದಿ ಶರಣರ ಪ್ರಭಾವದಲ್ಲಿ ಸಂಪೂರ್ಣ ಪರಿವರ್ತನೆಗೊಂಡು ಸತ್ಯ ಶುದ್ಧ ಕಾಯಕವನ್ನು ಮಾಡುವವಳಾಗಿರಬೇಕು .

ಅಯ್ಯಾ ಅಸ್ಥಿ ಚರ್ಮ ಮಾಂಸ ಶುಕ್ಲ ಶೋಣಿತದ ಗುಡಿಯ ಕಟ್ಟಿ , ಹಂದಿಯ ದೇವರ ಮಾಡಿ ಕುಳ್ಳಿರಿಸಿ ,
ಪಾದರಕ್ಷೆಯ ಪೂಜೆಯ ಮಾಡಿ
ನೈವೇದ್ಯವ ಹಿಡಿದು , ಮೂತ್ರದ ನೀರ ಕುಡಿಸಿ
ಸ್ವನ ಕುಕ್ಕಟನಂತೆ ಕೂಗಿ ಬೊಗಳಿ ,
ದಡ ದಡ ನೆಲಕ್ಕೆ ಕಾಡಿಕೊಂಡು
ಆ ದೇವರ ಒಡೆಯ ಮಾರೇಶ್ವರ
ಕಂಡ ಹೆಂಡ ಕೊಡವನಲ್ಲದೆ ಅನ್ನ ನೀರು ಕೊಡುವನೆ ?
ಆ ದೇವರಿಗೆ ಹೊಲೆಯರು ಮೆಚ್ಚುವರಲ್ಲದೆ ,
ಉತ್ತಮರು ಮೆಚ್ಚರು ನೋಡಯ್ಯ.
ಮಸಣಯ್ಯ ಪ್ರಿಯ ಮಾರೇಶ್ವರ ಲಿಂಗವೇ.

ಇವಳ ವಚನವು ಅತ್ಯಂತ ಗಣಾಚಾರ ಧೋರಣೆಯಿಂದ ಕೂಡಿದೆ .

ಅಯ್ಯಾ ಅಸ್ಥಿ ಚರ್ಮ ಮಾಂಸ ಶುಕ್ಲ ಶೋಣಿತದ ಗುಡಿಯ ಕಟ್ಟಿ ,-ಮನುಷ್ಯರ ಎಲವು ಚರ್ಮ ಮಾಂಸ ಶುಕ್ಲ ಶೋಣಿತದಿಂದ ಗುಡಿಯನ್ನು ಕಟ್ಟಿ .
ಹಂದಿಯ ದೇವರ ಮಾಡಿ ಕುಳ್ಳಿರಿಸಿ -ಅಮೇಧ್ಯವನ್ನು ತಿನ್ನುವ ಹಂದಿಯನ್ನು ದೇವರನ್ನು ಮಾಡಿ ಸ್ಥಾಪಿಸಿ ,ಪಾದರಕ್ಷೆಯಿಂದ ಪೂಜೆಯ ಮಾಡಿ ,ನೈವೇದ್ಯ ಹಿಡಿದು ,ಮೂತ್ರದ ನೀರ ಕುಡಿಸಿ ನಾಯಿ ಕೋಳಿಯಂತೆ ಕೂಗಿ ನೆಲಕ್ಕೆ ದಡದಡ ಬಿದ್ದು ಕೇಳಿಕೊಂಡರೆ ಅಂತಹ ದೇವರು ಖಂಡ ಹೆಂಡ ಕೊಡುವನಲ್ಲದೆ
ಅನ್ನ ನೀರು ಕೊಡುವನೆ ? ಎಂದು ಪ್ರಶ್ನಿಸಿ ಅಂತಹ ದೇವರಿಗೆ ಮಾಂಸದಂತಹ ಹೊಲಸು ತಿನ್ನುವವರು ಮೆಚ್ಚುವರಲ್ಲದೆ ಉತ್ತಮರು ಗುಣವಂತರು ಮೆಚ್ಚರು. ಇದು ಅನಾಮಿಕ ವಚನಕಾರ್ತಿಯ ಮನೋಗತವಾಗಿದೆ.
ಪ್ರಾಣಿಗಳನ್ನು ದೇವರನ್ನಾಗಿ ಕಾಣುವ ಭಾರತೀಯ ಸಂಸ್ಕೃತಿಯಲ್ಲಿ ಮನುಷ್ಯ ಸಮಾಜದ ಜಂಗಮ ಸಂಸ್ಕೃತಿಯನ್ನು ಕಡೆಗಣಿಸಿದ್ದನ್ನು ಸಾತ್ವಿಕ ಕೋಪದಿಂಙದ ಪ್ರಶ್ನಿಸಿದ್ದಾಳೆ ವಚನಕಾರ್ತಿ.
ಈ ವಚನವನ್ನು ನೋಡಿದರೆ ಮಾಂಸಾಹಾರಿಗಳು ಪ್ರಾಣಿ ಕೊಂದು ತಿನ್ನುವ ಒಂದು ಜನಾಂಗವು ಕ್ಷುದ್ರ ದೇವತೆಯನ್ನು ವರಿಸುವ ವಿವಿಧ ಪರಿಯ ಜೊತೆಗೆ ಅತ್ಯಂತ ವ್ಯಂಗ್ಯವಾಗಿ ಕಟುವಾಗಿ ಅಂದಿನ ಕಂದಾಚಾರಣೆಯನ್ನು ಮೌಢ್ಯವನ್ನು ಪ್ರಶ್ನಿಸಿದ್ದಾಳೆ. ಕಾರಣ ಇಂತಹ ಆಶಯ ಹೊಂದಿದ ದಲಿತ ಮಹಿಳೆ ವಚನಕಾರ್ತಿಯು ತೆಲುಗು ಮಸಣಯ್ಯನವರ ಪುಣ್ಯ ಸ್ತ್ರೀ ಎನ್ನುವ ಸಂಭಾವ್ಯತೆ ಇದೆ. ಇದು ನನ್ನ ವ್ಯಕ್ತಿಗತ ಗ್ರಹಿಕೆ ಅಭಿಮತ.

ಇನ್ನೊಂದು ಪ್ರಮಾದವು ಗಾಣದ ಕಣ್ಣಪ್ಪನ (ಗಾಳದ ಕಣ್ಣಪ್ಪ )ವಿಷಯದಲ್ಲಿ ನಡೆದು ಹೋಗಿದೆ.

ಗಾಳದ ಕಣ್ಣಪ್ಪನಾಗಬೇಕಾದ ಗಾಣದ ಕಣ್ಣಪ್ಪ

ವೃತ್ತಿಯಲ್ಲಿ ಗಾಣದ ಕಣ್ಣಪ್ಪನು ಮೀನುಗಾರನು .ಪ್ರಾಯಶ ಪಾಠಾಂತರದ ಸಮದಲ್ಲಿ ಗಾಳದ ಬದಲಾಗಿ ಗಾಣವಾಗಿದ್ದು ಇಂತಹ ಒಂದು ಪ್ರಮಾದಕ್ಕೆ ಕಾರಣವಾಗಿದೆ. ಸುಮಾರು ಹತ್ತು ವಚನಗಳನ್ನು ರಚಿಸಿದ ಗಾಳದ ಕಣ್ಣಪ್ಪ ತನ್ನ ಆರಾಧ್ಯ ಗುರು ಅಲ್ಲಮನವರನ್ನು ವಚನಗಳ ತುಂಬೆಲ್ಲಾ ಸ್ಮರಿಸಿದ್ದಾರೆ .ಗಾಳ ಕಣ್ಣಪ್ಪನು ಅಲ್ಲಮರ ಹೆಸರಿನಲ್ಲಿ ವಚನ ರಚಿಸಿದ್ದಾನೆ. ತ್ರಿಪುರಾಂತಕ ಕೆರೆಯಲ್ಲಿ ಮೀನು ಹಿಡಿಯುವ ಉದ್ಯೋಗಿಯಾದ ಗಾಳದ ಕಣ್ಣಪ್ಪನು ಅತ್ಯಂತ ಅನುಭಾವಿಕ ವಚನ ರಚಿಸಿದ್ದಾನೆ.ಇವನ ಪತ್ನಿ ರೇಚವ್ವೆ . ಗಾಳದ ಕಣ್ಣಪ್ಪನ ಸಾಂಗತ್ಯ ಕೃತಿ ಹಸ್ತ ಪ್ರತಿ ಈಗಲೂ ಹುಬ್ಬಳಿಯ ಮೂರು ಸಾವಿರ ಮಠದಲ್ಲಿ ಕಾಣುತ್ತೇವೆ. ಗಾಳ ಇದು ಮೀನು ಹಿಡಿಯುವ ಸಾಧನವಾಗಿದೆ. ಆದರೆ ಬದಲಾದ ಪಾಠಾಂತರದಲ್ಲಿ ಗಾನವಾಗಿ ಈಗಲೂ ಅನೇಕ ಗಾಣಿಗರು ಈತನನ್ನು ಗಾಣಿಗ ಎಂದು ತಪ್ಪಾಗಿ ಗ್ರಹಿಸಿದ್ದಾರೆ. ಇಂತಹ ದಲಿತ ವರ್ಗದ ವಚನಕಾರರು ಕಲ್ಯಾಣದ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಗಾಳದ ಕಣ್ಣಪನ ವಚನಗಳು
“ಗೊಹೇಶ್ವರನ ಶರಣ ಅಲ್ಲಮ “ಎಂಬುದಾಗಿದೆ .

ಒಂದೇ ಕೋಲಿನಲ್ಲಿ ಮೂರುಲೋಕ ಮಡಿಯಿತು
ಬಿಲ್ಲಿನ ಕೊಪ್ಪು ಹರಿ ನರಿ ಸಿಡಿದು ನಾರಾಯಣನ ತಾಗಿತ್ತು .
ನಾರಾಯಣನ ಹಲ್ಲು ಮುರಿದು ಬ್ರಹ್ಮನ ಹಣೆಯೊಡೆಯಿತ್ತು .
ಹಣೆ ಮುರಿದು ರುದ್ರನ ಹಣೆಗಿಚ್ಚಿನಲ್ಲಿ ಬಿದ್ದಿತ್ತು,ನಷ್ಟವಾಯಿತ್ತು.
ಗೊಹೇಶ್ವರನ ಶರಣ ಅಲ್ಲಮ ಬದುಕು ನಾಮ ನಷ್ಟವಾಯಿತ್ತು .
ಇದು ಗಾಳದ ಕಣ್ಣಪ್ಪನ ವಚನವಾಗಿದೆ.

ಮೀನುಗಾರನಾದ ಕಣ್ಣಪ್ಪನು ತನ್ನ ಒಂದು ಕೋಲಿನಲ್ಲಿ ಮೂರುಲೋಕವು ಮಡಿಯಿತ್ತು. ಸತ್ಯ ಶೃದ್ಧೆಯಿಂದ ಮಾಡಿದ ಕಾಯಕವು ಮೂರುಲೋಕಕ್ಕಿಂತ ಮಿಗಿಲಾಗಿತ್ತು. ಕೋಲು ಕಾಯಕದ ಸಂಕೇತವಾಗಿ ನಿಲ್ಲುತ್ತದೆ. ಭ್ರಮೆ ಭ್ರಾಂತಿಯ ಮೂರುಲೋಕದ ಕಲ್ಪನೆ ಸುಳ್ಳಾಯಿತು.
ಕೋಲಿಗೆ ಅಂಟಿಕೊಂಡ ಬಿಲ್ಲಿನ ಕೊಪ್ಪು ಅಂದರೆ ಕೊಂಡಿ ಸಿಡಿದು ನಾರಾಯಣನ ದೇಹಕ್ಕೆ ತಾಗಿತ್ತು.
ನಾರಾಯಣನಿಗೆ ತಾಗಿದ ಬಿಲ್ಲಿನ ಸಿಡಿದ ಶಿಬಿಕೆ ಆತನ ಹಲ್ಲು ಮುರಿದು ಬ್ರಹ್ಮನ ಹಣೆಗೆ ತಾಗಿ ನೋವು ಮಾಡಿತ್ತು.
ಹಣೆ ಮುರಿದು ರುದ್ರನ ಹಣೆಗಿಚ್ಚಿನಲ್ಲಿ ಬಿದ್ದಿತ್ತು,ನಷ್ಟವಾಯಿತ್ತು.-ರುದ್ರ ದೇವ ಲಯದ ಸಂಕೇತ. ಅದು ಅವನ ಹಣೆಗಿಚ್ಚಿನಲ್ಲಿ ಬಿದ್ದು ನಷ್ಟವಾಯಿತ್ತು
ಗೊಹೇಶ್ವರನ ಶರಣ ಅಲ್ಲಮ ಬದುಕು ನಾಮ ನಷ್ಟವಾಯಿತ್ತು -ಒಡಲಿಗೆ ದುಡಿಯುವ ಕಾಯಕದಿಂದ ಬದುಕು ನಾಮ ನಷ್ಟವಾಗುತ್ತದೆ. ಸಮಷ್ಟಿಗೆ ದುಡಿಯ ಬೇಕೆನ್ನುವ ಸಂದೇಶ ಕಂಡು ಬರುತ್ತದೆ.

ಆಯದ ಕಾಯಕದ ಲಕ್ಕಮ್ಮ ಮತ್ತು ಮಾರಯ್ಯನವರು.

ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯಾ. ದಂಪತಿಗಳು ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅಮರೇಶ್ವರ ಗ್ರಾಮದವರು. ಇದನ್ನು ಗುಡುಗುಂಟಿ ಅಮರೇಶ್ವರ ಎಂತಲೂ ಕರೆಯುತ್ತಾರೆ. ಬಡ ದಂಪತಿಗಳು ಬಸವಣ್ಣನವರ ಕೀರ್ತಿ ವಾರ್ತೆಗೆ ಮರುಳಾಗಿ ಕಲ್ಯಾಣದ ಶರಣ ಚಳುವಳಿಯಲ್ಲಿ ಪಾಲ್ಗೊಳ್ಳಲು ಅವರಿಬ್ಬರೂ ಕಲ್ಯಾಣಕ್ಕೆ ಬರುತ್ತಾರೆ.

“ಆಯ” ಎಂದರೆ ಕೂಲಿ . ಇಲ್ಲಿಯವರೆಗೆ ಎಲ್ಲ ವಚನ ಸಂಪುಟ, ಶರಣ ಚರಿತಾಮೃತ ,ಶರಣರ ಚರಿತ್ರೆ ಶೂನ್ಯ ಸಂಪಾದನೆಯಲ್ಲಿ , ಆಯ ಅಂದರೆ – ಆಯ್ದುಕೊಳ್ಳುವುದು ಅಂತ ದಾಖಲೆಯಾಗಿದೆ.ಅದು ಸಂಪೂರ್ಣ ತಪ್ಪು . ಕಾಯಕಕ್ಕೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಕೊಟ್ಟವರು ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯಾ ಶರಣ ದಂಪತಿಗಳು.ರಸ್ತೆಯಲ್ಲಿ ಬಿದ್ದ ಕಾಳುಗಳನ್ನು ಹೆಕ್ಕಿ ಆಯ್ದು ಅವುಗಳನ್ನು ಶುದ್ಧೀಕರಿಸಿ ಪ್ರಸಾದ ಮಾಡುತ್ತಿದ್ದರು ಎನ್ನುವುದು ಶುದ್ಧ ತಪ್ಪು ಕಲ್ಪನೆ.
“ಆಯ”- ಅದು ಕೂಲಿ ಮಾಡುವ ಸತ್ಯ ಶುದ್ಧ ಕಾಯಕವಾಗಿತ್ತು. ಕೂಲಿಗಾಗಿ ಕಾಲು ಅಂದರೆ ಶ್ರಮಕ್ಕೆ ಪ್ರತಿಯಾಗಿ ಆಯಾ ಕೊಡುವುದು ಈಗಲೂ ವಾಡಿಕೆಯಲ್ಲಿದೆ . ರೈತರು ಸುಗ್ಗಿ ಮಾಡುವ ಸಂಧರ್ಭದಲ್ಲಿ ಈಗಲೂ ಹಗೆ ತುಂಬವ ಮೊದಲು ರಾಶಿ ಮಾಡಿದ ಧಾನ್ಯಗಳನ್ನು ಆಯ್ಗಾರರಾದ ಕಂಬಾರರು ಕುಂಬಾರರು ಮಡಿವಾಳರು ನೇಕಾರರು ಮಡಿವಾಳರು ಕ್ಷೌರಿಕರು ಸಿಂಪಿಗರು ಬಡಿಗರು ಹಗ್ಗ ಹೊಸೆಯುವ ಕಣ್ಣಿ ಕಾಯಕದವರು ಮುಂತಾದ ಕಸುಬಿನವರು ಕ್ಷಣಕ್ಕೆ ಬರಮಾಡಿಕೊಂಡು ಅವರಿಗೆ ವರ್ಷದ ಆಯಾ ಕೊಡುವುದು ಒಂದು ದಾಸೋಹ ತತ್ವದ ಸತ್ ಸಂಪ್ರದಾಯವಾಗಿದೆ. ಅವರಿಗೆ ಪ್ರತಿ ಸುಗ್ಗಿಯ ನಂತರ ಪ್ರತಿಯೊಬ್ಬ ರೈತರು ತಮ್ಮ ಬೆಳೆಯಲ್ಲಿ ಅವರಿಗೆ ಕಾಲು ಕಾದಿ ಹಣ ಧಾನ್ಯ ಕೊಡುತ್ತಾರೆ. ಇಂತಹ ಒಂದು ವ್ಯವಸ್ಥೆಗೆ ಆಯಾ ಎನ್ನುತ್ತಾರೆ.
ಈ ಕಾರಣದಿಂದ ಆಯ್ದಕ್ಕಿ ಅಂದರೆ ಪೇಟೆಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ತಂದು ಜಂಗಮ ಸೇವೆ ಮಾಡುತ್ತಿದ್ದರು ಎಂದೆನ್ನುವುದು ಸಂಪೂರ್ಣ ತಪ್ಪು ಮತ್ತು ಶುದ್ಧ ಸುಳ್ಳು..
ವಚನ ಪರಿಷ್ಕರಣೆ ಶುದ್ಧೀಕರಣ ವಚನ ಅಧ್ಯಯನ ಶೀಲರಿಗೆ ಅತ್ಯಗತ್ಯವಾಗಿದೆ.ಕೆಲ ಪ್ರಮಾದಗಳು ತಪ್ಪುಗಳು ಪಾತಂತರದಲ್ಲಿ ಜರುಗಿದ ಹಿನ್ನೆಲೆಯಲ್ಲಿ ವಚನಕಾರರ ವಚನಗಳಿಂದ ಅವರ ಆಶಯ ವೃತ್ತಿ ಕಸುಬು ಕಾಯಕ ನಿರ್ಧರಿಸುವುದು ಅಷ್ಟೇ ಮುಖ್ಯ.
ಸಂಶೋಧನೆಯಲ್ಲಿ ವ್ಯಕ್ತಿಗಳ ಅಭಿಮತವನ್ನು ಕ್ರೋಢೀಕರಿಸಿ ಸಂಭಾವ್ಯತೆಯನ್ನು ಗುಟ್ಟು ಮಾಡಿ ಶರಣರ ಚರಿತ್ರೆಯನ್ನು ನಿರ್ಧರಿಸುವ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ .

ಬಾಲ ಸಂಗಯ್ಯನ ಚರಿತ್ರೆಯ ಗೊಂದಲ ವೃತ್ತಾಂತ

ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ ,
ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ,
ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ
ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ.
ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ. ಬಾಲ ಸಂಗಯ್ಯಾ . ವಚನ ಸಂಖ್ಯೆ 597 ಸಂಪುಟ 13 ಪುಟ 273.

ಇಲ್ಲಿ ವಚನದ ಕೊನೆಗೆ ಬರುವ “ಅಪ್ರಮಾಣಕೂಡಲಸಂಗಮದೇವ”. ಅಂಕಿತ ನೋಡಿದಾಗ ಸಹಜವಾಗಿ ಯಾರೊಬ್ಬರಿಗೂ ಇಂತಹ ವಚನ ಸಿಕ್ಕಾಗ ಅವು ಬಸವಣ್ಣನವರ ವಚನ ಎಂದು ಕಾಣುವುದು ಸಹಜ .

ಆದರೆ ಬಾಲ ಸಂಗಯ್ಯಾ (ಅಪ್ರಮಾಣ ದೇವಾ ),ಭಿಕ್ಷಾ ಸಂಗಯ್ಯ ಹೀಗೆ ಹಲವು ಜನ ವಚನಕಾರರು ಅಪ್ರಮಾಣಕೂಡಲಸಂಗಮದೇವ. ಅಂಕಿತವನ್ನು ಬಳಸಿರುವುದು ಬಹಳ ತಡವಾಗಿ ಬಂದಿದೆ .
ಬಾಲ ಸಂಗಯ್ಯ ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡ ಬಸವಣ್ಣ ಮತ್ತು ಗಂಗಾಂಬಿಕೆಯರ ಮಗ ಎನ್ನುವ ವಾದವೂ ಇತ್ತು.
1976 ರಲ್ಲಿ ಖ್ಯಾತ ಸಂಶೋಧಕ ಡಾ ಎಂ ಎಂ ಸುಂಕಾಪುರ ಅವರು ವಚನ ಪರಿಷ್ಕರಣೆಯ ಸಮಯದಲ್ಲಿ ಬಾಲ ಸಂಗಯ್ಯನವರ ಕಾಲವನ್ನು ಗುರುತಿಸಿದ್ದಾರೆ.
ಈ ವಚನಕಾರ 16 ನೇ ಶತಮಾನದ ಅಗ್ರ ವಚನಕಾರನು ಸುಮಾರು 920 ವಚನಗಳು ಇವನ ಹೆಸರಲ್ಲಿ ಸಂಗ್ರಹವಾಗಿವೆ.
ಪ್ರತಿ ತಾಡೋಲೆಗಳಲ್ಲಿ ತನ್ನ ಗುರು ಬೋಳ ಬಸವಯ್ಯನವರನ್ನು ನೆನೆದ ಕಾರಣ ಇವನು 16 ನೇ ಶತಮಾನದ ವಚನಕಾರ ಎಂದು ಗುರುತಿಸಲಾಗಿದೆ.
ಆದರೆ ಮೈಸೂರನ ಪಿ ಎಂ ಗಿರಿರಾಜ ಎಂಬವರು ಬಾಲ ಸಂಗಯ್ಯಾ ಅಲ್ಲ ಅದು (ಅಪ್ರಮಾಣ ದೇವಾ ) ಅಂತ ವಾದ ಹಾಕುತ್ತಾರೆ.
ಸಕಲಾಗಮ ಶಿಖಾಮಣಿ ಎಂಬ ಕೃತಿಕಾರನಾದ ಬಾಲ ಸಂಗಯ್ಯ ಮತ್ತು ಅಪ್ರಮಾಣದೇವಾ ಬೇರೆ ಬೇರೆ .ಆದರೆ ಇಬ್ಬರ ಅಂಕಿತ ಅಪ್ರಮಾಣಕೂಡಲಸಂಗಮದೇವ ಎಂದು ಕಂಡು ಬಂದಿರುವದರಿಂದ , ಸಂಶೋಧಕರು ಏಕ ರೂಪದ ಅಭಿಪ್ರಾಯಕ್ಕೆ ಬರುವುದು ಕಠಿಣವಾಗಿದೆ .
ಆದರೆ ಅವರಿಗೆ ದೊರೆತ ಹಸ್ತ ಪ್ರತಿಗಳಲ್ಲಿ ತಮ್ಮ ಗುರು ಮೂಲ ಮತ್ತು ಪರಂಪರೆಯನ್ನು ಹೇಳಿಕೊಂಡು ಬರುವ ಹಿನ್ನೆಲೆಯಲ್ಲಿ 1976 ರಲ್ಲಿ ಡಾ ಎಂ ಎಂ ಸುಂಕಾಪುರ ಅವರು ಬಾಲ ಸಂಗಯ್ಯನವರ ಗುರು ಮೂಲ ಮತ್ತು ತಾಡೋಲೆಯಲ್ಲಿ ಬಂದಿರುವ ಪರಂಪರೆಯ ಉಲ್ಲೇಖಿಸಿ ಅವರ ವಚನಗಳನ್ನು ಗುರುತಿಸಿರುವುದು ಶ್ಲಾಘನೀಯ ,ಬಾಲ ಸಂಗಯ್ಯನವರ ವಚನಗಳ ತಾಡೋಲೆಗಳು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಲಭ್ಯವಿರುತ್ತವೆ.

ಬಸವಣ್ಣನವರ ವಚನಗಳನ್ನೇ ಪಾಠಾಂತರ ಮಾಡುವ ಸಂದರ್ಭದಲ್ಲಿ ಬಾಲಸಂಗಯ್ಯ ಮತ್ತು ಅಪ್ರಮಾಣದೇವ ತಮ್ಮ ಗುರು ಪರಂಪರೆ ಜೊತೆಗೆ ಬಸವಣ್ಣನವರ ವಚನಗಳನ್ನು ಪ್ರತಿ ಮಾಡುವ ಸಾಧ್ಯತೆಯಿದೆ .ಇಂತಹ ಪ್ರಮಾದಗಳ ಹಿಂದೆ ಕಾಪಾಲಿಕ ವೀರಶೈವ ಆಚಾರ್ಯರ ಕೈವಾಡಗಳು ಉಂಟು ..

*ವಚನಗಳಲ್ಲಿ ಬರುವ ಅನೇಕ ಪಾರಿಭಾಷಿಕ ಪದಗಳ ಅನರ್ಥ
ವಚನ -ಅರ್ಥ ಕೋಶಗಳಲ್ಲಿಯೂ ಕೆಲ ತಪ್ಪುಗಳಿವೆ. …. ” ಜಂಗಮರ ಗಳಗರ್ಜನೆ ,ಜಂಗಮದ ಕೋಳಾಟಕ್ಕೆ ಸೈರಿಸದಿದ್ದಡೆ ನೀನಂದ ಮೂಗ ಕೋಯ,ಕೂಡಲ ಸಂಗಮದೇವ.” ವಚನ .ಇಲ್ಲಿ ” ಜಂಗಮದ ಕೋಳಾಟಕ್ಕೆ ” ಅಂದರೆ ಜಂಗಮನ ಅತ್ಯಾಚಾರಕ್ಕೆ ಎಂದು ಅರ್ಥ ಕೊಟ್ಟಿದ್ದಾರೆ. ಅಂದರೆ ಜಂಗಮ ಅತ್ಯಾಚಾರವನ್ನು ಮಾಡಿದ್ದರು ಸೈರಿಸಬೇಕೆನ್ನುವ ಅರ್ಥ ಕೊಡುತ್ತದೆ.
ಆದರೆ ” ಕೋಳಾಟಕ್ಕೆ” ಗೋಳಾಟವು ಪರ್ಯಾಯ ಪದವಾಗಿರುವದರಿಂದ ಅಂತಹ ಪದಗಳನ್ನು ಬಳಸಿ ವಚನ ಬಿಡಿಸಬೇಕು ಇಲ್ಲದಿದ್ದರೆ ಅದು ಅತ್ಯಂತ ಘೋರ ತಪ್ಪಾಗುವುದು.
ಇಂತಹ ಅನೇಕ ಕುಚೋದ್ಯ ಪ್ರಮಾದಗಳು ತಪ್ಪುಗಳು ಹದಿನಾರನೆಯ ಶತಮಾನದಲ್ಲಿ ಜರುಗಿ ಹೋಗಿವೆ.

ಹದಿನಾರನೆಯ ಶತಮಾನದಲ್ಲಿ ಎಡೆಯೂರು ಸಿದ್ಧಲಿಂಗ ಯತಿಗಳು ಸಂಸ್ಕರಿಸಿ ಪರಿಷ್ಕರಿಸಿ ಪಾಠಾಂತರ ಗೊಳಿಸಿದರು. ಮುಂದೆ 16 -17 ನೇ ಶತಮಾನದಲ್ಲಿ ಅನೇಕರು ಪಾಠಾಂತರ ಸಂಕಲನಕ್ಕೆ ಮುಂದಾದಾದ್ರು ಅದನ್ನು ಸಂಕಲನದ ಯುಗವೆಂದು ಕರೆಯುವುದು ಉಂಟು . ಇಲ್ಲಿ ಸಂಕಲನಾ ಕಾರ್ಯದಲ್ಲಿ ಸಂಸ್ಕೃತ ಮತ್ತು ವೀರಶೈವ ಆಚರಣೆಗಳ ಶ್ಲೋಕಗಳ ಕಲಬೆರಕೆ ಆಗಲು ಸಾಧ್ಯತೆಯಿದೆ.
ಡಾ ಫ ಗು ಹಳಕಟ್ಟಿ ಪ್ರೊ ಶಿ ಶಿ ಬಸವನಾಳ ಪ್ರೊ ಕೆ ಜಿ ಕುಂದಣಗಾರ ಡಾ ಆರ್ ಸಿ ಹಿರೇಮಠ , ಡಾ ಎಂ ಎಂ ಸುಂಕಾಪುರ ಡಾ ಎಲ್ ಬಸವರಾಜ್ ಡಾ ಎಂ ಎಂ ಕಲ್ಬುರ್ಗಿ ಡಾ ವೀರಣ್ಣ ರಾಜೂರ ಮುಂತಾದ ಅನೇಕ ಗಣ್ಯರ ಅವಿಶ್ರಮ ಸೇವೆ ಹಾಗು ಕರ್ನಾಟಕ ಘನ ಸರಕಾರಡಾ ಅನುಪಮಾ ಕೊಡುಗೆಯಿಂದಾಗಿ ಮತ್ತು ವಿಶೇಷವಾಗಿ ಕನ್ನಡ ಮತ್ತು ಬಸವಣ್ಣನವರ ಕಾರ್ಯವನ್ನು ಬಹು ಶೃದ್ಧೆಯಿಂದ ಮಾಡಿದ ಡಾ ಎಂ ಎಂ ಕಲ್ಬುರ್ಗಿ ಅವರ ಪರಿಶ್ರಮದಿಂದಾಗಿ ವಚನ ಸಂಪುಟಗಳು ಮನೆ ಮನೆಗೆ ಮುಟ್ಟುವಂತಾಯಿತು . ಅವರು ಸಮಗ್ರ ವಚನಗಳ ಮೂರನೆಯ ಆವೃತ್ತಿ ಸಂಕಲಿಸಿ ಸಮಪಾದಿಸಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ವಚನಗಳನ್ನು ಒಬ್ಬರೇ ಓದಿ ಸಹ ಸಂಪಾದಕರೊಂದಿಗೆ ಸಮಾಲೋಚಿಸಿ ಅಗತ್ಯ ತಿದ್ದು ಪದೇ ಆಡಿದ್ದಾರೆ.ಆದರೆ ಅದಿನ್ನೂ ಪ್ರಕಟಗೊಂಡಿಲ್ಲ. ಕರ್ನಾಟಕ ಸರಕಾರ ಈ ಕೂಡಲೇ ಪ್ರಕಟಿಸಬೇಕು.

ಡಾ.ಶಶಿಕಾಂತ.ಪಟ್ಟಣ- ರಾಮದುರ್ಗ

Don`t copy text!