ಪರದಲ್ಲಿ ಪರಿಣಾಮಿಯಾದ
ಅರಳಿದ ಪುಷ್ಪ
ಪರಿಮಳಿಸದಿಹುದೆ ಅಯ್ಯಾ?
ತುಂಬಿದ ಸಾಗರ
ತೆರೆನೊರೆಗಳಾಡದಿಹುದೆ ಅಯ್ಯಾ?
ಆಕಾಶವ ಮುಟ್ಟುವವ
ಅಟ್ಟಗೋಲ ಹಿಡಿವನೆ ಅಯ್ಯಾ?
ಪರದಲ್ಲಿ ಪರಿಣಾಮಿಯಾದ ಶರಣ
ಕರ್ಮ ಪೂಜೆ ಫಲವನತಿಗಳೆಯದಿಹನೆ ಮಹಾಲಿಂಗ ಗಜೇಶ್ವರಾ
– ಗಜೇಶಮಸಣಯ್ಯ
ಗಜೇಶಮಸಣಯ್ಯ ಬಸವ ಸಮಕಾಲೀನ ಶರಣ ವಚನಕಾರ ವಿಜಯಪುರ ಹತ್ತಿರದ ಕರ್ಜಗಿ ಗ್ರಾಮದವನು ಮತ್ತು ಆತನು ಆತನ ಹೆಂಡತಿ ಅಲ್ಲಿಯೇ ಸಮಾಧಿಯಾದರು.
ಅರಳಿದ ಪುಷ್ಪ ಪರಿಮಳಿಸದಿಹುದೆ ಅಯ್ಯಾ
ಸೃಷ್ಟಿಯಲ್ಲಿ ಅರಳಿದ ಪುಷ್ಪವು ತನ್ನ ಪರಿಮಳವನ್ನು ಪರಿಸರದಲ್ಲಿ ಬೀರುವುದು. ಇದು ಅದರ ಸಹಜ ಗುಣ ಅರಳಿದ ಹೂವು ಪರಿಮಳ ಸೂಸದೆ ಇರಲು ಸಾಧ್ಯವೇ ಎಂದಿದ್ದಾರೆ ಗಜೇಶ ಮಸಣಯ್ಯ ಇಲ್ಲಿ ಒಬ್ಬ ಪರಿಪೂರ್ಣ ಸಾಧಕ ಭಕ್ತ ಗುರು ಲಿಂಗ ಜಂಗಮ ತತ್ವಗಳನ್ನು ಅರಿತವನು ತನ್ನ ಅನುಭವಕ್ಕೆ ಬಂದ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡದೆ ಇರಲು ಸಾಧ್ಯವೇ ,? ಎಂದು ಕೇಳಿದ್ದಾನೆ.
ತುಂಬಿದ ಸಾಗರ
ತೆರೆನೊರೆಗಳಾಡದಿಹುದೆ ಅಯ್ಯಾ?
ತುಂಬಿದ ಸಾಗರ ಕಡಲು ಸದಾ ಕ್ರಿಯಾಶೀಲತೆ ಹೊಂದಿದ ಒಂದು ಆವಸ್ಥೆ. ಇಂತಹ ತುಂಬಿದ ಕಡಲಿನ ತೆರೆ ನೋರೆಗಳು ದಡಕೆ ಅಪ್ಪದೆ ಇರ ಬಹುದೆ ? ಎಂದು ಪ್ರಶ್ನಿಸುವ ಮೂಲಕ ಜ್ಞಾನದ ಕಡಲಿನ ವಿದ್ವತ್ತಿನ ಚಿಂತನೆಯ ನೆರೆ ತೊರೆ
ಅಲೆಗಳು ಹೇಗೆ ಮೌನವಾಗಿರಲು ಸಾಧ್ಯ. ಅವು ಕಡಲ ಒಡಲಿನಿಂದ ದಡಕ್ಕೆ ಅಪ್ಪಳಿಸುತ್ತವೆ. ಹಾಗೆ ಅನುಭಾವಿಕ ಚಿಂತಕನ ಜ್ಞಾನ ಕಡಲಿನ ಅಲೆಗಳು ಸಮಾಜಕ್ಕೆ ತಲುಪುತ್ತವೆ ಎಂಬರ್ಥ.
ಆಕಾಶವ ಮುಟ್ಟುವವ
ಅಟ್ಟಗೋಲ ಹಿಡಿವನೆ ಅಯ್ಯಾ?
ಒಬ್ಬ ಸಾಧಕನು ತನ್ನ ಸ್ವಂತ ಬಲದಿಂದ ಆಕಾಶವನ್ನೇ ಮುಟ್ಟ ಬಹುದುದಾದರೆ ಅವನೇನು ಅಟ್ಟಗೋಲು ಸಹಾಯ ಪಡೆದು ಮೇಲೆ ಹೋಗಲು ಸಾಧ್ಯವೇ . ಹಳ್ಳಿಯ ಮನೆಗಳಲ್ಲಿ ಮೇಲ್ಮಾಳಿಗೆ ಕೋಣೆಗೆ ಹೋಗಲು ಒಂದು ಅಟ್ಟವನ್ನ ನಿರ್ಮಿಸಿ ಆಶ್ರಯಕ್ಕೆ ಊರುಗೋಲು ಅಟ್ಟದಗೋಲು ಇಡುವರು ಅದು ಅಟ್ಟದ ಜೊತೆಗೆ ಪಕ್ಕದ ಕಟ್ಟಿಗೆಯ ಸಹಾಯಕ ಆಸರ .
ಅಟ್ಟವನ್ನು ಏರುವವರೆಲ್ಲ ಅಟ್ಟಗೋಲ ಸಹಾಯ ಹಿಡಿಯುವರು. ಆದರೆ ಆಕಾಶದ ತುತ್ತ ತುದಿಗೆ ಹೋಗಿ ಬರುವ ಸಾಧಕ ಯಾತ್ರಿಕ ಅಟ್ಟಗೋಲ ಬಳಸಲು ಸಾಧ್ಯವೇ ಎಂದಿದ್ದಾರೆ ಗಜೇಶ ಮಸಣಯ್ಯ ದಿಟ್ಟ ಶಿವಯೋಗ ಸಾಧಕ ಇಂತಹ ಸಣ್ಣ ಪುಟ್ಟ ಸಹಾಯ ಪಡೆಯುವುದಿಲ್ಲ ಎಂದು ಅರ್ಥ .
ಪರದಲ್ಲಿ ಪರಿಣಾಮಿಯಾದ ಶರಣ
ಕರ್ಮ ಪೂಜೆ ಫಲವನತಿಗಳೆಯದಿಹನೆ ಮಹಾಲಿಂಗ ಗಜೇಶ್ವರಾ
ಇಹಪರ ಸಾಧನವು ಶರಣ ಚಳುವಳಿಯ ನೈಜ ಆಶಯಗಳು. ತನ್ನಂತೆ ಪರರು ಎಂದರಿವ ಜಂಗಮ ಪ್ರೇಮಿ ನಿಜವಾದ ಪರಿಪೂರ್ಣ ಸಾಧಕ.
ನಡೆ ನುಡಿ ಇಹಪರ ಸ್ವಾಮ್ಯತೆ ಏಕತೆ ಹೊಂದಿದ ಭಕ್ತನು ಕರ್ಮ ಪೂಜೆ ವೈದಿಕ ಭೂಯಿಷ್ಟ ವ್ಯವಸ್ಥೆಯ ಕಂದಾಚಾರಗಳನ್ನು
ಮತ್ತು ಇಂತಹ ಅಂಧ ಶೃದ್ಧೆ ಮೂಢ ನಂಬಿಕೆಗಳನ್ನು ಮುಂದಿನ ಫಲಪ್ರದ ನೀಡುವ ಸಾಧನ ಎಂಬ ನಂಬಿಕೆಯನ್ನು ಅಲ್ಲಗಳೆಯದೆ ಇರುವನೆ ಎಂದು ಹೇಳಿ ಶರಣ ಸಂಸ್ಕೃತಿ ಭಕ್ತ ಸಮ ಸಮಾಜದ ಪರಿಕಲ್ಪನೆ ಹೊಂದಿದ್ದು ಸಾರ್ವಕಾಲಿಕ ಸಮಕಾಲೀನ ಸಮಾನತೆ ಸಾಧಿಸುವುದೇ ಅವನ ಮುಖ್ಯ ಗುರಿ ಎಂದು ಗಜೇಶ ಮಸಣಯ್ಯ ಹೇಳಿದ್ದಾರೆ.
ನಿಜಕ್ಕೂ ಪರಿಸರದ ಜೊತೆಗೆ ವ್ಯಕ್ತಿಯ ವಿಕಾಸ ಪರಿಮಳ ಸೂಸುವ ಅರಳುವ ಪುಷ್ಪ ತುಂಬಿದ ಕಡಲಿನ ನೆರೆ ತೊರೆ ಆಕಾಶ ಮುಟ್ಟುವ ಸಾಧಕ ಅಟ್ಟದ ಗೋಲು ಹಿಡಿಯಲು ಸಾಧ್ಯವೇ ಎಂದು ಪ್ರಶ್ನೆ ಮಾಡುತ್ತಾ ಎಲ್ಲರೂ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿ ಹೇಳಿದ್ದಾನೆ.
–ಡಾ ಶಶಿಕಾಂತ ಪಟ್ಟಣ ರಾಮದುರ್ಗ