ಅಕ್ಕನೆಡೆಗೆ –ವಚನ – 43
ಲಿಂಗಾಂಗ ಸಾಮರಸ್ಯದ ಪರಿ
ಅಂಗೈಯೊಳಗಣ ಲಿಂಗವ ಪೂಜಿಸುತ್ತ
ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ ಕಂಗಳ ನೋಟ ಕರುವಿಟ್ಟ ಭಾವ
ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ
ಅಕ್ಕಮಹಾದೇವಿಯು ಹುಟ್ಟಿನಿಂದಲೇ ಅನುಭಾವದ ಸ್ಥಿತಿಯಲ್ಲಿದ್ವಳು. ಕಲ್ಯಾಣದ ಶರಣರನ್ನು ಕಾಣಲೇ ಬೇಕೆಂಬ ಹಟ ಮನದ ಮೂಲೆಯಲ್ಲಿ ಇದ್ದೇ ಇತ್ತು. ಬದುಕಿನ ಹಾದಿಯಲ್ಲಿ ತನ್ನ ಇಷ್ಟಕ್ಕೆ ವಿರೋಧವಾಗಿ ನಡೆದುದನ್ನು ‘ಇದೇನೊ ಆಭಾಸ’ ಎಂದು ಕಡೆಗಣಿಸಿ, ತನ್ನ ಗುರಿಯತ್ತ ಮುಂದೆ ಹೊರಟಳು. ಶರಣರು ಮತ್ತವರ ಬಗ್ಗೆ ಅರಿತಿದ್ದರಿಂದ ಅವರನ್ನು ಕಾಣುವ ತವಕ ಅವಳಲ್ಲಿ ಅತಿಯಾಗಿತ್ತು. ಅವಳ ಮನದ ಇಂಗಿತದಂತೆ ಶರಣರನ್ನು ಕಂಡು ಅವರೊಂದಿಗೆ ಬೆರೆತಳು.
ಅತ್ಯಂತ ವಾಸ್ತವ ನೆಲೆಯಲ್ಲಿ ಚಿಂತನೆ ಮಾಡುವ ಶರಣರ ಬದುಕಿನ ಮೂಲ ದ್ರವ್ಯ ಇಷ್ಟಲಿಂಗ! ಮತ್ತು ಇಷ್ಟಲಿಂಗ ಪೂಜೆ! ಅಕ್ಕಮಹಾದೇವಿಯ ಮನಸು ಈ ಶಿವಯೋಗದ ಲಿಂಗ ಧ್ಯಾನಕ್ಕೆ ಮನಸೋತಿತು. ತನ್ನ ಹುಡುಕಾಟಕ್ಕೆ ಹಾಗೂ ಗುರಿಸಾಧನೆಗೆ ಇದೇ ಮಾರ್ಗದಲ್ಲಿ ಮುಕ್ತಿ ಎಂದು ಮನಗಂಡಳು.
ಚಿನ್ಮಯಜ್ಞಾನಿ ಚನ್ನಬಸವಣ್ಣನ ವಚನದಿಂದ ಲಿಂಗದ ಪರಿಕಲ್ಪನೆ ಬಸವಣ್ಣನದು ಎಂದು ತಿಳಿದುಬರುತ್ತದೆ.
“ಆದಿ ಬಸವಣ್ಣ ಅನಾದಿ ಬಸವಣ್ಣ ಎಂಬರು
ಹುಸಿ ಹುಸಿ ಈ ನುಡಿಯ ಕೇಳಲಾಗದು
ಆದಿ ಲಿಂಗ ಅನಾದಿ ಬಸವಣ್ಣನು
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು
ಇಂತಿ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನಸಂಗಮದೇವಾ”
ಹೀಗೆ ಲಿಂಗವು ಬಸವಣ್ಣನಿಂದಲೇ ಹುಟ್ಟಿತು ಎನ್ನುವ ಮಾತು ಸ್ಪಷ್ಟವಾಗುತ್ತದೆ.
ಬಸವಣ್ಣನ ಪ್ರಕಾರ ಲಿಂಗಪೂಜೆಯನ್ನು ಬಹಳ ಆಸ್ಥೆಯಿಂದ, ಅಂತರಂಗದಿಂದ ಮಾಡಬೇಕು ಎನ್ನುವ ಭಾವನೆ.
“ಲಿಂಗವ ಪೂಜಿಸಿ ಫಲವೇನಯ್ಯ ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯ ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?”
ಅಂದರೆ ಲಿಂಗಾಂಗ ಸಾಮರಸ್ಯವಾದರೇ ಮಾತ್ರ ಲಿಂಗಪೂಜೆ ಫಲಪ್ರದ ಎನ್ನುವ ಮಾತು ಸ್ಪಷ್ಟವಾಗುತ್ತದೆ.
ಇಂತಹ ಶರಣರ ಸಾಂಗತ್ಯ ಮತ್ತವರ ಲಿಂಗಪೂಜೆಯನ್ನು ಮೆಚ್ಚಿಕೊಂಡು, ಬಯಸಿ ಅಕ್ಕ ಉಡುತಡಿಯಿಂದ ಕಲ್ಯಾಣ ಸೇರುತ್ತಾಳೆ. ಅಲ್ಲಿ ಶರಣರೊಂದಿಗೆ ಸಮಯ ಕಳೆದು ಅವರ ಜೀವನಶೈಲಿಯನ್ನು ತನ್ನದಾಗಿಸಿಕೊಂಡು, ತನ್ನ ಗುರಿ ಸಾಧನೆಯೂ ಅದೇ ಎಂದಾದಮೇಲೆ ಸಂಭ್ರಮಿಸುತ್ತಾಳೆ.
ಅಕ್ಕನ ಮೇಲಿನ ವಚನದಂತೆ, ಅಂಗೈಯಲ್ಲಿರುವ ಲಿಂಗವನ್ನು ಪೂಜಿಸುತ್ತಾಳೆ. ಇಲ್ಲಿ “ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ” ಎಂದರೆ ಲಿಂಗ ಧ್ಯಾನದಲ್ಲಿ ದರ್ಶನವಾಗುವ ಬೆಳಕಿನ ಸಂಕೇತ. ಲಿಂಗಪೂಜೆಯಲ್ಲಿ ಕುಳಿತಾಗ, ಲಿಂಗವನ್ನು ಅರೆಗಣ್ಣು ತೆರೆದು ದೃಷ್ಟಿ ಇಟ್ಟು ನೋಡುವುದು “ಅನಿಮಿಷ ದೃಷ್ಟಿ”. ಹಾಗೆ ನೋಡುವಾಗ ಕಣ್ಣು ಅಚಲವಾಗಿ ಅದರಲ್ಲೇ ಲೀನವಾಗುವ ಪ್ರಕ್ರಿಯೆ ಕರುವಿಡುವುದು. ಲಿಂಗದಿಂದ ಕಣ್ಣನ್ನು ಒಂದಿಷ್ಟೂ ಕದಲದಂತೆ ಅಲ್ಲೇ ನೆಟ್ಟಿದೆ ಎನ್ನುವ ಭಾವನೆ ಅಕ್ಕನದು. ಅಷ್ಟೊಂದು ಪ್ರೀತಿ, ಮೋಹ, ವ್ಯಾಮೋಹ ಅವಳಲ್ಲಿ ಕಂಡುಬರುತ್ತದೆ. ಆ ಲಿಂಗಪೂಜೆಯಲ್ಲಿ ಆಗುವ ದರ್ಶನದಿಂದ ಹೊರಗೆ ಬರಲು ಸಾಧ್ಯವೇ ಇಲ್ಲ ಎಂದು ಹೇಳುವ ಪರಿ ಅನನ್ಯ. “ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ” ಹೀಗೆ ಹೇಳುವಾಗ ಅವಳು ಈ ಅನುಭವಕ್ಕಾಗಿ ಅದೆಷ್ಟು ದಿನದಿಂದ ಕಾದಿರಬಹುದು? ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ.
ಸಿಕಾ