ಅವು ನೀಡಿ ಭಕ್ತರಾದವು.

ಅವು ನೀಡಿ ಭಕ್ತರಾದವು.


ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು.
ಅವು ನೀಡಿದವು ತಮ್ಮ ಲಿಂಗಕ್ಕೆಂದು.
ಆನು ಬೇಡಿ ಭವಿಯಾದೆನು; ಅವು ನೀಡಿ ಭಕ್ತರಾದವು.
ಇನ್ನು ಬೇಡಿದೆನಾಡದೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.

                                     -ಅಕ್ಕಮಹಾದೇವಿ

ಹನ್ನೆರಡನೆಯ ಶತಮಾನದ ದಿಟ್ಟ ಶರಣೆ ಅಕ್ಕ ಮಹಾದೇವಿ ತನ್ನ ಅನುಭವಕ್ಕೆ ನಿಲುಕದ ಅನುಭಾವವನ್ನು ಅತ್ಯಂತ ಸುಂದರ ಸರಳ ರೀತಿಯಲ್ಲಿ ಕಟ್ಟಿ ಕೊಟ್ಟಿದ್ದಾಳೆ. ಅಕ್ಕ ತಾನೂ ಒಬ್ಬ ಸಮಾಜದ ಪ್ರತಿನಿಧಿ .ತನಗೂ ಹಸಿವು ನಿದ್ದೆ ಬಯಕೆ ಕನಸು ಮನುಷ್ಯ ಸಹಜ ದತ್ತವಾದ ಬೇಡಿಕೆ ಸರಳ ಮತ್ತು ಸ್ವಾಭಾವಿಕ ಎಂದು ಅಭಿವ್ಯಕ್ತಗೊಳಿಸಿದ್ದಾಳೆ.

ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.

ಅಕ್ಕ ತಾನು ಪ್ರಕೃತಿಯ ಪ್ರಾಣಿ ಪಶು ಪಕ್ಷಿ ಜೀವಿಗಳ ಹಾಗೆ ಒಡಲ ಹಸಿವಿಗೆ ಆಹಾರ ಪಡೆಯಲು ದಟ್ಟವಾದ ಅರಣ್ಯ ಅಡವಿಗೆ ಹೊಕ್ಕೆನು ಎಂದು ಹೇಳಿದ್ದು ಅವಳ ಪ್ರೌಢಿಮೆ ನೀರ್ಭಾವ ಗುಣಕ್ಕೆ ಹಿಡಿದ ಕನ್ನಡಿಯಾಗಿದೆ.
ಅನೇಕ ಪ್ರಾಣಿಗಳಿಗೆ ಹಲವು ರೀತಿಯಲ್ಲಿ ಆಶ್ರಯ ನೀಡಿದ ಅಡವಿಯ ಉಪಮೆಯ ಸುಂದರ. ಪ್ರಾಣಿಗಳಂತೆ ತನ್ನ ಹಸಿವಿನ ಒಡಲ ಕಳವಳಕ್ಕಾಗಿ
ತಾನೂ ಕೂಡ ಅಡವಿಯ ಹಣ್ಣು ಹಂಪಲುಗಳನ್ನು ಪಡೆಯಲು ದಟ್ಟವಾದ ಅರಣ್ಯ ಹೊಕ್ಕಳು ಎಂದು ಹೇಳುತ್ತಾಳೆ.

ಗಿಡುಗಿಡುದಪ್ಪಿದೆ ಬೇಡಿದೆನೆನ್ನಂಗಕ್ಕೆಂದು.

ತನ್ನ ಅಂಗ ಸುಖದ ಹಸಿವು ತೀರಿಸಿಕೊಳ್ಳಲು ಸಜ್ಜಾಗಿ ಅಕ್ಕ ಅಡವಿಯೊಳಗಿನ ಎಲ್ಲಾ ಗಿಡಗಳನ್ನು ಅಪ್ಪಿಕೊಂಡು ತನ್ನಂಗ ಹಸಿವಿಗೆ ಆಹಾರ ರೂಪದಲ್ಲಿ ಹಣ್ಣು ಹಂಪಲುಗಳನ್ನು ಪಡೆಯಲು ಬೇಡಿಕೆ ಇಡುತ್ತಾಳೆ. ಹೇಗೆ ಪ್ರಾಣಿಗಳು ಪಕ್ಷಿಗಳು ತಮಗೆ ಹಸಿವಾದಾಗ ಹೊಟ್ಟೆಗೆ ಮರಗಳನ್ನು ಆಶ್ರಯಿಸುವ ಹಾಗೆ ಅಕ್ಕ ಪ್ರತಿಯೊಂದು ಮರವನ್ನು ಅಪ್ಪಿ ಕೇಳಿಕೊಳ್ಳುತ್ತಾಳೆ.

ಅವು ನೀಡಿದವು ತಮ್ಮ ಲಿಂಗಕ್ಕೆಂದು.
ಪರಿಸರ ಸಂರಕ್ಷಣೆ ಸೃಷ್ಟಿ ಪ್ರೇಮಿ ಅಕ್ಕ ತನ್ನ ಒಡಲ ಹಸಿವಿಗೆ ಗಿಡಕ್ಕೆ ಕಲ್ಲು ಹೊಡೆಯದೆ ಕೋಲಿನಿಂದ ತಿವಿಯದೆ ಮರಗಳಿಂದ ಬಿದ್ದ ಪೂರ್ಣ ಪ್ರಮಾಣದ ಮಾಗಿದ ಹಣ್ಣು ಹಂಪಲುಗಳನ್ನು ಆಯ್ದು ತನ್ನ ಹಸಿವು ಹಿಂಗಿಸಲು.
ಆದರೆ ಹಣ್ಣು ಹಂಪಲುಗಳನ್ನು ಹೊತ್ತ ಮರ ಗಿಡ ಅವಳ ಬೇಡಿಕೆಗೆ ತಾವು ನೀಡಿದವು ಲಿಂಗಕ್ಕೆಂದು. ಎಂತಹ ಅದ್ಭುತ ಭಾವ ಉಪಮೆಯ ಅಕ್ಕ ಬಳಸಿದ್ದಾಳೆ. ಅಕ್ಕ ಮಹಾದೇವಿ ತನ್ನ ಹಸಿವಿಗೆ ಗಿಡಗಳನ್ನು ಬೇಡಿಕೊಂಡರೆ ಮರ ಗಿಡಗಳು ಇದು ತಮ್ಮ ಲಿಂಗ ಪ್ರಜ್ಞೆ ಜವಾಬ್ದಾರಿ ಎಂದು ತಿಳಿದು ಹಣ್ಣು ಹಂಪಲುಗಳನ್ನು ನೀಡಿದವು ಎನ್ನುತ್ತಾಳೆ ಅಕ್ಕ ಇಂತಹ ಅನುಭವ ಅಧ್ಯಾತ್ಮದ ಚಿಂತನೆ ನಾವಿಲ್ಲಿ ಕಾಣುತ್ತೇವೆ.

ಆನು ಬೇಡಿ ಭವಿಯಾದೆನು
ಬಯಕೆ ಬೇಡಿಕೆ ಹಸಿವು ಕಡಲ ಕಳವಳ ಅಂಗ ಸುಖದ ಹಸಿವು ಹಿಂಗಿಸುವ ಹುಡುಕಾಟ ಹೀಗೆ ಅಕ್ಕ ಮಹಾದೇವಿ ಅರಣ್ಯದ ಮಧ್ಯೆ ಅನೇಕ ಮರಗಳನ್ನು ಆಶ್ರಯಿಸುವ ಹಿನ್ನೆಲೆಯಲ್ಲಿ ಅಪ್ಪಿ ತನ್ನ ಹಸಿವಿಗೆ ಆಹಾರಕ್ಕೆ ಬೇಡಿಕೆ ಇಟ್ಟಳು ಆ ಕಾರಣಕ್ಕೆ ತಾನು ಭವಿಯಾದೇನು ಎನ್ನುತ್ತಾಳೆ. ತಾನು ಗಿಡ ಮರ ಬಳ್ಳಿಗಳು ಪೋಷಿಸುವ ಜವಾಬ್ದಾರಿ ಇದೆ ಆದರೆ ತಾನು ಭವಿಯಾದೆ ತನ್ನ ಸ್ವಾರ್ಥಕಾಗಿ ಗಿಡಗಳನ್ನು ಬೇಡಿದೆ ಎಂದಿದ್ದಾಳೆ.

ಅವು ನೀಡಿ ಭಕ್ತರಾದವು
ಅಕ್ಕ ತನ್ನ ಒಡಲ ಹಸಿವಿಗೆ ಬೇಡಿ ಭವಿಯಾದಳು. ಆದರೆ ಮರಗಳು ಲಿಂಗ ಜಂಗಮ ಪ್ರಜ್ಞೆ ಮತ್ತು ಭಕ್ತನ ದಾಸೋಹದ ಆಶಯದಂತೆ ಅಕ್ಕನ ಕೂಗಿಗೆ ಸ್ಪಂದಿಸಿ ತಮ್ಮಲ್ಲಿನ ಹಣ್ಣು ಹಂಪಲುಗಳನ್ನು ನೀಡಿದವು.
ತಮ್ಮ ದಾಸೋಹ ಪ್ರಜ್ಞೆ ಜವಾಬ್ದಾರಿ ಮೆರೆದು ಭಕ್ತರಾದವು. ಭಕ್ತನ ಅನುಪಮ ಪ್ರೀತಿಯನ್ನು ಈ ರೀತಿಯಲ್ಲಿ ಅಕ್ಕ ಮಹಾದೇವಿ ನಿರೂಪಿಸಿದ್ದಾಳೆ .

ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.

ಅಕ್ಕ ಇಲ್ಲಿ ಒಡಲ ಹಸಿವು ಎನ್ನುವ ಸಣ್ಣ ಉಪಮೆಯ ಬಳಸಿ ಅರಣ್ಯ ಅಡವಿ ಎಂಬ ನಂಬಿಕೆಯನ್ನು ಸೂಚಿಸಿ ತಾನು ತನ್ನ ಅಂಗದ ಹಸಿವಿಗೆ ಬೇಡಿದೆ. ಬೇಡಿ ಭವಿಯಾದೇ ಆದರೆ ಅರಣ್ಯದ ಮಧ್ಯೆ ಇರುವ ಗಿಡ ಮರಗಳು ನೀಡಿ ಭಕ್ತರಾದವು ಮರಗಳಿಗೆ ಲಿಂಗ ಪ್ರಜ್ಞೆ ಜಂಗಮ ಜವಾಬ್ದಾರಿ ಇದೆ ಹೀಗಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಗಿಡಗಳು ಭಕ್ತರಾದರೆ ತಾನು ಬೇಡಿ ಭವಿಯಾದೆ ಎನ್ನುವ ವಿನಯ ಭಾವ ಪ್ರಜ್ಞೆ ಅವಳದ್ದು. ಕೊನೆಗೆ ತಾನು ಇನ್ನೂ ಮುಂದೆ ಎಂದಿಗೂ ಬೇಡುವುದಿಲ್ಲ ಬಳಲುವುದಿಲ್ಲ ಸತ್ಯ ಶುದ್ಧ ಕಾಯಕ ಮಾಡಿ ದಾಸೋಹ ತತ್ವ ಸಿದ್ಧಾಂತಗಳನ್ನು ಪಾಲಿಸಿ ತಾನೂ ಕೂಡ ಭಕ್ತಳಾಗುವೇನು ಎಂದಿದ್ದಾಳೆ. ಬೇಡಿಕೆ ಭಿಕ್ಷೆ ದಾನ ವ್ಯವಸ್ಥೆ ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಹುಟ್ಟು ಹಾಕುತ್ತವೆ. ಹೀಗಾಗಿ ಬೇಡಿ ಭವಿಯಾಗದೆ ನೀಡಿ ಹಂಚಿ ಭಕ್ತಳಾಗುವೆ ಎನ್ನುತ್ತಾಳೆ ಅಕ್ಕ. ಅಷ್ಟೇ ಅಲ್ಲ ಇನ್ನು ಮುಂದೆ ತಾನು ಎಂದಿಗೂ ಯಾರನ್ನೂ ಬೇಡುವುದಿಲ್ಲ ಹಾಗೇನಾದರೂ ಆದಲ್ಲಿ ಅದು ಚೆನ್ನಮಲ್ಲಿಕಾರ್ಜುನ ಎಂಬ ಜಂಗಮ ಸಮಾಜದ ಮೇಲೆ ಪ್ರಮಾಣ ಆಣೆ ಎಂದಿದ್ದಾಳೆ.
ಅವಳ ವಚನದಲ್ಲಿ ಅತ್ಯಂತ ಸುಂದರ ಸೂಕ್ಷ್ಮ ಉನ್ನತ ವಿಚಾರಗಳು ಸಾದರಗೊಂಡಿವೆ.
ಪ್ರತಿನಿಧಿತ್ವ ಅನುಭವ ಪರಿಸರದ ಅಡವಿ ಗಿಡ ಮರಗಳ ಚಿತ್ರಣ ತನ್ನ ವಚನದಲ್ಲಿ ಅತ್ಯಂತ ಸೊಗಸಾಗಿ ಬಳಸಿ ತನ್ನ ಅನುಭವಕ್ಕೆ ಮಾದರಿಯಾಗಿದ್ದಾಳೆ ಅಕ್ಕ ಮಹಾದೇವಿ.


ಡಾ ಶಶಿಕಾಂತ ಪಟ್ಟಣ ರಾಮದುರ್ಗ

2 thoughts on “ಅವು ನೀಡಿ ಭಕ್ತರಾದವು.

  1. ಅಕ್ಕಮಹಾದೇವಿಯ ಅಕ್ಕನವರ ವಚನದ ಈ ಸಾರಾಂಶವನ್ನು ಮನಮುಟ್ಟುವಂತೆ ಅರ್ಥೈಸಿದ ತಮಗೆ ಧನ್ಯವಾದಗಳು.

Comments are closed.

Don`t copy text!