ಅಕ್ಕನೆಡೆಗೆ-ವಚನ – 44
ಸ್ವಯಂ ಪ್ರೇರಣೆಯ ಗಟ್ಟಿದನಿ
ಆಳುತನದ ಮಾತನೇರಿಸಿ ನುಡಿದಡೆ
ಆಗಳೆ ಕಟ್ಟಿದೆನು ಗಂಡುಗಚ್ಚೆಯ
ತಿರುಗನೇರಿಸಿ ತಿಲಕವನಿಟ್ಟು
ಕೈದುವ ಕೊಂಡು ಕಳನೇರಿದ ಬಳಿಕ
ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ
ಕಾಣಾ ಚೆನ್ನಮಲ್ಲಿಕಾರ್ಜುನಾ
ಪ್ರಾಚೀನ ಕಾಲದಿಂದಲೂ ದುಡಿಸಿಕೊಳ್ಳುತ್ತಿದ್ದ ಆಳುವ ವರ್ಗ ಹಾಗೂ ದುಡಿಯುವ ಶ್ರಮಜೀವಿಗಳ ಸಂಘರ್ಷ ಸಮಾಜದಲ್ಲಿ ಎಂದಿಗೂ ಮುಂದುವರಿಯುತ್ತಲೇ ಸಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಂದರ್ಭದಲ್ಲಿ ಅರಸ, ಆಳು ಎನ್ನುವ ಭೇದಭಾವ ಚಾಲ್ತಿಯಲ್ಲಿತ್ತು. ಅದನ್ನು ಬದಿಗೆ ಸರಿಸಿ ಪ್ರತಿಯೊಂದು ಕಾಯಕದ ಹೆಸರಿಗೆ ತನ್ನದೇ ಆದ ಜಾತಿ ಗೌರವದೊಂದಿಗೆ ವೃತ್ತಿ ಗೌರವ ಕಲ್ಪಿಸಿದವರು ಶರಣರು.
ವರ್ಣ, ವರ್ಗ ವ್ಯವಸ್ಥೆಯನ್ನು ಮೀರಿದ ಸಾಮಾಜಿಕ ವ್ಯವಸ್ಥೆ ಸ್ಥಾಪಿತಗೊಂಡು ಅಳರಸರ ನಡುವೆ ಸೌಹಾರ್ದತೆ ಮೂಡಿಸಿದರು. ಗಂಡು-ಹೆಣ್ಣು ಎನ್ನುವ ಭೇದವನಳಿಸಿ ಸಮಾನತೆಯ ದನಿ ರೂಢಿಗತಗೊಳಿಸಲಾಯಿತು. “ಮೊಲೆ ಮುಡಿ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ
ಕಾಣಾ ರಾಮಾನಾಥ” ಜೇಡರ ದಾಸಿಮಯ್ಯನ ವಚನವು ಗಂಡು ಹೆಣ್ಣಿನ ನಡುವೆ ಇರುವ ಅಸಮಾನತೆಯನ್ನು ಒಂದೇ ಒಂದು ಕ್ಷಣದಲ್ಲಿ ಕಿತ್ತೊಗೆಯುತ್ತದೆ.
ಇಂತಹ ವಾತಾವರಣದಲ್ಲಿ ಅಕ್ಕಮಹಾದೇವಿಯು ತನ್ನದೇ ಆದ ವೈಚಾರಿಕ ಚಿಂತನೆಯನ್ನು ವೈಯಕ್ತಿಕ ನೆಲೆಯಲ್ಲಿ ನಿಂತು ಅವಲೋಕಿಸಿರುವುದನ್ನು ಅವಳ ಅನೇಕ ವಚನಗಳ ಮುಖಾಂತರ ಗ್ರಹಿಸಬಹುದು. ಸ್ತ್ರೀಪರವಾಗಿ ಎತ್ತುವ ಅವಳ ದನಿ ಬಹಳ ವಿಭಿನ್ನ. ಮನುಷ್ಯ ಮನುಷ್ಯನ ನಡುವೆ ಸಂಬಂಧ, ಮಾತಿನ ವರಸೆ ಹೇಗಿರಬೇಕೆಂದು ಅಲೋಚಿಸುವ ಅಕ್ಕನ ರೀತಿ ವಿಶಿಷ್ಟ. ಯಾರದೇ ಮಾತಿನ ವ್ಯವಹಾರವಿರಲಿ ಅಲ್ಲಿ ಆಳಿನಂತೆ ಕನಿಷ್ಟವಾಗಿ ಕಾಣುವ ಭಾವನೆಯಾಗಲಿ, ಅಗೌರವದಿಂದ ನೋಡುವ ಕೀಳು ಮನೋಭಾವವಾಗಲಿ ಇದ್ದರೆ, ಸಹಿಸಬಾರದು. ಹಾಗಿದ್ದಾಗ ಅದೇ ಕ್ಷಣ ಕಠೋರವಾಗಿ ವಿರೋಧಿಸುವಂತೆ ತೀಕ್ಷ್ಣವಾಗಿ, ತೀವ್ರವಾಗಿ ಹೇಳುತ್ತಾಳೆ. ಅದು ಹೇಗೆಂದರೆ, ರಾಜ ತನ್ನ ರಾಜ್ಯದ ಹೆಬ್ಬಾಗಿಲಿಗೆ ಬಂದ ಚಕ್ರರತ್ನದ ಸವಾಲನ್ನು ಹೇಗೆ ಸ್ವೀಕರಿಸುತ್ತಾನೊ ಹಾಗೆ ಎಂದು ಅಕ್ಕ ಹೇಳುತ್ತಾಳೆ. ರಾಜ ಘನತೆಯಿಂದ ಹಣೆಗೆ ತಿಲಕವನಿಟ್ಟುಕೊಂಡು, ಕೈಯಲ್ಲಿ ಖಡ್ಗ ಹಿಡಿದು, ಯುದ್ಧದ ಕುದುರೆಯನೇರಿ, ಜೀವದಾಸೆಯ ಹಂಗು ಹರಿದು, ರಣ ಮೈದಾನದಲ್ಲಿ ಹೋರಾಡಲು ಹೊರಟಂತೆ ಹೊರಡುತ್ತಿರಬೇಕು. ಹಾಗೆ ಹೊರಟು ನಿಂತಾಗ ಕಟ್ಟಿದ ಸೀರೆಯ ನಿರಿಗೆಗಳು ಸಡಿಲವಾದರೆ ಚೆನ್ನಮಲ್ಲಿಕಾರ್ಜುನನ ಮೇಲೆ ಆಣೆ ಎನ್ನುತ್ತಾಳೆ. ಅಂದರೆ ಅಷ್ಟೊಂದು ಬದ್ಧತೆಯಿಂದ ಆತ್ಮಗೌರವ ಕಾಪಾಡಿಕೊಳ್ಳುವ ಖಡಾಖಂಡಿತವಾದ ಮನದಲ್ಲಿ ಇರಬೇಕು ಎನ್ನುವ ಕೆಚ್ಚೆದೆಯ ಭಾವ ಇಲ್ಲಿಯ ಸಾಲುಗಳಲ್ಲಿ ಅಡಗಿದೆ.
ಇಷ್ಟೊಂದು ಪ್ರಬುದ್ಧವಾಗಿ ಹೇಳುವ ಅಕ್ಕಮಹಾದೇವಿಗೆ ಯಾರ ಪ್ರೇರಣೆ, ಸ್ಪೂರ್ತಿ ಇತ್ತೆಂದು ಊಹೆ ಮಾಡಲು ಸಾಧ್ಯವಿಲ್ಲ. ಆದರೆ ಆ ದಿಟ್ಟತನ, ಗಟ್ಟಿತನಕ್ಕೆ ವಚನಗಳ ಮೂಲಕ ಕಟ್ಟಿಕೊಡುವ ಅವಳ ಇಡೀ ಬದುಕೇ ಪ್ರೇರಕವಾಗಿರಬಹುದು ಎನಿಸುತ್ತದೆ.
ಹನ್ನೆರಡನೆ ಶತಮಾನದಲ್ಲಿ ಸ್ತ್ರೀವಾದದ ಅಸ್ತಿತ್ವವೇ ಇಲ್ಲದಿದ್ದಾಗ ಸ್ವಯಂ ಪ್ರೇರಕ ಶಕ್ತಿಯಿಂದ ದೃಢವಾದ ಧ್ವನಿ ಎತ್ತಿದ ಪ್ರಥಮ ಮಹಿಳೆ. ಅದಕ್ಕಾಗಿಯೇ ಅಕ್ಕನನ್ನು ಬಂಡಾಯಗಾರ್ತಿ ಎಂದೂ ಕರೆಯುತ್ತೇವೆ. ಸ್ತ್ರೀಪರ ನಿಲುವು, ಸ್ತ್ರೀ ಸಂವೇದನೆಗಳು ಲೆಕ್ಕಕ್ಕಿಲ್ಲದ ಸಂದರ್ಭದಲ್ಲಿ ತನ್ನ ಇಡೀ ಬದುಕನ್ನು ಮಹಿಳಾ ಅಸ್ಮಿತೆಗಾಗಿ ಮುಡಿಪಾಗಿಟ್ಟ ಪ್ರಗತಿಪರ ನಿಲುವುಳ್ಳ ಹೆಣ್ಣು ಜೀವ ಎನಿಸುತ್ತಾಳೆ.
ಅಕ್ಕನ ಗಟ್ಟಿತನ ಪ್ರತಿಯೊಬ್ಬ ಮಹಿಳೆಗೂ ಆದರ್ಶ. ಶರಣ ಚಳುವಳಿಯ ಪ್ರಮುಖ ಆಶಯ ಮತ್ತು ಧ್ಯೇಯಗಳಲ್ಲಿ ಇದೂ ಒಂದು. ಮಹಿಳೆಗೆ ಮುಕ್ತವಾಗಿ ಬದುಕಲು ಕಲಿಸುತ್ತ, ಸ್ತ್ರೀ ಸ್ವಾತಂತ್ರ್ಯ ನೀಡಿದ ಏಕೈಕ ಚಳುವಳಿ ಬಸವಾದಿ ಶರಣರದು.
ಸಂಸಾರದಲ್ಲಿ ಆಳಿನಂತೆ ಬದುಕುವ ಇಂದಿನ ಮಹಿಳೆಯರು ನಾವು. ಈ ವಚನದಿಂದ ಕಲಿಯ ಬೇಕಾಗಿದ್ದು ಬಹಳವಿದೆ. ಯಾರೇ ಇರಲಿ ಆಳುತನದ ಮಾತನ್ನು ಸಹಿಸಬಾರದು ಎನ್ನುವ ಪ್ರಜ್ಞೆಯನ್ನು ಇಟ್ಟುಕೊಂಡು ಸ್ವಯಂಗೌರವ ಕಾಪಾಡಿಕೊಳ್ಳುವ ದಾರಿಯಲ್ಲಿ ಸಾಗಬೇಕಾಗಿದೆ. “ಆಳಾಗಿ ದುಡಿ ಅರಸಾಗಿ ಮೆರೆ” ಎನ್ನುವ ಗಾದೆ ಮಾತಿನಂತೆ ದುಡಿಯಲೂ ಬೇಕು ಗೌರವವನ್ನೂ ನಿರೀಕ್ಷಿಸಬೇಕು. ಆಗ ಬದುಕು ಮತ್ತು ಜೀವನ ಶೈಲಿ ಎರಡೂ ಅರ್ಥಪೂರ್ಣ. ಹಾಗೆ ನಡೆದಾಗ ಮಾತ್ರ ಈ ವಚನದ ರಚನೆಗೆ ಒಂದು ಅರ್ಥ ಕಲ್ಪಿಸಿ, ನ್ಯಾಯ ಒದಗಿಸಿದಂತೆ ಆಗುತ್ತದೆ.
ಸಿಕಾ