ಸತ್ಯ ಹೇಳಿ ಸತ್ತು ಹೋದ ನಿತ್ಯ ಸ್ಮರಣೀಯ ಡಾ ಎಂ ಎಂ ಕಲಬುರ್ಗಿ ಗುರುಗಳು.
ಕನ್ನಡ ಸಾರಸ್ವತಲೋಕದ ಬಹುದೊಡ್ಡ ಕೊಡುಗೆ, ಆಸ್ತಿ, ವಿಮರ್ಶಕ, ಸಂಶೋಧಕ, ದೇಸಿ ಸಾಹಿತಿ, ಚಿಂತಕ ಡಾ ಎಂ ಎಂ ಕಲಬುರ್ಗಿ ಸರ್ ಅವರು ಬದುಕಿನ ಕೊನೆವರೆಗೂ ಸತ್ಯಕ್ಕೆ ಹೋರಾಡಿದವರು.
ಸಿಂದಗಿ ತಾಲೂಕಿನ ಗುಬ್ಬೇವಾದಿ ಇರಕಲ್ ಗ್ರಾಮಗಳಲ್ಲಿ ಹುಟ್ಟಿ ಬೆಳೆದ ಹಳ್ಳಿ ಹೈದ ಮುಂದೆ ಸಾರಸ್ವತ ಲೋಕದ ಕೊಲಂಬಸ್ ಆಗುತ್ತಾರೆ ಎಂದು ಯಾರು ನಂಬಿರಲಿಲ್ಲ.
ನಾನು ಬದುಕಿದ್ದು ಕನ್ನಡಕ್ಕಾಗಿ ಮತ್ತು ಬಸವಣ್ಣನಿಗಾಗಿ ಎಂದು ತಮ್ಮ ಜೀವನದ ಉದ್ಧೇಶ ಗೊತ್ತು ಪಡಿಸಿ ಸದಾ ಸೃಜನಶೀಲ ಮನಸಿನೊಂದಿಗೆ ಬೆರೆಯಬೇಕೆಂದಿದ್ದ ಮುಗ್ಧ ಜೀವಿ.
ಡಾ ಎಂ ಎಂ ಕಲಬುರ್ಗಿ ಅವರ ಸಾಧನೆ ಅಪಾರ. ಯಾವ ವಿಶ್ವ ವಿದ್ಯಾಲಯ ಮಾಡಲಾಗದ ಕೆಲಸವನ್ನು ಇವರೊಬ್ಬರೇ ಮಾಡಿದರು.
ಜೀವನದ ಕೊನೆಯ ದಿನದ ವರೆಗೆ ವಚನ ಸಂಪಾದನೆ ಗ್ರಂಥ ಪ್ರಕಟಣೆ ಹಲವು ಯೋಜನೆಗಳ ಸಿದ್ಧಪಡಿಸುವ ಲವಲವಿಕೆಯ ಕನಸು ಹೊಂದಿದ್ದರು.
ಡಾ ಎಂ ಎಂ ಕಲಬುರ್ಗಿ ಅವರಲ್ಲಿರುವ ಮಾನವೀಯ ಮೌಲ್ಯ, ಹಾಸ್ಯ ಪ್ರಜ್ಞೆ, ತೀವ್ರವಾಗಿ ಸ್ಪಂದಿಸುವ ಭಾವುಕತೆ .ಎಲ್ಲರನ್ನು ಅತಿಯಾಗಿ ನಂಬುವ ಸರಳ ಸಜ್ಜನ ಸ್ವಾಭಾದವರಾದ ಡಾ ಎಂ ಎಂ ಕಲಬುರ್ಗಿ ಅವರು ವ್ಯಾವಹಾರಿಕ ಬದುಕಿನಿಂದ ತುಂಬಾ ದೂರವಾಗಿದ್ದರು.
ಉತ್ತರ ಕರ್ನಾಟಕ ಮಲೆನಾಡು ಕರ್ನಾಟಕಗಳ ಮಠಗಳನ್ನು ಅಕಾಡೆಮಿ ಮಟ್ಟಕ್ಕೆ ಏರಿಸಿ ಆನಂದಪಟ್ಟವರು.
ಕೊನೆಗೆ ಮಠೀಯ ಕರ್ಮಠ ಪರಂಪರೆಯನ್ನು ಉಗ್ರವಾಗಿ ಖಾರವಾಗಿ ಟೀಕಿಸಿ ಜಾತಿವಾದಿ ಲಿಂಗಾಯತ ವೀರಶೈವರ ಮಠಾಧೀಶರಿಗೆ ನುಂಗಲಾಗದ ತುತ್ತಾದರು.
ಅವರ ವಿದ್ಯಾರ್ಥಿಗಳಲ್ಲಿ ಕೆಲವರು ಅವರಿಂದ ಸಹಾಯ ಪಡೆದು ಮುಂದೆ ಹೋಗಿ ಅವರು ಸಂಪಾದಿಸಿದ ವಚನ ಸಂಪುಟ ಮೇಲೆ ಹಿಗ್ಗಾ ಮುಗ್ಗ ಟೀಕಾಪ್ರಹಾರ ಮಾಡಿದರು.
ಡಾ ಎಂ ಎಂ ಕಲಬುರ್ಗಿ ಅವರು ಎಂದೂ ಯಾರನ್ನು ದ್ವೇಷಿಸಿದವರಲ್ಲ. ಅಂಬಲಿ ಕಂಬಳಿ ಅಸ್ತಿ ಉಳಿದಿದ್ದು ಜಾಸ್ತಿ ಎನ್ನುತ್ತಿದ್ದ ಡಾ ಎಂ ಎಂ ಕಲಬುರ್ಗಿ ಅವರನ್ನು ಕೆಲ ದೃಶ್ಯ ಮಾಧ್ಯಮ ಪತ್ರಿಕಾ ಮಾಧ್ಯಮಗಳು ಅತ್ಯಂತ ಕ್ರೂರವಾಗಿ ನಡೆಸಿಕೊಂಡವು.
ಅವರ ಮಾತುಗಳನ್ನು ವಿವಾದ ಮಾಡಿ ಅನಗತ್ಯ ಗೊಂದಲು ಸೃಷ್ಟಿಸಿದವು ಕೆಲ ಮಾಧ್ಯಮಗಳು . ಅವರ ಶಿಷ್ಯರೊಬ್ಬರು ಅವರ ಬಸವ ಪ್ರಶಸ್ತಿಯನ್ನು ಎರಡು ಸಲ ತಪ್ಪಿಸಿದರು.ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯ ನಂತರವೂ ಅವರ ಶಿಷ್ಯೋತ್ತಮರು ತಮ್ಮ ಪುಸ್ತಕದಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ವಚನ ಪಾಠಾಂತರ
ತಪ್ಪುಗಳನ್ನು ಎತ್ತಿ ತೋರಿಸಿ ಅತ್ಯಂತ ಹೀನಾಯವಾಗಿ ಅವರನ್ನು ಟೀಕಿಸಿದ್ದಾರೆ. ದುರ್ದೈವದ ಸಂಗತಿಯೆಂದರೆ ಆ ಪುಸ್ತಕ ಮತ್ತು ಕೃತಿಕಾರನಿಗೆ ಶರಣ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿತು.
ಡಾ ಎಂ ಎಂ ಕಲಬುರ್ಗಿ ಅವರು ಒಂದು ಇರುವೆಗೂ ನೋವು ಕೊಟ್ಟವರಲ್ಲ ಅಂತಹ ಒಬ್ಬ ಸರಳ ಸಜ್ಜನ ಸಾಹಿತಿಯನ್ನು ಕೊಂದ ಮೇಲೆ ಕರ್ನಾಟಕದ ಕೆಲ ಮಠಾಧೀಶರು ಜಾತಿವಾದಿಗಳು ತಮ್ಮ ಸಂತಸ ಸಂಭ್ರಮ ಆಚರಿಸಿದರು.
ಇನ್ನೊಂದು ಅತಿ ವಿಚಿತ್ರವೆಂದರೆ ಡಾ ಕಲಬುರ್ಗಿ ಅವರ ಶಿಷ್ಯನೆಂದು ಎನಿಸಿಕೊಂಡ ಸಾಹಿತಿ ಪತ್ರಕರ್ತ ಅವರ ವಿರುದ್ಧ ಧಾರವಾಡ ಜಿಲ್ಲಾಧಿಕಾರಿಯವರಲ್ಲಿ ವಚನ ಸಂಪುಟ ಸಮಿತಿಯ ತಪ್ಪುಗಳ ಆರೋಪ ಪಟ್ಟಿ ಮಾಡಿ ಅದನ್ನು ಸರಿಪಡಿಸಲು ಮನವಿ ಸಲ್ಲಿಸಲು ತೆರೆಯ ಮರೆಯ ಕಸರತ್ತು ಮಾಡಿದರು.. ಅದರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಇನ್ನೋರ್ವ ವಿದ್ಯಾರ್ಥಿ ಕನ್ನಡ ಪ್ರಾಧ್ಯಾಪಕ ಸಧ್ಯ ಹುಬ್ಬಳಿಯ ಬಸವ ಸಂಘಟನೆಯಲ್ಲಿ ಗುರುತಿಸಿಕೊಂಡವರು ಮತ್ತು ಕೆಲ ಕಲಬುರ್ಗಿ ಅಭಿಮಾನಿಗಳನ್ನು ಬಳಸಿಕೊಂಡು ತೆರೆಯ ಮರೆಯ ನಾಟಕವಾಡಿದ್ದು ದಿನಾಂಕ 22 ಆಗಸ್ಟ 2014 .
ಡಾ. ಯು. ಆರ್ ಅನಂತ ಮೂರ್ತಿ ಅವರ ಪುಸ್ತಕದ ವಿವಾದದ ಸಂದರ್ಭದಲ್ಲಿಯೂ ಕೂಡ ಪತ್ರಕರ್ತ ಸಾಹಿತಿ ಎನಿಸಿಕೊಂಡವರು, ಡಾ ಎಂ ಎಂ ಕಲಬುರ್ಗಿ ಅವರ ಬೆನ್ನಿಗೆ ಚೂರಿ ಹಾಕಿದರು. ಡಾ ಎಂ ಎಂ ಕಲಬುರ್ಗಿ ಅವರ ಮನೆ ಮೇಲೆ ಬಾಟಲಿ ಕಲ್ಲು ಬಿದ್ದವು . ಡಾ ಕಲಬುರ್ಗಿ ಅವರಿಂದ ಎಲ್ಲ ಸಹಾಯ ಪಡೆದು ಅವರಿಗೆ ದ್ರೋಹ ಮಾಡಿದ ಸಾಹಿತಿ ಪತ್ರಕರ್ತ ಮುಂದೆ ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ನ್ಯಾಯ ಕೇಳಲು ವೇದಿಕೆ ಏರಿದರು.
ಇನ್ನು ವಿಚಿತ್ರವೆಂದರೆ ಡಾ ಎಂ ಎಂ ಕಲಬುರ್ಗಿ ಅವರು ಹಚ್ಚಿದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಕಿಚ್ಚಿಗೆ ಡಾ ಎಂ ಎಂ ಕಲಬುರ್ಗಿ ಅವರನ್ನು ಇದ್ದಾಗ ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ ಇಂತಹ ಸಾಹಿತಿ ಪತ್ರಕರ್ತರು ಲಿಂಗಾಯತ ಧರ್ಮದ ಮುಂಚೂಣಿಯಲ್ಲಿದ್ದು ಮೆರೆಯ ಹತ್ತಿದರು.
ಡಾ ಎಂ ಎಂ ಕಲಬುರ್ಗಿ ಅವರು ಸತ್ಯ ಹೇಳಲು ಹೆದರಲಿಲ್ಲ .ಆದರೆ ಅವರನ್ನು ಸಿಕ್ಕಾಪಟ್ಟೆ ದುಡಿಸಿಕೊಂಡು ಅವರನ್ನು ಅವರ ಜೀವಿತ ಕಾಲದಲ್ಲಿ ಒಂಟಿಯಾಗಿ ಮಾಡಿ ಮಾನಸಿಕವಾಗಿ ಕಿರುಕಳ ನೀಡಿದವರಲ್ಲಿ ಅನೇಕರಿಂದು ಲಿಂಗಾಯತ ನಾಯಕರೆನಿಸಿಕೊಂಡಿದ್ದಾರೆ.
ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಹಿಂದೆ ಕರ್ನಾಟಕದ ಪ್ರಭಾವಿ ಮಠಾಧೀಶರ ಹೆಸರುಗಳು ಕೇಳಿ ಬರುತ್ತಿವೆ.
ಡಾ ಎಂ ಎಂ ಕಲಬುರ್ಗಿ ಅವರ ಸಾವಿಗೆ ಇನ್ನೂ ನ್ಯಾಯಸಿಕ್ಕಿಲ್ಲ .ಡಾ ಎಂ ಎಂ ಕಲಬುರ್ಗಿ ಅವರ ಅಭಿಮಾನಿಗಳು ಇನ್ನೂ ಅಪಾರ ಸಂಖ್ಯೆಯಲ್ಲಿದ್ದಾರೆ.
ಪ್ರತಿಷ್ಠಿತ ಮಠಾಧೀಶರು ಅವರಿಗೆ ಪ್ರಶಸ್ತಿ ಘೋಷಣೆ ಮಾಡಿ ಆ ಹಣವನ್ನು ಡಾ ಎಂ ಎಂ ಕಲಬುರ್ಗಿ ಕುಟುಂಬಕ್ಕೆ ಕೊಡದೆ ತಮ್ಮಲ್ಲಿಯೇ ಇಟ್ಟುಕೊಂಡರು.
ಡಾ ಎಂ ಎಂ ಕಲಬುರ್ಗಿ ಅವರು ಸದಾ ತಮ್ಮನ್ನು ಈ ನೆಲ ಜಲ ಸಂಸ್ಕೃತಿ ಸಾಹಿತ್ಯ ಸೇವೆಗೆ ತೊಡಗಿಸಿಕೊಂಡವರು ಯಾವುದೇ ಹಮ್ಮು ಬಿಮ್ಮು ಇಲ್ಲದ ಸರಳ ಶರಣ ಡಾ ಎಂ ಎಂ ಕಲಬುರ್ಗಿ ಅವರನ್ನು ಕೊಂದವರು ನಾವು ನೀವು ಮಠಗಳು ಮತ್ತು ನಿಷ್ಕ್ರಿಯ ಲಿಂಗಾಯತರು.
.ಸತ್ಯ ಹೇಳಲು ಹೆದರಲಿಲ್ಲ ಸತ್ಯ ಹೇಳಿ ಸತ್ತು ಹೋದರು ನಿತ್ಯ ಸ್ಮರಣೀಯ ಡಾ ಎಂ ಎಂ ಕಲಬುರ್ಗಿ ಅವರು.
ಕರ್ನಾಟಕ ಸರಕಾರ ಅವರ ಹತ್ಯೆ ಗೈದ ಹಂತಕನನ್ನು ಪತ್ತೆ ಹಚ್ಚಿ ಶಿಕ್ಷಿಸಲಿ .ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಧಾರಾವಾಡದಲ್ಲೊಂದು ಭವ್ಯ ಸುಸಜ್ಜಿತ ವಚನಸಾಹಿತ್ಯ ಸಂಶೋಧನಾ ಕೇಂದ್ರವನ್ನು ಕರ್ನಾಟಕ ಸರಕಾರ ಆರಂಭಿಸಲಿ.
ಇನ್ನಾದರೂ ನಾವು ಸತ್ಯ ಹೇಳುವವರನ್ನು ಬೆಂಬಲಿಸೋಣ ಬನ್ನಿ.
-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
——————————————————-ಆತ್ಮೀಯ ಓದುಗರಲ್ಲಿ ವಿನಂತಿ
e -ಸುದ್ದಿಯಲ್ಲಿ ಪ್ರಕಟವಾಗುವ ಲೇಖನಗಳಿಗೆ, ಕವಿತೆ, ಕತೆ, ಪ್ರಬಂಧ, ಸುದ್ದಿಗಳಿಗೆ ಲೇಖಕರೆ ಹೊಣೆಗಾರರು. e-ಸುದ್ದಿ ಅಂತರಜಾಲ ಪತ್ರಿಕೆ ಬರಹಗಾರರು ಮತ್ತು ಓದುಗರ ನಡುವೆ ಒಂದು ಸೇತುವೆ ಅಷ್ಟೆ. ಸತ್ಯ ಅಸತ್ಯಗಳನ್ನು ತಿಳಿದುಕೊಳ್ಳಲು ನೇರವಾಗಿ ಲೇಖಕರನ್ನ ಸಂಪರ್ಕಿಸಿ.
-ಸಂಪಾದಕ
ಮನಕಲುಕಿತು,🙏