ಎಲ್ಲರಕ್ಕಿಂತ ವಿಭಿನ್ನವಾಗಿರುವದರಿಂದಲೇ ನಾನು ನಿನಗೆ ಮನಸೋತದ್ದು ಗೆಳೆಯಾ.ಕಾವ್ಯವೆಂದರೆ ನನಗೆ ವಿಪರೀತ ಹುಚ್ಚು.”ರವಿ ಕಾಣದ್ದನ್ನ ಕವಿ ಕಂಡ”ಎಂಬಂತೆ ಪ್ರತಿಯೊಂದರಲ್ಲಿ ಕಾವ್ಯವನ್ನು ಅರಸಿ ಅರಸಿ ಬರೆಯುವದರಲ್ಲಿ ಸಂತೋಷ ಕಾಣುವ ನನ್ನೊಳಗೆ ನೀನು ನುಗ್ಗಿದ್ದು ನನಗಿನ್ನು ಆಶ್ಚರ್ಯವೆ ಆಗಿದೆ.”ಕವಿಗೆ ನಿತ್ಯ ಹೆರಿಗೆ” ಎನ್ನುವಂತೆ ದಿನವೂ ಕವನಗಳನ್ನು ಬರೆಯೋದು,ಬರೆದದ್ದನ್ನು ಪತ್ರಿಕೆಗಳಿಗೆ ಕಳಿಸೋದು ನನಗೆ ತುಂಬಾ ಇಷ್ಟದ ಕೆಲಸ.ಅದೊಂದು ದಿನ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನದ ಕುರಿತು ಇಷ್ಟಪಟ್ಟು ಕಳಿಸಿದ ಮೆಸ್ಸೇಜ ಇನಬಾಕ್ಸನಲ್ಲಿತ್ತು. ಆ ಕವನ ಬಹಳ ಜನ ಅಭಿಮಾನಿಗಳು ಇಷ್ಟಪಟ್ಟದ್ದಾಗಿತ್ತು. ಆದರೆ ಅವರೆಲ್ಲರ ಸಂದೇಶಗಳಲ್ಲಿ ನೀ ಕಳಿಸಿದ ಸಂದೇಶ ತುಂಬಾ ವಿಶೇಷವಾಗಿತ್ತು.ನೀ ಕಳಿಸಿದ ಕವನದ ಕುರಿತ ವಿಮರ್ಶೆ ಓದಿ ನಾ ನನ್ನ ಕವನವನ್ನೆ ಮತ್ತೆ ಮತ್ತೆ ಓದುವಂತಾಯಿತು. ಮೊಬೈಲ ನಂಬರ ಯಾಕಾದರೂ ಹಾಕಿದೆ ಅಂತ ಅನ್ನಸಿದ್ದು ಸತ್ಯ.ಆದರೂ ಸಂದೇಶಗಳ ಸುರಿಮಳೆ ಕಂಡು ಆನಂದಿಸಿದೆ. ನಿನ್ನ ಮೆಸ್ಸೇಜ ಮಾತ್ರ ಮನದ ಇನ್ ಬಾಕ್ಸನಲ್ಲಿ ನೆಲೆನಿಂತಿತು. ಹೀಗೆ ಮೊಬೈಲ ಸಂದೇಶಗಳ ಮೂಲಕ ಕಾವ್ಯದ ಕುರಿತ ನಿನ್ನ ಅಭಿಮಾನದ ಚರ್ಚೆ ಮುಂದುವರಿಯಿತು. ಹಾಗೆಯೇ ನೀ ನನ್ನಲ್ಲಿ ಸದ್ದಿಲ್ಲದೆ ಮನದಲಿ ಮನೆ ಮಾಡಿದೆ.
ನಿನ್ನ ನಯವಾದ,ಹದವಾದ ಇಂಚರದಂತ ಮಾತು ಕೇಳತಾ ಮೈಮರಿತಿದ್ದೆ.ನೀನು ನಿನ್ನ ಬಗ್ಗೆ ಹೇಳತಾ ಸಾಗಿದೆ ನಾನು ಆಪ್ತವಾಗಿ ಕೇಳತಾ ಹೋದೆ.ಅಪರಿಚಿತರಾದ ನಾವು ಪರಸ್ಪರ ನೋಡದೆ ಗೆಳೆತನ ಮಾಡಿದ್ದು ಕೂಡಾ ವಿಶಿಷ್ಟವೇ. ” ನಾನು ನನ್ನ ನೆರೆಮನೆಯ ಹುಡುಗಿಯನ್ನು ಹೈಸ್ಕೂಲಿನಿಂದಲೇ ಪ್ರೀತಿಸುತಿದ್ದೆ ಇಬ್ಬರೂ ಕ್ಲಾಸಮೇಟ್ಸ.ಆದರೆ ಬೆಳೆದು ದೊಡ್ಡವರಾದಾಗ ಜಾತಿಗೋಡೆ ಅಡ್ಡಬಂದು ಹಿರಿಯರು ನಮ್ಮಮದುವೆಗೆ ಅಡ್ಡಗೋಡೆ ಕಟ್ಟಿದರು. ಪ್ರೀತಿಯ ಸೌಧ ಕುಸಿದು ಬಿತ್ತು.ಕನಸುಗಳು ನುಚ್ಚುನೂರಾದವು.ಅವಳ ನೆನಪಲ್ಲೆ ಬಸವಳಿದ ಬಾಳನ್ನು ನೂಕುತಿದ್ದೆ ಅಂತ ತುಂಬಾ ಬೇಜಾರಿನಿಂದ ನೀ ಹೇಳಿದ್ದು ಕೇಳಿ ನನ್ನ ಮನನೆ ಮೂಕವಾಗಿ ರೋಧಿಸಿತು.ಇಂಥ ಒಳ್ಳೆ ಹುಡಗನ ನಸೀಬು ಅವರು ಪಡೆದು ಬಂದಿಲ್ಲ ಬಿಡು ಅನ್ನಿಸಿತು. ಹೀಗೆ ಮುಂದುವರಿದು ಹೇಳ್ತಾ ಸಾಗಿದ ಅವನು ನನ್ನ ವಿಷಯಕ್ಕೆ ಬಂದು ನಿಂತ.
ಎಲ್ಲದರಲ್ಲಿ ಆಸಕ್ತಿ ಕಳೆದುಕೊಂಡ ನಾನು ನಿಮ್ಮ ಕವನದಿಂದ ಪ್ರಭಾವಿತನಾದೆ.ಎಂದು ಹೇಳಿದ ಕರಾವಳಿ ಹುಡುಗನ ಮಾತುಗಳಿಗೆ ಪ್ರತಿಯಾಗಿ ಏನು ಹೇಳಬೇಕೋ ಅರ್ಥವಾಗದೆ ಮೌನವಾದೆ.ಬಾಲ್ಯದ ಕನಸಿನ ಗೋಪುರ ಕಳಚಿ ಬಿದ್ದದ್ದನ್ನು ನೆನಸಿ ಅತ್ತದ್ದನ್ನು ಕಂಡು ನನಗೆ ನೋವಿನೊಂದಿಗೆ ಆಶ್ಚರ್ಯವೂ ಆಯಿತು.ಅಳುವುದೇನಿದ್ದರೂ ಹೆಂಗಸರಿಗೆ ಸರಿ ಅಂದುಕೊಂಡಿದ್ದ ನನಗೆ ಈ ಹುಡುಗರೂ ಈ ಪರಿಯಾಗಿ ಅಳ್ತಾರೆ ಅನ್ನೋದು ತಿಳಿದದ್ದು ನಿನ್ನಿಂದ ಗೆಳೆಯನೆ.
ಲವ್ ಅನ್ನೋ ಭಾವನಾತ್ಮಕ ಬೆಸುಗೆ ಯಾರನ್ನ ಯಾವಾಗ ಹೇಗೆ ಕುಣಿಸುತ್ತೊ ಬಲ್ಲವರಾರು . ಮತ್ತೆ ಬೇರೆ ಹುಡುಗಿ ಮದುವೆಯಾಗಬೇಕಿತ್ತು ಅಂತ ಕೇಳಿದ್ದಕ್ಕೆ ಬೇರೆ ಮದುವೆಗೆ ಮನಸ್ಸಿಲ್ಲಾ ಹಾಗೆಯೇ ವಯಸ್ಸು ಜಾರ್ತಿದೆ ಅಂತ ಹೇಳಿದೆ. ನನ್ನ ವಯಸ್ಸಾದ ತಂದೆತಾಯಿಗಳನ್ನು ಮಗನಾಗಿ,ಸೊಸೆಯಾಗಿ ಪ್ರೀತಿಯಿಂದ ಸೇವೆ ಮಾಡ್ತಿನಿ ಅಂದೆ. ವೃದ್ಧ ತಂದೆತಾಯಿಗಳನ್ನ ವೃದ್ಧಾಶ್ರಮಕ್ಕೆ ತಳ್ಳಿ ಕೈತೊಳಕೊಳ್ಳೊ ಇಂದಿನ ಕಾಲದಲ್ಲಿ ಅವರಿಗಾಗಿ ಬದುಕುತ್ತೆನೆ ಅಂದದ್ದು ನನಗೆ ನಿಜಕ್ಕೂ ತುಂಬಾ ಸೋಜಿಗವಾಯಿತು ಅಲ್ಲದೆ ತಾಯಿಗೆ ಆಗಾಗ ತುಂಬಾ ಹುಷಾರಿರಲ್ಲ ಕಾಯಿಲೆಗಳು ಕಾಡ್ತಿವೆ ಅಂತ ಪೇಚಾಡುವದನ್ನು ಕಂಡಾಗ ಪ್ರತಿ ತಾಯಿಗೆ ಇಂಥ ಮಗನಿರಬಾರದೆ ಅಂತ ಅನಿಸಿತು.
ಕಡಲ ಕಿನಾರೆಯ ಮರಳಮೇಲೆ ನಡೆಯುತ್ತ ಅಲೆಗಳಲ್ಲಿ ನನ್ನ ಇರುವನ್ನು ಮರೆತು ಜೀವನವನ್ನು ಮೊಗೆದು ಸವಿಯುತ್ತೆನೆ ಅಲ್ಲಿ ನಿಮ್ಮ ನೆನಪಿನ ರಂಗೋಲಿಹಾಕಿ ವಿರಮಿಸುತ್ತೆನೆ.ಎನ್ನುವ ನಿನಗೆ ನಾ ಯಾವ ರೀತಿಯಲ್ಲೂ ಆಸರೆಯಾಗಲು ಸಾಧ್ಯವಿಲ್ಲ ಅಂತ ನಿನಗೂ ಗೊತ್ತು ಕಣೋ. ಸಾಹಿತ್ಯದ ಮುಖಾಂತರ ಪರಿಚಯವಾದ ನಾವು ಸೇರದ ತೀರಗಳು ಅಂತ ಹೇಳಿದಾಗ ” ಸೇರದ ತೀರಗಳ ಮೇಲೆ ಸೇತುವೆ ಕಟ್ಟುವ ವ್ಯರ್ಥ ಪ್ರಯತ್ನ ನನಗಿಲ್ಲ ಪುಟ್ಟಾ”.ನೀವು ಏನಿದ್ದರೂ ನನ್ನ ಪಾಲಿಗೆ ಬೆಳದಿಂಗಳಬಾಲೆಯಾಗಿದ್ದರೆ ಸಾಕು. ಇರೊತನ ನಿಮ್ಮ ನೆನಪಲ್ಲಿ ಬಾಳ್ತಿನಿ.ಯಾವತ್ತಿಗೂ ನಿಮಗೆ ತೊಂದರೆ ಕೊಡೊಲ್ಲ ನನ್ನ ಬರಡು ಜೀವನಕ್ಕೆ ಅಮೃತಧಾರೆಯಾದವರು ನೀವು,ಬದುಕನ್ನು ಮತ್ತೆ ಪ್ರೀತಿಸಲು ಕಲಿಸಿದವರು ನೀವು.ನಿಮ್ಮನ್ನು ನೋಡಬೇಕೆನ್ನುವ ಆಸೆ ಅಮಿತವಾಗಿದ್ದರೂ ” ಬೆಳದಿಂಗಳ ಬಾಲೆ” ಯಾಗಿಯೇ ಸದಾ ನನ್ನ ಹೃದಯದಲ್ಲಿ ನೆಲೆಸಿರ್ತಿರಾ ನಿಮ್ಮ ನಗು ಮಾತ್ರ ಈ ಮನದ ತುಂಬಾ ಹರಡಿಕೊಂಡಿರಲಿ ಎ�
ಬೆಳದಿಂಗಳ ಬಾಲೆ” ಯಾಗಿಯೇ ಸದಾ ನನ್ನ ಹೃದಯದಲ್ಲಿ ನೆಲೆಸಿರ್ತಿರಾ ನಿಮ್ಮ ನಗು ಮಾತ್ರ ಈ ಮನದ ತುಂಬಾ ಹರಡಿಕೊಂಡಿರಲಿ ಎಂದು ಉಲಿದ ಕರಾವಳಿ ಹುಡುಗ ಶಿಷ್ಟತೆಯ ಎಲ್ಲೆಮೀರದ ಗೆಳೆಯ ಮತ್ತೆ ಫೋನಾಯಿಸಲೇ ಇಲ್ಲ.ಪ್ರಯತ್ನ ಪಟ್ಟರೂ ಅವನ ಸುಳಿವು ಸಿಗಲಿಲ್ಲ.ನೀನೆ ನನ್ನ ಕಾವ್ಯ ಕನ್ನಿಕೆ ಅಂದವ ಅದ್ಹೇಗೋ ದೂರವಾದ.ಈ ಮೂಲಕವಾದರೂ ಅವನು ನನಗೆ ಮತ್ತೊಮ್ಮೆ ಸಿಗುವಂತಾಗಲಿ ಎಂಬುದೆ ಈ ಹೃದಯದ ಆಸೆ.
ಕಡಲಿನಂತ ವಿಶಾಲ ಮನಸಿನ ಹುಡುಗ ಹುಡುಕಿದರೂ ಸಿಗಲಾರ.ಕೆಲವೆ ಸಮಯ ಮಾತ್ರ ಜೊತೆಯಾದ ದೇವರಂಥ ಗೆಳೆಯ ಸದಾ ಒಳಿತನ್ನೆ ಹಾರೈಸುವ ನಿಷ್ಕಃಪಟ,ನಿರ್ಮಲಭಾವದ ಅವನನ್ನು ಮರೆಯದೆ ಚಡಪಡಿಸುತಿರುವೆ.ಒಲವ ಭಾವ ಹೊತ್ತು ತಂದ ಒಲವಜೇನತುಂಬಿ ನಡೆದುಬಿಟ್ಟ.
ಸದಾ ಬಹುವಚನದಲ್ಲಿಯೆ ಮಾತನಾಡುತ್ತಿದ್ದ ಮಾಯಗಾರ ಮಾಯವಾದರೂ ಹೃದಯದರಮನೆಯಲಿ ನೆಲೆನಿಂತಿಹನಲ್ಲ.
ನಿನ್ನಾಗಮನದ ನಿರೀಕ್ಷೆಯಲಿ…….
–ಜಯಶ್ರೀ ಭಂಡಾರಿ.
ಬಾದಾಮಿ.