ಅಕ್ಕನೆಡೆಗೆ –ವಚನ – 46
ಲಿಂಗಾಂಗ ಸಾಮರಸ್ಯದ ಸಮರ್ಪಣೆ
ಅನುತಾಪದೊಡಲಿಂದೆ ಬಂದ ನೋವನುಂಬವರು
ಒಡಲೊ ಪ್ರಾಣವೊ ಆರು ಹೇಳಾ
ಎನ್ನೊಡಲಿಂಗೆ ನೀನು ಪ್ರಾಣವಾದ ಬಳಿಕ
ಎನ್ನ ಒಡಲ ಸುಖ ದುಃಖವಾರ ತಾಗುವುದು ಹೇಳಯ್ಯಾ? ಚೆನ್ನಮಲ್ಲಿಕಾರ್ಜುನ
ಎನ್ನ ನೊಂದ ನೋವು ಬೆಂದ ಬೇಗೆ
ನಿಮ್ಮ ತಾಗದೆ ಹೋಹುದೆ ಅಯ್ಯಾ
ಮನುಷ್ಯನಲ್ಲಿ ‘ಸಮರ್ಪಣೆ’ ಎಂದರೆ ಒಂದಿಷ್ಟು ಹೆಚ್ಚು ಅಥವಾ ಒಂದಿಷ್ಟು ಕಡಿಮೆ ಎಂದು ಹೇಳಲಾಗದು. ಅದು ಸಂಗೀತದ ಪರೀಕ್ಷೆಯಲ್ಲಿ ಅಂಕ ಪಡೆದಂತೆ, ನೂರಕ್ಕೆ ನೂರು ಇರಲೇಬೇಕು. ಹಾಗಿದ್ದಲ್ಲಿ ಅದು ಸಮರ್ಪಣೆ. ಇಲ್ಲದಿದ್ದರೆ ಇಲ್ಲ ಎಂದೇ ಪರಿಗಣಿತ. ಮನುಷ್ಯನ ಸ್ವಭಾವ ಹೇಗೆಂದರೆ “ಅಳೂಸಾದ್ರ ಅಂಬಲಿ, ಘಟ್ಟ್ಯಾದ್ರ ರೊಟ್ಟಿ” ಎನ್ನುವ ಗಾದೆಯ ಮಾತಿನ ಹಾಗೆ.
ಉತ್ತರ ಕರ್ನಾಟಕದಲ್ಲಿ “ಉನ್ನೀಸ್ ಬೀಸ್ ಇದ್ರ ಎಲ್ಲಾ ನಡಿತದ್ರಿ” ಎನ್ನುವ ಆಡುಮಾತಿದೆ. ಯಾವುದರಲ್ಲೇ ಆಗಲಿ ಸ್ವಲ್ಪ ಹೆಚ್ಚುಕಡಿಮೆ ಇದ್ದರೆ ನಡೆಸಬೇಕು ಎನ್ನುವ ಜೀವನದ ತಾತ್ಪರ್ಯ.
ಆದರೆ ಅಕ್ಕಮಹಾದೇವಿಯ ಸಮರ್ಪಣೆ ಎಂದರೆ ಅದು ಸಮರ್ಪಣೆ ಅಷ್ಟೇ. ಅಲ್ಲಿ ಇನ್ನೊಂದು ಮಾತೇ ಇಲ್ಲ. ಮನುಷ್ಯನ ಈ ಸ್ವಭಾವವನ್ನು ಅಕ್ಕ ವ್ಯಷ್ಟಿ ನೆಲೆಯಲ್ಲಿ ಒರೆಗೆ ಹಚ್ಚಿದ್ದಾಳೆ. ‘ನಾನು’ ಮತ್ತು ‘ನನ್ನರಿವು’ ಎರಡೂ ಒಂದಾಗಿರಬೇಕು, ‘ನಾನು’ ಮತ್ತು ‘ನನ್ನ ಚೆನ್ನಮಲ್ಲಿಕಾರ್ಜುನ’ ಇಬ್ಬರೂ ಬೇರೆ ಬೇರೆ ಅಲ್ಲ, ಎರಡೂ ಒಂದೇ ಎನ್ನುವ ಭಾವ ಈ ವಚನದಲ್ಲಡಗಿದೆ. ಇದು ಅಕ್ಕನ ಸ್ಪಷ್ಟವಾದ ಮನೋಧರ್ಮ ಹಾಗೂ ನಿಲುವು ಕೂಡ ಹೌದು. ಅಂತಹ ಒಂದು ಕಟ್ಟುನಿಟ್ಟಾದ ಸಮರ್ಪಣೆಯ ಭಾವವನ್ನು ಮೇಲಿನ ವಚನದಿಂದ ನಾವು ಬಹಳ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ.
ಮನುಷ್ಯನ ವಿಪರ್ಯಾಸದ ಸ್ವಭಾವವೆಂದರೆ ತಪ್ಪು ಮಾಡುವುದೇ ಇಲ್ಲ ಎಂದು ನಿರ್ಧರಿಸುತ್ತ ಗೊತ್ತಲ್ಲದೆ ಮಾಡಿ ಬಿಡುವುದು. ಇದು ಮಾನವ ಸ್ವಭಾವದ ಬಹುದೊಡ್ಡ ದೌರ್ಬಲ್ಯ. ಆ ಸಮಯ ಕಳೆದು ಮುಂದೆ ಹೋದ ನಂತರ, ನಡೆದು ಹೋದ ತಪ್ಪಿನ ಅರಿವಾಗುತ್ತದೆ. ಅಂತಹ ತಪ್ಪಿಗೆ ಹೊಣೆಗಾರರು ಯಾರು? ನಾವೇ ಎಂದು ಹೇಳಿಕೊಳ್ಳಲು ನಮ್ಮ ಅಂತರಂಗ ಒಪ್ಪುವುದಿಲ್ಲ. ‘ಅಯ್ಯೋ ಹೋಗಲಿ ಬಿಡಿ ಮನುಷ್ಯ ತಪ್ಪು ಮಾಡದೆ, ಮರ ತಪ್ಪು ಮಾಡುತ್ತದೆಯೆ?’ ಎನ್ನುವ ಪ್ರಶ್ನೆ ಹಾಕಿಕೊಂಡು ಸುಮ್ಮನಾಗುತ್ತೇವೆ. ಅಥವಾ ಬೇರೆಯವರು ಹಾಗೆ ಹೇಳಿ ಸಾಂತ್ವನ ನೀಡಿ ಸಮಾಧಾನಿಸುತ್ತಾರೆ. ಅದರೆ ಅಕ್ಕನ ಪ್ರಾಮಾಣಿಕತೆ ಬಹಳ ಕಟ್ಟಾ ನಿಷ್ಟುರತೆಯಿಂದ ಕೂಡಿರುತ್ತದೆ. ಅವಳ ಬದುಕಿನಲ್ಲಿ ‘ಹೋಗಲಿ ಬಿಡು’ ಎನ್ನುವ “ಸ್ವಯಂ ಕ್ಷಮೆ” ಇಲ್ಲವೇ ಇಲ್ಲ. ಅದಕ್ಕೆ ತನ್ನ ಆತ್ಮ ಸಂಗಾತಿಯನ್ನು ಉದ್ದೇಶಿಸಿ ಹೇಳಿಕೊಂಡು ಹಗುರಾಗುತ್ತಾಳೆ. ಅದೇ ಈ ವಚನದ ಸಾರ.
ನಮಗೆ ‘ತಾಪ’ ಶಬ್ದ ಗೊತ್ತಿದೆ, ಆದರೆ ‘ಅನುತಾಪ’ ಗೊತ್ತಿಲ್ಲ. ಊಹೆ ಮಾಡುವುದೂ ಸ್ವಲ್ಪ ಕಷ್ಟಕರ. ನಿಘಂಟು ಪ್ರಕಾರ ಅನುತಾಪ ಎಂದರೆ ಮಾಡಿದ ತಪ್ಪಿಗಾಗಿ ತೀವ್ರವಾಗಿ ಪಶ್ಚಾತಾಪ ಪಡುವುದು. ಅಥವಾ ಸಣ್ಣ ಪುಟ್ಟ ತಪ್ಪುಗಳನ್ನು ನಡೆದು ಹೋದಾಗ ವ್ಯಕ್ತಪಡಿಸುವ ಮನಸಿನ ವ್ಯಥೆ ಎಂದೂ ಆಗಬಹುದು. ಒಂದೇ ಶಬ್ದದಲ್ಲಿ ಹೇಳುವುದಾದರೆ ಅದು ಮನದಲ್ಲಿ ಮೂಡುವ ‘ವಿಷಾದ’. ಸೂಕ್ಷ್ಮವಾಗಿ ಆಲೋಚಿಸುವ ಜೀವಗಳಿಗೆ ಈ ವಿಷಾದ ಭಾವನೆ, ಅವರ ಮನಸಿಗೆ ಬಹಳ ನೋವನ್ನು ಕೊಡುತ್ತದೆ. ಅದು ಸದಾ ಕಾಡುತ್ತಲೇ ಇರುತ್ತದೆ.
ಅಯ್ಯೋ ಇದು ಹೀಗಾಗಬಾರದಿತ್ತು!
ಇದು ಹೀಗೇಕಾಯಿತು?
ಹೀಗೆ ಆಗದಿದ್ದರೆ ಎಷ್ಟು ಚೆನ್ನಾಗಿತ್ತು?
ಹೀಗೆ ಮೇಲಿಂದ ಮೇಲೆ ವಿಷಾದಿಸುವ ಮನಸಿಗೆ ಶಾಂತಿ, ನೆಮ್ಮದಿ, ಸಮಾಧಾನಗಳು ಕೈಗೆಟುಕದ ಗಗನ. ಒಂದು ರೀತಿಯಲ್ಲಿ ನಮ್ಮ ತಪ್ಪಿಗೆ ನಾವೇ ವಾರಸುದಾರರು ಎಂದುಕೊಳ್ಳುವ ಧೈರ್ಯ ನಮ್ಮಲ್ಲಿ ಇರದೆ ಇದ್ದಾಗ ಇಂತಹ ಸಮಸ್ಯೆ ಗಂಭೀರವಾಗುತ್ತದೆ.
ನಾವು ಜೀವನದಲ್ಲಿ ಅನೇಕ ಬಾರಿ ಇಂತಹ ತಪ್ಪುಗಳನ್ನು ಮಾಡಿದ ಸಂದರ್ಭಗಳ ಮೂಲಕ ಹಾದು ಹೋಗಿರುತ್ತೇವೆ. ಆದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗ ತಿಳಿಯದೆ ಒದ್ದಾಡಿರುತ್ತೇವೆ. ಕೆಲವರು ಅದನ್ನೇ ದೊಡ್ಡದು ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಹೋದ ಉದಾಹರಣೆಗಳು ನಮ್ಮ ಮಧ್ಯದಲ್ಲಿವೆ. ಇನ್ನು ಕೆಲವರು ಏನೂ ಆಗೇ ಇಲ್ಲ ಎನ್ನುವಂತೆ ಮನದ ದಾರ್ಷ್ಟ್ಯತನಕ್ಕೆ ಒಳಗಾಗಿ ಮೊಂಡುತನದಿಂದ ನಿರ್ಲಿಪ್ತರಾಗಿ ಬಿಡುತ್ತಾರೆ. ಮೊದಲನೆ ವರ್ಗದವರಿಗೆ ಬಹಳ ದಿನಗಳ ನಂತರ ಮರೆವು ಬಂದು, ಆ ಪಶ್ಚಾತಾಪ ಅಥವಾ ವಿಷಾದವನ್ನು ಅವರ ಸೃತಿಪಟಲವೇ ಕಣ್ಮರೆ ಮಾಡುತ್ತ ಮರೆಮಾಚುತ್ತದೆ. ಆ ಮರೆವಿನಿಂದ ಅವರಿಗೆ ನೆಮ್ಮದಿ ಮತ್ತೆ ಮರಳಬಹುದು.
ಅಕ್ಕ ತನ್ನ ಬದುಕಿನಲ್ಲಿ ಇಂತಹ ಸಮಸ್ಯೆಗಳಿಗೆ ಬಹಳ ಬೇಗ ಉತ್ತರ ಪಡೆದುಕೊಳ್ಳುತ್ತಾಳೆ. ನಮ್ಮ ಹಾಗೆ ಅವಳಿಗೆ ಯಾವ ತರಹದ ಅನುಮಾನ, ಗೊಂದಲ, ದ್ವಂದ್ವಗಳಾಗಲಿ ಇಲ್ಲವೇ ಇಲ್ಲ. ಅದಕ್ಕೆ ಮೂಲ ಕಾರಣ ಅವಳಲ್ಲಿರುವ ಸಮರ್ಣೆಯ ಭಾವ. ‘ಎಲ್ಲವೂ ನೀನೇ! ನಾನು ನಿಮಿತ್ತ ಮಾತ್ರ’ ಎನ್ನುವ ಅವಳ ಮನದ ಭಾವ ಬಹಳ ಉನ್ನತ ಮಟ್ಟದ್ದು. ಹಾಗೆ ಸಾಧ್ಯವಾಗಲು ಕಾರಣ ಇಷ್ಟಲಿಂದ ಪೂಜೆ ಮತ್ತು ಅದರ ಪ್ರತಿಫಲವಾಗಿ ದೊರೆತ ಲಿಂಗಾಂಗ ಸಾಮರಸ್ಯ. ಲಿಂಗ ಬೇರೆ ಅಲ್ಲ, ನಾನು ಬೇರೆ ಅಲ್ಲ ಎನ್ನುವ ಏಕತಾಭಾವ. ಇಹವನ್ನು ಮರೆತು ಸ್ವಯಂಲಿಂಗಿಯಾದಾಗ ಎಲ್ಲವೂ ಒಂದೇ.
ಈ ವಚನದಲ್ಲಿ ಎರಡು ವಾಕ್ಯಗಳ ನಡುವೆ ‘ಚೆನ್ನಮಲ್ಲಿಕಾರ್ಜುನ’ ಬಳಸಿರುವುದು ಅಕ್ಕನ ಕಾವ್ಯ ಕಟ್ಟುವ ಕಲೆಯ ಅದ್ಭುತ ಪ್ರತಿಭಾಶಕ್ತಿ. ಒಮ್ಮೆ ಚೆನ್ನಮಲ್ಲಿಕಾರ್ಜುನನನ್ನು ಹಿಡಿದು ನಿಲ್ಲಿಸಿ ಧೈರ್ಯದಿಂದ ಕೇಳಿದಂತೆ ಭಾಸವಾದರೆ, ಇನ್ನೊಮ್ಮೆ ‘ಎನ್ನ ನೊಂದ ನೋವು ಬೆಂದ ಬೇಗೆ ನಿಮ್ಮ ತಾಗದೆ ಹೋಹುದೆ ಅಯ್ಯಾ?’ ಎಂದು ಕೇಳುವಾಗ, ಅತ್ಯಂತ ದೈನ್ಯತೆಯಿಂದ ವಿನಮ್ರಳಾಗಿ ನಿವೇದಿಸಿಕೊಂಡ ಭಾವ ಮೂಡುತ್ತದೆ. ಇಲ್ಲಿ ಅವಳಿಗೆ ಚೆನ್ನಮಲ್ಲಿಕಾರ್ಜುನನ ಮೇಲೆ ಇರುವ ಪ್ರೀತಿಯ ಹಕ್ಕು ಮತ್ತು ಸಮರ್ಪಣೆಯ ಭಾವ ಅಭಿವ್ಯಕ್ತವಾಗಿರುವುದನ್ನು ಗಮನಿಸುತ್ತೇವೆ.
ಲಿಂಗಾಂಗ ಸಾಮರಸ್ಯದಲ್ಲಿ ‘ಒಡಲು’ ಮತ್ತು ‘ಪ್ರಾಣ’ ಎರಡು ಒಂದೇ ಆಗಿರುತ್ತದೆ. ಅದು ಲಿಂಗ ಪೂಜೆ ಮಾಡಿಕೊಂಡವರಿಗೆ ಮಾತ್ರ ಆಗುವ ಅನುಭವದ ಅನುಭಾವ. ಅಲ್ಲಿಯ ದರ್ಶನದಲ್ಲಿ ಕಾಣುವ ಬಯಲು, ಆ ಬಯಲಿನ ಬೆಳಕು, ಆ ಬೆಳಕಿನ ಜ್ಯೋತಿ, ಆ ಜ್ಯೋತಿ ಪ್ರಾಣವಾಗುವ ಪರಿ, ಎಲ್ಲವೂ ಅನಂತ….. ಅನನ್ಯ….. ವಿಸ್ಮಯ!!! ಹೀಗೆ ಅಕ್ಕನಿಗೆ ಒಡಲು ಮತ್ತು ಪ್ರಾಣ ಎರಡೂ ಒಂದೇ ಆದಾಗ, ತಾನು ಮಾಡಿದ ಅನಂತ ಕೋಟಿ ತಪ್ಪುಗಳೆಲ್ಲಾ ಮನ್ನಿಸಲಾಗಿದೆ ಎನ್ನುವ ವಿಶ್ವಾಸ! ಆ ವಿಶ್ವಾಸದಿಂದ ಅವಳು ಜೀವನದಲ್ಲಿ ಉಂಡ ನೋವು, ಆ ನೋವಿಗೆ ನೊಂದದ್ದು, ಬೆಂದದ್ದು ಎಲ್ಲವೂ ತನಗೂ, ಅವನಿಗೂ ತಟ್ಟುತ್ತದೆ. ಅದಕ್ಕೆ ತನಗೆ ಅದರ ಪಶ್ಚಾತ್ತಾಪವಾಗಲಿ, ವಿಷಾದವಾಗಲಿ ಇಲ್ಲವೇ ಇಲ್ಲ. ಎಲ್ಲವೂ ಅವನಿಗಾಗಿಯೇ, ಎಲ್ಲವೂ ಅವನಿಂದಲೇ, ಎನ್ನುವ ಸಮರ್ಪಣೆ! ನಮ್ಮಲ್ಲಿ ಇಂತಹ ಸಮರ್ಪಣೆಯ ಭಾವ ಬರಲು ಸಾಧ್ಯವೆ?
ಇಂದಿನ ಸಮಾಜದಲ್ಲಿ ಇಷ್ಟೊಂದು ಸೂಕ್ಷ್ಮ ಮನಸ್ಥಿತಿಗಳು ಸಿಗುವುದು ದುರ್ಲಭ. ಎಲ್ಲರೂ ಓಡುವ ಓಟದಲ್ಲಿ ಮನಸಿಗೊಂದು ವಿಶೇಷ ಸಮಯ ಕೊಡುವುದೆಂದರೆ ಕಷ್ಟಸಾಧ್ಯ. ಆಧುನಿಕರಣದ ಯಾಂತ್ರಿಕ ಜೀವನದಲ್ಲಿ ಕಳೆದು ಹೋಗಿದ್ದೇವೆ. ಈ ಭರಾಟೆಯಲ್ಲಿ ಮನಸು ಕಳೆದು ಹೋಗಿರುವ ಸಂಗತಿ ನಮಗೆ ಗೊತ್ತೇ ಇಲ್ಲ. ಯಾಂತ್ರಿಕ ಬದುಕಿನ ಅಂಗವಾಗಿ ಸ್ವಯಂ ಯಂತ್ರವಾಗಿ ಹೋಗಿದ್ದೇವೆ. ಅಕ್ಕನ ಇಂತಹ ವಚನಗಳ ಸವಿಯನ್ನು ಸವಿಯುವುದರ ಮೂಲಕ ನಮ್ಮೊಳಗೆ ನಾವು ಮತ್ತೆ ಸೂಕ್ಷ್ಮತೆಯನ್ನು ಜಾಗೃತಗೊಳಿಸಿ, ರೂಢಿಸಿಕೊಂಡು, ಮಾನವೀಯತೆಯತ್ತ ಸಾಗೋಣ…
ಸಿಕಾ