ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬ ಗಣೇಶೋತ್ಸವ.

  • ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ             ಆಚರಿಸಲ್ಪಡುವ ಹಬ್ಬ ಗಣೇಶೋತ್ಸವ

ಅರಿಷಿಣ ‌  ಗಣಪ, ಮಣ್ಣಿನ ಗಣಪ, ಆರ್ಗ್ಯಾನಿಕ್ ಗಣಪ ಹೀಗೆ   ನಾವು ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ   ಪೂಜೆ ಮಾಡುವುದು ಪರಿಸರ ಸಂರಕ್ಷಣೆಯಲ್ಲಿ     ಅಮೂಲ್ಯ  ಕೊಡುಗೆ ನೀಡಿದಂತಾಗುತ್ತದೆ
ಭಾರತ ದೇಶಕ್ಕೆ ಭಾವೈಕ್ಯತೆ ನೀಡಿದ ಗಣೇಶನ ಹಬ್ಬದ ವಿಶಿಷ್ಟತೆ.”ವಕ್ರತುಂದಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇವ ದೇವ ಸರ್ವಕಾರ್ಯಘು ಸರ್ವವಾ” ಎಂದು ಪಠಿಸುತ್ತಾ ಮಂಗಲಕಾರಿಯಾದ ಗಣೇಶನನ್ನು ಮೊದಲು ಪೂಜಿಸುತ್ತೇವೆ.
ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡಬು ಸಹಿ ಪದಾರ್ಥವನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.
ಮೊದಲ ದಿನ ತಾಯಿ ಸ್ವರ್ಣ ಗೌರಿಯ ಹಬ್ಬ ಮಾರನೇ ದಿನವೇ ಗಣೇಶನ ಹಬ್ಬ.ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣೇಶನದಾಗಿರುವುದರಿಂದ ತಾಯಿ ಭೂಲೋಕಕ್ಕೆ ಬಂದ ಮಾರನೇ ದಿನವೆ ಅಜ್ಜ್ಜಿ ಮನೆಗೆ ಬಂದು, ಅಜ್ಜಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ.
ಭಾದ್ರಪದ ಚೌತಿಯ ದಿನವಾದ ಅಂದು ಯಾರೂ ಚಂದ್ರನನ್ನು ನೋಡಬಾರದೆಂಬ ಪ್ರತೀತಿ.
ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೇ ಸಂಭ್ರಮದಿಂದ ಆಚರಿಸುವುದು ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನು ಮಾಡಲಾಗುತ್ತದೆ.

ಹಬ್ಬದ ವೈಶಿಷ್ಟ್ಯ

ಆನೆಗಳ ಹಿಂಡು ಹೊಲಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನರು ಆನೆಯ ಮುಖವುಳ್ಳ ದೇವರನ್ನು ಪೂಜಿಸಿದರೆ, ಗೋಧಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನು ಪೂಜಿಸಿ ಇಬ್ಬರನ್ನು ಸಮಾಧಾನಿಸುವದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಜಿರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ.
ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತಾ, ಜಾವಾ, ಜಪಾನ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು. ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೆ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣಗಳಿವೆ.
ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಟ್ಟು ಅದನ್ನು ಪಿಳ್ಳೆರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಈ ದೇವನಿಗೂ ಪೋಡಗಾಂಗ ಪೂಜಾವಿಧಾನದ ಪ್ರಕಾರ ಪೂಜಿಸುವರು. ಪೂಜೆಯ ನಂತರ ಹತ್ತು ದಿನಗಳವರೆಗೆ ನಿತ್ಯ ಪೂಜೆಯನ್ನು ಮಾಡಿ ಹತ್ತನೆಯ ದಿನ ಅಂದರೆ ಅನಂತ ಚತುದರ್ಶಿಯ ದಿನದಂದು ವಿಸರ್ಜನೆ ಮಾಡುವರು. ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ-ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರಿಯುತ್ತಿದೆ.
“ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹೆ ತನ್ನೋದಂತಿಃ ಪ್ರಚೋದಯಾತ್”
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅತ್ಯಂತ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿ ತನ್ನದೇ ಆದ ಪರಂಪರೆ ಇದೆ. ಡೊಳ್ಳು ಕುಣಿತ, ಹುಲಿವೇಷ, ಯಕ್ಷಗಾನ ಮುಂತಾದವು ಇಲ್ಲಿನ ಗಣೇಶೋತ್ಸವಕ್ಕೆ ಮೆರುಗು ನೀಡುತ್ತವೆ. ಕುಂದಾಪುರ, ಶಿರೂರು, ಮಂಗಳೂರು, ಉಡುಪಿ ಕಡೆಯಲ್ಲಿ ಸುಂದರವಾದ ಸಂಭ್ರಮದ ಗಣೇಶ ಹಬ್ಬವನ್ನು ಆಚರಿಸುತ್ತಾರೆ.

ಪುರಾಣದಲ್ಲಿ:

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ, ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತೆ, ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು, ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚಕರ್ಮಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದದಾಗಿರಬೇಕು. ಹಾಗೆ ಮಾಡದೆ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರನ ರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯ ಮಾಡುವ ದುರ್ಬುದ್ಧಿಯಂಟಾಗುತ್ತದೆ.
ಗಣಪತಿಗೆ ಇಷ್ಟವಾದ ಸಂಖ್ಯೆ 21. ಇದನ್ನು ಕೂಡಿದರೆ 2+1=3 ಇದು ಙಕಾರಕ್ಕೆ ಸಂಕೇತವಾಗಿರುತ್ತದೆ.ಸಂಸ್ಕøತದ ಙಅನ್ನು ಬಳಸಿ ಗಣಪತಿಯನ್ನು ರಚಿಸಬಹುದು.ಗಣಪತಿ ಹಬ್ಬದ ದಿನ ವಿನಾಯಕನಿಗೆ ಏಕವಿಂಶತಿ ಪತ್ರೆ ಪೂಜೆ ಮಾಡುವೆವು.ಅಂದರೆ 21 ಬಗೆಯ ಪತ್ರೆಗಳಿಂದ ಮಾನವ ದೇಹದಲ್ಲಿ ಜ್ಞಾನೇಂದ್ರಿಯ, ಕರ್ಮೇಂದ್ರಿಯ ಹತ್ತು ಅವು ಮಾಡುವ ಕಾರ್ಯಗಳು ಹತ್ತು. ಇದರ ಜೊತೆಗೆ ಮನಸ್ಸು ಸೇರಿದರೆ 21 ಆಗುವದು. ಈ 21 ತತ್ವವು ಒಟ್ಟಿಗೆ ಸೇರಿದಾಗ ಪೂಜೆ ಏಕಾಗ್ರತೆ ಹೊಂದಿ ಪೂರ್ಣವಾಗುವದು. ಆದ್ದರಿಂದ ಗಣಪತಿಗೆ 21 ಹೂ, 21 ಗರಿಕೆ, 21 ಹಣ್ಣು, 21ಕಾಯಿ, 21 ಪತ್ರೆಗಳು, 21 ಕಡಬು, 21 ಮೋದಕ ಹೀಗೆ ಗಣಪತಿಗೆ 21 ಬಗೆಯ ಪ್ರೀಯವಾದ ತಿಂಡಿಗಳನ್ನು ಮಾಡಿ ಸಮರ್ಪಿಸಬೇಕು.

೩೨ ಗಣಪತಿ ರೂಪಗಳು

ಗಣಪತಿ, ದ್ವಿಜಗಣಪತಿ, ಸಿದ್ಧಿ ಗಣಪತಿ, ಉಚ್ಛಷ್ಟ ಗಣಪತಿ, ವಿಘ್ನ ಗಣಪತಿ, ಹೇರಂಬ ಗಣಪತಿ, ಲಕ್ಷ್ಮೀವಲ್ಲಭ ಗಣಪತಿ, ಊಧ್ರ್ವ ಗಣಪತಿ, ಏಕಾಕ್ಷರ ಗಣಪತಿ, ಪ್ರಸನ್ನ ಗಣಪತಿ, ಹರಿದ್ರಾ ಗಣಪತಿ, ತ್ರಯಾಕ್ಷರ ಗಣಪತಿ, ಏಕದಂತ ಗಣಪತಿ, ಸೃಷ್ಟಿ ಗಣಪತಿ, ದ್ವಿಮುಖ ಗಣಪತಿ, ತ್ರಿಮುಖ ಗಣಪತಿ, ಯೋಗ ಗಣಪತಿ, ದುರ್ಗಾ ಗಣಪತಿ, ಸಂಕಟಹರ ಗಣಪತಿ, ವರಸಿದ್ಧಿ ಗಣಪತಿ, ಗಗಾರ ಗಣಪತಿ, ತ್ರಯಕ್ಷರ ಗಣಪತಿ, ಪಂಚಮುಖಿ ಗಣಪತಿ, ಋಣ ವಿಮೋಚನೆ ಗಣಪತಿ, ವಿಘ್ನಹರ ಗಣಪತಿ.

ಗಣಪತಿಯನ್ನು ನೀರಿಗೆ ಏಕೆ ಬಿಡಬೇಕು ?

ಆನೆಗೆ ನೀರು ಎಂದರೆ ಬಲುಪ್ರಿಯ ಹಾಗೆ ಗಣಪತಿಗೂ ನೀರು ಎಂದರೆ ಬಲು ಇಷ್ಟ. ವಿಷ್ಣು ಅಲಂಕಾರ ಪ್ರಿಯ ಶಿವ ಭಕ್ತಿ ಪ್ರಿಯ. ಹಾಗೆ ಗಣಪತಿ ತರ್ಪಣ ಪ್ರಿಯ ಈ ಕಾರಣಕ್ಕಾಗಿಯೇ ಗಣಪತಿಯನ್ನು ನೀರಿನಲ್ಲಿ ಬಿಡುವದು. ಆ ಸಮಯದಲ್ಲಿ ಭಕ್ತರು ಚಿಕ್ಕ್ಕೆರೆಯಲ್ಲಿ ಬಿದ್ದ ದೊಡ್ಡ ಕೆರೆಯಲಿ ಎದ್ದಾ ಎನ್ನುತ್ತ ಸಂತೋಷ ಪಡುತ್ತಾರೆ. ಇದರ ಒಳ ಅರ್ಥ ದೊಡ್ಕೆರೆ ಎಂದರೆ ಸಪ್ತ ಸಮುದ್ರಗಳ ವೈಶಾಕ್ಯ ಮೀರಿಸಿ ನಿಂತಿರುವ ಮಾನವನ ಹೃದಯ ಅಂದರೆ ಮತ್ತೆ ಏಳಲಿ ಎದ್ದು ರಾಷ್ಟ್ರಕ್ಕೆ ಸಮಾಜಕ್ಕೆ ರಕ್ಷಣೆ ನೀಡಲಿ ಹಾಗೂ ತೊಂದರೆಗಳನ್ನು ಪರಿಹರಿಸಿ ಶುಭವನ್ನು ನೀಡಲಿ ಎಂಬುದು ಪ್ರತೀತಿ.

ಎಲ್ಲರಿಗೂ ಗಣೇಶ ಸನ್ಮಂಗಳ ಮಾಡಲಿ.

ಜಯಶ್ರೀ ಭ. ಭಂಡಾರಿ 
  ಬಾದಾಮಿ.

Don`t copy text!