ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ಅಲ್ಲೀಸಾಬ ಅಮೀನಸಾಬ ಮುಲ್ಲಾ
ಸಾಕೀನ ಖೈನೂರು, ತಾಲೂಕ ಸಿಂದಗಿ ಜಿಲ್ಲಾ ವಿಜಯಪುರ. ಇದು ಭಜನೆ ಪದಗಳ ಅಲ್ಲೀಸಾಹೇಬನ ಹಳೆಯ ವಿಳಾಸ.

ಅವರೀಗ ಕುಟುಂಬ ಸಮೇತ ವಾಸವಾಗಿರೋದು ಕಡಕೋಳಕ್ಕೆ ಹತ್ತಿರದ ‘ಯತ್ನಾಳ’ ಗ್ರಾಮದಲ್ಲಿ. ನಿಮ್ಮದು ಯಾವೂರು ಅಂತ ಅಲ್ಲೀಸಾಹೇಬರಿಗೆ ಯಾರಾದರೂ ಕೇಳಿದರೆ ಸಾಕು. “ನನ್ನದು ಕೃಷ್ಣಪ್ಪನ ಖೈನೂರು” ಎಂದು ಕುಣಿದಾಡುವ ಕಂಠದಲ್ಲಿ ಥಟ್ ಅಂತ ಉತ್ತರಿಸುತ್ತಾನೆ. ಹೌದು ಕೃಷ್ಣಪ್ಪನ ಖೈನೂರು, ಅವಧೂತ ಪರಂಪರೆಯ ಬೇರುಗಳಿರುವ ಊರು. ಅಲ್ಲಿನ ಕಂಬಾರ ರಾಚವ್ವ ಅನುಭಾವದ ಕವಯತ್ರಿ. ಆ ಊರ ಹೊರಗಿನ ಗುಂಪಾ, ಕೆಳಗಿನ ಮತ್ತು ಮೇಲಿನ ಎರಡು ಮಠಗಳು ಕೂಡ ಅಂತಹ ಪರಂಪರೆಗಳ ತಾಣಗಳು.

ಅಂದಹಾಗೆ ಖೈನೂರು ಕೃಷ್ಣಪ್ಪನೆಂದರೆ ಕಡಕೋಳ ಮಡಿವಾಳಪ್ಪನ ಶಿಷ್ಯ ಗುರುಪುತ್ರ ಮತ್ತು ವಿಮಲ ಕವಿತ್ವದ ತತ್ವಪದಕಾರ. “ಹೌದು ಹೌದು ಅದೇ ಖೈನೂರು ನನ್ನದು” ಎಂದು ಮತ್ತೆ ಮತ್ತೆ ಮೈತುಂಬಾ ಉಮೇದು ತುಂಬಿಕೊಂಡು ಸಂಭ್ರಮಿಸುವ ಸಾಧಕಜೀವಿ ನಮ್ಮ ಅಲ್ಲೀಸಾಬ. ಅದು ಖಾಸಾ, ಖುದ್ದು ಖೈನೂರು ಕೃಷ್ಣಪ್ಪನೇ ಅವನ ಮೈಮನ ತುಂಬಿ ಬಂದ ಅಪರಂಪಾರ ಪ್ರೀತಿ. ಪರಾಕಾಷ್ಠೆಯಿಂದ ಹಾಗೆ ಹೇಳುವ ಅಲ್ಲೀಸಾಬ ಧ್ವನಿಯಲ್ಲಿ ಖೈನೂರು ಕೃಷ್ಣಪ್ಪನ ತತ್ವಪದಗಳೇ ಕೊರಳತುಂಬಿ ಕೇಳಿ ಬರುತ್ತವೆ.

ಅಲ್ಲೀಸಾಹೇಬನ ಅಪ್ಪ ಅಮೀನಸಾಹೇಬರು ಗುರುದೇವ ರಾನಡೆಯವರ ಒಡನಾಡಿ ಮಹೇಶ್ವರಪ್ಪ ಅವರಿಂದ ಗುರುಬೋಧೆ ಪಡೆದವರು. ‘ನಿಜಗುಣಶಾಲಿ‘ಯಾಗಿದ್ದ ಮಹೇಶ್ವರಪ್ಪ ಜನಾಡುನುಡಿಯಲ್ಲಿ ಮೈಸೂರಪ್ಪ ಎಂದೇ ಪ್ರಸಿದ್ದರು.

ಗಡ್ಡಜಡೆಯ ಮೇಲೆತ್ತರದ ನಿಲುವಿನ ಅವರು ಅಷ್ಟೇ ಎತ್ತರದ ಅನುಭಾವ ಸಂಪನ್ನರು. ಅಂತಹ ಮೈಸೂರಪ್ಪಗಳ ಶಿಸುಮಗನಾದ ಆತ ಹಿಂದೂ ದೈವಗಳ ಗದ್ದುಗೆ, ಪಾದಗಟ್ಟೆ ಕಲ್ಲುಗಳನ್ನು ಸಿದ್ಧಗೊಳಿಸುವಲ್ಲಿ ಸಿದ್ಧಹಸ್ತನಾಗಿದ್ದ. ಕಡಕೋಳದಲ್ಲಿ ಈಗ್ಗೆ ಅರ್ಧಶತಮಾನಕ್ಕೂ ಹಿಂದೆ ತತ್ವಪದಗಳನ್ನು ಪರಂಪರಾಗತ ಸ್ವರಶಿಸ್ತು ಪಾಲಿಸಿ ಹಾಡುವ ಪದಕಾರರೇ ತುಂಬಿ ತುಳುಕಿದ್ದರು. ಅದರಲ್ಲೂ ಗವಿ ಭೀಮಾಶಂಕರ ಅವಧೂತರು, ಗೌಡಪ್ಪ ಸಾಧು, ಅಬ್ದುಲ್ ಸಾಬ, ಸಾಧು ಶಿವಣ್ಣ, ಹುಡೇದ ಎಲ್ಲಪ್ಪ, ಪೂಜೇರಿ ನಿಂಗಪ್ಪ ಇವರೆಲ್ಲರೂ ಏಕತಾರಿಯ ತತ್ವಪದ ಮತ್ತು ಪದಾರ್ಥಗಳನ್ನು ಹಾಳತವಾಗಿ ಬಾಳುವಲ್ಲಿ ಬಲಭೀಮರು.

ಈ ಎಲ್ಲ ಹಿರೀಕರ ಸಾಹಚರ್ಯ ಖೈನೂರಿನ ಅಮೀನಸಾಹೇಬರದು. ಸಹಜವಾಗಿ ಅವರಿಗೆ ತತ್ವಪದಗಳ ದಿವಿನಾದ ಒಡನಾಟ. ಒಡಲ ತುಂಬಾ ತಮ್ಮೂರಿನ ಕೃಷ್ಣಪ್ಪ ಮತ್ತು ಅಪ್ಪ ಮಡಿವಾಳಪ್ಪನ ತತ್ವಪದಗಳದ್ದೇ ಕಡಲು. ಆದೀಮಸಾಬ ಮತ್ತು ಅಲ್ಲೀಸಾಬ ಇಬ್ಬರು ಮಕ್ಕಳಿಗೆ ತತ್ವಪದಗಳ ಪ್ರಸಾದ ಹಂಚಿ ಬೆಳೆಸಿದ ಕೀರ್ತಿ ಅಪ್ಪ ಅಮೀನ ಸಾಹೇಬನದು. ಕುಟುಂಬ ಬದುಕಿನ ಒಕ್ಕಲುತನದ ಜೊತೆಗೆ ಕಗ್ಗಲ್ಲು ಬಂಡೆಗಳನ್ನು ಒಡೆದು, ಕಟೆದು ಸುರೂಪಗೊಳಿಸುವ ಶಿಲಾಕಾಯಕ. ಕಡಕೋಳ ಸೀಮೆಯ ಬಹುಪಾಲು ಪಾದಗಟ್ಟೆ, ದೈವಸಮಾನದ ಗದ್ದುಗೆ ಕಲ್ಲುಗಳ ವಿನ್ಯಾಸಗಳು ಅಮೀನಸಾಹೇಬರ ಹೆಸರು ಹೇಳುತ್ತವೆ.

ಖೈನೂರು ಕೃಷ್ಣಪ್ಪನ ಗದ್ದುಗೆ, ಗೊಲ್ಲಾಳೇಶ್ವರ ಗದ್ದುಗೆ, ಕಾಚಾಪುರದ ಅಮರಯ್ಯ ಮುತ್ಯಾನ ಗದ್ದುಗೆ ಕಟ್ಟೆಯ ಆಳೆತ್ತರದ ಕಲ್ಲುಗಳೆಲ್ಲ ‘ಖೈನೂರು ಮುಲ್ಲಾ’ ಅಮೀನಸಾಹೇಬನ ಸೇವಾ ಕೈಂಕರ್ಯದ ಶಿಲೆಗಳು. ಇದಕ್ಕೆಲ್ಲ ನಮ್ಮ ಪ್ರಗತಿಪರರು ಬುದ್ದಿ ಬಲುಮೆಯಿಂದ ವೈಚಾರಿಕತೆಯ ಬಣ್ಣಹಚ್ಚಿ ಅದರ ಜತೆಗೆ ಕೋಮು ಸೌಹಾರ್ದತೆಯ ನಂಟು ಸೇರಿಸಿ ಅವರೇ ಹೆಚ್ಚು ಪ್ರಸಿದ್ಧರಾಗುವ ಅಪಸವ್ಯಗಳೇ ಅಧಿಕ. ನನಗೇಕೋ ಈ ಬಗೆಯ ರೂಪಕ, ಹೋಲಿಕೆಗಳು ಒಂದು ತರಹದ ”ಸ್ಪೈಸೀ ಅಪ್ಡೇಟ್” ಅನಿಸುತ್ತವೆ.

ಖರೇ ಹೇಳಬೇಕೆಂದರೆ ಅಲ್ಲೀಸಾಹೇಬರ ಅಪ್ಪ ಅಮೀನಸಾಹೇಬರಿಗಾಗಲಿ ಮತ್ತು ಅಮ್ಮ ಬಾನುಮ್ಮನಿಗಾಗಲಿ ಅಂತಹ ಯಾವುದೇ ದರ್ದುಗಳಿರಲಿಲ್ಲ. ಅದು ಅವರ ನಿತ್ಯ ಜೀವನದ ಕಾಯಕವಾಗಿತ್ತು. ಹಾಗೆ ಕಾಯಕನಿರತರಾಗಿ ಗುರು, ಲಿಂಗ, ಜಂಗಮ ಮರೆತ ಯಥಾರ್ಥ ಜೀತಪೀರ ‘ಮಹಾಂತಅರಿವು’ ಅವರದಾಗಿತ್ತು. ಅಪ್ಪ ಅಮೀನಸಾಹೇಬರಿಂದ ಅಲ್ಲೀಸಾಹೇಬರಿಗೆ ಬಳುವಳಿಯಾಗಿ ಬಂದಿರುವ ಸಂಪತ್ತೇ ಅದಾಗಿದೆ.

ಅದು ಕಡಕೋಳ ಮಡಿವಾಳಪ್ಪ ಮತ್ತು ಅವನ‌ ಶಿಶುಮಕ್ಕಳ ತತ್ವಪದಗಳನ್ನು ಅನೂಚಾನ ಹಾಡುತ್ತಾ ಬಂದಿರುವ ಹಳೆಯ ರಾಗ, ಸ್ವರ, ಧ್ವನಿ ಮಾಧುರ್ಯದ ಭಜನೆ ಪದಗಳು. ಅವಕ್ಕೆ ತಕ್ಕುದಾದ ಮತ್ತು ತಮಗೆ ತಿಳಿಯುವ ತರ್ಕ, ಟೀಕುಗಳು ಮಾತ್ರ. ಅದು ಮುಲ್ಲಾ ಕುಟುಂಬ ಸಾಗಿಬಂದ ಪರಂಪರೆ. ಮುಲ್ಲಾ ಮಾತ್ರವಲ್ಲ ಅಂತಹ ಹತ್ತಾರು ಚಲನಶೀಲ ಪದ ಪರಂಪರೆಗಳು ಕಡಕೋಳ ಸೀಮೆಯಲ್ಲಿ ಹಾಸು ಹೊಕ್ಕಾಗಿವೆ.

ಎತ್ತಹೋದೆ ಎನ್ನ ಹಡೆದವ್ವ/
ಮರ್ತ್ಯವು ಮುಳುಗಿತು ಎನಗವ್ವ/
ಮುಂದೆ ದುಸ್ತರ ದಿನಗಳೆಯಲಿ ಹ್ಯಂಗವ್ವ//

ತನ್ನ ಹೆತ್ತವ್ವ ಸತ್ತಾಗ ಖೈನೂರು ಕೃಷ್ಣಪ್ಪ ರಚಿಸಿದ ಈ ತತ್ವಪದವನ್ನು ಭಾವತುಂಬಿ ಹಾಡುವ ಅಲ್ಲೀಸಾಹೇಬನ ಧ್ವನಿ ಮತ್ತು ದೇಹಭಾಷೆ ಕಾಡುಕಟುಕರ ಹೃನ್ಮನಗಳಲ್ಲೂ ತೇವಭಾವ ಭರಿಸಬಲ್ಲದು.

ಎಲ್ಲಿಯ ಬ್ರಾಹ್ಮಣರ ಕೃಷ್ಣಪ್ಪ, ಎಲ್ಲಿಯ ಮುಸುಲರ ಅಲ್ಲೀಸಾಬ ಅಮೀನಸಾಬರು.!? ಹಾಗಂತ ಕೆಲವು ಮಡಿವಂತ ಮನಸುಗಳು ಮಾತಾಡುತ್ತವೆ. ಅಷ್ಟೇಯಾಕೆ ಅಲ್ಲೀಸಾಬರ ಅಣ್ಣ ಆದಿಮಸಾಬ ಸಹಿತ ತತ್ವಪದಗಳ ಹಾಡು ಕೋಗಿಲೆಯೇ ಆಗಿದ್ದ. ಹೀಗೆ ಇಬ್ಬರು ಮಕ್ಕಳು ಅಪ್ಪ ಅಮೀನ ಸಾಹೇಬರಿಂದಲೇ ತತ್ವಪದಗಳ ಹಾಡುದೀಕ್ಷೆ ಪಡೆದಿದ್ದರು. ಅವರು ಹಗಲು ರಾತ್ರಿ ಏಕತ್ರ ಮಾಡಿ ಹಾಡಿದರೂ ಮುಗಿಯದಷ್ಟು ಮಡಿವಾಳಪ್ರಭುವಿನ ರಾಶಿ ರಾಶಿ ಪದಗಳು. ಮೇಲಿನಂತೆ ಹಂಗಿಸಿ ಮಾತಾಡುವ ಮಡಿವಂತ ಮಮೂಳರಿಗೆ ಮುಲ್ಲಾ ಅಲ್ಲೀಸಾಬನ ಬಲ್ಲೇಕ ಮಡಿವಾಳಪ್ಪನ ನುಡಿದಿವ್ಯದ ಅಗ್ನಿಕುಂಡವೇ ಹೀಗೆ ಹಾಡಾಗಿ ಕುಟುಕುತ್ತದೆ:

ಮುಡಿಚೆಟ್ಟಿನೊಳು ಬಂದು ಮುಟ್ಟಿತಟ್ಟೇನಂತೀರಿ/
ಮುಟ್ಟಾದ ಮೂರು ದಿನಕ
ಹುಟ್ಟಿ ಬಂದಿರಿ ನೀವು
ಮುಡುಚೆಟ್ಯಾವಲ್ಯಾದ ಹೇಳಣ್ಣ//

ಹೀಗೆ ಮಡಿವಾಳಪ್ಪ ಮತ್ತು ಅವರ ಶಿಶುಮಕ್ಕಳಾದ ಖೈನೂರು ಕೃಷ್ಣಪ್ಪ ಮತ್ತು ಕಡ್ಲೇವಾಡ ಸಿದ್ದಪ್ಪ, ತೆಲಗಬಾಳ ರೇವಪ್ಪನ ತತ್ವಪದಗಳನ್ನು ಮನಸು ತುಂಬಿ ಹಾಡುವುದು ಅಲ್ಲೀಸಾಬನ ಕಾಯಕವೇ ಆಗಿದೆ. ಕಡಕೋಳ ಮಠವೆಂದರೆ ಆತನಿಗೆ ಗುರುಮನೆ. ಪೀಠಾಧ್ಯಕ್ಷರಾದ ಡಾ. ರುದ್ರಮುನಿ ಶಿವಾಚಾರ್ಯ ಅವರಿಗೆ ತುಲಾಭಾರ ಏರ್ಪಡಿಸಿ ಮುಲ್ಲಾ ಕುಟುಂಬ ಆನಂದಿಸುತ್ತದೆ. ರುದ್ರಮುನಿ ಶಿವಾಚಾರ್ಯರಿಗೂ ಅಲ್ಲೀಸಾಹೇಬನೆಂದರೆ ಎಲ್ಲಿಲ್ಲದ ಪ್ರೀತಿ.

ಇನ್ನು ಯಾತಕ ಬರಲಿ ನಿಮ್ಮೂರಿಗೆ ನಾನು
ಬೇಸರಾಗಿ ಹೋದೆನು ಎಲ್ಲರಿಗೆ ನಾನು//
ಹಿಂದಿನೂರು ಮರೆತು ಹೋಯಿತು
ಮುಂದಿನೂರು ಮುಂದೇ ಉಳೀತು
ಕಾರ್ಮೋಡ ಬಂದು ಮುಸುಕಿತು.//

ಗಂಡನ ಮಾಡಿಕೊಳ್ಳಬೇಕವ್ವ
ತಾಳಿ ಕರಿಮಣಿ ಇದ್ದರೆ ಮೋಜವ್ವ//

ಹೀಗೆ ಖೈನೂರು ಕೃಷ್ಣಪ್ಪನ ಬಹುತೇಕ ಎಲ್ಲಾ ತತ್ವಪದಗಳನ್ನು ಅಪ್ಪ ಅಮೀನಸಾಹೇಬನಿಂದಲೇ ದೇಶೀಯ ಸೊಗಡಿನಲ್ಲಿ ಹಾಡುವುದನ್ನು ಅಲ್ಲೀಸಾಹೇಬ ಕಲಿತಿದ್ದಾನೆ.

ಅಲ್ಲೀಸಾಹೇಬನ ಕುರಿತು ಇಲ್ಲಿ ಉಲ್ಲೇಖಿಸಲೇಬೇಕಾದ ಸಂಗತಿಯೊಂದಿದೆ.
ಅನಕ್ಷರಸ್ಥನಾದ ಆತನಿಗೆ ಬುದ್ದಿ ಬಂದಾಗಿನಿಂದಲೂ ತನ್ನೂರಿಂದ ಪ್ರತಿನಿತ್ಯವೂ ಕಡಕೋಳಕ್ಕೆ ಹೋಗಿ ಮಡಿವಾಳಪ್ಪನ ಕರ್ತೃ ಗದ್ದುಗೆಗೆ ಸಾಷ್ಟಾಂಗ ಹಾಕುವುದನ್ನು ಇದುವರೆಗೆ ತಪ್ಪದೇ ನಿಯಮದಂತೆ ಪಾಲಿಸುತ್ತಾ ಬಂದಿದ್ದಾನೆ. ಹಾಗೆ ಮಾಡಿದಾಗಲೇ ಮನಸಿಗೆ ಅದೇನೋ ಆನಂದ, ಜೀವಕ್ಕೆ ಸಮಾಧಾನ. ಹಾಗೆಯೇ ನಿತ್ಯದ ತನ್ನ ಒಕ್ಕಲುತನದ ಕಾಯಕ ಕ್ರಿಯೆಗಳನ್ನು ಆರಂಭಿಸುವಾಗ ಮಹಾಂತ ಮಡಿವಾಳ ಧ್ಯಾನವೇ ಮೊದಲು. ಹತ್ತಾರು ಎಕರೆ ಹೊಲಗಳನ್ನು ಉತ್ತಿ ಬಿತ್ತಿ ಬೆಳೆಯುವಲ್ಲಿ ಅಲ್ಲೀಸಾಬ ಎತ್ತಿದ ಕೈ. ಅಷ್ಟಕ್ಕೂ ಅವನದೆನ್ನುವ ಇಪ್ಪತ್ತು ಎಕರೆ ಹೊಲ ಇದೆ. ಹೊಲ ಹರಗುವ, ಬಿತ್ತುವ ಕೂರಿಗೆ ಮಂಡಿ ಮೇಲೆ ಬೆರಳಿಡುವ‌ ಮುನ್ನ ಮಹಾಂತ ಮಡಿವಾಳನೆಂಬ ನಾಮಸ್ಮರಣೆ.

ಈಗ್ಗೆ ಇಪ್ಪತ್ತು ವರುಷಗಳ ಹಿಂದೆಯೇ
ತಾನು ತನ್ನ ಪತ್ನಿ ಮಾಬಣ್ಣಿ ಇಬ್ಬರೂ ನೀಲೂರಪ್ಪನ ಬಳಿ ಗುರುಪದೇಶ ಪಡೆದು ನೀಲೂರು ಮೈಬೂಬ ಸುಬಾನಿ ದರ್ಗಾದ ಶಿಶುಮಕ್ಕಳಾಗಿದ್ದಾರೆ. ಗುರು ನೀಲೂರಪ್ಪ ಕರುಣಿಸಿ ತೊಡಿಸಿ ಹರಿಸಿದ ಹಸಿರು ಶಾಲು ಸದಾ ಅವನ ಹೆಗಲಮೇಲೆ. ಅದು ಅಲ್ಲಾ ಅಲ್ಲಮನ ಸಂಕೇತ ಎಂಬ ತಿಳಿವಳಿಕೆ ಅಲ್ಲೀಸಾಬನದು. ತಲೆಮೇಲೆ ಬಿಳಿಟೊಪ್ಪಿಗೆ. ಬಿಳಿ ಧೋತರ ಅಂಗಿ, ಒಮ್ಮೊಮ್ಮೆ ಲುಂಗಿ. ಹಣೆಗೆ ಭಸ್ಮ ವಿಭೂತಿ. ಅದೆಲ್ಲ ಗುರು ನೀಲೂರಪ್ಪ ತನಗೆ ತೋರಿದ ಬೆಳಕಿನ ದಾರಿ. ಅದು ಮಹಾಂತ ಮಡಿವಾಳಪ್ಪನ ಮಹಾಮಾರ್ಗ.

ಇನ್ನೂ ಮೊನ್ನೆಯಷ್ಟೇ ಕಡೆಯ ಶ್ರಾವಣ ಸೋಮವಾರಕ್ಕೆ ಮುನ್ನ ಮಡಿವಾಳಪ್ಪನ ಗುರುಸ್ಥಳ ಚಿಣಮಗೇರಿ ಮಹಾಂತೇಶ್ವರ ಗುಡ್ಡಕ್ಕೆ ಪಾದಯಾತ್ರೆ. ಕಡಕೋಳ ಶ್ರೀಮಠದ ಡಾ. ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಪಾದಯಾತ್ರೆ ಮಾಡಿಬಂದ, ಕರಿಗಡಬು ತುಪ್ಪ ಉಂಡುಬಂದ ನೆನಪುಗಳನ್ನು ಅಲ್ಲೀಸಾಹೇಬ ಮನ ಮುಟ್ಟುವಂತೆ ಹಂಚಿಕೊಂಡ. ಅವತ್ತು ಮುಂಜಾನೆ ಮಡಿವಾಳಪ್ಪನ ಮಠದ ಫೌಳಿಯಲ್ಲಿ ಮುಖಾಮುಖಿಯಾಗಿ ಮಾತಿಗೆ ಸಿಕ್ಕಿದ್ದು. ನಿವಾಂತ ಕುಂತು ಆತನೊಂದಿಗೆ ಮಾತಾಡುವುದೆಂದರೆ ಲೋಕೋತ್ತರ ಸಂತಪ್ರೀತಿಯೊಂದಿಗೆ ಅನುಸಂಧಾನಗೊಂಡ ಅನನ್ಯ ಪುಳಕ. ಅನುಭಾವದ ಹೊಳೆಯಲ್ಲಿ ಜಳಕ ಮಾಡಿದ ಅನುಪಮ ಅನುಭವ. ಅದು ಜವಾರಿ ಸಂವಾದದ ಶುಭ್ರ ಮೀಮಾಂಸೆ.

ಕೆಲವು ನಿಮಿಷಗಳ ಕಾಲ ಹೀಗೇ ಮೈಮರೆತವರಂತೆ ನಾವಿಬ್ಬರೂ ಮಾತಾಡುವುದನ್ನು ಕಂಡು ಜತೆಗೆ ಬಂದಿದ್ದವರು “ಕಲ್ಲೂರಲ್ಲಿ ಶ್ರಮ ಆಗಿದೆ, ಅಲ್ಲೀಸಾಹೇಬ ಅಲ್ಲಿಗೆ ಹೋಗಬೇಕಾಗಿದೆ” ಎನ್ನುವುದನ್ನು ನೆನಪಿಸಿದರು. ನಮ್ಮಕಡೆಗೆ ಶ್ರಮ ಆಗಿದೆ ಎಂದರೆ “ಸಾವು” ಆಗಿದೆ ಎಂದರ್ಥ. ಶ್ರಮದ ಪಾರ್ಥಿವ ಶರೀರ ದರ್ಶನ ಮಾಡಿ, ಪ್ರಾಯಶಃ ಅಲ್ಲಿ ಅಲ್ಲೀಸಾಹೇಬ ಭಜನೆ ಹಾಡುಗಳನ್ನು ಹಾಡಬೇಕಾದ ಸೂಚನೆ ಅದಾಗಿತ್ತು. ನಾವು ಮಾತಾಡುವುದು ಮತ್ತಷ್ಟು, ಇನ್ನಷ್ಟು ಇತ್ತು ಎನ್ನುವಾಗಲೇ ಅಲ್ಲೀಸಾಹೇಬರಿಗೆ ಅಲ್ಲೇ ಆಗಲೇ ಬೀಳ್ಕೊಟ್ಟೆ

ಮಲ್ಲಿಕಾರ್ಜುನ ಕಡಕೋಳ
9341010712

Don`t copy text!