ಮುಗುಳು ಮಲ್ಲಿಗೆ ನಗೆಯ ಹಾಡುನಟಿ ಸುಜಾತಾ
ವರ್ತಮಾನದ ವೃತ್ತಿಪರ ನಾಟಕ ಲೋಕದಲ್ಲಿ ರಂಗನಟಿ ಜೇವರ್ಗಿ ಸುಜಾತಾಗೆ ಸುಭದ್ರವಾದ ಸ್ಥಾನಮಾನ. ನಟಿಯಾಗಿ, ಸುಮಧುರ ಹಾಡುಗಾರ್ತಿಯಾಗಿ, ನಾಟಕ ಕಂಪನಿ ಒಡತಿಯಾಗಿ ಆಕೆಗೆ ಅಂತಹದ್ದೊಂದು ವಿಶಿಷ್ಟ ಹೆಸರು. ನಿಸ್ಸಂದೇಹವಾಗಿ ಸುಜಾತಾ ರಂಗನಾಟಕಗಳ ಹಾಡು, ಅಭಿನಯಕ್ಕೆ ಪರಿಪಕ್ವಗೊಂಡ ಕಲಾವಿದೆ. ಅಷ್ಟಕ್ಕೂ ನಾಟಕವೆಂಬುದೇ ಧ್ವನಿ ಮತ್ತು ದೇಹಕೇಂದ್ರಿತ ಕಲೆ. ಮೇಲಾಗಿ ಸುಜಾತಾ ಹುಟ್ಟಿ ಬೆಳೆದದ್ದೇ ನಾಟಕ ಕಂಪನಿಯೆಂಬ ರಂಗಶಾಲೆಯಲ್ಲಿ. ಜೇವರ್ಗಿ ರಾಜಣ್ಣ ಮತ್ತು ಪ್ರೇಮಾ ಇವರು ಸುಜಾತಾಳ ಅಪ್ಪ ಅಮ್ಮ. ಅವರಿಬ್ಬರೂ ಕಷ್ಟಪಟ್ಟು ಕಟ್ಟಿ ಬೆಳೆಸಿದ್ದು ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯಸಂಘ.
ಅಂತಹ ನಾಟಕ ಕಂಪನಿಯ ರಂಗ ತೊಟ್ಟಿಲಲ್ಲಿ ಹುಟ್ಟಿ, ರಂಗಜೋಗುಳದ ಹಾಡುಗಳನ್ನು ಕೇಳಿ ಬೆಳೆದವಳು ನಮ್ಮ ರಂಗನಟಿ ಸುಜಾತಾ. ಪರಂಪರಾಗತ ವೃತ್ತಿ ನಾಟಕ ಕಂಪನಿಗಳೆಂದರೆ ಪ್ರಯೋಗಶೀಲ ರೆಪರ್ಟರಿಗಳೇ ಆಗಿರುತ್ತವೆ. ಆಧುನಿಕ ರಂಗಪ್ರಯೋಗ ಶಾಲೆಗಳು ಪರಂಪರೆಯ ನಾಟಕ ಕಂಪನಿಗಳಿಂದ ಕಲಿಯುವುದು ಕಂಡಾಪಟಿ ಇದೆ. ಹಾಗಂತ ವರ್ತಮಾನದ ನಾಟಕ ಕಂಪನಿಗಳು ರಂಗಸಂಸ್ಕೃತಿ ಪರಂಪರೆಯ ಚಲನಶೀಲತೆ ಉಳಿಸಿಕೊಂಡಿವೆಯೆಂದು ಹೇಳಲಾರೆ. ಸಾಂಸ್ಕೃತಿಕ ಸ್ವಾಯತ್ತತೆ ಉಳಿಸಿಕೊಳ್ಳುವ ಅಗತ್ಯತೆ ಸಮಗ್ರ ರಂಗಭೂಮಿಯ ಆದ್ಯತೆಯಾಗಬೇಕಿದೆ. ರಂಗಭೂಮಿ ಮಾತ್ರವಲ್ಲ ಇತರೆ ಎಲ್ಲಾ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸ್ವಾಯತ್ತತೆಯ ಹುಡುಕಾಟ ಮುಖ್ಯವಾಗಿದೆ.
ನಾಟಕ ಕಂಪನಿಗಳಲ್ಲಿ ಹುಟ್ಟಿ ಬೆಳೆಯುವುದೆಂದರೆ ಸಹಜವಾಗಿ ಕಂಪನಿಯಂಗಳ, ರಂಗಪರಿಸರದ ಗಾಳಿಯುಂಡು, ಅದರ ಎದೆಹಾಲು ಕುಡಿದು ಓಡಾಡಿ ಬೆಳೆಯುವ ನಿಸರ್ಗ ಸುಬಗ ವಾತಾವರಣ. ಅಂತೆಯೇ ಅಲ್ಲಿ ಅರಳಿನಿಂತ ಅಭಿಜಾತ ಪರಿಮಳದ ಪಾರಿಜಾತಗಳು ನೂರಾರು. ಸುಜಾತಾ ಅಂತಹ ಪರಿಮಳದ ಹೂ ಪಕಳೆ. ಒಂದುಕಾಲಕ್ಕೆ ವೃತ್ತಿ ನಾಟಕ ಕಂಪನಿಗಳೆಂದರೆ ಸುಗಂಧ ಸಂಸ್ಕೃತಿ ಸೂಸುವ ಹೂದೋಟಗಳೇ ಆಗಿದ್ದವು. ಇಂತಹ ರಂಗಪರಿಮಳದ ನೂರಕ್ಕೂ ಹೆಚ್ಚು ನಾಟಕ ಕಂಪನಿಗಳಿಗೆ ಪೋಷಣೆಯ ಸಂಜೀವಿನಿ ಬೆಟ್ಟವಾದುದು ದಾವಣಗೆರೆ. ಈ ಊರಲ್ಲಿ ಕ್ಯಾಂಪ್ ಮಾಡಿದ ನಾಟಕ ಕಂಪನಿಗಳಿಗೆ ನಷ್ಟದ ಮಾತೆಂಬುದೇ ಇಲ್ಲ.
ಅಂತೆಯೇ ೨೦೦೮ ರಲ್ಲಿ ಕ್ಯಾಂಪ್ ಮಾಡಿದ ಜೇವರ್ಗಿ ರಾಜಣ್ಣನ ಕಂಪನಿಗೂ ಹೊಸದೊಂದು ತಿರುವು ನೀಡಿದ್ದು ದಾವಣಗೆರೆ. ಅವರ ಕಂಪನಿಯ “ಕುಂಟಕೋಣ ಮೂಕ ಜಾಣ” ನಾಟಕದ ನಿರಂತರ ನಾಲ್ಕುನೂರಕ್ಕೂ ಅಧಿಕ ಪ್ರದರ್ಶನಗಳು ಈ ಊರಲ್ಲಿ ಜರುಗಿದವು. ದಿನದಿಂದ ದಿನಕ್ಕೆ ನಾಟಕದ ನಾಗಾಲೋಟ. ಒಂದು ಕೆಟ್ಟ ಗಳಿಗೆಯಲ್ಲಿ ಕಂಪನಿಗೆ ಬೆಂಕಿ ತಗುಲಿ ರಂಗ ಬದುಕಿಗೆ ತೀವ್ರ ಪೆಟ್ಟು ಬಿತ್ತು. ದಾವಣಗೆರೆಯ ಸಹೃದಯ ಜನರು ಸುಟ್ಟುಹೋದ ಜಾಗದಲ್ಲೇ ಮತ್ತೆ ಹೊಸದಾಗಿ ರಂಗಸಜ್ಜಿಕೆ ಕಟ್ಟಿಕೊಟ್ಟರು. ಕಂಪನಿ ಪುನಃಶ್ಚೇತನ ಪಡೆಯಿತು. ತದನಂತರದ ಜೇವರ್ಗಿ ಕಂಪನಿಯದು ಪವಾಡ ಸದೃಶ ಬೆಳವಣಿಗೆ. ಅದೀಗ ಕರ್ನಾಟಕದ ನಂಬರ್ ಒನ್ ಕಂಪನಿ. ಕಲಾವಿದೆ ಸುಜಾತಾ ಬಾಳು ಮತ್ತು ರಂಗಬಾಳಿಗೆ ಹೊಸ ತಿರುಳು ಒದಗಿಸಿದ್ದೇ ದಾವಣಗೆರೆ. ಆಕೆ ನಟಿಯಾಗಿ ಮತ್ತು ಹಾಡುನಟಿಯಾಗಿ ರೂಪುಗೊಂಡದ್ದು ದಾವಣಗೆರೆ ಕ್ಯಾಂಪಿನಲ್ಲೇ.
ಸಂಚಾರಿ ನಾಟಕ ಕಂಪನಿಗಳಿಗೆ ಒಂದೊಂದು ಊರಿನ ಕ್ಯಾಂಪುಗಳು ಕಲಿಸಿಕೊಡುವ ಪಾಠ ಪ್ರಾಯಶಃ ಯಾವುದೇ ರೆಪರ್ಟರಿ, ವಿಶ್ವವಿದ್ಯಾಲಯ ಪುಸ್ತಕದ ಪಾಠಗಳು ಮತ್ತು ರಂಗಪಠ್ಯಗಳು ಖಂಡಿತಾ ಕಲಿಸಿಕೊಡಲಾರವು. ಸುಡು ಸುಡುವ ಸತ್ಯಾನುಭವಗಳ ಕುಲುಮೆಯೇ ನಾಟಕ ಕಂಪನಿಗಳ ಅಲೆಮಾರಿ ಕ್ಯಾಂಪುಗಳು. ಅಂತಹ ದಿವಿನಾದ ಅನುಭವಗಳ ಪರಿಪಾಕದಲ್ಲಿ ರಂಗಬದುಕು ರೂಪಿಸಿಕೊಂಡ ಕಲಾವಿದೆ ಸುಜಾತಾ. ಹಾಗೆ ನೋಡುವುದಾದರೆ ಕೇವಲ ಎರಡು ದಶಕಗಳ ಅವಧಿಯಲ್ಲಿ ವೃತ್ತಿ ರಂಗಭೂಮಿಯ ಏರಿಳಿತಗಳ ಗ್ರಾಫಿಕ್ ನೋಡುತ್ತಲೇ ಬೆಳೆದುನಿಂತು ಪ್ರಸ್ತುತ ವೃತ್ತಿ ರಂಗತಾರೆಯಾಗಿರುವುದು ಅಚ್ಚರಿ. ಸುಟ್ಟುಹೋದ ರಂಗಪರಿಕರಗಳಲ್ಲಿ ಅವಳ ಮದುವೆ ಸೀರೆಯೂ ಸುಟ್ಟು ಹೋಗಿತ್ತು. ಆಕೆ ಖಿನ್ನತೆಗೀಡಾಗಲಿಲ್ಲ. ಸುಟ್ಟುಹೋದದ್ದು ಉಡುವ ಬಟ್ಟೆ ಅಷ್ಟೇ. ಅದು ಸೃಜನಶೀಲತೆ ಅಲ್ಲ ಎಂಬ ಆತ್ಮವಿಶ್ವಾಸ. ತನ್ನಂತರಂಗದ ಪ್ರತಿಭಾ ಪ್ರೀತಿಯನ್ನು ಮುಗುಳುನಗೆಯೊಂದಿಗೆ ಸದಾ ಹೊರಸೂಸುವ ಧಾರ್ಷ್ಟ್ಯ. ಪ್ರಾಯಶಃ ಅದು ಬದುಕಿನ ಪ್ರೀತಿಯೂ ಹೌದು.
ಸುಜಾತಾ, ಮುಗುಳು ಮಲ್ಲಿಗೆ ನಗೆಯ ಮೋಹಕ ಸುಂದರಿ. ಅವಳ ಅಭಿನಯವೆಂದರೆ ಉಸಿರಗಂಧ ಸೋಂಕಿನ ಭಾವದಲೆ ಮತ್ತು ಪ್ರೀತಿಯ ಮೊರೆತಗಳ ಮೊತ್ತ. ಪಾಯ್ ಪಾಯ್ ಗುಂಗರಪಾಯಿ ಎಂದು ಪುಟ್ಟ ಪುಟ್ಟ ಹೆಜ್ಜೆಗಳಿಡುತ್ತಾ , ಹಾಡುತ್ತಾ ಕುಣಿಯುತ್ತಾ ಇಂದು ಪ್ರಬುದ್ಧ ಅಭಿನೇತ್ರಿಯಂತೆ ಬೆಳೆದು ನಿಂತಿದ್ದಾಳೆ. ಸಾಮಾನ್ಯವಾಗಿ ನಾಟಕಗಳಲ್ಲಿ ಹಿನ್ನೆಲೆ ಗಾಯನಕ್ಕೆ ಕಲಾವಿದರ ತುಟಿ ನಟನೆಯೇ ಸಾರ್ವತ್ರಿಕ ರೂಢಿ. ಸುಜಾತಾ ಖುದ್ದು ಉತ್ತಮ ಗಾಯಕಿಯೇ ಆಗಿದ್ದು ತನ್ನ ಸುಮಧುರ ಕಂಠದ ಮಾಂತ್ರಿಕ ಶಕ್ತಿಯಿಂದ ನೇರವಾಗಿ ಪ್ರೇಕ್ಷಕ ಶ್ರೋತೃಗಳ ಹೃನ್ಮನ ಗೆದ್ದಿದ್ದಾಳೆ. ಆದಾಗ್ಯೂ ಹಾಸ್ಯನಟಿಯೆಂದೇ ಪ್ರಸಿದ್ಧಿ. ಹಾಗೆ ಗುರುತಿಸಲಾಗುವ ಸುಜಾತಾ ವಿನೋದಮುಖಿ ಮಾತ್ರವಲ್ಲ, ಗಂಭೀರ ಮತ್ತು ಕರುಣಾ ಸೇರಿದಂತೆ ರಸಾನುಭೂತಿಯ ನವರಸಗಳಿಗೆ ರೂಪಿಸಿಕೊಂಡ ಪ್ರತಿಭಾಶಾಲಿ. ಆದರೆ ಕುಂಟಕೋಣ ಮೂಕಜಾಣ ನಾಟಕ ಫುಲ್ ಕಾಮೆಡಿ ನಾಟಕವೆಂದೇ ಹದಿನೈದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳ ದಾಖಲೆ ನಿರ್ಮಿಸಿದೆ. ಈ ರಂಗಸಾಧನೆಯ ನೇಪಥ್ಯದ ರಂಗಶಕ್ತಿಯಾಗಿ ಸುಜಾತಾ ಎಂಬ ಸಜ್ಜೆಬಣ್ಣದ ರಂಗ ಪಾರಿಜಾತವಿದೆ.
ಅವರದು ಪ್ರೇಮವಿವಾಹ. ಪಚ್ಚಿ ಎಂಬ ನಿಕ್ನೇಮ್ ಯುವಕ ಪ್ರಕಾಶ್ ಗುಬ್ಬಿ ಅವಳ ಬಾಳಸಂಗಾತಿ. ಗುಬ್ಬಿ ಕುಟುಂಬದ ರಂಗಬಳ್ಳಿ ನಾಗೇಶ್ ಗುಬ್ಬಿ ಅವರ ಮಗ. ಅವನು ಜೇವರ್ಗಿ ನಾಟಕ ಕಂಪನಿಯ ಪ್ಯಾಡ್ ನುಡಿಸುವ ಕಡಲೇಬೇಳೆ ಬಣ್ಣದ ಸುರ ಸುಂದರ. ನಿತ್ಯವೂ ಸ್ಟೇಜಿನಲ್ಲಿ ಹಾಡಿ ಕುಣಿಯುತ್ತಿದ್ದ ಅವಳ ಹಾಡು ನೃತ್ಯಗಳಿಗೆ ನಿತ್ಯವೂ ಸಂಗೀತದ ಸಾಥ್ ನೀಡುತ್ತಿದ್ದುದೇ ಗುಬ್ಬಿ ಪ್ರಕಾಶ್. ಹಾಗೆ ತನ್ನೆದುರು ನಟಿಸುವ ನಟಿ ಸುಜಾತಳ ಹಾಡು ಅಭಿನಯಕ್ಕೆ ತಕ್ಕನಾದ ಸಂಗೀತ ನುಡಿಸುತ್ತಲೇ ಅವಳ ಹೃದಯತಂತಿ ಲಯಬದ್ಧವಾಗಿ ಮೀಟಿದ. ತನ್ಮೂಲಕ ಸುಜಾತಳ ಹೃದಯಚಿತ್ತ ಗೆದ್ದ ಸ್ಫುರದ್ರೂಪಿ ಪಚ್ಚಿ. ಪರಸ್ಪರ ಇಬ್ಬರಲ್ಲೂ ಸ್ನೇಹಶೀಲ ಸಾಕ್ಷೀಭಾವದ ಸೆಳೆತ.
ರಂಗದ ಮೇಲಿನ ಅವಳ ಜುಳು ಜುಳು ನಿನಾದದ ಹಾಡು, ಮನೋಜ್ಞ ಅಭಿನಯದ ಸೆಳೆತಕ್ಕೆ ರಂಗದ ಮುಂದೆ ಅವನ ಪುಳಕ ಪರಾಕಾಷ್ಠೆಯ ಸಂಗೀತ ಸಾಥ್. ಹೀಗೆ ಅವರಿಬ್ಬರಲ್ಲಿ ಅಂಕುರಿಸಿದ ಸ್ನೇಹ ಪ್ರೀತಿಯಾಗಿ ಮದುವೆಯೆಂಬ ಬಾಳ ಸಾಂಗತ್ಯಕ್ಕೆ ಕೊಂಡೊಯ್ದಿತು. ವೃತ್ತಿ ರಂಗಭೂಮಿಯ ರಂಗಕಾಶಿಯೇ ಆಗಿರುವ ಗದುಗಿನ ಪುಟ್ಟಜ್ಜನ ದಿವ್ಯ ಸಾನಿಧ್ಯದಲ್ಲಿ ಹಾರ ಬದಲಾಯಿಸುವ ಮೂಲಕ ಸರಳವಾದ ಮದುವೆ ಮಾಡಿಕೊಂಡರು. ಲಗ್ನಮಾಡಿಕೊಂಡ ಅಂದು ಸಂಜೆಯೇ ದಾವಣಗೆರೆಗೆ ಬಂದು ಎಂದಿನಂತೆ ರಂಗಪ್ರದರ್ಶನದಲ್ಲಿ ಪಾಲ್ಗೊಂಡು ಪಾತ್ರ ನಿರ್ವಹಿಸಿದ್ದ ಅಗ್ನಿದಿವ್ಯದ ನೆನಪು.
ಜೇವರ್ಗಿ ಸುಜಾತಾ ಅವರದು ರಂಗಸಂಸ್ಕೃತಿಯ ಕುಟುಂಬ. ಅವಳ ತಂಗಿ ನೀಲಾ (ಮಜಾ ಟಾಕೀಸ್ ಖ್ಯಾತಿ), ಅಪ್ಪ ಜೇವರ್ಗಿ ರಾಜಣ್ಣ ಮತ್ತು ಅವರ ತಾಯಿ ಪ್ರೇಮಾ, ಬಾಳಸಂಗಾತಿ ಪ್ರಕಾಶ್… ಹೀಗೆ ಅವರೆಲ್ಲರೂ ಒಂದೇಸರದ ಮುತ್ತಿನಂತಹ ರಂಗ ಚಿಂತಾಮಣಿಗಳು. ಬಿ. ಎಸ್. ಆರ್. ನಾಟ್ಯಸಂಘ ಗುಬ್ಬಿ ಹೆಸರಿನ ನಾಟಕ ಕಂಪನಿ ಕಟ್ಟಿಕೊಂಡು ಯಶಸ್ಸು ಕಂಡಿದ್ದಾರೆ. ಪ್ರಸ್ತುತ ನಾಟಕ ಕಂಪನಿಯ ಒಡತಿಯಾಗಿ ಜೇವರ್ಗಿ ಸುಜಾತಾ ಮತ್ತೊಂದು ಮೈಲುಗಲ್ಲು ಸಾಧನೆ.
ನಾಟಕಗಳ ಜಾತ್ರೆಯೆಂದು ಖ್ಯಾತಿ ಪಡೆದಿರುವ ಬನಶಂಕರಿ ಜಾತ್ರೆಯಲ್ಲಿ ಹಲವು ರಂಗಪ್ರಯೋಗಗಳ ಮೂಲಕ ದಾಖಲೆ ಬರೆದಿರುವುದುಂಟು. ಕನ್ನಡ ಸಂಸ್ಕೃತಿಯ ರಾಜಧಾನಿಗಳೆಂದೇ ಕರೆಯಲಾಗಿರುವ ಮೈಸೂರು ಮತ್ತು ಧಾರವಾಡದಲ್ಲಿ ‘ಕುಂಟಕೋಣ ಮೂಕಜಾಣ’ ನೂರಾರು ಪ್ರಯೋಗಗಳ ರೆಕಾರ್ಡ್ ನಿರ್ಮಿಸಿದೆ. ಈಗ ಅವರ ರಂಗವಾಸ್ತವ್ಯ ರಾಜಧಾನಿ ಬೆಂಗಳೂರಿನ ಗುಬ್ಬಿವೀರಣ್ಣ ರಂಗಮಂದಿರದಲ್ಲಿ. ಅಲ್ಲಿಯೂ ಆರಂಭದಲ್ಲಿ ಕುಂಟಕೋಣ ಮೂಕಜಾಣ ನಾಟಕ ಪ್ರಯೋಗ. ಅದು ರಾಜಧಾನಿಯಲ್ಲಿ ಇನ್ನೂರಕ್ಕೂ ಹೆಚ್ಚು ಪ್ರದರ್ಶನಗಳ ದಾಖಲೆ ಕಂಡಿತು.
ಅಂದಿನ ಹಳೆಯ ಹೈದರಾಬಾದ್ ಕರ್ನಾಟಕ ಮತ್ತು ಇಂದಿನ ಕಲ್ಯಾಣ ಕರ್ನಾಟಕ ಹೆಸರಿನ ಜೇವರ್ಗಿಯಂತಹ ಅತ್ಯಂತ ಹಿಂದುಳಿದ ಪ್ರದೇಶ ಮತ್ತು ಸಮುದಾಯದ ಪ್ರತಿಭೆ ರಾಜ್ಯಮಟ್ಟದಲ್ಲಿ ರಂಗಸಂಸ್ಕೃತಿಯ ಹಿರಿಮೆ ಮೆರೆದಿರುವುದು ಅಕ್ಷರಶಃ ಹೆಮ್ಮೆಯ ಸಂಗತಿ. ಸುಜಾತಾ ನಟಿಯಾಗಿ ಮಾತ್ರವಲ್ಲ, ರಂಗಗಾಯಕಿಯಾಗಿ, ರಂಗಸಂಸ್ಥೆ ನಡೆಸುವ ಒಡತಿಯಾಗಿ ವಿಭಿನ್ನ ಅನುಭವಗಳಿಗೆ ಪಾತ್ರಳು. ಗೃಹಿಣಿಯಾಗಿ, ಇಬ್ಬರು ಮುದ್ದಾದ ಮಕ್ಕಳ ತಾಯಿಯಾಗಿ, ಸಾರ್ಥಕ್ಯ ಮತ್ತು ಸಂತೃಪ್ತ ರಂಗಭಾವ. ತಾನಿನ್ನೂ ರಂಗಭೂಮಿಯಲ್ಲಿ ಕಲಿಯುವುದು ತುಂಬಾ ಇದೆ. ಈಗ ಕಲಿತಿರುವುದು ತೃಣಮಾತ್ರ ಎಂಬ ತುಂಬಿ ತುಳುಕುವ ವಿನಯವಂತಿಕೆ. ಹೌದು ಕಲಾವಿದರಾಗುವುದೆಂದರೆ ವಿನಯವಂತರಾಗುವುದು ಮತ್ತು ಅಪ್ಪಟ ಮನುಷ್ಯರಾಗುವುದು.
–ಮಲ್ಲಿಕಾರ್ಜುನ ಕಡಕೋಳ
9341010712