ಹೊಯಿದವರೆನ್ನ ಹೊರೆದವರೆಂಬೆ
ಹೊಯಿದವರೆನ್ನ ಹೊರೆದವರೆಂಬೆ,
ಬಯ್ದವರೆನ್ನ ಬಂಧುಗಳೆಂಬೆ
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ,
ಆಳಿಗೊಂಡವರೆನ್ನ ಆಳ್ದವರೆಂಬೆ,
ಜರಿದವರೆನ್ನ ಜನ್ಮಬಂಧುಗಳೆಂಬೆ,
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ
ಕೂಡಲಸಂಗಮದೇವಾ.
– ಬಸವಣ್ಣ
ಬಸವಣ್ಣ ಜಗತ್ತಿನ ಒಬ್ಬ ಶ್ರೇಷ್ಠ ಸಮಾಜವಾದಿ ಹಾಗೂ ದಾರ್ಶನಿಕ , ತನ್ನನ್ನು ತಾನು ಸಮಾಜಕ್ಕೆ ಜಂಗಮಕ್ಕೆ ತೊಡಗಿಸಿಕೊಂಡವರು ಇನ್ನೊಬ್ಬರಿಲ್ಲ . ಸಮಸಮಾಜ ಸರ್ವರಿಗೂ ಸಮಬಾಳು ಸರ್ವರಿಗೂ ಸಮ ಪಾಲು ಎನ್ನುವ ಜಾಗತಿಕ ಸಮಾಜವಾದಿ ಚಳುವಳಿಯ ಆರಂಭಿಕ ಸೂತ್ರದಾರ ಬಸವಣ್ಣ .
ಹೊಯಿದವರೆನ್ನ ಹೊರೆದವರೆಂಬೆ
ಸಮಾಜದಲ್ಲಿ ದುಡಿಯುವಾಗ ಅನೇಕ ನೋವು ಸಂಕಟ ಕಷ್ಟಗಳು ಬರುವುದು ಸಹಜ .ಸತ್ಯ ನಿಷ್ಟುರತೆ ಯಾವಾಗಲೂ ಒಂಟಿಯಾಗಿರುತ್ತದೆ. ಸುಳ್ಳು ವಂಚನೆ ವೈಭವಕ್ಕೆ ಪಾತ್ರವಾಗುತ್ತದೆ.
ಸಾಮಾಜಿಕ ಕಾರ್ಯದಲ್ಲಿ ತೊಡಗಿದಾಗ ತಮ್ಮನ್ನು ಬಡೆದವರನ್ನು ಹೊಯ್ದವರನ್ನು ಹೊರಗಿನವರು ಎಂದೆನ್ನುವದಿಲ್ಲ ತಮ್ಮನ್ನು ತಿದ್ದಲು ಹೊಯ್ದಿರಬೇಕು ಎಂದೆನ್ನುತ್ತಾರೆ ಬಸವಣ್ಣ . ಸಮಾಜಮುಖಿ ಕೆಲಸಗಳನ್ನು ಮಾಡುವಾಗ ಅನೇಕರು ಬಸವಣ್ಣನವರಿಗೆ ಹಿಂಸೆ ನೀಡಲು ಮುಂದಾಗಿರಬಹುದು. ಇವರ ವೈಚಾರಿಕ ಕ್ರಾಂತಿಯನ್ನು ಹತ್ತಿಕ್ಕುವ ಮತೀಯ ಶಕ್ತಿಗಳಿಂದ ಹೊಡೆಯುವ ಬಡಿಯುವ ಬೆದರಿಕೆಗಳು ಬಂದಿರಬಹುದು.ಅಂತವರನ್ನು ತಾವು ಹೊರಗಿನವರು ಎಂದು ತಿಳಿಯುವದಿಲ್ಲ ಎಂದಿದ್ದಾರೆ.
ಬಯ್ದವರು ತಮ್ಮ ಬಂಧುಗಳೆಂಬೆ
ಬಯ್ದವರು ತಮ್ಮ ಬಂಧುಗಳೆಂಬೆ ಎಂದೆನ್ನುತ್ತಾರೆ ಬಸವಣ್ಣ . ಬುದ್ಧಿ ಮಾತನ್ನು ಹೇಳಲು ನೆರೆ ಹೊರೆಯವರು ಹೀಗೆ ಬಯ್ಯುವುದು ಸಹಜ ಹೀಗಾಗಿ ಸಮಾಧಾನದಿಂದ ಅವರ ಟೀಕೆ ಬೈಗುಳಗಳನ್ನು ಸ್ವೀಕರಿಸುವ ಬಸವಣ್ಣ ಅವರನ್ನು ತನ್ನ ಬಂಧುಗಳೆಂದು ನಿರ್ಣಯಿಸುತ್ತಾನೆ .
ಬಸವಣ್ಣ ಒಬ್ಬ ಶ್ರೇಷ್ಠ ಸಮಾಜವಾದಿ ಸಾಮಾಜಿಕ ಇಂತಹ ತಾರತಮ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಜನಸಾಮಾನ್ಯರಿಗೆ ಬುದ್ಧಿ ಬೋಧೆ ಹೇಳದೆ ತನ್ನನ್ನೇ ಪ್ರಾತಿನಿಧಿತ್ವವಾಗಿ ಪ್ರತಿಪಾದಿಸಿ ತನಗೆ ಯಾರಾದರೂ ಬೈದು ಬುದ್ಧಿ ಹೇಳಿದರೆ ಅವರನ್ನು ತನ್ನ ಬಂಧುಗಳೆಂದು ಅಪ್ಪಿಕೊಳ್ಳುತ್ತೇನೆ ಎಂದಿದ್ದಾರೆ ಬಸವಣ್ಣ.
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ,
ನಿಂದಿಸಿದವರು ತನ್ನ ಹೆತ್ತ ತಂದೆ ತಾಯಿಗಳು ಎಂದು ಭಾವಿಸುವದಾಗಿ ಹೇಳುವ ಬಸವಣ್ಣನವರು ನಿಂದಿಸುವ ಮನಗಳ ವಿರೋಧಕ್ಕೆ ಹೋಗದೆ ಅವರನ್ನು ಅಪ್ಪಿಕೊಂಡು ಸಮಾಜ ಮುಖಿ ಸೇವೆಗೆ ತರುವ ಪ್ರಾಮಾಣಿಕ ಪ್ರಯತ್ನ ಬಸವಣ್ಣನವರದ್ದು.ನಿಂದಿಸಿದವರನ್ನೇ ತಂದೆ ತಾಯಿ ಎಂದಾಗ ಎಂತಹ ಕಲ್ಲು ಮನಸ್ಸು ಪರಿವರ್ತನೆಗೊಳ್ಳದೆ ಇರದು. ಇವರ ಪ್ರಗತಿಪರ ವೈಚಾರಿಕ ಚಳುವಳಿಗೆ ಅನೇಕ ನಿಂದನೆಗಳು ಬಂದಿವೆ ಆದರೆ ಅವುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ನಿಂದಕರೇ ತನ್ನ ತಂದೆ ತಾಯಿಗಳು ಎಂದಿದ್ದಾರೆ ಬಸವಣ್ಣ.
ಆಳಿಗೊಂಡವರೆನ್ನ ಆಳ್ದವರೆಂಬೆ
ಆಡಿಕೊಳ್ಳುವ ಜನರ ಕಟು ಬಿರುಸಿನ ಮಾತುಗಳನ್ನು ಆಡುವವರು ತಮ್ಮ ಆಪ್ತ ಬಂಧುಗಳೆಂದು ಬಸವಣ್ಣ ಹೇಳುತ್ತಾರೆ.ಒಂದು ಉತ್ತಮ ಕಾರ್ಯ ನಡೆಯುವಾಗ ಸಾಧಕನ ಭಕ್ತನ ಮನೋ ಸ್ಥೈರ್ಯವನ್ನು ಕಡಿಮೆ ಮಾಡುವ ಸಲುವಾಗಿ ಕಟು ಟೀಕೆ ಹಿಂದೆ ಅಪಹಾಸ್ಯದ ಮಾತುಗಳಿಂದ ಆಡಿ ಕೊಳ್ಳುವುದು ಸಹಜ . ಇಂತಹ ಆಡಿ ಕೊಳ್ಳುವ ಮನಸ್ಥಿತಿ ಇದ್ದವರನ್ನು ತನ್ನ ಆಳ್ದವರು,ಆಳುವವರು ಯಜಮಾನಿಕೆ ನಡೆಸುವವರು ಎಂದಿದ್ದಾನೆ ಬಸವಣ್ಣ.
ಜರಿದವರೆನ್ನ ಜನ್ಮಬಂಧುಗಳೆಂಬೆ
————————————–
ತಮ್ಮ ಕಾರ್ಯದಲ್ಲಿ ಜರಿದವರು ಎದುರು ಹಳಿದವರು ತಮ್ಮ ಜನ್ಮ ಬಂಧುಗಳೆಂಬೆ ಎಂದಿದ್ದಾರೆ. ಒಂದು ವ್ಯವಸ್ಥೆ ಜಿಡ್ಡು ಗಟ್ಟಿ ಮೃತಪ್ರಾಯವಾಗಬಹುದಾದ ಸಂದರ್ಭದಲ್ಲಿ ಹೊಸ ಆಲೋಚನೆ ವಿಚಾರಗಳಿಂದ ಕ್ರಾಂತಿಯಾಗುವ ಮುನ್ಸೂಚನೆ ಕಂಡು ಬಂದಲ್ಲಿ ಸಾಂಪ್ರದಾಯಿಕ ಮನಸ್ಸುಗಳು ಚಿಂತಕರನ್ನು ಜರಿಯುವುದು ಸರ್ವೇ ಸಮಾನ್ಯವಾದ ಸಂಗತಿಯಾಗಿದೆ. ಇಂತಹ ಜರಿಯುವ ಜನರನ್ನು ತನ್ನ ಜನ್ಮ ಬಂಧುಗಳೆಂಬೆ ಎಂದೆನ್ನುತ್ತಾ ಎಲ್ಲರನ್ನು ಕರೆದೊಯ್ಯುವ (inclusiveness ) ಬಸವಣ್ಣನವರದ್ದು.ಸಂಘರ್ಶ್ಯ ಸಾಮರಸ್ಯಕ್ಕೆ ಎಂಬುದು ಬಸವಣ್ಣನವರ ಸ್ಪಷ್ಟವಾದ ನಂಬಿಕೆ.
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ
———————————————————
ಹೊಗಳಿಕೆಗೆ ವ್ಯಕ್ತಿ ತನ್ನ ಕ್ರಿಯಾಶೀಲತೆ ಕಳೆದುಕೊಳ್ಳುತ್ತಾನೆ ಅತಿಯಾದ ಹೊಗಳಿಕೆ ಮನುಷ್ಯನ ವ್ಯಕ್ತಿತ್ವವನ್ನು ಕುಬ್ಜವನ್ನಾಗಿ ಮಾಡುತ್ತದೆ. ಬಸಣ್ಣನಿಗೆ ಬಿಜ್ಜಳ ಅನೇಕ ಆಮಿಷಗಳನ್ನು ಒಡ್ಡಿದಾಗಲೂ ತನಗೆ ಯಾವುದೇ ಪದವಿ ಹುದ್ದೆ ಬೇಡ ಎಂದೆನ್ನುವ ಕಿಂಕರ ಭಾವದಿಂದ ಸಮಾಜವನ್ನು ಕಟ್ಟಿದನು. ಬ್ರಹ್ಮ ಪದವಿಯನೊಲ್ಲೆ ವಿಷ್ಣು ಪದವಿಯನೊಲ್ಲೆ ರುದ್ರಪದವಿಯನೊಲ್ಲೆ ನಿಮ್ಮ ಶರಣರ ಪಾದವನರಿಯದ ಮಹಾಪದವಿಯ ಕರುಣಿಸು ಕೂಡಲ ಸಂಗಮದೇವ ಎಂದು ಬಿನ್ನೈವಿಸಿದ್ದಾನೆ
ಆದರೆ ಬಸವಣ್ಣ ತಮ್ಮನ್ನು ಹೊಗಳಿದವರನ್ನು ಬಂಗಾರದ ಶೂಲಕ್ಕೆ ಹಾಕಿ ಕೊಲ್ಲುವವರು ಎಂದಿದ್ದಾರೆ.
ಬಸವಣ್ಣ.ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕ್ಕಿಕ್ಕುವರು ಎಂದಿದ್ದಾನೆ ಬಸವಣ್ಣ.
ಸಾಮಾಜಿಕ ಸಂಘರ್ಷದಲ್ಲಿ ಬಸವಣ್ಣ ಇಂತಹ ಅನೇಕ ಅವಮಾನ ಆತಂಕಗಳನ್ನು ಎದುರಿಸಿ ಕಾಲ ಕ್ರಮೇಣ ಪ್ರೀತಿಗೆ ಹೊಗಳಿಕೆಗೆ ಪಾತ್ರರಾಗಿರಬಹುದು .ಅದೇ ಕಾರಣಕ್ಕೆ ತಮ್ಮನ್ನು ಹೊಯ್ದವರು ಬಯ್ದವರು ಜರಿದವರು ನಿಂದಿಸಿದವರು ತಮ್ಮ ಬಂಧು ಬಳಗವೆಂದೆನ್ನುತ್ತ ಶ್ರೇಣೀಕೃತವಾದ ಸಮಾಜದಲ್ಲಿ ವರ್ಗ ವರ್ಣ ಆಶ್ರಮ ರಹಿತ ಲಿಂಗ ಭೇದ ರಹಿತ ಅತ್ಯಂತ ಸುಂದರ ಮುಕ್ತ ಸಮಾಜವನ್ನು ಬಸವಣ್ಣ ಮತ್ತು ಶರಣರು ಕಟ್ಟಿದರು.ಆದರೆ ಹೊಗಳಿ ತಮ್ಮ ಕಾರ್ಯ ಸಾಧನೆ ಮಾಡುವ ಕಾರ್ಯ ಸಾಧಕರು ಅವಕಾಶವಾದಿಗಳು ತಮ್ಮನ್ನು ಹೊನ್ನಶೂಲಕ್ಕೆ ಇಕ್ಕುವರು ಎಂಬ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ ಬಸವಣ್ಣನವರು.
ಬದುಕಿನ ಅನುಭವದ ನೆಲೆಗೆ ಸಿಲುಕಿದಾಗ ಹೃದಯಪೂರ್ವಕವಾಗಿ ಬಂದ ಅನುಭಾವದ ನುಡಿಗಳೇ ವಚನಗಳು. ಸಮಾಜದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ಬಂದಾಗ ಜಂಗಮ ಸಮಾಜವನ್ನು ದೋಷಿಸದೆ ಪ್ರೀತಿಯಿಂದ ಸ್ವೀಕರಿಸುವ ವ್ಯವದಾನವನ್ನು ನಾವು ಬಸವಣ್ಣನವರವಚನದಿಂದ ಕಲಿಯಬೇಕು.
ಡಾ.ಶಶಿಕಾಂತ ಪಟ್ಟಣ ರಾಮದುರ್ಗ