ಪುಣೆಯಿಂದ ಎಲ್ಫೆಂಟಾ ಕೆವ್ಸ್ ಎನ್ನುವ ಅದ್ಭುತ ದ್ವೀಪಕ್ಕೆ ಪ್ರವಾಸ…
ಭಾಗ-೨
ಪ್ರಭಾವತಿಯಲ್ಲಿರುವ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋದಾಗ ಜನಜಂಗುಳಿಯಿಂದ ಗಿಜಿಗುಡುತ್ತಿತ್ತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಪ್ರವಾಸಿಗರು ಧರ್ಮದರ್ಶನ ಪಡೆಯಲು ಸರತಿಯ ಸಾಲಿನಲ್ಲಿ ನಿಂತುಕೊಂಡಿದ್ದ ದೃಶ್ಯ ಒಂದು ಕಡೆಯಾದರೆ ನೂರು ರೂಪಾಯಿ ಕೊಟ್ಟು ವಿಶೇಷ ಸರತಿಯ ಸಾಲಿನಲ್ಲಿ ನಿಂತುಕೊಂಡಿದ್ದ ಶ್ರೀಮಂತ ಪ್ರವಾಸಿಗರ ಸರತಿಯ ಸಾಲು ಮತ್ತೊಂದು ಕಡೆ. ಇಷ್ಟೊಂದು ಜನ ಈ ದೇವಾಲಯಕ್ಕೆ ಬರುತ್ತಿರಬೇಕಾದರೆ ಏನಿದರ ಮಹತ್ವ ಎಂದು ಕುತೂಹಲದಿಂದ ಇತಿಹಾಸ ಕೆದಕಿದಾಗ ಈ ಕೆಳಗಿನ ವಿಷಯಗಳು ತಿಳಿದು ಬಂದವು.
ಕ್ರಿಸ್ತಶಕ 1800 ರ ಪೂರ್ವದಲ್ಲಿ 12.5 ಚದರ ಅಡಿ ವಿಸ್ತೀರ್ಣದ ಸಾಧಾರಣ ಇಟ್ಟಿಗೆಯ ಗುಂಬಜಾಕೃತಿಯ ಗೋಪುರವನ್ನು ಒಳಗೊಂಡ ದೇವಸ್ಥಾನವಾಗಿತ್ತಂತೆ. ಈ ಪ್ರದೇಶದ ಅತ್ಯಂತ ಶ್ರೀಮಂತ ದಂಪತಿಗಳಾದ ಲಕ್ಷ್ಮಣ್ ಮತ್ತು ದೇವುಬಾಯಿ ಪಾಟೀಲ ದಂಪತಿಗಳಿಗೆ ಎಷ್ಟೋ ವರ್ಷವಾದರೂ ಮಕ್ಕಳಾಗಿರಲಿಲ್ಲವಂತೆ.ಹೀಗಾಗಿ ನಮಗೆ ಸಂತಾನ ಭಾಗ್ಯ ಪ್ರಾಪ್ತಿಯಾದರೆ ನಿನಗೆ ದೊಡ್ಡ ದೇವಾಲಯವನ್ನು ಕಟ್ಟಿಸುತ್ತೇವೆ ಎಂದು ಗಣೇಶನಿಗೆ ಹರಕೆ ಹೊತ್ತಿದ್ದರಂತೆ. ಮುಂದೆ ಒಂದೆರಡು ವರ್ಷಗಳಲ್ಲಿ ಈ ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಿದ್ದರಿಂದ ಹರ್ಷಿತರಾಗಿ 1801 ರಲ್ಲಿ ಗಣೇಶನ ಮೂರ್ತಿಯ ಸುತ್ತಲೂ ಇದ್ದ ಕಟ್ಟಡವನ್ನು ತೆರವುಗೊಳಿಸಿ 2500 ಚದರ ಅಡಿ ವಿಸ್ತೀರ್ಣದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿ “ಸಿದ್ಧಿವಿನಾಯಕ ದೇವಸ್ಥಾನ”ವೆಂದು ನಾಮಕರಣ ಮಾಡಿದರಂತೆ.
ಮುಂದೆ ಕಾಲಘಟ್ಟದಲ್ಲಿ ಗರ್ಭಗುಡಿಯ ಮೇಲ್ಚಾವಣಿಯ ಒಳಭಾಗದಲ್ಲಿ ಚಿನ್ನದ ಲೇಪನ ಮಾಡಿ, ಅಷ್ಟವಿನಾಯಕನ ಕೆತ್ತನೆಗಳಿರುವ ಸುಂದರವಾದ ಬಾಗಿಲನ್ನು ಗರ್ಭಗುಡಿಗೆ ನಿರ್ಮಿಸಿದ್ದಾರೆ.ದೇವಾಲಯದ ಒಳಗಡೆ ವಿಶಾಲವಾದ ಪ್ರಾಂಗಣ, ಗೋಡೆಗಳಿಗೆ ಬಿಳಿ ಮಾರ್ಬಲ್ ಕಲ್ಲನ್ನು ಹೊಂದಿಸಿ ಆಕರ್ಷಕಗೊಳಿಸಿರುವುದರಿಂದ ನೋಡುಗರ ಕಣ್ಮನವನ್ನು ಸೆಳೆಯುತ್ತದೆ. ದೇವಸ್ಥಾನದ ಮೇಲ್ಭಾಗದಲ್ಲಿ ಸುಂದರವಾದ ಗೋಪುರವನ್ನು ನಿರ್ಮಿಸಿದ್ದು ಗೋಪುರಗಳಿಗೆ ಮೂರು ರೀತಿಯ ಮಾರ್ಬಲಗಳನ್ನು ಹೊಂದಿಸಿರುವುದರಿಂದ ರಾತ್ರಿ ವಿದ್ಯುತ್ ಬೆಳಕಿನಲ್ಲಿ ಒಂದೊಂದು ರೀತಿಯ ಬಣ್ಣದಲ್ಲಿ ಹೊಳೆಯುತ್ತಿರುವುದನ್ನು ನೋಡುವುದು ಆಕರ್ಷಕವಾಗಿರುತ್ತದೆ.1950-60 ದಶಕದವರೆಗೆ ಈ ದೇವಾಲಯಕ್ಕೆ ಪ್ರವಾಸಿಗರ ಸಂಖ್ಯೆ ಸೀಮಿತವಾಗಿತ್ತು.ಕ್ರಮೇಣ ಈ ದೇವಸ್ಥಾನದ ಪ್ರತೀತಿ ಹಬ್ಬುತ್ತಾ ಹಬ್ಬುತ್ತಾ 1975 ರ ವೇಳೆಗೆ ಮಹಾರಾಷ್ಟ್ರವಷ್ಟೇ ಅಲ್ಲದೆ ದೇಶವಿದೇಶಗಳ ಪ್ರವಾಸಿಗರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸತೊಡಗಿದರು. ಈಗ ಪ್ರತಿನಿತ್ಯ ಈ ದೇವಸ್ಥಾನಕ್ಕೆ ಭೆಟ್ಟಿ ನೀಡುವ ಪ್ರವಾಸಿಗರ ಸಂಖ್ಯೆ 25,000ಕ್ಕೂ ಮೀರಿದೆ. ಗಣೇಶೋತ್ಸವ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಒಂದು ಲಕ್ಷಕ್ಕೂ ಮೀರಿ ಇರುತ್ತದೆಯಂತೆ.
ಈ ದೇವಸ್ಥಾನದಲ್ಲಿ ತೀರ್ಥ, ಪ್ರಸಾದ ದಾಸೋಹಗಳಿಲ್ಲ. ಆದರೆ ಬಾಂಬೆ ಟ್ರಸ್ಟ್ ಆಕ್ಟ್ ಪ್ರಕಾರ ಈ ದೇವಸ್ಥಾನಕ್ಕೆ ಒಂದು ಟ್ರಸ್ಟ್ ಕಮಿಟಿ ಇದೆ. ಟ್ರಸ್ಟ್ ಕಮಿಟಿಯವರು ದೇವಸ್ಥಾನದ ಪ್ರತಿನಿತ್ಯದ ಆಡಳಿತ ಹಾಗೂ ಸೌರಕ್ಷಣೆಯನ್ನು ನೋಡಿಕೊಂಡು ಹೋಗುತ್ತಾರೆ. ಹಾಗೆಯೇ ಸಾಮಾಜಿಕ ಕಾರ್ಯಗಳಲ್ಲಿ ಟ್ರಸ್ಟ್ ತೊಡಗಿಕೊಂಡಿದೆ ಎಂದು ಅಲ್ಲಿನ ಜನ ಹೆಮ್ಮೆಯಿಂದ ಸ್ಮರಿಸುತ್ತಾರೆ.
ದೇವಸ್ಥಾನ ಪ್ರಾರಂಭವಾಗುವ ಐದುನೂರು ಮೀಟರ್ ಮೊದಲೇ ಹೂ ಹಣ್ಣು ಕಾಯಿ ಕರ್ಪೂರ ಹಾಗೂ ಪ್ರಸಾದವೆಂದು ಸಿಹಿ ಪದಾರ್ಥ ಮೋದಕಗಳನ್ನು ಮಾರಾಟ ಮಾಡುವ ಸಾಲು ಸಾಲು ಅಂಗಡಿಗಳ ವ್ಯಾಪಾರಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವುದು ಕಿರಿಕಿರಿ ಅನಿಸುತ್ತದೆ. ಆ ನೂಕು ನುಗ್ಗಲಿನಲ್ಲಿ ನೂರಾರು ರೂಪಾಯಿ ಕೊಟ್ಟು ಕೊಂಡುಕೊಂಡ ಹಣ್ಣು ಹೂ ಪ್ರಸಾದಗಳ ಬುಟ್ಟಿಯನ್ನು ಹೊತ್ತು ತಾಸುಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ದೇವಸ್ಥಾನದ ಒಳಗೆ ಹೋದ ಪ್ರವಾಸಿಗರು ಹೊರಗಿನಿಂದಲೇ ದೇವಸ್ಥಾನವನ್ನು ನೋಡಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತಲ್ಲ ಎಂದು ಅನ್ನಿಸದೇ ಇರಲಾರದು.
ಪ್ರತಿನಿತ್ಯ ಮುಂಬೈಗೆ ಬರುವ 75% ರಷ್ಟು ಪ್ರವಾಸಿಗರು ಇಲ್ಲಿಗೆ ಭೇಟ್ಟಿ ಕೊಟ್ಟೆ ಕೊಡುತ್ತಾರೆ. ಅದರಲ್ಲಿ ಬಹಳಷ್ಟು ಪ್ರವಾಸಿಗರಿಗೆ ಈ ದೇವಸ್ಥಾನಕ್ಕೆ ಏಕೆ ಬಂದಿದ್ದೇವೆ ಎನ್ನುವುದು ಗೊತ್ತೇ ಇರುವುದಿಲ್ಲ. ಬಂದ ಪ್ರವಾಸಿಗೆರಲ್ಲ ಎಲ್ಲರೂ ನಿಂತಿರುತ್ತಾರೆಂದು ತಾವು ಸರತಿ ಸಾಲಿನಲ್ಲಿ ನಿಂತುಕೊಂಡು ಗಣೇಶನಿಗೆ ನಮಸ್ಕರಿಸಿ ಹೋಗುವ ನಿರಾಸಕ್ತ ಪ್ರವಾಸಿಗರ ದಂಡನ್ನೇ ಇಲ್ಲಿ ನೋಡಬಹುದು. ಆಸ್ತಿಕರಿಗೆ ಶ್ರದ್ಧಾ ಭಕ್ತಿಯ ಪವಿತ್ರ ಕ್ಷೇತ್ರ.ನಾಸ್ತಿಕರಿಗೆ ಈ ಕಟ್ಟಡದ ಸುತ್ತಮುತ್ತ ನಡೆಯುವ ಚಟುವಟಿಕೆಗಳು ದುಡಿಯದೆ ಉಣ್ಣಬೇಕೆನ್ನುವವರ ತಾಣ ಎಂದೆನಿಸಬಹುದೇನೋ ?ಏನೇ ಇರಲಿ ಅವರವರ ಭಾವಕ್ಕೆ ಅನೇಕ ಅನುಭವಗಳನ್ನು ನೀಡುವ ತಾಣವಾಗಿ ಈ ದೇವಸ್ಥಾನ ರೂಪಗೊಂಡಿದೆ.
ಈ ದೇವಸ್ಥಾನ ಸಂಕೀರ್ಣದಿಂದ ಹೊರ ಬರುವಷ್ಟರಲ್ಲಿ ಸಾಯಂಕಾಲ 5:00 ಗಂಟೆ ಯಾಗಿತ್ತು. ವರ್ಲಿ ಸೀ ಲಿಂಕ್, ಮರೈನ್ ಡ್ರೈವ್ ಬೀಚ್, ತಾಜ್ ಹಾಗೂ ಒಬೆರಾಯ್ ಹೋಟೆಲ್ ನೋಡಲು ಹೊರಟೆವು.ನಾಳೆಗೆ ಮುಂದುವರೆಯುವದು…
–ಗವಿಸಿದ್ದಪ್ಪ ಕೊಪ್ಪಳ