ಪುಣೆಯಿಂದ ಎಲ್ಫೆಂಟಾ ಕೆವ್ಸ್ ಎನ್ನುವ ಅದ್ಭುತ ದ್ವೀಪಕ್ಕೆ ಪ್ರವಾಸ

ಪುಣೆಯಿಂದ ಎಲ್ಫೆಂಟಾ ಕೆವ್ಸ್ ಎನ್ನುವ ಅದ್ಭುತ ದ್ವೀಪಕ್ಕೆ ಪ್ರವಾಸ

ಇತಿಹಾಸ ವಿದ್ಯಾರ್ಥಿಯಾದ ನಾನು ಭೂಮಾರ್ಗದ ಮೂಲಕ ಅಜಂತಾ, ಎಲ್ಲೋರಾ, ಬದಾಮಿ ಹಾಗೂ ಪಟ್ಟದಕಲ್ಲಿನ ಗುಹಾಂತರ ದೇವಾಲಯಗಳನ್ನು ನೋಡಿ ಅಲ್ಲಿಯ ಸುಂದರವಾದ ಕೆತ್ತನೆಗಳಿಂದ ಪ್ರೇರಣೆಗೊಂಡಿದ್ದೆ. ಆದರೆ ಅರಬ್ಬಿ ಸಮುದ್ರದ ದ್ವೀಪ ಪ್ರದೇಶದಲ್ಲಿರುವ ಎಲಿಫೆಂಟಾ ಕೇವ್ಸ್ ಗಳನ್ನು ನೋಡಬೇಕೆಂಬ ಹಂಬಲ ಬಹಳ ದಿನಗಳಿಂದಲೂ ಇತ್ತು. ನನ್ನ ಹಂಬಲಕ್ಕೆ ಒತ್ತಾಸೆಯಾಗಿ ಪುಣೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಮಗಳು ಮಾನಸ, ಪಪ್ಪಾ ನೀವೆಲ್ಲರೂ ಪುಣೆಗೆ ಬನ್ನಿ. ಪುಣೆ ಸುತ್ತಮುತ್ತ ಹಾಗೂ ಮುಂಬೈ ಪ್ರವಾಸಕ್ಕೆ ಹೋಗೋಣ ಎಂದು ಒತ್ತಾಯಿಸುತ್ತಿದ್ದಳು. ಅದಕ್ಕೆ ಪೂರಕವೆಂಬಂತೆ ಕಳೆದ ಶುಕ್ರವಾರ ಶನಿವಾರ (28-29) ರಂದು ಎರಡು ದಿನ ರಜೆ ಹಾಕಿದರೆ ಐದು ದಿನ ರಜೆ ಸಿಗುತ್ತದೆ ಮುಂಬೈ ಪ್ರವಾಸಕ್ಕೆ ಹೋಗೋಣ ನಡೆಯಿರಿ ಎಂದು ನನ್ನ ಧರ್ಮ ಪತ್ನಿ ಹೇಳಿದಾಗ ಎಲಿಫೆಂಟಾ ಕೇವ್ಸ್ ಗಳನ್ನು ನೋಡುವ ನನ್ನ ಹಂಬಲ ಗರಿಗೆದರಿತು. ಕೊಪ್ಪಳ ಡಿಪೋದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪುಣೆಗೆ ಹೋದ ಅನುಭವವನ್ನು ಈಗಾಗಲೇ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಪುಣೆಯಿಂದ ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿರುವ ಲೋನಾವಳ ಸಮುದ್ರಮಟ್ಟದಿಂದ 634 ಮೀಟರ್ ಎತ್ತರದಲ್ಲಿರುವ ಖಂಡಲಾ ಘಾಟಿನಲ್ಲಿ ಬರುವ ಹಿಲ್ ಸ್ಟೇಷನ್. ಲೋನಾವಳ ಪ್ರವೇಶಿಸಿದಾಗ “ಮಗನಲಾಲ್ ಚಿಕ್ಕಿ” ಬೋರ್ಡ್ ಇರುವ ನೂರಾರು ಅಂಗಡಿಗಳು ಸ್ವಾಗತಿಸುತ್ತಿದ್ದವು. ಕುತೂಹಲದಿಂದ ಒಂದು ಅಂಗಡಿಯ ಮುಂದೆ ನಿಲ್ಲಿಸಿ ಒಳ ಹೊಕ್ಕಾಗ ಶೇಂಗಾ ಬೀಜದಿಂದ ತಯಾರಿಸಿದ ವಿವಿಧ ರೀತಿಯ ಸಿಹಿ ಖಾದ್ಯಗಳನ್ನು ನೋಡಿ ಬಾಯಲ್ಲಿ ನೀರೂರಿತು. ಧಾರವಾಡದ ಪೇಡ, ಬೆಳಗಾವಿಯ ಕುಂದಾ, ಅಮೀನಗಡದ ಕರದಂಟು ಹೇಗೆ ಲೋಕಪ್ರಿಯ ಸಿಹಿ ಖಾದ್ಯಗಳೋ ಹಾಗೆ ಮಹಾರಾಷ್ಟ್ರದಲ್ಲಿ ಮಗನಲಾಲ್ ಚಿಕ್ಕಿಗಳು ಲೋಕ ಪ್ರಿಯವಾದ ಸಿಹಿ ಖಾದ್ಯಗಳಾಗಿ ಬಾಯಲ್ಲಿ ನೀರೂರಿಸುತ್ತವೆ. ಇಷ್ಟವಾದ ಸಿಹಿ ಚಿಕ್ಕಿಗಳನ್ನು ಕೊಂಡುಕೊಂಡು ಸವಿಯುತ್ತ ಖಂಡಾಲ ಘಾಟನ ಅತಿ ಎತ್ತರದ ಪ್ರದೇಶದ ಮೇಲೆ ನಿಂತುಕೊಂಡು ಮೂರ್ನಾಲ್ಕು ನಿಸರ್ಗದತ್ತ ಕಣಿವೆಗಳ ಸೌಂದರ್ಯ ಕಣ್ತುಂಬಿಕೊಳ್ಳುವ ಅದೃಷ್ಟ ಯಾರಿಗುಂಟು ಯಾರಿಗಿಲ್ಲ ಎನ್ನುವಂತೆ ಕಣ್ತುಂಬಿಸಿಕೊಂಡೆವು. ಲೋನಾವಳದಿಂದ 12 ಕಿಲೋಮೀಟರ್ ದೂರದಲ್ಲಿರುವ ಕಾರ್ಲೆ ಗುಹಾಂತರ ದೇವಾಲಯಗಳನ್ನು ಸಮಯದ ಅಭಾವದಿಂದ ನೋಡಲು ಸಾಧ್ಯವಾಗಲಿಲ್ಲ.ಮತ್ತೊಂದು ಸಲ ಬಂದರಾಯಿತು ಎಂದುಕೊಂಡು ಪುಣೆ-ಮುಂಬೈ ಎಕ್ಸ್ಪ್ರೆಸ್ ಹಾದಿಯ ಎಡ ಬಲದಲ್ಲಿ ಬರುವ ಸುಂದರ ದೃಶ್ಯಗಳ ಮಧುರಾನುಭೂತಿಯನ್ನು ಅನುಭವಿಸುತ್ತಾ ಸಾಗಿದೆವು.

ಎಕ್ಸ್ಪ್ರೆಸ್ ಹೈವೇ ಮೂಲಕ ಮುಂಬೈ ಪ್ರವೇಶಿಸುತ್ತಿದ್ದಂತೆ ನಮ್ಮನ್ನು ಸ್ವಾಗತಿಸಿದ್ದು ಅಲ್ಲಲ್ಲೇ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಗಳು. ಅದರಲ್ಲಿಯೇ ನಿಧಾನವಾಗಿ ತೇಲುತ್ತಾ,ತೆವಳುತ್ತಾ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿ ವಿಶ್ವ ಪಾರಂಪರಿಕ ತಾಣಗಳಲ್ಲೊಂದೆನಿಸಿದ, ಪ್ರತಿನಿತ್ಯ ಮೂರು ಮಿಲಿಯನ್ ಜನ ಸಂಚರಿಸುವ ಮುಂಬೈನ ಅತ್ಯಂತ ಪ್ರೇಕ್ಷಣೀಯ ಸ್ಥಳ ಛತ್ರಪತಿ ಶಿವಾಜಿ ಟರ್ಮಿನಸ್. ಈ ಪಾರಂಪರಿಕ ಕಟ್ಟಡವನ್ನು ಗೋಥಿಕ್, ವಿಕ್ಟೋರಿಯನ್ ಇಟಾಲಿಯನೇಟ್ ಮತ್ತು ಭಾರತೀಯ ವಾಸ್ತುಶಿಲ್ಪದ (ಇಂಡೋ- ಸಾರ್ಸನಿಕ್ ) ಸಮ್ಮಿಶ್ರ ಶೈಲಿಯಲ್ಲಿ ಜೈಪುರದ ಕೆಂಪು ಕಲ್ಲುಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ.

ಮುಂಬೈನ ಹಳೆ ಬೋರಿ ಬಂದರ್ ರೈಲ್ ನಿಲ್ದಾಣದ ದಕ್ಷಿಣ ಭಾಗದಲ್ಲಿ 18.35 ಹೆಕ್ಟರ್(45,34 ಎಕರೆ) ಪ್ರದೇಶದಲ್ಲಿ ಪೆಡ್ರಿಕ್ ವಿಲಿಯಮ್ ಸ್ಟೀವನ್ಸ ವಾಸ್ತುಶಿಲ್ಪಿಯ ನೇತೃತ್ವದಲ್ಲಿ 1887 ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭಿಸಿ 1898 ರಲ್ಲಿ ಮುಕ್ತಾಯಗೊಳಿಸಿದಾಗ ಇದಕ್ಕೆ ತಗುಲಿದ ವೆಚ್ಚ 16.14 ಲಕ್ಷ ರೂಪಾಯಿಗಳು. ಅಂದರೆ ಈಗ ಲೆಕ್ಕ ಹಾಕಿದರೆ 2013 (ಮಿಲಿಯನ್) ಲಕ್ಷ ರೂಪಾಯಿಗಳು.ಮೊದಲಿಗೆ ಇದರ ನಕ್ಷೆಯನ್ನು ‘ಅಲೆಕ್ಸ್ ಹೆರ್ಮನ್’ ಎನ್ನುವ ವಾಸ್ತುಶಿಲ್ಪಿ ಜಲವರ್ಣದಲ್ಲಿ ರಚಿಸಿದ.ಇದನ್ನು ಆಧಾರವಾಗಿಟ್ಟುಕೊಂಡು ಪೆಡ್ರಿಕ್ ವಿಲಿಯಂ ಸ್ಟೀವನ್ಸ್ 10 ತಿಂಗಳ ಯುರೋಪಿನಲ್ಲಿರುವ ಅನೇಕ ಕಟ್ಟಡಗಳನ್ನು ಸಂದರ್ಶಿಸಿ ಕಟ್ಟಡದ ನಕ್ಷೆಯನ್ನು ತಯಾರಿಸಿ ನಿರ್ಮಾಣ ಮಾಡಿದ.ಈ ಟರ್ಮಿನಸ್ ಲಂಡನ್ನಿನಲ್ಲಿರುವ “ಸೇಂಟ್ ಪಾಂಕ್ರಾಸ್” ರೈಲ್ವೇ ನಿಲ್ದಾಣವನ್ನು ಹೋಲುತ್ತದೆ. ಅಂದಿನ ಬ್ರಿಟಿಷ್ ಸರ್ಕಾರ ಇದಕ್ಕೆ “ವಿಕ್ಟೋರಿಯಾ ಟರ್ಮಿನಸ್” ಎಂದು ನಾಮಕರಣ ಮಾಡಿತ್ತು.1997 ರಲ್ಲಿ ಮಹಾರಾಷ್ಟ್ರ ಸರ್ಕಾರ ಇದಕ್ಕೆ ಛತ್ರಪತಿ ಶಿವಾಜಿ ಟರ್ಮಿಸ್(CST) ಎಂದು ಮರುನಾಮಕರಣ ಮಾಡಿದೆ.

ಈ ಕಟ್ಟಡದ ಸುಂದರ ವಾಸ್ತು ಶಿಲ್ಪ ಹಾಗೂ ಸೌಂದರ್ಯವನ್ನು ಕಣ್ತುಂಬಿ ಕೊಳ್ಳುತ್ತಾ ಸ್ಟೇಷನ್ ಒಳಗೆ ಪ್ರವೇಶಿಸಿದರೆ. 18ಕ್ಕಿಂತ ಮಿಗಿಲಾದ ಪ್ಲಾಟ್ ಫಾರ್ಮ್ ಗಳು. ಪ್ರತಿನಿತ್ಯ ದೇಶದ ವಿವಿಧ ಪ್ರದೇಶಗಳಿಗೆ ಹಾಗೂ ಮುಂಬೈ ಉಪನಗರಗಳಿಗೆ ನೂರಾರು ಟ್ರೈನ್ ಗಳು ಚಲಿಸುತ್ತವೆ. ಪ್ರತಿನಿತ್ಯ (ಮೂರು ಮಿಲಿಯನ್) 30 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ ಎನ್ನುವುದೇ ಜಗತ್ತಿನ ವಿಸ್ಮಯಗಳಲ್ಲೊಂದು.

ಈ ಟರ್ಮಿನೆಸ್ ಎದುರಿಗೆ ಪೆಡ್ರಿಕ್ ವಿಲಿಯಂ ಸ್ಟೀವನ್ಸ್ ನ ನೇತೃತ್ವದಲ್ಲಿ ನಿರ್ಮಾಣವಾದ ಮತ್ತೊಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಇರುವ ಪಾರಂಪರಿಕ ಕಟ್ಟಡವಿದೆ. ಈ ಕಟ್ಟಡವನ್ನು ಸಹ1884 ರಲ್ಲಿ ಪ್ರಾರಂಭಿಸಿ 1893ರಲ್ಲಿ ಮುಕ್ತಾಯಗೊಳಿಸಿದೆ. ಈ ಕಟ್ಟಡ ಛತ್ರಪತಿ ಶಿವಾಜಿ ಟರ್ಮಿನಸ್ ಕಟ್ಟಡದಂತೆ ಇಂಡೋ -ಸಾರ್ಸನೆಕ್ ಶೈಲಿಯಲ್ಲಿ ನಿರ್ಮಾಣವಾಗಿ ನೋಡುಗರ ಕಣ್ಮನ ಸೆಳೆಯುತ್ತದೆ. ಈ ಕಟ್ಟಡದ ಮುಂಭಾಗದಲ್ಲಿ ಅಪ್ರತಿಮ ದೇಶಭಕ್ತ, ನ್ಯಾಯಶಾಸ್ತ್ರ ಪಂಡಿತರು ಹಾಗೂ ಮುಂಬೈ ಮಹಾನಗರ ಪಾಲಿಕೆಯ ಅಧ್ಯಕ್ಷರಾಗಿದ್ದ ಫಿರೋಜ್ ಷಾ.ಎಂ ಮೆಹತಾ (1845 ರಿಂದ1905) ರವರ ಪುತ್ತಳಿಯನ್ನು ಎತ್ತರದ ಕಟ್ಟೆಯ ಮೇಲೆ ನಿಲ್ಲಿಸಿದ್ದಾರೆ.ಕಪ್ಪು ಕಲ್ಲಿನಲ್ಲಿ ಕೆತ್ತಿದ ಪುತ್ತಳಿಯ ಎತ್ತರ 10 ಅಡಿಗಿಂತ ಮಿಗಿಲಾಗಿದ್ದು ನೋಡುಗರನ್ನು ತನ್ನಡೆಗೆ ಸೆಳೆದು ಕುತೂಹಲ ಹುಟ್ಟಿಸುತ್ತದೆ. ಫಿರೋಜ್ ಷಾ.ಎಂ. ಮೆಹತಾರವರು 1873 ರಿಂದ 1905 ರವರೆಗೆ ನಾಲ್ಕು ಬಾರಿ ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಅಧ್ಯಕ್ಷರಾಗಿ ಮುಂಬೈ ನಗರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರ ಸೇವಾ ಕಾರ್ಯ, ದೇಶಭಕ್ತಿಯನ್ನು ಮುಂದಿನ ಪೀಳಿಗೆಯವರು ಅರಿತುಕೊಂಡು ದೇಶಭಕ್ತರಾಗಿ ರೂಪುಗೊಳ್ಳಲಿ ಎಂಬ ಸದುದ್ದೇಶದಿಂದ ಈ ಪುತ್ತಳಿಯನ್ನು ನಿಲ್ಲಿಸಲಾಗಿದೆ.

ಇಲ್ಲಿಂದ ಮುಂದೆ ಮುಂಬೈ ನಗರದ ಪ್ರೇಕ್ಷಣೀಯ ಸ್ಥಳಗಳಾದ ಸಿದ್ದಿ ವಿನಾಯಕ ಮಂದಿರ, ಮೇರಿನ್ ಡ್ರೈವ್, ವರ್ಲಿ ಸೀ ಲಿಂಕ್ ರೋಡ್, ಗೇಟ್ ವೇ ಆಫ್ ಇಂಡಿಯಾ, ತಾಜ್ ಮತ್ತು ಓಬೇರಾಯ ಹೋಟೆಲ್, ಎಲಿಫೆಂಟಾ ಕೇವ್ಸ್ ಗಳಿಗೆ ಭೇಟ್ಟಿ ನೀಡಿದ ವಿವರಗಳನ್ನು ನಾಳೆ ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ…

ಗವಿಸಿದ್ದಪ್ಪ ಕೊಪ್ಪಳ

Don`t copy text!