ತರ್ಕ

ಕವಿತೆ

ತರ್ಕ

ಕಂಗಳೆರಡು
ನೋಡು ದುಪ್ಪಟ್ಟು
ದೂರ ಎಷ್ಟೇ ಇರಲಿ
ದಿಟ್ಟಿ ನೆಟ್ಟಗಿರಲಿ
ನೋಡಿದಷ್ಟು
ರಮ್ಯ ರಸಗವಳ
ಈ ದೇವ ಜಗತ್ತು.

ಕಿವಿಗಳೆರಡು
ಕೇಳು ದುಪ್ಪಟ್ಟು
ಕಿವಿ ಕಚ್ಚುವ ಮಾತುಗಳ
ಪಕ್ಕಕಿಟ್ಟು
ಭಾವಾಂತರಂಗದ ದೀಪ ಹಚ್ಚು
ಪರವಶನಾಗು
ನಾದಮಯವೀ ಜಗತ್ತು

ಕೈಗಳೆರಡು
ದುಡಿ ದುಪ್ಪಟ್ಟು
ಭೂರಮೆ ಅಮ್ಮನಂಥವಳು
ಕಾಳು ಚೆಲ್ಲು ರಾಶಿ ನೀಡುವಳು
ಬಗೆಯದಿರವಳ ಬಸಿರನ್ನು
ಮರೆಯದಿರು ನಿನ್ನುಸಿರಿಗೆ
ಹಸಿರೇ ಜಗತ್ತು

ಈ ಎರಡುಗಳ ನಡುವೆ
ಇರುವುದೊಂದೇ ನಾಲಿಗೆ
ಮೃದುವೇನೋ ಅಹುದಹುದು
ಹರಿತ ಚಾಕುವಿನಷ್ಟು
ಬಳಸದಿರು ನೀನದನು ಅಷ್ಟಸ್ಟು
ದುಃಖ ಕಟ್ಟಿದ ಬುತ್ತಿ
ನೀನದನು ತಿವಿದಷ್ಟು
ನೆನಪಿರಲಿ ನೆಮ್ಮದಿಗೆ ಬೇಕು
ಮೌನ ಜಗತ್ತು.


ಆದಪ್ಪ ಹೆಂಬಾ ಮಸ್ಕಿ

Don`t copy text!