ಪುಣೆಯಿಂದ ಎಲ್ಫೆಂಟಾ ಕೆವ್ಸ್ ಎನ್ನುವ ಅದ್ಭುತ ದ್ವೀಪಕ್ಕೆ ಪ್ರವಾಸ

ಪುಣೆಯಿಂದ ಎಲ್ಫೆಂಟಾ ಕೆವ್ಸ್ ಎನ್ನುವ ಅದ್ಭುತ ದ್ವೀಪಕ್ಕೆ ಪ್ರವಾಸ…

 

ಮುಂದುವರೆದ ಭಾಗ-೩

ಜೀವನದಲ್ಲಿ ಒಮ್ಮೆಯಾದರೂ ಪ್ರಯಾಣಿಸಲೇಬೇಕಾದ ಸೇತುವೆ ಮುಂಬೈನಲ್ಲಿರುವ ಬಾಂಧ್ರಾ ವರ್ಲಿ ಸೀ ಲಿಂಕ್. ಈ ಸೇತುವೆಯ ಮೇಲೆ ಪ್ರಯಾಣಿಸುವದೊಂದು ರೋಮಾಂಚನ ಅನುಭವ.ಈ ಸೀ ಲಿಂಕ್ ಸೇತುವೆಗೆ ರಾಜೀವ್ ಗಾಂಧಿ ಸಿ ಲಿಂಕ್ ಎಂದು ನಾಮಕರಣ ಮಾಡಿದ್ದಾರೆ.ಈ ಸೇತುವೆ ಮುಂಬೈ ಕೇಂದ್ರದಿಂದ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಸೇತುವೆ ನಿರ್ಮಾಣವಾಗುವುದಕ್ಕಿಂತ ಮೊದಲು ಮಹಿಮ್ ಕಾಸ್ ವೇ ಮೂಲಕ ಉಪನಗರಗಳಿಂದ ಮುಂಬೈ ಕೇಂದ್ರಕ್ಕೆ ಬರಲು 60 ರಿಂದ 70 ನಿಮಿಷ ಬೇಕಾಗುತ್ತಿತ್ತಂತೆ.

ದೀರ್ಘ ಪ್ರಯಾಣ ಹಾಗೂ ಟ್ರಾಫಿಕ್ ಜಾಮ್ ನ್ನು ತಪ್ಪಿಸುವುದರ ಸಲುವಾಗಿಯೇ ವ್ಯೆಸ್ಟರ್ನ್ ಫ್ರೀ ವೆ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಈ ಸೇತುವೆಯನ್ನು ನಿರ್ಮಿಸಲಾಯಿತು.ಸಮುದ್ರಮಧ್ಯದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯ ಉದ್ದ 600 ಮೀಟರ್. ಆಧಾರ ಸ್ತಂಭವಾಗಿ ಸೇತುವೆಯ ಮಧ್ಯದಲ್ಲಿರುವ ಒಂದೊಂದು ಟವರ್ (ಪಿಲ್ಲರ್) ಗಳ ಎತ್ತರ 126 ಮೀಟರ್.ಈ ಟವರ್( pillar)ಗಳಿಗೆ ಕಲಾಯಿ ಮಾಡಿದ ಉಕ್ಕಿನ ತಂತಿಗಳ ಸರಪಣಿಯನ್ನು ಬಿಗಿದು ಕಟ್ಟಿಕೊಳ್ಳುತ್ತಾ ಸೇತುವೆಯನ್ನು ನಿರ್ಮಿಸಿದ್ದಾರೆ.ಈ ಸೇತುವೆಗೆ ಬಳಸಿರುವ ಉಕ್ಕಿನ ತಂತಿಗಳ ಉದ್ದ 2,250 ಕಿಲೋ ಮೀಟರನಷ್ಟು.ಈ ಉಕ್ಕಿನ ತಂತಿಗಳ ಒಟ್ಟು ಭಾರ 20,000 ಸಾವಿರ ಟನ್.1999 ರಲ್ಲಿ ಬಾಳ ಠಾಕ್ರೆಯವರ ಅಮೃತ ಹಸ್ತದಿಂದ ಚಾಲನೆ ಪಡೆದ ಈ ಸೇತುವೆಯ ನಿರ್ಮಾಣ ಕಾರ್ಯ 2010 ರಲ್ಲಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಮುಕ್ತವಾಗಿದೆ

ಪ್ರತಿನಿತ್ಯ 38000 ಸಾವಿರ ವಾಹನಗಳು ಚಲಿಸಿದರೂ ತಡೆದುಕೊಳ್ಳುವಷ್ಟು ಸಾಮರ್ಥ್ಯವನ್ನು ಈ ಸೇತುವೆ ಹೊಂದಿದೆಯಂತೆ. ಕೇವಲ 7 ರಿಂದ10 ನಿಮಿಷಗಳ ಅವಧಿಯಲ್ಲಿ ಉಪನಗರಗಳಿಂದ ಮುಂಬೈ ಕೇಂದ್ರಕ್ಕೆ ತಲುಪಬಹುದು.ಈ ಸೇತುವೆ ಮೇಲಿನಿಂದ ಸಾಗುತ್ತಿರುವಾಗ ಸಮುದ್ರದಲ್ಲಿ ತೇಲುತ್ತಿರುವ ಹಡಗು ದೋಣಿಗಳ ದೃಶ್ಯ ಕಣ್ಣಿಗೆ, ಮನಸ್ಸಿಗೆ ಮುದ ನೀಡುತ್ತದೆ.

ಸಿ ಲಿಂಕ್ ನಿಂದ ಮರೈನ್ ಡ್ರೈವ್ ಕಡೆಗೆ ಹೋಗುವಷ್ಟರಲ್ಲಾಗಲೇ ಬೀಚ್ ಗುಂಟ ಇರುವ ಆರು ಲೈನ್ ನ ನೇತಾಜಿ ಸುಭಾಷ್ ಚಂದ್ರ ರಸ್ತೆ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿತ್ತು.ಅರಬ್ಬಿ ಸಮುದ್ರದ ನೀರು ಭೂಭಾಗದೊಳಗೆ ಚಾಚಿಕೊಂಡು ಮೂರೂವರೆ ಕಿಲೋಮೀಟರ್ ನಷ್ಟು ಅರ್ಧವೃತ್ತಾಕಾರವಾದ ಬೀಚ್ ನ್ನು ನಿಸರ್ಗದತ್ತವಾಗಿ ಸೃಷ್ಟಿಸಿದೆ.

ಪ್ರವಾಸಿಗರು ಬೀಚ್ ನ ನಿಸರ್ಗದತ್ತ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ಮೂರುವರೆ ಕಿಲೋಮೀಟರ್ ನಷ್ಟು ಉದ್ದ,10 ಫೀಟ್ ಎತ್ತರದ ಕಟ್ಟೆಯನ್ನು ಕಟ್ಟಿದ್ದಾರೆ. ನಾವು ಸಹ ಈ ಕಟ್ಟೆಯ ಮೇಲೆ ಕಾಲು ಇಳಿ ಬಿಟ್ಟುಕೊಂಡು ಕುಳಿತು ಸಮುದ್ರದ ದೃಶ್ಯವನ್ನು ಕಣ್ತುಂಬಿಕೊಳ್ಳುವಾಗ ಹೆಮ್ಮೆ ಎನಿಸಿತು.ಇದನ್ನು ಕೇವಲ ಸಿನಿಮಾದಲ್ಲಿ ನೋಡುತ್ತಿದ್ದೆವು. ಇಂದು ನಾವು ಸಹ ಮರೈನ್ ಡ್ರೈವ್ ಗೆ ಸಾಕ್ಷಿ ಯಾದವೆಲ್ಲ ಎಂದು ಖುಷಿ ಅನಿಸಿತು. ಮುಂಗಾರು ಮಾರುತಗಳ ಕಾಲದಲ್ಲಿ ತೆರೆಗಳು ದಂಡೆಗೆ ಬಂದು ಅಪ್ಪಳಿಸುವ ಪರಿಯನ್ನು ಈ ಕಟ್ಟೆ ಮೇಲೆ ಕುಳಿತುಕೊಂಡು ನೋಡಬೇಕಂತೆ.ಆ ಭಾಗ್ಯ ನಮಗೆ ಸಿಗಲಿಲ್ಲ ಏಕೆಂದರೆ ಸಮುದ್ರದಲ್ಲಿ ತೆರೆಗಳೆ ಬರುತ್ತಿರಲಿಲ್ಲ.

ರಾತ್ರಿ ಆಯ್ತು ಎಂದರೆ ಮರೈನ್ ಡ್ರೈವ್ ಬೀಚ ಗುಂಟ ವಿದ್ಯುತ್ ದೀಪಗಳು ಜಗ ಮುಗಿಸುತ್ತಾ ಸುಂದರ ಲೋಕ ನಿರ್ಮಾಣವಾಗುತ್ತದೆ. ಈ ಬೀಚಿನ ನಡುವೆ ಎತ್ತರದ ಕಟ್ಟೆಯ ಮೇಲೆ ನಿಂತು ನೋಡಿದರೆ ಮರೈನ್ ಡ್ರೈವ್ ‘ನೆಕ್ಲೆಸ್” ನಂತೆ ಕಾಣುತ್ತದೆ. ಹೀಗಾಗಿ ಈ ಬೀಚ್ ನ್ನು “ಕ್ವೀನ್ಸ್ ನೆಕ್ಲೆಸ್” ಅಂತಲೂ ಕರೆಯುತ್ತಾರೆ. ರಾತ್ರಿ 12.00 ಗಂಟೆಯವರೆಗೂ ಈ ಬೀಚಿನಲ್ಲಿ ಸಂಚರಿಸಬಹುದು.ಇದು ಚೌಪಾಟಿಯಿಂದ ನಾರಿಮನ್ ಪಾಯಿಂಟ್ ಗೆ ಸಂಪರ್ಕ ಕಲ್ಪಿಸುತ್ತದೆ. ಮರೈನ್ ಡ್ರೈವ್ ಪಾನಿಪುರಿ,ಬೇಲ್ ಪುರಿ, ಸೇವ್ ಪುರಿ, ವಡಾಪಾವ್ ಗಳಂತ ಫುಡ್ ಪಾಯಿಂಟ್ ಗಳಿಂದ ಆವರಿಸಿಕೊಂಡಿದೆ.

ಭಾರತದ ಕೈಗಾರಿಕಾ ಪಿತಾಮಹರಾದ ಜೆ ಆರ್ ಡಿ ಟಾಟಾರವರು ಒಮ್ಮೆ ಸೂಟು ಬೂಟು ಧರಿಸಿಕೊಂಡು ಯುರೋಪಿಯನ್ ಗೆಳೆಯನೊಂದಿಗೆ ಮುಂಬೈನ ಪಂಚತಾರಾ ಹೋಟೆಲ್ ವ್ಯಾಟ್ಸನ್ ಗೆ ಊಟಕ್ಕಾಗಿ ಹೋದಾಗ ಅಲ್ಲಿದ್ದ ಕಾವಲುಗಾರ ಯುರೋಪಿಯನ್ ಗೆಳೆಯನನ್ನು ಒಳಗೆ ಬಿಟ್ಟು,ಜೆ ಆರ್ ಡಿ ಟಾಟಾರವರನ್ನು ಒಳಗೆ ಬಿಡಲಿಲ್ಲ ಏಕೆಂದು ಕೇಳಿದರೆ ಇಲ್ಲಿ ಯುರೋಪಿಯನ್ನರಿಗೆ ಮಾತ್ರ ಪ್ರವೇಶ ಎಂದನಂತೆ. ಅವಮಾನಿತರಾದಂತ ಜೆ ಆರ್ ಡಿ ಟಾಟಾರವರು ಸರ್ವರಿಗೂ ಪ್ರವೇಶವಿರುವ ಪಂಚತಾರಾ ಹೋಟೆಲ್ ನ್ನು ನಾನೇ ಮುಂಬೈಯಲ್ಲಿ ನಿರ್ಮಿಸುತ್ತೇನೆ ಎಂದು ಅಂದೆ ಶಪಥ ಮಾಡಿದರಂತೆ.

ಸುಮಾರು ತಿಂಗಳುಗಳ ಕಾಲ ಯುರೋಪಿನಾದ್ಯಂತ ಅನೇಕ ಪಂಚತಾರಾ ಹೋಟೆಲ್ ಗಳನ್ನು ಸಂದರ್ಶಿಸಿ,1898ರಲ್ಲಿ ಮುಂಬೈ ಪೋರ್ಟ್ ಪ್ರಾಧಿಕಾರದಿಂದ ಅರಬ್ಬಿ ಸಮುದ್ರದ ಎದುರಿಗಿರುವ ಕೋಲಾಬದಲ್ಲಿ 10,000 sq yard ಜಾಗೆಯನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ಇಂಡೋ-ಸಾರ್ಸ್ ನಿಕ್ ವಾಸ್ತುಶಿಲ್ಪ ಶೈಲಿಯಲ್ಲಿ 6 ಅಂತಸ್ತಿನ 560 ರೂಮುಗಳುಳ್ಳ ಪಂಚತಾರಾ ತಾಜ್ ಹೋಟೆಲ್ ನ್ನು ತಾವೇ ಮುಂದೆ ನಿಂತು ಕಟ್ಟಿಸಿ 1902 ರಲ್ಲಿ ಉದ್ಘಾಟನೆ ಮಾಡಿದರಂತೆ. ತಾಜ್ ಹೋಟೆಲ್ ಕಟ್ಟಿದಾಗ ಇನ್ನು ಗೇಟ್ ವೇ ಆಫ್ ಇಂಡಿಯಾ ನಿರ್ಮಾಣವಾಗಿರಲಿಲ್ಲ.ಅರಬ್ಬಿ ಸಮುದ್ರದಲ್ಲಿ ಮುಂಬೈಗೆ ಬರುವ ಹಡಗುಗಳಲ್ಲಿರುವ ಪ್ರವಾಸಿಗರಿಗೆ ಕಿಲೋಮೀಟರಗಟ್ಟಲೆ ದೂರದಿಂದ ತಾಜ್ ಹೋಟೆಲ್ ಎದ್ದು ಕಾಣುತ್ತಿತ್ತಂತೆ. ಅಂದು ಇದರ ಅಕ್ಕಪಕ್ಕ ಯಾವುದೇ ಕಟ್ಟಡವಿರಲಿಲ್ಲ. ಇಂದು ಅದೇ ತಾಜ್ ಗ್ರೂಪಿನಿಂದ ತಾಜ್ ಹೋಟೆಲ್ ಗೆ ಅಂಟಿಕೊಂಡಂತೆ ಬಹು ಮಹಡಿಯ ಪಂಚತಾರಾ ಒಬೆರಾಯ ಹೋಟೆಲ್ ನಿರ್ಮಾಣವಾಗಿ ದೂರದಿಂದಲೇ ನೋಡುಗರನ್ನು ಸೆಳೆಯುತ್ತದೆ.

ಪ್ಯಾರಿಸ್ಸಿಗೆ ಹೋದಾಗ ಐಫೆಲ್ ಟವರ್ ನಿರ್ಮಾಣದಲ್ಲಿ ಬಳಸಿದ ಉಕ್ಕು ಮತ್ತು ಕಬ್ಬಿಣದ ಬೃಹತ್ ಕಂಬಗಳನ್ನು ನೋಡಿದ ಜೆ ಆರ್ ಡಿ ಟಾಟಾರವರು ಅಂತಹವುದೇ 10 ಉಕ್ಕು ಮತ್ತು ಕಬ್ಬಿಣದ ಕಂಬಗಳನ್ನು ಪ್ಯಾರಿಸ್ಸಿನಿಂದ ತರಿಸಿ ತಾಜ್ ಹೋಟೆಲ್ ನಿರ್ಮಾಣದಲ್ಲಿ ಬಳಸಿಕೊಂಡರಂತೆ.ಈಗಲೂ ಆ ಕಬ್ಬಿಣ ಮತ್ತು ಉಕ್ಕಿನ ಕಂಬಗಳು ತಾಜ್ ಹೋಟೆಲ್ ಬಾಲ್ ರೂಮಿಗೆ ಆಸರೆಯಾಗಿ ನಿಂತಿರುವುದನ್ನು ಕಾಣಬಹುದು.

ತಾಜ್ ಹೋಟೆಲ್ ನ ವಾಸ್ತುಶಿಲ್ಪ ರೂಪಿಸಿ ನಿರ್ಮಿಸಿದವರು ಭಾರತೀಯ ತಂತ್ರಜ್ಞರಾದ ಸೀತಾರಾಮ ಖಂಡೆರೋ ಮತ್ತು ಡಿ.ಎನ್.ಮಿರ್ಜಾ ರವರು.ಅಂದು ಈ ತಾಜ್ ಹೋಟೆಲ್ ನ್ನು ನಿರ್ಮಿಸಲು ನಾಲ್ಕು ಕೋಟಿ ರೂಪಾಯಿ ವೆಚ್ಚವಾಯಿತಂತೆ.1914-18 ರ ಅವಧಿಯಲ್ಲಿ ನಡೆದ ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಈ ತಾಜ್ ಹೋಟೆಲ್, 600 ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಪರಿವರ್ತನೆಯಾಗಿತ್ತಂತೆ. ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾರವರು ತಾಜ್ ಹೋಟೆಲ್ ನಲ್ಲಿ ಒಂದು ದಿನ ತಂಗಿದ್ದರಂತೆ.ಇಂಥಹ ಅನೇಕ ಐತಿಹಾಸಿಕ ಘಟನೆಗಳಿಗೆ ತಾಜ್ ಹೋಟೆಲ್ ಇಂದಿಗೂ ಸಾಕ್ಷಿಯಾಗಿ ನಿಂತಿದೆ.

26-11-2008 ರಲ್ಲಿ ಪಾಕಿಸ್ತಾನ ಬೆಂಬಲಿತ ಲಷ್ಕರ್ ಐ ತೈಯಭಾ ಸಂಘಟನೆಯ10 ಉಗ್ರರು ಬೋಟ್ ಮೂಲಕ ಗೇಟ್ ವೇ ಆಫ್ ಇಂಡಿಯಾ ಪ್ರವೇಶಿಸಿ ತಾಜ್, ಒಬೆರಾಯ್, ಚತ್ರಪತಿ ಶಿವಾಜಿ ಟರ್ಮಿನಸ್, ನಾರಿಮನ್ ಹೌಸ್ ಪ್ರದೇಶಗಳನ್ನು ಮೂರು ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡು 161 ಜನರನ್ನು ಬಲಿ ತೆಗೆದುಕೊಂಡರು.ತಾಜ್ ಹೋಟೆಲ್ ನಲ್ಲಿ ವಿದೇಶಿಯರು ಸೇರಿ 31 ಜನ ಬಲಿಯಾದರು. ಆ ಘಟನೆಯಲ್ಲಿ ಜೀವಂತವಾಗಿ ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಬ್ ಒಬ್ಬನೇ. ತಾಜ್ ಹೋಟೆಲ್ ಮುಂದೆ ನಿಂತಾಗ 26/11 ರ ಘಟನೆ ನೆನಪಿಗೆ ಬಂದು ಮೈ ಜುಮ್ ಎನಿಸಿತು.ಕುಟುಂಬ ಸಮೇತ ಚಹಾ ಸೇವಿಸಲು ತಾಜ್ ಹೋಟೆಲ್ ಒಳ ಪ್ರವೇಶಿಸಿದಾಗ ದ್ವಾರಪಾಲಕರು ಇಂದು ರವಿವಾರ ಸ್ಥಳ ಕಾಯ್ದಿರಿಸದೆ ಬರುವ ಸಾರ್ವಜನಿಕರಿಗೆ ಸೇವೆಗಳು ಲಭ್ಯವಿಲ್ಲ.ದಯವಿಟ್ಟು ನಾಳೆ ಬನ್ನಿ ಎಂದು ಎರಡು ಕೈ ಜೋಡಿಸಿ ನಮಸ್ಕರಿಸುತ್ತಾ ವಿನಯದಿಂದಲೇ ತಿಳಿಸಿದಾಗ ನಿರಾಶೆಯಿಂದ ಹಿಂತಿರುಗಿ ಎಲಿಫೆಂಟಾ ಕೇವ್ಸ್ ಕಡೆ ಹೋಗಲು ತಯಾರಾದೆವು.
ನಾಳೆ ಮುಂದುವರಿಸುತ್ತೇನೆ…

ಗವಿಸಿದ್ದಪ್ಪ ಕೊಪ್ಪಳ

Don`t copy text!