ನಾನೆಂಬ ಅಹಂಭಾವ ಅಳಿಸುವ ಪರಿ

ಅಕ್ಕನೆಡೆಗೆ –ವಚನ – 48

ನಾನೆಂಬ ಅಹಂಭಾವ ಅಳಿಸುವ ಪರಿ

 

ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ
ಮಾಡಿಯೂ ಮಾಡದಂತಿಪ್ಪೆ ನೋಡಾ
ಚೆನ್ನಮಲ್ಲಿಕಾರ್ಜುನನೊಳಗಾಗಿ ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ!

ಈ ಜೀವ ಜಗತ್ತು ರೂಪುಗೊಂಡು, ಅನೇಕ ಪ್ರಾಣಿ, ಪಶು, ಪಕ್ಷಿ ಅಸ್ತಿತ್ವಕ್ಕೆ ಬಂದವು. ಈ ಪ್ರಪಂಚದ ಸೃಷ್ಟಿಯಲ್ಲಿ ವಿಶೇಷ ಜನ್ಮ ಪಡೆದವನು ಮನುಷ್ಯ. ಅವನಿಗೆ ಈ ಸೃಷ್ಟಿಯಲ್ಲಿರುವುದೆಲ್ಲವನ್ನು ಬಳಸುವ ಬುದ್ಧಿವಂತಿಕೆ, ಜಾಣ್ಮೆ, ಕೌಶಲ್ಯಗಳು, ಎಲ್ಲವೂ ಇದೆ. ಆ ಕಾರಣಕ್ಕಾಗಿಯೇ ಮಾನವ ಎಲ್ಲಾ ಪ್ರಾಣಿಗಳಿಗಿಂತಲೂ ಭಿನ್ನವಾಗಿ ನಿಲ್ಲುತ್ತಾನೆ. ಈ ಬ್ರಹ್ಮಾಂಡ ಸೃಷ್ಟಿಯಾದಾಗಿನಿಂದ ಇಂದಿನವರೆಗೆ ಏನಾದರೂ ಹೊಸತನ್ನು ಹುಡುಕುವ, ತಡಕಾಡುವ, ನೋಡುವ, ಅನ್ವೇಷಿಸುವ ಕುತೂಹಲಕಾರಿ ಗುಣಧರ್ಮ ಸದಾ ಇದ್ದೇ ಇದೆ. ತನಗೆ ಲಭ್ಯವಾಗಿರುವ ಒಂದೇ ಒಂದು ಜನ್ಮದಲ್ಲಿ ನೋಡುತ್ತ, ಮಾಡುತ್ತ, ಉಡುತ್ತ, ತೊಡುತ್ತ, ಬದುಕನ್ನು ಹೇಗೆ ಕಳೆದು ಬಿಡುತ್ತಾನೊ, ಅದು ತಿಳುವಳಿಕೆಗೆ, ಅರಿವಿಗೆ ಬರುವುದೇ ಇಲ್ಲ. ಕೊನೆಗೆ ತಾನು ಮಾಡಿದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತನ್ನನ್ನು ಕಂಡು ಸಂಭ್ರಮಿಸುತ್ತಾನೆ. ಆಗ ‘ನಾನು’ ಹೀಗೆಲ್ಲಾ ಮಾಡಿದೆ ಎಂದು ಹೇಳಿಕೊಳ್ಳುತ್ತ ಜೀವನ ಸಾಗಿಸಲು, ಉಳಿದಷ್ಟು ದಿನಗಳು ಸಾಲುವುದಿಲ್ಲ. ಸಾವು ಯಮದೂತನ ರೂಪತಾಳಿ ಧುತ್ತೆಂದು ಎದುರು ಬಂದು ನಿಂತಾಗ ಅಸಹಾಯಕತೆ. ಆಗ ಅರಿವು ಜಾಗ್ರತವಾದರೆ ನಿಷ್ಪ್ರಯೋಜಕ. ಈ ಜಗತ್ತಿನಲ್ಲಿ ‘ನಾನು’ ಎನ್ನುವುದು ನಿಮಿತ್ತ ಮಾತ್ರ, ಈ ಭಾವ ಬರಲು ಶರಣರ ವಚನಗಳ ಮೊರೆ ಹೋಗಬೇಕಾಗುತ್ತದೆ. ಅಂತಹ ಒಂದು ನಿರ್ಲಿಪ್ತ ಭಾವದ ಅಕ್ಕಮಹಾದೇವಿಯ ವಚನ ಮೇಲಿನದು.

ಅಕ್ಕ ಈ ವಚನದಲ್ಲಿ ತಾನು ಮಾಡುತ್ತಿರುವುದೆಲ್ಲಾ ಲಿಂಗಕ್ಕೆಂದು ಹೇಳುತ್ತಾಳೆ. ಅದು ಹೇಗೆಂದರೆ, ತಾನು ನೋಡುವ ನೋಟ, ಮಾಡುವ ಕೆಲಸ, ಮೈಮೇಲೆ ಧರಿಸುವ ಬಟ್ಟೆ, ತೊಟ್ಟ ಅಲಂಕಾರಿಕ ವಸ್ತುಗಳು, ಇತ್ಯಾದಿ ಇತ್ಯಾದಿ ಎಲ್ಲವು ಲಿಂಗಕ್ಕಾಗಿಯೇ ಎಂದು ವಿಶ್ವಾಸದಿಂದ ಹೇಳುತ್ತಾಳೆ. ಹೀಗೆ ಹೇಳುವ ಹಿನ್ನಲೆಯಲ್ಲಿ ಇಷ್ಟಲಿಂಗ ಪೂಜೆಯ ಅನುಭವವಿದೆ, ಅನುಭಾವವಿದೆ, ಆನಂದವಿದೆ, ಪರಮಾನಂದವಿದೆ.

ಬಸವಾದಿ ಶರಣರ ದೇಹ, ಮನಸು, ಭಾವನೆ ಒಂದೇ ಆಗಿರಲು ಮೂಲ ಕಾರಣ ಇಷ್ಟಲಿಂಗ ಪೂಜಾ ವಿಧಾನವನ್ನು ಪ್ರತಿನಿತ್ಯ ಅಳವಡಿಸಿ, ರೂಢಿಯಾಗಿಸಿಕೊಂಡಿರುವುದು. ಈ “ದೇಹ-ಮನಸು-ಭಾವನೆ” ಇವುಗಳನ್ನೆಲ್ಲಾ ಒಂದುಗೂಡಿಸಿ, ಈ ಸೃಷ್ಟಿ ಬೇರೆ ಅಲ್ಲ, ತಾನು ಬೇರೆ ಅಲ್ಲ, ಎಲ್ಲವೂ ಒಂದೇ ಎನ್ನುವ ಒಮ್ಮನದ ಬದುಕನ್ನು ಬಾಳಿದರು. ಈ ಸಂದರ್ಭಕ್ಕೆ ಬಸವಣ್ಣನ ಒಂದು ವಚನ ಜ್ಞಾಪಿಸಿಕೊಳ್ಳಬಹುದು.
‘ಹೊತ್ತಾರೆ ಎದ್ದು ಅಗ್ಫವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ ಮೃತ್ಯುವೊಯ್ಯದ ಮುನ್ನ ತೊತ್ತುಗೆಲಸವ ಮಾಡು ಕೂಡಲಸಂಗಮದೇವನ’
ಈ ವಚನದಲ್ಲಿ ಲಿಂಗ ಧರಿಸಿದವನು, ಬೆಳಿಗ್ಗೆ ಬೇಗ ಎದ್ದು, ನೀರು, ಪತ್ರೆಗಳ ತಂದು, ಬಿಸಿಲು ಏರುವುದರೊಳಗೆ ಪೂಜೆ ಮಾಡಿಕೊಳ್ಳ ಬೇಕು. ಮನುಷ್ಯನ ಜೀವಿತಾವಧಿಯ ಸಮಯ ಮುಗಿದು ಹೋದರೆ, ಕೇಳುವವರು ಯಾರೂ ಇರುವುದಿಲ್ಲ. ಅಥವಾ ಕೇಳುವವರಿದ್ದರೂ, ಉತ್ತರಿಸಲು ಮನುಷ್ಯನ ದೇಹದಲ್ಲಿ ಪ್ರಾಣವಿರುವುದಿಲ್ಲ. ಸಾವು ಬಂದು ಆಕ್ರಮಿಸುವ ಮೊದಲು ಲಿಂಗಪೂಜೆ ಮಾಡಬೇಕು, ಹಾಗೆಯೇ ದುಡಿಯಬೇಕು. ಹೀಗೆ ಹೇಳಿರುವ ಬಸವಣ್ಣನ ಉದ್ದೇಶ “ಕಾಯಕ-ದಾಸೋಹ-ಪ್ರಸಾದ” ದಲ್ಲಿ ಅಡಗಿದೆ.

ಬಸವಾದಿ ಶರಣರ ಚಿಂತನೆ ವಿಭಿನ್ನವಾಗಿದೆ. ಮನುಕುಲದ ಶ್ರೇಯಸ್ಸಿಗಾಗಿ ಆತ್ಮಾವಲೋಕನ ಮಾಡಿಕೊಂಡರು. ಈ ಪ್ರಪಂಚಕ್ಕೆ ಬಂದು ನೆಲೆಸುವ ಮನುಷ್ಯ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಹಾಗಾಗಲು ದೇಹ, ಮನಸು, ಭಾವನೆಗಳು ಒಂದಾಗಬೇಕು. ಆದರೆ ದೇಹದ ಬಯಕೆಗಳ ಹಿಂದೆ ಹುಚ್ಚು ಮನಸು ಓಡುತ್ತದೆ. ಮನಸಿನೊಂದಿಗೆ ಭಾವನೆಗಳು ರಂಗುರಂಗಿನ ಗರಿಗೆದರುತ್ತವೆ. ಅದು ಒಳ್ಳೆಯದೊ? ಕೆಟ್ಟದೊ? ಅಥವಾ ಅದರಾಚಿಗಿನ ಇನ್ನು ಏನೇನೊ? ಏಕೆಂದರೆ ಬುದ್ಧಿ ಜೀವಿಯಾದ ಮಾನವನ ಅಂತರಾಳ ತಿಳಿಯುವುದು ಬಲುಕಷ್ಟ. ಮನುಷ್ಯನ ವಿಚಿತ್ರವಾದ ಮನಸ್ಥಿತಿಯನ್ನು ಸಮತೋಲನದಲ್ಲಿ ಇಟ್ಟುಕೊಂಡರೆ, ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಜೀವನದಲ್ಲಿ ಸಂತುಲನೆ ಸಾಧ್ಯ. ಅದಕ್ಕಾಗಿ ವ್ಯಕ್ತಿಯ ಔನತ್ಯ, ಉನ್ನತಿ, ವಿಕಾಸಕ್ಕಾಗಿ ಬಸವಣ್ಣ ನೀಡಿದ ಉಡುಗೊರೆ ಇಷ್ಟಲಿಂಗ ಪೂಜೆ.

ಇಂತಹ ಇಷ್ಟಲಿಂಗ ಪೂಜೆಯನ್ನು ಅಕ್ಕ ತನ್ನ ದೈನಂದಿನ ಕ್ರಿಯೆಯಲ್ಲಿ ಅಳವಡಿಸಿಕೊಂಡಾಗ ಆದ ಆನಂದವನ್ನು ಮೇಲಿನ ವಚನ ಅಭಿವ್ಯಕ್ತಿಸುತ್ತದೆ. ಲಿಂಗ ಪೂಜೆಯ ಅಂತಿಮ ಹಂತ “ಲಿಂಗಾಂಗ ಸಾಮರಸ್ಯ”. ಈ ಗಮ್ಯವನ್ನು ತಲುಪಿದರೆ ಸತ್-ಚಿತ್-ಆನಂದ ಬ್ರಹ್ಮಾನಂದದ ಸ್ಥಿತಿ. ಅಲ್ಲಿ ನಾನು ಎನ್ನುವ ಅಹಂಭಾವವು ಅಳಿದು, ಅಂಗ ಮತ್ತು ಲಿಂಗ ಒಂದಾದ ಭಾವಸಾಕ್ಷಿ. ಸಾಮಾನ್ಯರಿಗೆ ನಿಗೂಢವೆನಿಸಬಹುದು, ಆದರೆ ಸಾಧಕರಿಗೆ ಅದು ಬಯಲು ದರ್ಶನ! ಆಗ ಮೈಮರೆತ ಅಕ್ಕನಿಗೆ ತಾನು ಮಾಡಿದ್ದೆಲ್ಲಾ ಲಿಂಗಕ್ಕೆ ಎನಿಸುತ್ತದೆ. ತಾನೇ ಸ್ವಯಂ ಲಿಂಗವಾದ ಬಳಿಗ ಅಂತರಂಗ, ಬಹಿರಂಗ ಎನ್ನುವ ಭೇದ ಅಳಿದ ಭಾವ. ಆ ದೇವ ಚೆನ್ನಮಲ್ಲಿಕಾರ್ಜುನ ಒಬ್ಬನೇ ಲಿಂಗಪತಿ. ಈ ಭೂಮಿಯ ಮೇಲೆ ಉಸಿರಾಡುವ ಮಾನವರೆಲ್ಲಾ ಶರಣಸತಿ. ಲೆಕ್ಕವಿಲ್ಲದಷ್ಟು ಶರಣಸತಿಯರ ಮಧ್ಯೆ ತಾನೊಂದು ಹುಲ್ಲುಕಡ್ಡಿಗೆ ಸಮ. ಅಸಂಖ್ಯಾತರ ನಡುವೆ ತಾನು ಹತ್ತರ ಗೂಡ ಹನ್ನೊಂದಾಗಿ ಬದುಕುವೆ ಎಂದು ಹೇಳುವ ಅಕ್ಕನ ಡೌನ್ ಟು ಅರ್ತ್ ಸರಳತೆಗೆ ತಲೆ ಬಾಗುತ್ತದೆ.

ಪ್ರತಿನಿತ್ಯ ನಮ್ಮ ಜೀವನದ ಓಟದಲ್ಲಿ ಏನೇನೊ ಮಾಡುವ ಮಹತ್ವಾಕಾಂಕ್ಷೆ. ಅದಕ್ಕಾಗಿ ವಿಶೇಷ ಸಿದ್ಧತೆ. ಯಶಸ್ಸಿನ ಮಾರ್ಗ ಕಂಡುಕೊಳ್ಳುವ ಪ್ರಯತ್ನ. ಕೊನೆಗೊಂದು ದಿನ ಎಲ್ಲವೂ ಜಯ. ಆ ಜಯದ ಪ್ರತಿಫಲವಾಗಿ ನಾನು ಮಾಡಿದೆ ಎನ್ನುವ ಅಹಂಭಾವ ಮನುಷ್ಯನ ಸಹಜ ಗುಣ. ಈ ಗುಣವನ್ನು ಗೆಲ್ಲುವ ತಂತ್ರವನ್ನು ಅಕ್ಕ ಬಹಳ ನವಿರಾಗಿ, ಮೃದುವಾಗಿ, ಹಿತಭಾಷಿಣಿಯಾಗಿ ನುಡಿದಿದ್ದಾಳೆ. ಅವಳು ಯಾರನ್ನೂ ದೂಷಿಸುವುದಿಲ್ಲ, ಯಾರನ್ನೂ ಬೈಯುವುದಿಲ್ಲ, ಯಾರನ್ನೂ ಹೀಯಾಳಿಸುವುದಿಲ್ಲ, ಯಾರನ್ನೂ ಅಪಮಾನಿಸುವುದಿಲ್ಲ, ತನ್ನನ್ನೇ ತಾನು ಪ್ರಾಯೋಗಿಕವಾಗಿ ತೆಗೆದುಕೊಂಡು, ಉದಾಹರಣೆಯಾಗಿ ಇಟ್ಟುಕೊಂಡು, ತನ್ನ ಮೇಲೆ ಆ ತಂತ್ರವನ್ನು ಪ್ರಯೋಗಿಸಿಕೊಂಡು, ವೈಯಕ್ತಿಕ ನೆಲೆಯಲ್ಲಿ ಮೊದಲು ತನ್ನನ್ನು ಸರಳೀಕೃತಗೊಳಿಸಿಕೊಂಡು, ತನಗೆ ತಿಳಿದಂತೆ ತನಗೆ ತಾನೇ ಹೇಳಿಕೊಳ್ಳುತ್ತಾಳೆ. ಅದಕ್ಕಾಗಿಯೇ ಅಕ್ಕನನ್ನು ವೈರಾಗ್ಯನಿಧಿ ಎನ್ನುವುದು, ಜಗನ್ಮಾತೆ ಎನ್ನುವುದು, ವೀರಾಗಿಣಿ ಎನ್ನುವುದು. ಅವಳ ಆ ಸಹನೆಯೇ ದಿವ್ಯಮಂತ್ರ.

ಹೀಗೆ ನಾವು ಬೇರೆಯವರನ್ನು ತಿದ್ದಲು ಹೋಗುವುದಕ್ಕಿಂತ ಮೊದಲು, ಅಕ್ಕನಂತೆ ನಮ್ಮನ್ನು ನಾವು ತಿದ್ದಿಕೊಳ್ಳಬೇಕು ಎನ್ನುವ ಕಿವಿಮಾತು ಕೂಡ ಈ ವಚನದ ಭಾವದಲ್ಲಿ ಅಡಗಿದೆ. ಎಂದೂ, ಯಾವತ್ತೂ, ಯಾರನ್ನೂ ನೋಯಿಸಬಾರದು ಎನ್ನುವ ಕಳಿಕಳಿ ಅಕ್ಕನಲ್ಲಿದೆ. ಇಂತಹ ಅಕ್ಕನ ಆದರ್ಶ ನಮ್ಮದಾಗಲಿ.

ಸಿಕಾ

Don`t copy text!