ಕವಿತೆ-ಸವಿತೆ

ಕವಿತೆ-ಸವಿತೆ
ಅವಳಿಗೆ ಕಣ್ಣಿಲ್ಲ ಕಿವಿಯಿಲ್ಲ
ಬಾಯಿಲ್ಲ ಕೈಯಿಲ್ಲ
ರುಂಡ ಮಾಲೆಯಿಲ್ಲ ಆದರೂ
ಮಾತನಾಡುತ್ತಾಳೆ
ಕೇಳುತ್ತಾಳೆ
ನಡೆಯುತ್ತಾಳೆ
ಓಡಿದರೆ ಓಡುತ್ತಾಳೆ
ಆಸೆಯ ಕನಸು ಕಟ್ಟಿ ಕುಣಿಯುತ್ತಾಳೆ
ಅಲ್ಲಿ ಇಲ್ಲಿ ಎಲ್ಲಲ್ಲೋ
ಹೆರುತ್ತಾಳೆ
ಬಸ್ಸಿನಲ್ಲಿ ರೈಲಿನಲ್ಲಿ
ಕಛೇರಿಯಲ್ಲಿ ಮನೆಯಲ್ಲಿ
ಬಸ್ ನಿಲ್ದಾಣಧಲ್ಲೂ
ಹಾಕುತ್ತಾಳೆ
ನಾಯಿ ಕುಣ್ಣಿ ಹಾಗೆ
ಊರ ತುಂಬ ಮರಿಗಳು
ಹೇಳುವರು ಕೇಳುವರು ಮಧ್ಯ
ಮನದಲ್ಲೇ ಮನೆ ಮಾಡಿ
ಮಲಗಿ ಬಿಡುತ್ತವೆ
ಹಡೆದ ಅಪ್ಪ ಯಾರೋ ತಾಯಿಯಾರೋ
ತೂಕಡಿಸುತ್ತವೆ
ಒಂದೊಂದು ಸಾರಿ
ಬಿರುಗಾಳಿ ತಂಗಾಳಿ
ಚದುರಿ ಹೋಗುವ ಅಲೆ
ಬಿರುದು ಬಾವಲಿಗಿಲ್ಲ
ಬಂಧು -ಬಳಗ ಎಲ್ಲವೂ
ಬಣ್ಣ ಬಣ್ಣದ ಬದುಕಿನ ಚಿತ್ತಾರ
ಹೂ ರಸ ಗಂಧ ಗಾಳಿ
ಬಿದ್ದಲ್ಲಿಯೇ ಬಿದ್ದು ನಡುಗುವ
ಬಸವಳಿಯುವ ಇವಳಿಗೆ
ಇವಳೇ ಸಾಟಿ
ರನ್ನ ಫಂಪನನ್ನೂ
ಮೀರಿಸುವ ಚತುರೆ ಅಪ್ಸರೆ
ಹೊಳೆಯುವ ಕಂಗಳಲಿ ತುಡುಕಾಡುವ ನವಿರಾದ ನೈದಿಲೆ
ಬೈದರೆ ಬೆಚ್ಚಿ ಬೀಳುವ ಸವಿತೆ
ಕೈ ಮಾಡಿ ಕರೆಯುತ್ತಿದ್ದಾಳೆ ಕವಿತೆ
ನೀನೇ ತಂದೆ ತಾಯಿ ಬಂಧು-ಬಳಗ ಎನಗೆ


ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Don`t copy text!