ಅರ್ಥಶಾಸ್ತ್ರದಲ್ಲಿ 2023ರ ನೋಬೆಲ್: ಪ್ರೊ.ಕ್ಲಾಡಿಯಾ ಗೋಲ್ಡಿನ್
ಪ್ರೊ.ಕ್ಲಾಡಿಯಾ ಗೋಲ್ಡಿನ್ ರವರು 2023ನೇ ಸಾಲಿನ ಆರ್ಥಿಕ ವಿಜ್ಞಾನದ ನೋಬೇಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1969 ರಿಂದ ಪ್ರೊ. ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ಸ್ವೆರಿಜಸ್ ರಿಕ್ಸ್ ಬ್ಯಾಂಕ್‌ವು ಆರ್ಥಿಕ ವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿಯನ್ನು ನೀಡತ್ತಾ ಬಂದಿದೆ. “ಮಹಿಳಾ ಕಾರ್ಮಿಕ ಮಾರುಕಟ್ಟೆಯ ಫಲಿತಾಂಶಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ”, ಪ್ರೊ.ಕ್ಲಾಡಿಯಾ ಗೋಲ್ಡಿನ್‌ರವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಲಿಂಗ ವ್ಯತ್ಯಾಸಗಳ ಪ್ರಮುಖ ಅಂಶಗಳನ್ನು ಇವರು ಒತ್ತಿ ಹೇಳಿದ್ದಾರೆ. ಶತಮಾನಗಳಿಂದ ಮಹಿಳೆಯರ ಗಳಿಕೆ ಮತ್ತು ಕಾರ್ಮಿಕ ಮಾರುಕಟ್ಟೆಯ ಭಾಗವಹಿಸುವಿಕೆಯ ಸಮಗ್ರ ಖಾತೆಯನ್ನು ಒದಗಿಸಿದವರಿಲ್ಲಿ ಇವರು ಮೊದಲಿಗರಾಗಿದ್ದಾರೆ.
ಪ್ರಸ್ತುತ ಪ್ರೊ. ಕ್ಲೌಡಿಯಾ ಗೋಲ್ಡಿನ್ ಅವರು ಅಮೇರಿಕನ್ ಅರ್ಥಶಾಸ್ತ್ರಜ್ಞರಾಗಿದ್ದು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅಂದರೆ 2021 ರಲ್ಲಿ ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್‌ನಿಂದ ಪ್ರಕಟವಾದ ಅವರ ಪ್ರಮುಖ ಕೃತಿ ಎಂದರೆ “ಕರಿಯರ್ ಆ್ಯಂಡ್ ಫ್ಯಾಮಿಲಿ”: ವಿಮನ್ಸ್ ಸೆಂಚುರಿ -ಲಾಂಗ್ ಜರ್ನಿ ಟುವರ್ಡ್ ಇಕ್ವಿಟಿ ಆಗಿದೆ. ಆರ್ಥಿಕ ಇತಿಹಾಸಕಾರರು ಹಾಗೂ ಕಾರ್ಮಿಕ ಅರ್ಥಶಾಸ್ತ್ರಜ್ಞರೂ ಆದ, ಗೋಲ್ಡಿನ್ ಅವರ ಸಂಶೋಧನೆಯು ಮಹಿಳಾ ಕಾರ್ಮಿಕ ಶಕ್ತಿ, ಗಳಿಕೆಯಲ್ಲಿನ ಲಿಂಗ ಅಂತರ, ಆದಾಯದ ಅಸಮಾನತೆ, ತಾಂತ್ರಿಕ ಬದಲಾವಣೆ, ಶಿಕ್ಷಣ ಮತ್ತು ವಲಸೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ.
ಜಾಗತಿಕ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರು ಅತ್ಯಂತ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಮತ್ತು ಅವರು ಕೆಲಸ ಮಾಡುವಾಗ ಪುರುಷರಿಗಿಂತ ಕಡಿಮೆ ಗಳಿಸುತ್ತಾರೆ ಎಂಬ ವಿಚಾರಗಳನ್ನು ಅಧ್ಯಯನಗಳ ಮುಖಾಂತರ ಪ್ರಚುರ ಪಡಿಸಿ ಕ್ಲಾಡಿಯಾ ಗೋಲ್ಡಿನ್ ಅವರು US ನಿಂದ 200 ವರ್ಷಗಳ ಡೇಟಾವನ್ನು ಸಂಗ್ರಹಿಸಿ, ಕಾಲಾನಂತರದಲ್ಲಿ ಗಳಿಕೆ ಮತ್ತು ಉದ್ಯೋಗ ದರಗಳಲ್ಲಿ ಲಿಂಗ ವ್ಯತ್ಯಾಸಗಳು ಹೇಗೆ ಮತ್ತು ಏಕೆ ಬದಲಾಗಿವೆ ಎಂಬುದನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.“ಇಪ್ಪತ್ತನೇ ಶತಮಾನದ ಅವಧಿಯಲ್ಲಿ, ಮಹಿಳೆಯರ ಶಿಕ್ಷಣದ ಮಟ್ಟಗಳು ನಿರಂತರವಾಗಿ ಹೆಚ್ಚುತ್ತಿವೆ ಮತ್ತು ಹೆಚ್ಚಿನ ಆದಾಯದ ದೇಶಗಳಲ್ಲಿ ಅವರು ಈಗ ಪುರುಷರಿಗಿಂತ ಗಣನೀಯವಾಗಿ ಅಧಿಕಗೊಂಡಿದ್ದಾರೆ. ವೃತ್ತಿ ಯೋಜನೆಗೆ ಹೊಸ ಅವಕಾಶಗಳನ್ನು ನೀಡುವ ಮೂಲಕ ಗರ್ಭನಿರೋಧಕ ಮಾತ್ರೆಗಳ ಪ್ರವೇಶವು ಈ ಕ್ರಾಂತಿಕಾರಿ ಬದಲಾವಣೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಗೋಲ್ಡಿನ್ ನಿರೂಪಿಸಿದ್ದಾರೆ.
ಇಪ್ಪತ್ತನೇ ಶತಮಾನದಲ್ಲಿ ಆಧುನೀಕರಣ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಸ್ಥ ಮಹಿಳೆಯರ ಹೆಚ್ಚುತ್ತಿರುವ ಪ್ರಮಾಣಗಳ ಹೊರತಾಗಿಯೂ, ದೀರ್ಘಕಾಲದವರೆಗೆ ಮಹಿಳೆಯರು ಮತ್ತು ಪುರುಷರ ನಡುವಿನ ಗಳಿಕೆಯ ಅಂತರವು ಅಷ್ಟೇನೂ ಕಡಿಮೆಯಾಗಿಲ್ಲ. ಗೋಲ್ಡಿನ್ ಪ್ರಕಾರ, ವಿವರಣೆಯ ಭಾಗವೆಂದರೆ ಶೈಕ್ಷಣಿಕ ನಿರ್ಧಾರಗಳು, ಇದು ವೃತ್ತಿಜೀವನದ ಅವಕಾಶಗಳ ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ, ಯುವತಿಯರ ನಿರೀಕ್ಷೆಗಳು ಹಿಂದಿನ ತಲೆಮಾರಿನ ಅನುಭವಗಳಿಂದ ರೂಪುಗೊಂಡರೆ ಆಗ ಉದಾಹರಣೆಗೆ, ಮಕ್ಕಳು ಬೆಳೆದು ದೊಡ್ಡವರಾಗುವವರೆಗೆ ತಾಯಂದಿರು ತಮ್ಮ ಕೆಲಸಕ್ಕೆ ಮತ್ತೇ ಹಿಂದಿರುಗಿ ಸೇರಿಕೊಳ್ಳದೇ ಇದ್ದರೆ ಆರ್ಥಿಕ ಬೆಳವಣಿಗೆ ನಿಧಾನವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಐತಿಹಾಸಿಕವಾಗಿ, ಗಳಿಕೆಯಲ್ಲಿನ ಹೆಚ್ಚಿನ ಲಿಂಗ ಅಂತರವನ್ನು ಶಿಕ್ಷಣ ಮತ್ತು ಔದ್ಯೋಗಿಕ ಆಯ್ಕೆಗಳಲ್ಲಿನ ವ್ಯತ್ಯಾಸಗಳಿಂದ ವಿವರಿಸಬಹುದು.
“ಸಮಾಜಕ್ಕೆ ದುಡಿಮೆಯಲ್ಲಿ ಮಹಿಳೆಯರ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ”. “ಕ್ಲಾಡಿಯಾ ಗೋಲ್ಡಿನ್ ಅವರ ಅದ್ಭುತ ಸಂಶೋಧನೆಗೆ ಧನ್ಯವಾದಗಳು, ಭವಿಷ್ಯದಲ್ಲಿ ಯಾವ ಅಡೆತಡೆಗಳನ್ನು ಪರಿಹರಿಸಬೇಕಾಗಬಹುದು ಎಂದು ನಾವು ಈಗ ಆಧಾರವಾಗಿರುವ ಅಂಶಗಳ ಬಗ್ಗೆ ಹೆಚ್ಚು ತಿಳಿದಿದ್ದೇವೆ ” ಎಂದು ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿಗಾಗಿ ಸಮಿತಿಯ ಅಧ್ಯಕ್ಷರಾದ ಜಾಕೋಬ್ ಸ್ವೆನ್ಸನ್ ಹೇಳಿದ್ದಾರೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಲಿಂಗ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಇತಿಹಾಸವು ನಮಗೆ ಸಹಾಯ ಮಾಡುತ್ತದೆ ಕಳೆದ ಶತಮಾನದಲ್ಲಿ, ಹೆಚ್ಚಿನ ಆದಾಯದ ದೇಶಗಳಲ್ಲಿ ಪಾವತಿಸಿದ ಕೆಲಸದಲ್ಲಿ ಮಹಿಳೆಯರ ಪ್ರಮಾಣವು ಮೂರು ಪಟ್ಟು ಹೆಚ್ಚಾಗಿದೆ. ಇದು ಆಧುನಿಕ ಕಾಲದಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿನ ಅತಿದೊಡ್ಡ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳಲ್ಲಿ ಒಂದಾಗಿದೆ, ಆದರೆ ಗಮನಾರ್ಹವಾದ ಲಿಂಗ ವ್ಯತ್ಯಾಸಗಳು ಈಗಲೂ ಹಾಗೆಯೇ ಉಳಿದಿವೆ. 1980 ರ ದಶಕದಲ್ಲಿ ಸಂಶೋಧಕರು ಈ ವ್ಯತ್ಯಾಸಗಳ ಮೂಲವನ್ನು ವಿವರಿಸಲು ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿವೆ.
ಕ್ಲಾಡಿಯಾ ಗೋಲ್ಡಿನ್ ಅವರ ಸಂಶೋಧನೆಯು ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಐತಿಹಾಸಿಕ ಮತ್ತು ಸಮಕಾಲೀನ ಪಾತ್ರಗಳ ಬಗ್ಗೆ ನಮಗೆ ಹೊಸ ಹಾಗೂ ಆಶ್ಚರ್ಯಕರ ಒಳನೋಟಗಳನ್ನು ನೀಡುತ್ತವೆ. ಜಾಗತಿಕವಾಗಿ, ಎಲ್ಲಾ ಮಹಿಳೆಯರಲ್ಲಿ ಅರ್ಧದಷ್ಟು ಜನರು ಸಂಬಳದ ಉದ್ಯೋಗದಲ್ಲಿದ್ದಾರೆ, ಮಹಿಳೆಯರು ಕೆಲಸ ಮಾಡುವಾಗ, ಸಾಮಾನ್ಯವಾಗಿ ಕಡಿಮೆ ಗಳಿಸುತ್ತಾರೆ. ಮಹಿಳೆಯರು ಹಾಗೂ ಪುರುಷರ ನಡುವೆ ಉದ್ಯೋಗ ಮತ್ತು ಗಳಿಕೆಯ ಮಟ್ಟಗಳು ಹೇಗೆ ಮತ್ತು ಏಕೆ ಭಿನ್ನವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಾಮಾಜಿಕ ಆರ್ಥಿಕ ಕಾರಣಗಳಿಗಾಗಿ, ಅಲ್ಪ ಮತ್ತು ದೀರ್ಘಾವಧಿಯಲ್ಲಿ ಮುಖ್ಯವಾಗಿದೆ, ಏಕೆಂದರೆ ಸಮಸ್ಯೆಯು ಸಮಾಜದ ಸಂಪನ್ಮೂಲಗಳ ಅತ್ಯಂತ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದೆ. ಮಹಿಳೆಯರಿಗೆ ಕಾರ್ಮಿಕ ಮಾರುಕಟ್ಟೆಯಲ್ಲಿ ಭಾಗವಹಿಸಲು ಅದೇ ಅವಕಾಶವಿಲ್ಲದಿದ್ದರೆ ಅಥವಾ ಅವರು ಅಸಮಾನ ನಿಯಮಗಳಲ್ಲಿ ಭಾಗವಹಿಸಿದರೆ, ಶ್ರಮ ಮತ್ತು ಪರಿಣತಿ ವ್ಯರ್ಥವಾಗುತ್ತದೆ. ಉದ್ಯೋಗಗಳು ಹೆಚ್ಚು ಅರ್ಹ ವ್ಯಕ್ತಿಗೆ ಹೋಗದಿರುವುದು ಆರ್ಥಿಕವಾಗಿ ನಿಷ್ಪರಿಣಾಮಕಾರಿಯಾಗಿಬಿಡುತ್ತದೆ. ಅದಲ್ಲದೇ ಅದೇ ಕೆಲಸವನ್ನು ನಿರ್ವಹಿಸಲು ವೇತನವು ಭಿನ್ನವಾಗಿದ್ದರೆ, ಮಹಿಳೆಯರು ಕೆಲಸ ಮಾಡಲು ಮತ್ತು ವೃತ್ತಿಜೀವನವನ್ನು ಹೊಂದಲು ನಿರಾಕರಿಸುತ್ತಾರೆ.
ಆರ್ಥಿಕ ಇತಿಹಾಸದಲ್ಲಿ ಗೋಲ್ಡಿನ್ ಹಲವಾರು ವಿಭಿನ್ನ ಅಂಶಗಳು ಐತಿಹಾಸಿಕವಾಗಿ – ಸ್ತ್ರೀ ಕಾರ್ಮಿಕರ ಪೂರೈಕೆ ಮತ್ತು ಬೇಡಿಕೆಯ ಮೇಲೆ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ. ಪಾವತಿಸಿದ ಕೆಲಸ ಮತ್ತು ಕುಟುಂಬವನ್ನು ಸಂಯೋಜಿಸಲು ಮಹಿಳೆಯರ ಅವಕಾಶಗಳು, ಶಿಕ್ಷಣ, ಮಕ್ಕಳ ಪಾಲನೆಗೆ ಸಂಬಂಧಿಸಿದ ನಿರ್ಧಾರಗಳು, ತಾಂತ್ರಿಕ ನಾವೀನ್ಯತೆಗಳು, ಕಾನೂನುಗಳು, ರೂಢಿಗಳು, ಆರ್ಥಿಕತೆಯ ರಚನಾತ್ಮಕ ರೂಪಾಂತರಗಳು ಇವುಗಳನ್ನು ಒಳಗೊಂಡಿವೆ. ಪ್ರತಿಯಾಗಿ, ಅವರ ಫಲಿತಾಂಶಗಳು ಉದ್ಯೋಗ ಮತ್ತು ವೇತನ ದರಗಳು ಮಹಿಳೆಯರು ಹಾಗೂ ಪುರುಷರ ನಡುವೆ ಹೇಗೆ ಮತ್ತು ಏಕೆ ಭಿನ್ನವಾಗಿರುತ್ತವೆ ಎಂಬುದರ ಕುರಿತು ಉತ್ತಮ ತಿಳುವಳಿಕೆಯನ್ನು ಸಕ್ರಿಯಗೊಳಿಸಿವೆ. ಈ ಒಳನೋಟಗಳನ್ನು ಸಾಧಿಸಲು, ಗೋಲ್ಡಿನ್ ಇನ್ನೂರು ವರ್ಷಗಳ ಹಿಂದಿನ ಬದಲಾವಣೆಗಳನ್ನು ಸಹ ಅಧ್ಯಯನ ಮಾಡಿದ್ದಾರೆ. ಪ್ರೊ. ಆಲಿವರ್ ಓಸ್ಟ್ರೋಮ್ (2009) ಮತ್ತು ಪ್ರೊ. ಎಸ್ತರ್ ಡುಫ್ಲೋ (2019) ರವರ ನಂತರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪಡೆದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಕ್ಲಾಡಿಯಾ ಗೋಲ್ಡಿನ್ ರವರು ಪಾತ್ರರಾಗಿದ್ದಾರೆ
ಕ್ಲಾಡಿಯಾರವರ ಈ ಸಂಶೋಧನೆಗಳಿಂದಾಗಿ ಮಹಿಳಾ ಕಾರ್ಮಿಕ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ಸುಧಾರಣೆಗಳಾಗಬಹುದು ಎಂಬ ನಿರೀಕ್ಷೆ ಹೆಚ್ಚಿದಂತಾಗಿದೆ.
–ಫರ್ಹಾನಾಜ್ ಮಸ್ಕಿ
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾ.ನೆಲಮಂಗಲ