ಅಂಬಿಗ ಚೌಡಯ್ಯನವರ ವಚನಗಳಲ್ಲಿ ಗಣಾಚಾರ

ಅಂಬಿಗ ಚೌಡಯ್ಯನವರ ವಚನಗಳಲ್ಲಿ ಗಣಾಚಾರ

ಸಾತ್ವಿಕ ಸಿಟ್ಟು ಆಕ್ಷೇಪ ಗುಣ ವಿಡಂಬನೆ ಕಠೋರ ಟೀಕೆಗೆ ಶರಣಗಣದಲ್ಲಿಯೇ ಅಗ್ರ ಗಣ್ಯ ಅಂಬಿಗರ ಚೌಡಯ್ಯ
ಅಂಕಿತ: ಅಂಬಿಗರ ಚೌಡಯ್ಯ
ಕಾಯಕ: ದೋಣಿ ನಡೆಸುವ ಅಂಬಿಗ ವೃತ್ತಿ ಜನರನ್ನು ಹೊಳೆ ಕೆರೆಯನ್ನು ತನ್ನ ದೋಣಿಯ ಮೂಲಕ ದಾಟಿಸುವ ವೃತ್ತಿ.
ಅಂಬಿಗರ ಚೌಡಯ್ಯ 12 ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು. ಧರ್ಮ-ದೇವರು ಕೇವಲ ಶ್ರೀಮಂತರ ಸೋತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ-ಮೋಕ್ಷ ಕೇವಲ ನೇಮವಂತರ, ಸಂಪ್ರದಾಯಿ ಬ್ರಾಹ್ಮಣರ ಹತೋಟಿಯಲ್ಲಿದ್ದ ಮತ್ತು ಭಾಷ್ಯಕಾರರು ಹೇಳಿದ್ದೇ ಸರಿಯೆನ್ನುವ ವ್ಯವಸ್ಥೆಯಲ್ಲಿ ಚೌಡಯ್ಯ ಈ ಮೂವರನ್ನು ಕ್ರೂರ ಕರ್ಮಿಗಳೆಂದು, ಸಂದೇಹಿಗಳೆಂದು ಕಟುವಾಗಿ ಟೀಕಿಸುವುದರ ಮೂಲಕ ಇವರು ಹೋದ ದಾರಿಯಲ್ಲಿ ಯಾರೂ ಹೋಗ ಬಾರದೆಂದು ಸ್ಪಷ್ಟಪಡಿಸುತ್ತಾನೆ. ಇವರ ವಚನಗಳು ತುಂಬಾ ಖಾರವಾಗಿರುವುದು ಅವರ ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುಈತನ ಜೀವನದ ವಿವರಗಳನ್ನು ಸಾಹಿತ್ಯ ಚರಿತ್ರಕಾರರು ಈ ಕೆಳಕಂಡಂತೆ ಗುರುತಿಸಿದ್ದಾರೆ:

ಹೆಸರು: ಚೌಡಯ್ಯ
ಊರು: ಚೌಡದಾನಪುರ, ರಾಣಿಬೆನ್ನೂರು ತಾಲ್ಲೂಕು , ಹಾವೇರಿ ಜಿಲ್ಲೆ.
ಕಸುಬು: ದೋಣಿಯನ್ನು ನದಿ/ಹೊಳೆ/ತೊರೆಯಲ್ಲಿ ನಡೆಸುವುದು.
ದೊರೆತಿರುವ ವಚನಗಳು: 273

ಗಣಾಚಾರ
ಸತ್ಯದ ಪ್ರತಿಪಾದನೆಯನ್ನು ವ್ಯಂಗ್ಯ ವಿಡಂಬನೆ ತೀವ್ರವಾದ ಟೀಕೆಗಳ ಮೂಲಕ ತನ್ನ ಸಾತ್ವಿಕ
ಸಿಟ್ಟನು ತನ್ನ ಆಕ್ಷೇಪ ಮತ್ತು ಪ್ರತಿಭಟನೆಯ ಮೂಲಕ ಶಾಂತಿಯಿಂದ ಅಹಿಂಸಾತ್ಮಕವಾಗಿ ತೋರಿಸುವ ಆಚಾರವು. ಲಿಂಗಾಚಾರ ಸದಾಚಾರ ಶಿವಾಚಾರ ಮತ್ತು ಭೃತ್ಯಾಚಾರಗಳು ಧರ್ಮ ಸಂಹಿತೆ ಮತ್ತು ನೀತಿ ಸಂಹಿತೆಗೆ ಪ್ರಾಧಾನ್ಯತೆ ಕೊಟ್ಟರೆ ಗಣಾಚಾರ ಇದು ಇಂತಹ ಸೂಕ್ಷ್ಮವಾದ ಸಂಹಿತೆಗಳ ಸಂರಕ್ಷಣೆಗೆ ಆದ್ಯತೆ ನೀಡುತ್ತದೆ. ಇಲ್ಲಿ ಭಾವ ತೀವ್ರತೆಯು ಪ್ರಧಾನ .ಇದ್ದ ವಿಷಯವನ್ನು ನೇರವಾಗಿ ನಿರ್ದಾಕ್ಷಿಣ್ಯವಾಗಿ ಯಾವುದೇ ಮುಲಾಜಿಲ್ಲದೆ ರಾಜಿ ಸೂತ್ರವನ್ನು ಸಾರಾಸಗಟಾಗಿ ತಳ್ಳಿ ಹಾಕಿ ತತ್ವ ಪ್ರತಿಪಾದನೆ ಮಾಡಿ ಶರಣ ತತ್ವಗಳಿಗೆ ಯಾವುದೇ ಚ್ಯುತಿ ಬಾರದ ಹಾಗೆ ಕಾಪಾಡುವ ಮಹತ್ತರವಾದ ಜವಾಬ್ದಾರಿಯಾಗಿದೆ.
ಗಣಾಚಾರದಲ್ಲಿ ಬರುವ ತೆಕ್ಕೆ ಗಣಾಚಾರ (ಕಾಯಕ) ,ಕಂಬದ ಗಣಾಚಾರ (ಕಾಯಕ) ಮತ್ತು ಮುಳ್ಳಾವಿಗೆಯ (ಕಾಯಕ) ಅಂತ ಮುಂದೆ ಅನೇಕ ಆಚರಣೆಗಳು ಶೈವೀಕರಣಗೊಂಡಿರಬಹುದು. ಅವುಗಳಿಗೂ ಗಣಾಚಾರಕ್ಕೂ ಯಾವುದೇ ಸಂಬಂಧವಿಲ್ಲ .

ಭವಿಯನ್ನು ಭಕ್ತನನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗುವ ಬದ್ಧತೆ ಗಣಾಚಾರದ ಮುಖ್ಯ ಗುರಿಯಾಗಿದೆ

ಅಂಬಿಗರ ಚೌಡಯ್ಯ ಲಿಂಗ ತತ್ವ ನಿಷ್ಠನು ಏಕದೇವೋಪಾಸಕನು, ಇಷ್ಟಲಿಂಗ ಆರಾಧಕನು, ದೇವಾಲಯ ಗುಡಿಗುಂಡಾರ ಕಡು ವಿರೋಧಿ, ಇಷ್ಟಲಿಂಗ ಯೋಗ ಪ್ರತಿಯೊಬ್ಬ ಶರಣಧರ್ಮಿಗೆ ಕಡ್ಡಾಯ . ಇಲ್ಲಿ ಯಾವ ಭೇಧಭಾವ ಇಲ್ಲ. ದೇಹವನ್ನೇ ದೇವಾಲಯವಾಗಿಸಿಕೊಳ್ಳಲು ಅದು ಸಾಧನ ಎಂದನು. ಇಷ್ಟಲಿಂಗವನ್ನು ಪೂಜಿಸದೆ ಬೆಟ್ಟದ ಸ್ಥಾವರಲಿಂಗಕ್ಕೆ ಹೋಗಿ ಅಡ್ಡ ಬೀಳುವ ಮೂಢರನ್ನು ಕಂಡ ಚೌಡಯ್ಯ ಹೀಗೆ ಹೇಳಿದ್ದಾನೆ.

ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿಮೇಲಾಗಿ ಬೀಳುವ
ಲೊಟ್ಟೆಮೂಳರ ಕಂಡಡೆ
ಗಟ್ಟಿ ಪಾದ ರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ
ನಮ್ಮ ಅಂಬಿಗರ ಚೌಡಯ್ಯ.

ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಅಂಬಿಗರ ಚೌಡಯ್ಯ ನಿಜ ಶರಣನು. ಸಮಾಜದ ಅನಾಚಾರ, ಅತ್ಯಾಚಾರ, ಢಂಬಾಚಾರಗಳನ್ನೂ ನಿರ್ಭಿತಿಯಿಂದ ಕಟುವಾಗಿ ಟೀಕಿಸಿ ತನ್ನ ವಚನಗಳ ಮೂಲಕ ವೈಚಾರಿಕ ನಿಲುವುಗಳನ್ನು ಪ್ರಕಟಪಡಿಸಿದ ಮಹಾಮಾನವತಾವಾದಿ.

ಇಂತಹುದೇ ಇನ್ನೊಂದು ವಚನದಲ್ಲಿ ಅಂಬಿಗರ ಚೌಡಯ್ಯನು ತನ್ನ ಗಣಾಚಾರವನ್ನು ವ್ಯಕ್ತಪಡಿಸುತ್ತಾನೆ .

ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.

ಅಂದಿನ ಸಮಾಜದಲ್ಲಿಯೂ ಕೂಡ ನಾಡದೊಂಬರಾ ಕವಿ ಕಾಶಂಬರ ಹಾಕುವ ವೇಷಧಾರಿಗಳ ಲಾಂಛನಧಾರಿಗಳ ಕಂಡು ಕುಡಿಯುವ ವೀರ ಪೃವೃತ್ತಿ ಈತನ ವಚನಗಳಲ್ಲಿ ಕಾಣಬಹುದು.

ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲ ಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ,
ಕೂಳು ಪ್ರಸಾದವಲ್ಲ.
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ

ಇಲ್ಲಿ ಕಂಥೆ ಎಂದರೆ ಲಿಂಗವೆಂದು ತೆಗೆದುಕೊಳ್ಳಬಹುದು. ಲಿಂಗವ ಕೊಟ್ಟಾತ ಗುರುವಲ್ಲ ಕಾವಿ ಹೊತ್ತವ ಜಂಗಮನಲ್ಲ ನೀರು ತೀರ್ಥವಲ್ಲ ( ಪಾದೋದಕ ) ಕೂಳು ಪ್ರಸಾದವಲ್ಲ ,ಇವೆಲ್ಲುವುಗಳನ್ನು ಅಲ್ಲಗಳೆದು ಹೌದು ಎನ್ನುವವನ ಬಾಯಲ್ಲಿ ಅರ್ಧಮಣದ ಚಪ್ಪಲಿಯನ್ನು ಬಾಯಿಗೆ ಇಕ್ಕುವೆ ಎಂದು ಕೋಪಿಸಿಕೊಳ್ಳುತ್ತಾನೆ . ಅಂದಿನ ದಿನಗಳಲ್ಲಿ ಮಣ ಅಳತೆಯ ಸಾಧನ ಕಿಲೋ ಅಂದ ಹಾಗೆ ಬಂಗಾರವನ್ನು ಮಣಗಟ್ಟಲೆ ಕೂಡಿಡುವ ಶ್ರೀಮಂತಿಕೆಯ ಪದವಾದ ಮಣವನ್ನು ಚಪ್ಪಲಿಯ ತೂಕಕ್ಕೆ ಬಳಸುವ ದಿಟ್ಟ ಶರಣನು .

ಅಂಬಿಗ ಅಂಬಿಗ ಎಂದು
ಕುಂದ ನುಡಿಯದಿರು,
ನಂಬಿದರೆ ಒಂದೆ ಹುಟ್ಟಲಿ
ಕಡೆಯ ಹಾಯಿಸುವನಂಬಿಗರ ಚೌಡಯ್ಯ.

ನೆರೆ ತೊರೆ ಕೆರೆಯಲ್ಲಿ ಪ್ರವಾಸ ಮಾಡುವಾಗ ಪ್ರಯಾಣಿಕರು ಭಯದಿಂದ ಕುದಿದು ಕುಂದಿ ಭಯದಿಂದ ಸಾವಿಗೆ ಹೆದರುತ್ತ ಅಂಬಿಗ ಅಂಬಿಗ ಎಂದು ನುಡಿವ ಜನರಿಗೆ ನಂಬಿ ಕರೆದರೆ ಸಾಕು ಒಂದೇ ಹುಟ್ಟಿನಲ್ಲಿ ದಡ ಸೇರಿಸುವದಾಗಿ ಧೈರ್ಯದಿಂದ ಹೇಳುವ ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯ. ಇಲ್ಲಿ ಮೇಲು ನೋಟಕ್ಕೆ ಇದು ಒಂದು ಸಾಮಾನ್ಯ ವಚನವೆನಿಸಿದರೂ ಸಹಿತ ಆಧ್ಯಾತ್ಮಿಕ ದೃಷ್ಟಿಯಲ್ಲಿ ನಂಬಿದ ಸೃಷ್ಟಿಕರನನ್ನು ನಂಬಿ ಕರೆದೊಡೆ ಈ ಸಂಸಾರದ ಸಾಗದರಲ್ಲಿ ಒಂದೇ ಹುಟ್ಟಿನಲ್ಲಿ ಮುಕ್ತಿ ಎಂಬ ದಡವನ್ನು ತಲುಪಿಸಬಹುದು ಎಂದು ಸಾರುವ ಮಾರ್ಮಿಕ ವಚನವಾಗಿದೆ .
ಲಿಂಗ ತತ್ವದ ಬಗ್ಗೆ ಅತ್ಯಂತ ಕಾಳಜಿ ಪ್ರೀತಿ ತಳಮಳ ತೀವ್ರತೆಯ ಹೊಂದಿದ ಎಂಬಿಗರ ಚೌಡಯ್ಯನವರ ವಚನಗಳು ಓದಲು ಕೇಳಲು ಕರ್ಕಶವೆನಿಸಿದರೂ ಸಹಿತ ಅವುಗಳ ಹಿಂದಿನ ಆಶಯ ಕಾಳಜಿ ಹೇಳ ತೀರದು . ಗಣಾಚಾರಕ್ಕೆ ಹೇಳಿ ಮಾಡಿದ ವ್ಯಕ್ತಿತ್ವ ಅಂಬಿಗರ ಚೌಡಯ್ಯನವರದು .
ಲಾಂಛನಧಾರಿಗಳನ್ನು ವೇಷಧಾರಿಗಳನ್ನು ಕಪಟ ಕಳ್ಳ ಕುತಂತ್ರಿಗಳನ್ನು ಚಾಟಿ ಏಟಿನಿಂದ ಹೊಡೆಯುವ ದಿಟ್ಟ ಶರಣ ಅಂಬಿಗರ ಚೌಡಯ್ಯ ಒಬ್ಬ ಸತ್ಯದ ಅಗ್ರ ಪ್ರತಿಪಾದಕ..ನೇರ ನಡೆ ನುಡಿ ಪಾರದರ್ಶಕ ವ್ಯಕ್ತಿಯ ಮಾದರಿಯ ಮನಸ್ಸು .
ಭಾವಿಯ ಮನಸ್ಸನು ಕರಗಿಸಲು ಅಹಿಂಸಾತ್ಮಕವಾಗಿ ಕಠೋರ ಪದಗಳಿಂದ ಟೀಕಿಸಿ ಶರಣರ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೊನೆಗೆ ಇಂದಿನ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ ಐಕ್ಯವಾಗುತ್ತಾನೆ .

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 9552002338

Don`t copy text!