ಪುರೋಗಾಮಿ ಬಸವಣ್ಣ ಪ್ರತಿಗಾಮಿ ಲಿಂಗಾಯತರು.
ಹನ್ನೆರಡನೆಯ ಶತಮಾನವು ಭಾರತ ಭೂ ಖಂಡದಲ್ಲಿ ಕನ್ನಡ ನೆಲದಲ್ಲಿ ಹಚ್ಚಿದ ಸಮತೆಯ ಕಿಚ್ಚು ಹೊಸ ಕ್ರಾಂತಿಗೆ ನಾಂದಿಯಾಯಿತು.
ಬಸವಣ್ಣ ಈ ಸಮಗ್ರ ಕ್ರಾಂತಿಯ ಹರಿಕಾರ .ಜಗವು ಕಂಡ ಶ್ರೇಷ್ಠ ಪುರೋಗಾಮಿ ಪ್ರಗತಿಪರ ದಾರ್ಶನಿಕ ಕ್ರಾಂತಿಕಾರಿ ಬಸವಣ್ಣ.
ಆದರೆ ಆತನ ತತ್ವಗಳಲ್ಲಿ ನಂಬಿಕೆ ಇತ್ತ ಲಿಂಗಾಯತರು ಇಂದು ಜಾತಿಯ ಮಡುವಿನಲ್ಲಿ ಬಿದ್ದ ಪಶುಗಳಂತೆ ಸುಧಾರಿಸದೆ ಇನ್ನು ವೈದಿಕರ ಗುಲಾಮರಾಗಿ ಪ್ರತಿಗಾಮಿಯಾಗಿದ್ದು ಈ ನೆಲದ ದೊಡ್ಡ ದುರಂತದ ಸಂಗತಿಯಾಗಿದೆ.
ವರ್ಗ ವರ್ಣ ಆಶ್ರಮ ಲಿಂಗ ಭೇದರಹಿತ ಸಮಾಜ ಕಟ್ಟ ಬಯಸಿದ ಬಸವಣ್ಣ ಮತ್ತು ಆತನ ಸಂದೇಶಗಳು ಇಂದು ವಿರೂಪ ಸ್ಥಿತಿಯಲ್ಲಿ ಆಚರಿಸಲ್ಪಡುತ್ತವೆ .
ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎಂಬ ತತ್ವ ಗಳಿಗೆ ತೂರಿ, ಇಂದು ಮಠಗಳು ಆಶ್ರಮಗಳು ಶ್ರೇಣೀಕೃತ ವ್ಯವಸ್ಥೆಯನ್ನು ಹುಟ್ಟು ಹಾಕುತ್ತವೆ.ಪೂಜೆ ಜಪ ತಪ ನೇಮಗಳ ಮೌಢ್ಯದಲ್ಲಿ ಬಳಲುವ ಲಿಂಗಾಯತ ಸಮಾಜವು ಮುಕ್ತ ಮನಸಿನಲ್ಲಿ ವಚನಗಳ ಅಧ್ಯಯನಕ್ಕೆ ಬದ್ಧರಾಗಲಾರರು .
ಭ್ರಮೆ ಭ್ರಾಂತಿ ಉನ್ಮಾದ ಉತ್ಸಾಹ ಉತ್ಸವಗಳಲ್ಲಿ ಕಾಲ ಕಳೆಯುವ ಜನರು ಲಾಂಛಧಾರಿಗಳ ಗುಲಾಮರಾಗಿದ್ದಾರೆ.
ಹೊಸ ಜಗತ್ತಿಗೆ ಬಸವ ತತ್ವಗಳು ಇಂದು ಘಂಟಾ ಘೋಷವಾಗಿ ಪ್ರಚಲಿತಗೊಂಡರು. ಬಸವನ ವಾರಸುದಾರರು ಇನ್ನೂ ಮೌಢ್ಯ ಅಂಧ ಶೃದ್ಧೆಯಿಂದ ಜಡ ಸಮಾಜದಲ್ಲಿರುವ ಅತ್ಯಂತ ನೋವಿನ ಸಂಗತಿ..ನಮಗಿಂತ ಸಾವಿರ ಮೈಲಿ ಮುಂದಿರುವ ಬಸವಣ್ಣ ಲಿಂಗಾಯತರಿಗೆ ಪೂಜ್ಯನೀಯ ಅನುಕರಣೀಯ ಆದರ್ಶವಾಗಿದ್ದಾನೆ .ಆದರೆ ಲಿಂಗಾಯತರು ಬಸವಣ್ಣವರ ಭಾವ ಚಿತ್ರ ಮೂರ್ತಿ ಪೂಜೆಯಲ್ಲಿ ನಿರತರಾಗಿದ್ದಾರೆ.
ಜಾತಿ ಬೇಡವೆಂದಿದ್ದ ಲಿಂಗಾಯತರಲ್ಲಿ ಈಗ ನೂರಕ್ಕೂ ಅಧಿಕ ಜಾತಿಗಳು . ಮೂರ್ತಿ ಪೂಜೆ ವಿರೋಧಿಸಿದ ಬಸವಣ್ಣನವರೇ ಇಂದು ಪೂಜೆಗೆ ಒಳಗಾಗಿದ್ದಾರೆ.
ಬಸವಣ್ಣನವರ ತತ್ವಗಳನ್ನು ವಾಸ್ತವಿಕ ಜಗತ್ತಿನಲ್ಲಿ ಅಧ್ಯಯನ ಮಾಡಿ ತತ್ವ ನಿಷ್ಠತೆ ಬೆಳೆಸಿಕೊಂಡರೆ ಮಾತ್ರ ಬಸವಣ್ಣನವರಿಗೆ ನಾವು ಸಲ್ಲಿಸುವ ನೈಜ ಗೌರವವಾಗಿದೆ.
ವಚನಗಳನ್ನು ಅನುಸಂಧಾನ ಮಾಡಿ ಆಚರಣೆಗೆ ತರಬೇಕು. ವಚನಗಳು ಇಂದು ಭಾಷಣ ಲೇಖನ ಕೀರ್ತನ ಪುರಾಣಗಳ ಸಾಮಗ್ರಿ
ಬಸವಣ್ಣ ಶೋಷಿತರ ಪ್ರತಿನಿಧಿ
ಆದರೆ ಈಗ ಶೋಷಣೆ ಮಾಡುವವರ ಸಾಧನ ಬಸವಣ್ಣನವರ ಹೆಸರು ಹೇಳಿ ಬದುಕುವ ವ್ಯವಸ್ಥೆ. ವಚನಗಳು ಪಚನವಾಗದ ಹೊರತು ಕಲ್ಯಾಣ ಭವ್ಯ ಕ್ರಾಂತಿ ಸಫಲವಾಗಲಾರದು
-ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ ಪೂನಾ