ಲಿಂಗಾತೀತವಾದ ಆತ್ಮಿಕ ಭಾವ

ಅಕ್ಕನೆಡೆಗೆ ವಚನ – 50

ಲಿಂಗಾತೀತವಾದ ಆತ್ಮಿಕ ಭಾವ

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ
ಗಂಡು ಗಂಡಾದಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದಡೆ
ತನುವಿನ ಸೂತಕಕ್ಕೆ ತೆರಹುಂಟೆ ಅಯ್ಯಾ
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನೆಂಬ ಗುರುವಂಗೆ
ಜಗವೆಲ್ಲಾ ಹೆಣ್ಣು ನೋಡಾ ಅಯ್ಯಾ

ಈ ಸೃಷ್ಟಿ ಕ್ರಿಯೆಯಲ್ಲಿ ಮನುಷ್ಯ ಜನ್ಮವು ಒಂದು ಅದ್ಭುತ. ಪ್ರಕೃತಿಯಲ್ಲಿರುವ ಎರಡು ಜೀವಿಗಳು ಹೆಣ್ಣು ಹಾಗೂ ಗಂಡು ಬೆಸೆದಾಗ ಹೊಸ ಜೀವದ ಉದ್ಭವ. ಮಾಂಸದ ಮುದ್ದೆಯಂತೆ ಹುಟ್ಟಿದ ಜೀವವನ್ನು “ಮಗು” ಎಂದು ಸಂಬೋಧಿಸುತ್ತೇವೆ. ಅದು ಹೆಣ್ಣು ಆಗಿರಬಹುದು ಅಥವಾ ಗಂಡು ಆಗಿರಬಹುದು. ಆದರೆ ಆ ಮಗು ಬೆಳೆದಂತೆಲ್ಲಾ ಅದರ ದೇಹದಲ್ಲಿ ಜೈವಿಕ ವ್ಯತ್ಯಾಸಗಳು ಮೂಡಲಾರಂಭಿಸುತ್ತವೆ. ಇದನ್ನು ಜೇಡರ ದಾಸಿಮಯ್ಯನ ವಚನದಲ್ಲಿ ಅರ್ಥಪೂರ್ಣವಾಗಿ ಅಭಿವ್ಯಕ್ತವಾಗಿದೆ.
ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡೆವೆ ಸುಳಿವ ಆತ್ಮ
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣ ರಾಮನಾಥ”
ಈ ವಚನದಲ್ಲಿ ಹೆಣ್ಣು-ಗಂಡು ಎನ್ನುವ ವ್ಯತ್ಯಾಸ ಕೇವಲ ದೈಹಿಕವಾದುದು. ಆತ್ಮಕ್ಕೆ ಯಾವ ಭೇದವೂ ಇಲ್ಲ ಎಂದು ಘೋಷಿಸಲಾಗಿದೆ. ಇನ್ನೊಂದು ಅರ್ಥದಲ್ಲಿ ಇಡೀ ಮನುಕುಲದಲ್ಲಿ ಮನೆ ಮಾಡಿರುವ ಲಿಂಗಭೇದವನ್ನೇ ನಿರಾಕರಿಸುವ ಸಶಕ್ತ ಭಾವವಿದೆ.

ಮನುಷ್ಯ ಹೆಣ್ಣು ಅಥವಾ ಗಂಡು ಆಗಿ ಬೆಳೆದಂತೆಲ್ಲಾ ತಾರತಮ್ಯ ಮನೋಭಾವ ಸಾಮಾಜಿಕ ವ್ಯವಸ್ಥೆಯಲ್ಲಿ ಕಂಡು ಬರುತ್ತದೆ. ಪುರುಷ ಪ್ರಧಾನ ವ್ಯವಸ್ಥೆ ಗಂಡು ಶ್ರೇಷ್ಟ, ಹೆಣ್ಣು ಕನಿಷ್ಟ ಎನ್ನುವ ಭ್ರಮೆಯಲ್ಲಿದೆ. ಅದೇ ಗಂಡಿಗಂಟಿದ ಸೂತಕ. ಸ್ತ್ರೀವಾದದ ನೆಲೆಯಲ್ಲಿ ಆಲೋಚಿಸುವ ಹೆಣ್ಣು, ಗಂಡನ್ನು ಅಧಿಕಾರ, ದಬ್ಬಾಳಿಕೆ, ದೌರ್ಜನ್ಯದ ಪ್ರತೀಕವೆಂದು ಭಾವಿಸಿ ದ್ವೇಷಿಸಲಾಗುತ್ತಿದೆ. ಇದು ಹೆಣ್ಣಿಗಂಟಿದ ಸೂತಕ. ಜೈವಿಕ ವ್ಯತ್ಯಾಸವನ್ನು ಒಬ್ಬರಿಗೊಬ್ಬರು ಸೂತಕವೆಂದು ಭಾವಿಸದೆ, ಇದರ ಆಳಕ್ಕಿಳಿದು ಚಿಂತಿಸಬೇಕಾಗಿದೆ. ಇದರಲ್ಲಿ ಯಾವ ಸೂತಕವೂ ಮೊದಲಲ್ಲ, ಕಡೆಯಲ್ಲ. ಅಕ್ಕ ಹೇಳುವಂತೆ ಈ ಸೂತಕ ಅಂಟಿಕೊಂಡಿರುವುದು ಕೇವಲ ಮನಸಿಗೆ ಮಾತ್ರ. ಲಿಂಗಭೇದವನ್ನೂ ಮೀರಿ ಆಲೋಚಿಸುವ ಕ್ರಮ ರೂಢಿಸಿಕೊಂಡರೆ, ಮನದ ಸೂತಕ ಕಳೆದುಕೊಳ್ಳಲು ಸಾಧ್ಯ. ಹೀಗೆ ಅರ್ಥವಿಲ್ಲದ ಸೂತಕಕ್ಕೆ ಜೋತುಬಿದ್ದ ಜನ ಮರುಳು ಎಂದು ಅಕ್ಕ ಹೇಳುವ ಮಾತು ವಾಸ್ತವ.

ವಚನದ ಕೊನೆಯ ಎರಡು ಸಾಲಿನಲ್ಲಿ ಲಿಂಗಭೇದವನ್ನು ಬುಡ ಸಮೇತ ಅಳಿಸಿ ಹಾಕುವ ಉಪಾಯವನ್ನು ಅಕ್ಕ ಸೂಚಿಸಿರುವುದನ್ನು ಗಮನಿಸಬೇಕು. “ಲಿಂಗಾಂಗ ಸಾಮರಸ್ಯ”, “ಶರಣ ಸತಿ ಲಿಂಗ ಪತಿ” ಮತ್ತು “ಅರಿವೆ ಗುರು” ಈ ಮೂರು ಪರಿಕಲ್ಪನೆಗಳನ್ನು ಶರಣರು ರೂಢಿಸಿಕೊಂಡ ಬಗೆ ಮಾದರಿಯಾಗುತ್ತದೆ. ಶಿವಯೋಗದ ಲಿಂಗ ಧ್ಯಾನದಲ್ಲಿ ಲಿಂಗ ಮತ್ತು ಅಂಗ ಎರಡು ಬೇರೆ ಅಲ್ಲ ಎನ್ನುವ ಭಾವ ಮೂಡಿದಾಗ ದೇಹಾಭಿಮಾನ ಅಳಿಯುತ್ತದೆ. ಅಲೌಕಿಕ, ಪರಮಾತ್ಮ, ಪರತತ್ವ ಅಥವಾ ಆಂತರಿಕ ಪ್ರಜ್ಞೆಯ ಸಂಕೇತವಾದ ಅರಿವು ಜಾಗೃತವಾದ ಸ್ಥಿತಿಗೆ ಮನಸು ತಲುಪಿದಾಗ, ಅವನು “ಪತಿ”ಯಾಗುತ್ತಾನೆ. ಆಗ ಅರಿವು ಜಾಗೃತವಾಗಿ ಸ್ವಯಂ ಗುರು ಆಗಿಯೂ ಆಲೋಚಿಸುವ ಕ್ಷಮತೆ ವ್ಯಕ್ತಿಯಲ್ಲಿ ಸೃಷ್ಟಿಯಾಗುತ್ತದೆ. ಈ ಜಗತ್ತಿನ ಜನರೆಲ್ಲಾ ಹೆಣ್ತನದ ಭಾವದಿಂದ “ಸತಿ”ಯಾಗುವ ಬಗೆ ಮನಗಾಣಲು ಸಾಧ್ಯ. ಆಗ ಲಿಂಗಭೇದವಳಿದು ಸಮಾನತೆಯ ದೃಷ್ಟಿಕೋನ ಬೆಳೆಯುತ್ತದೆ.

ಶರಣರ ಪ್ರಕಾರ ಹೆಣ್ಣು, ಗಂಡು ಎಂದರೆ ಕೇವಲ ದೈಹಿಕ ಜೀವ ವೈವಿಧ್ಯತೆ ಅಷ್ಟೆ, ಅಲ್ಲಿ ಭೇದವನ್ನು ಕಾಣುವುದಿಲ್ಲ. ಇಂತಹ ಸಂವೇದನಾಶೀಲ ಮನಸ್ಥಿತಿ ನಮ್ಮದಾಗಬೇಕಿದೆ. ಶರಣರ ವೈಚಾರಿಕ, ತಾತ್ವಿಕ ನಿಲುವುಗಳು ನಮಗೆ ಎಟುಕಿದಾಗ ಮಾತ್ರ ಮನದ ಸೂತಕದಿಂದ ಪಾರಾಗಲು ಸಾಧ್ಯ. ಶರಣರ ಚಿಂತನೆ ಸಮಾಜದಲ್ಲಿ ಜಾರಿಗೊಂಡಿದ್ದರೆ ಇಂದಿನ ಸಮಾನತೆಯ ಹೋರಾಟದ ಅಗತ್ಯವೇ ಇರುತ್ತಿರಲಿಲ್ಲ.‌
ಫ್ರೆಂಚ್‌ ಲೇಖಕಿ ಮತ್ತು ಸ್ತ್ರೀವಾದಿ ಚಿಂತಕಿ ಸಿಮೋನ್ ದ ಬೊವಾ, ಈ ಜಗತ್ತಿನ ವ್ಯವಸ್ಥೆಯನ್ನು ಗಂಡು ತನ್ನ ದೃಷ್ಟಿಕೋನದಂತೆ ರಚಿಸಿಕೊಂಡಿದ್ದಾನೆಂದು ಹೇಳುತ್ತಿರಲಿಲ್ಲ. ಇಂದು ನಾವು ಸಮಾನತೆ, ಸಾಮರಸ್ಯದೊಂದಿಗೆ ಸಮಹೆಜ್ಜೆ ಹಾಕುವ ಕನಸು ನನಸಾಗಲೆಂದು ಬಯಸುತ್ತ, ಅತ್ತ ಕಡೆ ಒಂದು ಹೆಜ್ಜೆ ಇಡೋಣ.

ಸಿಕಾ

Don`t copy text!