ಆರತಿ-ಮಹಾ ಆರತಿ, ಅರ್ಚನೆ-ಕುಂಕುಮಾರ್ಚನೆ ಇಲ್ಲದ ಹಿಂದು ದೇವಾಲಯ ?

*ಆರತಿ-ಮಹಾ ಆರತಿ, ಅರ್ಚನೆ-ಕುಂಕುಮಾರ್ಚನೆ, ಅಭಿಷೇಕ-ಮಹಾರುದ್ರಾಭಿಷೇಕ, ಆರತಿ ತಟ್ಟೆ-ಹಣದ ಹುಂಡಿ ಇವ್ಯಾವುದು ಇಲ್ಲದ ಬೃಹತ್ ದೇವಾಲಯ ನೋಡಿದ್ದೀರಾ ?

ವಿಚಿತ್ರ ಆದರೂ ಸತ್ಯ. ಮುಂದುವರೆದ ಅಂತಿಮ ಭಾಗ-2

 

ಒಂದು ತಲೆಮಾರು ಸರಿದಂತೆ ಇಲ್ಲೊಂದು ಬೃಹತ್ ದೇವಾಲಯವಿತ್ತು ಎನ್ನುವ ವಿಚಾರ ಹೊಸ ತಲೆಮಾರಿನವರಿಗೆ ತಿಳಿದಿರಲಿಲ್ಲ. ಡ್ಯಾಮ್ ನಿರ್ಮಾಣವಾಗಿ ಏಳು (70 ವರ್ಷ) ದಶಕಗಳ ನಂತರ 2002 ರಲ್ಲಿ ಭೀಕರ ಬರಗಾಲ ಉಂಟಾಗಿ ಕೆ.ಆರ್‌.ಎಸ್‌ ಡ್ಯಾಮಿನಲ್ಲಿದ್ದ ಡೆಡ್ ಸ್ಟೋರೇಜ್ ನ ನೀರು ಖಾಲಿಯಾದಾಗ ಈ ಬೃಹತ್ ದೇವಾಲಯ ಹೊರ ಜಗತ್ತಿಗೆ ಗೋಚರವಾಯಿತಂತೆ. ಅಷ್ಟರಲ್ಲಾಗಲೇ ಒಂದು ತಲೆಮಾರು ಕಣ್ಮರೆಯಾಗಿ ಹೋಗಿತ್ತು. ಹೊಸ ತಲೆಮಾರಿಗೆ ಇದೊಂದು ವಿಸ್ಮಯದಂತೆ ಗೋಚರಿಸಿ ಅಪೂರ್ವ ಶಿಲ್ಪಕಲೆಯಿಂದ ಕೂಡಿದ ದೇವಾಲಯವನ್ನು ಸ್ಥಳಾಂತರಿಸಬೇಕೆಂಬ ಕೂಗೆದ್ದು ಅದಕ್ಕಾಗಿ ಹೋರಾಟಗಳು ಪ್ರಾರಂಭವಾದವು.

ಆಗ ಖೋಡೆ ಫೌಂಡೇಶನ್ ಅಧ್ಯಕ್ಷರಾದ ಶ್ರೀಹರಿ ಖೋಡೆಯವರು ಈ ಸ್ಥಳಕ್ಕೆ ಭೇಟ್ಟಿಕೊಟ್ಟು ಪರಿಶೀಲಿಸಿ ಬೃಹತ್ ದೇವಾಲಯ ಸಂಕೀರ್ಣವನ್ನು ಪುನರ್ ನಿರ್ಮಿಸಲು ಆಸಕ್ತಿ ತೋರಿದರಂತೆ. ಪ್ರಾರಂಭದಲ್ಲಿ ಈ ಬೃಹತ್ ದೇವಾಲಯ ಸಂಕೀರ್ಣವನ್ನು ಮೈಸೂರಿನ ಮಧುವನ ಪಾರ್ಕಿನಲ್ಲಿ ನಿರ್ಮಿಸಬೇಕೆಂದಿದ್ದರಂತೆ ಆದರೆ ಹೊಸ ಕನ್ನಂಬಾಡಿ ಗ್ರಾಮಸ್ಥರ ತೀವ್ರ ವಿರೋಧದ ಕಾರಣ ಹಿನ್ನಿರಿನಲ್ಲಿ ಮುಳುಗಿದ್ದ ದೇವಾಲಯದಿಂದ ಉತ್ತರಕ್ಕೆ ಒಂದು ಕಿಲೋಮೀಟರ್ ದೂರ ಹೊಸ ಕನ್ನಂಬಾಡಿ ಗ್ರಾಮಕ್ಕೆ ಹೊಂದಿಕೊಂಡಂತೆ ಪುನರ್ ನಿರ್ಮಿಸಲು 2004 ರಲ್ಲಿ ಪ್ರಾರಂಭಿಸಿದರಂತೆ.

ಕೆ.ಆರ್.ಎಸ್ ಡ್ಯಾಮ್ 124.80 ಅಡಿ ಭರ್ತಿಯಾದಾಗ ನೀರು ನಿಲ್ಲುವ ಅಂತಿಮ ಸ್ಥಳದಿಂದ ಹಾಗೂ ಮುಳುಗಿದ ದೇವಸ್ಥಾನದಿಂದ ಒಂದು ಕಿಲೋಮೀಟರ್ ಉತ್ತರಕ್ಕೆ ಹೊಂದಿಕೊಂಡಂತೆ 18 ಎಕರೆ ಭೂಮಿಯನ್ನು ಪಡೆದುಕೊಂಡು ನಿರ್ಮಾಣ ಕಾರ್ಯಕ್ರಮ ಪ್ರಾರಂಭಿಸಿದರು. ಮೊದಲ ಹಂತದಲ್ಲಿ ಮುಳುಗಿದ್ದ ಬೃಹತ್ ದೇವಾಲಯ ಸಂಕೀರ್ಣದ 1600 ಫೋಟೋಗಳನ್ನು ತೆಗೆದುಕೊಂಡು, ಪ್ರತಿ ವಿಗ್ರಹ,ಕಂಬ, ಕಲ್ಲು ಮಂಟಪಗಳಿಗೆ ವೈಜ್ಞಾನಿಕವಾಗಿ ನಂಬರನ್ನು ಕೊಟ್ಟು ಅವುಗಳನ್ನು ಸ್ಥಳಾಂತರಿಸಿಕೊಂಡು ನಿರ್ಮಾಣ ಕಾರ್ಯ ಪ್ರಾರಂಭಿಸಿದರಂತೆ. ತಮಿಳುನಾಡಿನ ನುರಿತ ತಂತ್ರಜ್ಞ ವಾಸ್ತುಶಿಲ್ಪಿಗಳ ಮಾರ್ಗದರ್ಶನದಲ್ಲಿ 11 ವರ್ಷ 1600 ಕುಶಲಕರ್ಮಿಗಳ ಶ್ರಮದಿಂದ ಈ ದೇವಾಲಯ ನಿರ್ಮಾಣವಾಗಿ 2017 ರಿಂದ ಭಕ್ತರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ.

4 ಎಕರೆ ಸಿಮೆಂಟ್ ಕಾಂಕ್ರೀಟಿನ ಎತ್ತರದ ಕಟ್ಟೆಯ ಮೇಲೆ ದೇವಸ್ಥಾನ ನಿರ್ಮಾಣವಾಗಿದೆ. ಕೆಆರ್ ಎಸ್ ಆಣೆಕಟ್ಟು ಭರ್ತಿಯಾದಾಗ ಹಿನ್ನೀರಿನ ಅಲೆಗಳು ಈ ಕಟ್ಟೆಗೆ ಅಪ್ಪಳಿಸುತ್ತವೆ. 4 ಎಕರೆ ಕಾಂಕ್ರೀಟಿನ ನಾಲ್ಕು ದಿಕ್ಕಿನಲ್ಲಿ ನಿರ್ಮಿಸಿರುವ ಸುಂದರವಾದ ಕೆತ್ತನೆಗಳುಳ್ಳ ನಾಲ್ಕು ಶಿಲಾಮಂಟಪಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಒಂದು ಎಕರೆ ಸುತ್ತಳತೆಯಲ್ಲಿ ಬೃಹತ್ ಕಲ್ಲಿನ ಮೊದಲ ಪ್ರಾಂಗಣದ ಮುಖ್ಯ ದ್ವಾರವನ್ನು ಪ್ರವೇಶಿಸಿ ಒಳಗೆ ಹೋದಾಗ ನಮ್ಮನ್ನು ಸ್ವಾಗತಿಸುವುದು ಮೂಲ ದೇವಾಲಯದಲ್ಲಿದ್ದ ಹೊಯ್ಸಳರ ಕಾಲದ ಶಿಲಾಶಾಸನ ಹಾಗೂ ಬೃಹತ್ತಾದ ಆರು ಫೋಟೋಗ್ರಾಫಿಗಳು. ಇವು ಹಿನ್ನಿರಿನಲ್ಲಿ ಮುಳುಗಿದ ದೇವಾಲಯದ ಪ್ರತಿ ಕೃತಿ, ಪುರಾತನ ದೇವಾಲಯದ ಕಲ್ಲು ಮಂಟಪಗಳಿಗೆ ವೈಜ್ಞಾನಿಕವಾಗಿ ನಂಬರನ್ನು ಕೊಟ್ಟು ಸಾಲಾಗಿ ಜೋಡಿಸಿಕೊಂಡಿರುವ ಚಿತ್ರಗಳು, ನೂತನ ಬೃಹತ್ ದೇವಾಲಯ ಸಂಕೀರ್ಣ ನಿರ್ಮಾಣದ ಚಿತ್ರಗಳು ಹಾಗೂ ಶ್ರೀ ಹರಿ ಖೋಡೆಯವರ ಬೃಹತ್ ಭಾವಚಿತ್ರಗಳು.

ಈ ದೇವಾಲಯದ ಒಳ ಪ್ರಾಂಗಣದ ಮೂರು ದಿಕ್ಕಿನಲ್ಲಿ 5*5 ಅಡಿ ವಿಸ್ತೀರ್ಣದ 36 ಚಿಕ್ಕ ಚಿಕ್ಕ ಗರ್ಭಗುಡಿಗಳಿವೆ.ಅವುಗಳ ಒಳಗೆ ಶಿವ ಪಾರ್ವತಿ,ಗಣೇಶ, ಅಷ್ಟಲಕ್ಷ್ಮಿಯರು,ಗಂಗಾ, ಯಮುನಾ,ನರ್ಮದಾ,ಕಾವೇರಿ, ಕೃಷ್ಣೆ.ಬುದ್ಧ,ವಿಷ್ಣುವಿನ ದಶಾವತಾರಗಳು ಹಾಗೂ ಸಪ್ತರ್ಷಿಗಳ ಸುಂದರ ಶಿಲ್ಪಗಳನ್ನು ಪ್ರತಿಷ್ಠಾಪಿಸಿದ್ದಾರೆ.ಮಧ್ಯಭಾಗದಲ್ಲಿ ಬೇಲೂರಿನ ಚನ್ನಕೇಶವನ ಗರ್ಭಗೃಹವನ್ನು ಹೋಲುವ ಸುಂದರ ಕೆತ್ತನೆಗಳುಳ್ಳ ವೇಣುಗೋಪಾಲ ಸ್ವಾಮಿಯ ಗರ್ಭಗುಡಿಯಿದೆ. ಗರ್ಭಗುಡಿಯೊಳಗೆ ತನ್ಮಯನಾಗಿ ಕೊಳಲನ್ನುದುತ್ತಿರುವ 5 ಅಡಿಯ ಕೃಷ್ಣನ ಸುಂದರ ಮೂರ್ತಿ ನಮ್ಮನ್ನು ಆಕರ್ಷಿಸುತ್ತದೆ.ಮುಳುಗಿದ ಬೃಹತ್ ದೇವಾಲಯ ಸಂಕೀರ್ಣದಲ್ಲಿದ್ಧ 70% ರಷ್ಟು ಕಲ್ಲು ಕಂಬಗಳಿಗೆ ಮರು ಪಾಲಿಶ್ ನೀಡಿ ಈ ಬೃಹತ್ ದೇವಾಲಯ ನಿರ್ಮಾಣದಲ್ಲಿ ಬಳಸಿಕೊಳ್ಳಲಾಗಿದೆ.

ಗರ್ಭಗುಡಿಯಲ್ಲಿ ಕೈಗೆ ದಾರ ಕಟ್ಟಿ ಹಣೆಗೆ ಕುಂಕುಮ, ಗಂಧ ಇಟ್ಟು ದಕ್ಷಣೆ ಕೇಳುವ ಪೂಜಾರಿಗಳಿಲ್ಲ. ಅರ್ಚನೆ ಕುಂಕುಮಾರ್ಚನೆ, ಅಭಿಷೇಕ ರುದ್ರಾಭಿಷೇಕ,
ಆರತಿ ಮಹಾಮಂಗಳಾರತಿ ಮಾಡಿಸಿ ಎನ್ನುವ ಪೂಜಾರಿಗಳ ಸದ್ದೇ ಇಲ್ಲ. ಘಂಟೆ ಜಾಗಟೆಗಳನ್ನು ಎಲ್ಲೂ ಕಟ್ಟಿಲ್ಲ. ತೀರ್ಥ ಪ್ರಸಾದಗಳ ವಿತರಣೆಯಂತೂ ಇಲ್ಲವೇ ಇಲ್ಲ .ಹಣೆಗೆ ಧರಿಸಿಕೊಳ್ಳುವ ವಿಭೂತಿ,ಕುಂಕುಮ,ಆದಾರ, ಗಂಧಗಳ ದರ್ಶನವೇ ಇಲ್ಲಿಲ್ಲ. ಆರತಿ ತಟ್ಟೆಯಂತೂ ಇಲ್ಲವೇ ಇಲ್ಲ. ಕಾಣಿಕೆ ಹಾಕುವ ಹುಂಡಿಗಳನ್ನು ಇಲ್ಲಿಟ್ಟಿಲ್ಲ. ಯಂತ್ರ ತಂತ್ರಗಳನ್ನು ಮಂತ್ರಿಸಿ ತಾಯತ ಕಟ್ಟುವ ಶಾಸ್ತ್ರಿಗಳಿಲ್ಲ. ತಿಥಿ ಮುಹೂರ್ತಗಳನ್ನು ಪಂಚಾಂಗ ನೋಡಿ ಬರೆದುಕೊಡುವ ಹುಸಿ ಜ್ಯೋತಿಷಿಗಳಿಗೆ ಇಲ್ಲಿ ಸ್ಥಾನವೇ ಇಲ್ಲ.

ದೇವಾಲಯದ ಒಳಗೆ ಪ್ರವೇಶಿಸುವ ಭಕ್ತರು ಹಾಗೂ ಪ್ರವಾಸಿಗರಿಗೆ ಕಾವಲುಗಾರರು ಸೂಚನೆ ಕೊಡುವುದೇನೆಂದರೆ ಇಲ್ಲಿ ಯಾರು ದುಡ್ಡು ತೆಗೆದುಕೊಳ್ಳುವುದಿಲ್ಲ, ದುಡ್ಡು ಕೊಡುವ ಪ್ರಯತ್ನ ಮಾಡಬೇಡಿ. ಮೌನ ಪ್ರಾರ್ಥನೆಯ ಮೂಲಕ ಭಕ್ತಿಯನ್ನು ಸಮರ್ಪಿಸಿ. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಹಾಗೂ ಇಲ್ಲಿನ ಕಲೆ ಹಾಗೂ ಶಿಲ್ಪ ಕಲೆಯನ್ನು ಕಣ್ತುಂಬಿಕೊಳ್ಳಿ ಎಂದು ನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ.

ಹೊಯ್ಸಳರ ಕಾಲದ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆ ಇಲ್ಲಿನ ಶಿಲೆಗಳಲ್ಲಿ ಅರಳಿ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ದೇವಾಲಯದ ಒಳಗಡೆ ಫೋಟೋ ಹಾಗೂ ವಿಡಿಯೋ ಮಾಡಿಕೊಳ್ಳಲು ಅವಕಾಶವಿಲ್ಲ. ದೇವಾಲಯದ ಹೊರ ಭಾಗದಲ್ಲಿ ಫೋಟೋ ತೆಗೆದುಕೊಳ್ಳಬಹುದು ಹಾಗೂ ವಿಡಿಯೋ ಮಾಡಿಕೊಳ್ಳಬಹುದು.

ದೇವಾಲಯದ ಹೊರಭಾಗದಲ್ಲಿ ಪ್ರತಿಷ್ಠಾಪಿಸಿರುವ ಹಂಪಿಯ ಕಲ್ಲಿನ ರಥದ ಪ್ರತಿ ಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.ದೇವಾಲಯದ ಹಿಂಭಾಗದಲ್ಲಿ ನಿಂತುಕೊಂಡು ಸೂರ್ಯಸ್ತದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

18 ಎಕರೆ ವಿಸ್ತೀರ್ಣದ ಈ ಬೃಹತ್ ಸಂಕೀರ್ಣದಲ್ಲಿ ಕಾಯಿ-ಕರ್ಪೂರ,ಹೂವು-ಪತ್ರಿ ಹಾಗೂ ದೇವರ ಫೋಟೋ,ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ವ್ಯಾಪಾರಿ ಮಳಿಗೆಗಳಿಗೆ ಇಲ್ಲಿ ಅವಕಾಶವನ್ನೇ ಕೊಟ್ಟಿಲ್ಲ. ಅಷ್ಟೇ ಅಲ್ಲ ಇಲ್ಲಿ ಸ್ನಾಕ್ಸ್ ಗಳನ್ನು ಮಾರಾಟ ಮಾಡುವ ಹಾಗೂ ಉಪಹಾರ ಗೃಹಗಳು ಇಲ್ಲಿಲ್ಲ. ಇಷ್ಟೆಲ್ಲಾ ಗೊಂದಲ ರಗಳೆಗಳಿಲ್ಲದ ಶಾಂತ ಸ್ಥಳದಲ್ಲಿ ಸಕಾರಾತ್ಮಕ (positive energy) ಶಕ್ತಿ ಪ್ರವಹಿಸುತ್ತದಂತೆ ಹಾಗೆ ಇಲ್ಲೂ ಸಹ ಸಕಾರಾತ್ಮಕ ಶಕ್ತಿ ತಣ್ಣನೆಯ ಗಾಳಿಯಲ್ಲಿ ಸುಳಿಯುವ ಅನುಭವವಾಗುತ್ತದೆ. ಅಂದರೆ
ಒಟ್ಟಾರೆ ವೇಣುಗೋಪಾಲಸ್ವಾಮಿ ಬೃಹತ್ ದೇವಾಲಯ ಸಂಕೀರ್ಣ ಪ್ರವಾಸಿಗರಿಗೆ ನೆಮ್ಮದಿಯನ್ನು ನೀಡುವ ಶಾಂತ ತಾಣವಾಗಿದೆ ಎನ್ನುವುದು ನನ್ನ ಅನುಭವವು ಹೌದು.

ಬಹುಶಃ ನಿಮ್ಮ ಬಸವ ಪರಂಪರೆಯ ಪವಿತ್ರ ಶ್ರದ್ಧಾ ಕೇಂದ್ರಗಳು ವೇಣುಗೋಪಾಲ ಸ್ವಾಮಿ ದೇವಾಲಯದಂತೆ ಶೋಷಣೆರಹಿತವಾಗಿ ಉಳಿದುಕೊಂಡಿವೆಯೇ ?ಎಂದು ತಿಳಿದುಕೊಂಡು ಬರುವ ಸಲುವಾಗಿ ಈ ದೇವಾಲಯಕ್ಕೆ ಭೇಟಿ ಕೊಡಲು ಸಹ ಪ್ರಯಾಣಿಕ ಉಪನ್ಯಾಸಕರು ಹೇಳಿದರೇನೋ ಗೊತ್ತಿಲ್ಲ ?

ಅವರ ಜೊತೆ ಮಾತನಾಡಲು ಫೋನ್ ಮಾಡಿದರೆ ನಾಟ್ ರೀಚಬಲ್ ಎಂದು ಬರುತ್ತಿದೆ.

ಏನೇ ಇರಲಿ ಅಂದಶ್ರದ್ದೆ,ಅರ್ಥಹೀನ ಆಚರಣೆಗಳನ್ನು ಪ್ರೋತ್ಸಾಹಿಸದ, ಪ್ರವಾಸಿಗರು ಹಾಗೂ ಭಕ್ತರನ್ನು ಮಾನಸಿಕವಾಗಿ,ದೈಹಿಕವಾಗಿ, ಆರ್ಥಿಕವಾಗಿ,ಶೋಷಣೆ ಮಾಡದೇ ಇರುವ ದೇವಾಲಯ ಕರ್ನಾಟಕವಷ್ಟೇ ಅಲ್ಲ ಇಡೀ ಭಾರತದಲ್ಲಿಯೇ ಇದೊಂದೇ ಇರಬೇಕೆನಿಸುತ್ತದೆ.ಇಂತಹ ವ್ಯವಸ್ಥೆಯನ್ನು ನಿರ್ಮಿಸಿದ ಖೋಡೆ ಫೌಂಡೇಶನ್ ನವರ ದೃಢಸಂಕಲ್ಪಕ್ಕೆ ಅಭಿನಂದನೆಗಳನ್ನು ಸಲ್ಲಿಸಲು ಶಬ್ದಗಳು ಸಾಲವು ಅನಿಸುತ್ತದೆ. ಪರೀಕ್ಷಿಸಿ ನೋಡಬೇಕೆಂದಿದ್ದರೆ ನೀವೊಮ್ಮೆ ಹೋಗಿ ಬನ್ನಿ…

 

ಗವಿಸಿದ್ದಪ್ಪ ಕೊಪ್ಪಳ

Don`t copy text!