ಪುಸ್ತಕ ಪರಿಚಯ
“ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು”
“2023ರ ‘ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳ ಕಾದಂಬರಿ “
ಕೃತಿಕಾರರು : ಗುಂಡುರಾವ್ ದೇಸಾಯಿ
“ಓದುಗ ಮನಗಳನ್ನು ಕೊಳ್ಳೆ ಹೊಡೆಯುವ
ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು”
ಈ ಫ್ರೆಂಡ್ ಅನ್ನೋ ಪದವೇ ಹಾಗೆ ಕಷ್ಟ, ಸಂಕಷ್ಟ, ಇಷ್ಟ, ಅಭೀಷ್ಟಗಳಿಗೆಲ್ಲ ಸಾತಿ ಕೊಡುವ, ಜೊತೆಗೆ ಧೈರ್ಯ, ನಂಬಿಕೆ, ಭರವಸೆ, ನಗು ತುಂಬುವ ನಿಷ್ಕಲ್ಮಷವಾದ ಸುಂದರ ಬಾಳಿನ ಕಳಶ. ಬಾಲ್ಯದಿಂದಲೇ ಪ್ರಾರಂಭವಾಗಿ ಮುಪ್ಪಿನವರೆಗೂ ಮುಂದುವರೆಯುವಷ್ಟು ಪ್ರಾಬಲ್ಯ ಹೊಂದಿದ ಭಾವನಾತ್ಮಕ ಪದ.
ಕೆಲವರಿಗೆಲ್ಲ ಫ್ರೇಂಡಾಗಿ ಕೇವಲ ಮಾನವರಷ್ಟೇ ಅಲ್ಲದೆ ಪ್ರಾಣಿ ತಳಿಯೂ ಇರುತ್ತವೆ. ಗೋವು, ಬೆಕ್ಕು, ನಾಯಿ, ಮಂಗ, ಕುದುರೆ, ಜಿಂಕೆ ಮುಂದುವರೆದು ಮೊಲವೂ ಫ್ರೆಂಡ್ ಆಗಿದ್ದು ಮತ್ತು ಚಲನಚಿತ್ರ ಈಗದಲ್ಲಿ ಒಬ್ಬ ಪ್ರೇಮಿ ನೊಣದ ರೂಪದಲ್ಲಿ ಬಂದದ್ದು ನಮಗೆಲ್ಲ ತಿಳಿದ ಮತ್ತು ಹಳೆಯ ವಿಚಾರ.
ಇದೇ ಸಂಸ್ಕೃತಿ ಮುಂದುವರೆಸಿ ನಮ್ಮ ಮಸ್ಕಿಯ ಹಿರಿಯ, ಪ್ರಬುದ್ಧ ಲಲಿತ ಸಾಹಿತ್ಯದ ಲೇಖಕರು ಸೊಳ್ಳೆಯನ್ನೂ ಫ್ರೆಂಡನ್ನಾಗಿಸಿ ಕರುನಾಡಿಗೆಲ್ಲಾ ತಮ್ಮ ಸಾಹಿತ್ಯದ ಛಾಪನ್ನು ಮೂಡಿಸಿ, ಸೊಳ್ಳೆಯನ್ನು ಭಾವನಾತ್ಮಕ, ವೈಜ್ಞಾನಿಕ, ವೈಚಾರಿಕ, ಗೆಳೆಯನನ್ನಾಗಿಸಿ ಸ್ನೇಹದ ಆಳ, ಅಗಲವನ್ನು ತಿಳಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯ ಜವಾಬ್ದಾರಿಯನ್ನು ಓದುಗನಲ್ಲಿ ಹೆಚ್ಚಿಸಿದ್ದಾರೆ.
ಇದೇನು ಹೇಳ್ತಾ ಇದೀರಾ, ಸೊಳ್ಳೆ … !!! ಮನುಷ್ಯಂಗೆ ಫ್ರೆಂಡ್ ಆಗೋದಾ! ಅದೂ ಭಾವನಾತ್ಮಕವಾಗಿ ಹೃದಯವನ್ನು ತಟ್ಟುತ್ತೆ ಅಂತೀರಾ! ಎಲ್ಲಿ ಸೊಳ್ಳೆ? ಎಲ್ಲಿ ಮಾನವ? ಎರಡೂ ಹಾವು ಮುಂಗೂಸಿ ಮನಸಿನವು. ಸೊಳ್ಳೆ ಸಿಕ್ಕರೆ ಹಿಸುಕದೇ ಬಿಡದ ಮಾನವ, ಮಾನವ ಸಿಕ್ಕರೆ ನೆತ್ತರು ಹೀರದೇ ಬಿಡದ ಸೊಳ್ಳೆ. ಇವರಿಬ್ಬರ ನಡುವೆ ಅದೆಂತಹ ಸ್ನೇಹ ಜರುಗುತ್ತದೆ ಅಂತೀರಾ? ಅದೂ “ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು” ಅನ್ನೋದು ಬೇರೆ!!!! ಎಂದು ಆಲೋಚಿಸುತ್ತಿದ್ದೀರಾ? ಬನ್ನಿ ನಿಮಗೆ ಇಂತಹ ಒಂದು ಸೂಪರ್ ಸ್ಪೆಶಲ್ ಗೆಳೆತನದ ಪರಿಚಯ ಮಾಡಿಸ್ತೀನಿ.
ಯಾರಿಗೂ ಬೇಡವಾದ ಈ ಸೊಳ್ಳೇನ ಫ್ರೆಂಡನ್ನಾಗಿಸಿ ಆ ಮೂಲಕ ಓದುಗರನ್ನೆಲ್ಲಾ ರಂಜಿಸುತ್ತಲೇ ಅನೇಕ ವೈಜ್ಞಾನಿಕ ಸತ್ಯಾಂಶಗಳನ್ನು, ಸೊಳ್ಳೆ ಪ್ರಭೇದದ ಪರಿಜ್ಞಾನವನ್ನು ಮಕ್ಕಳಾದಿಯಾಗಿ ಎಲ್ಲರಿಗೂ ಮನವರಿಕೆ ಮಾಡಿಸುತ್ತಾರೆ; ನಮ್ಮ ಮಸ್ಕಿಯ ಖ್ಯಾತ ಲಲಿತ ಪ್ರಬಂಧಕಾರರು, ಮಕ್ಕಳ ಸಾಹಿತಿಗಳು, ಮಾದರಿ-ಆದರ್ಶ ಶಿಕ್ಷಕರೂ ಆದ ಶ್ರೀಯುತ ಗುಂಡುರಾವ್ ದೇಸಾಯಿಯವರು.
“ಅಜ್ಜನ ಹಲ್ಲು ಸೆಟ್ಟು”, “ಮಾಸಂಗಿ”, “ಮಕ್ಕಳೇನು ಸಣ್ಣವರಲ್ಲ” ಎಂಬ ಮಕ್ಕಳ ಸಾಹಿತ್ಯಿಕ ಕೃತಿಗಳಿಂದ ಮನೆ-ಮನ ಮಾತಾದ ಶ್ರೀಯುತರು ಈಗ “ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು” ಎಂಬ ಹಾಸ್ಯಭರಿತ, ಅಷ್ಟೇ ವೈಚಾರಿಕ ಪಜ್ಞೆ ಮೂಡಿಸುವ, ತಾರ್ಕಿಕ ಚಿಂತನೆಗೆ ಹಚ್ಚುವ ಮಕ್ಕಳ ಕಾದಂಬರಿಯೊಂದಿಗೆ ನಮ್ಮನ್ನೆಲ್ಲ ಹೊಸ ಲೋಕಕ್ಕೆ ಕರೆದೊಯ್ಯುತ್ತಾರೆ.
ಈ ಕಾದಂಬರಿಯಲ್ಲಿ ಕಾಮನ ಹುಣ್ಣಿಮೆಯ ಪ್ರಸಂಗಗಳು, ಗೆಜ್ಜೆ ಸಪ್ಪಳಕ್ಕೆ ಕಥಾ ನಾಯಕ ಸಮ್ಮುವಿನ ಅಕ್ಕ ಬೆಚ್ಚಿಬಿದ್ದು ರಾತ್ರಿಯೆಲ್ಲಾ ಅಪ್ಪನನ್ನು ಅಲೆಸಿದ್ದು, ಸೆನ್ಸಾರ್ ಅಳವಡಿಸಿದ ತೊಟ್ಟಿಲು, ಶಾಲೆಯಲ್ಲಿನ ಇಂಗ್ಲೀಷ್ ಕಲಿಕೆ, ಇಂಗ್ಲೀಷ್ ಶಿಕ್ಷಕರ ಭಯ ಎಷ್ಟೆಂದರೆ ಕನಸಲ್ಲೂ ಬಂದು ಕಾಡುವಷ್ಟಿತ್ತು ಎನ್ನುವುದು, ಮತ್ತಿನ್ನನೇಕ ಮನೆಯ, ಶಾಲೆಯ ಪ್ರಸಂಗಗಳು ಓದುಗರನ್ನು ಆವರಿಸುತ್ತಲೇ ಹೋಗುತ್ತವೆ.
ಸಮ್ಮುವಿನ ಮನವನ್ನು ಓದುವ, ಯಾರು ಏನೇ ಮಾತನಾಡಿದರೂ ಅದನ್ನು ಕೇಳಿಸಿಕೊಳ್ಳುವ ಶಕ್ತಿ ಇರುವ ಸೊಳ್ಳೆ ಅನ್ಯ ಗ್ರಹದಿಂದ ಬಂದ ವಿಶೇಷ ಶಕ್ತಿಯುಳ್ಳ ಜೀವಿಯೇನೋ ಎನ್ನುವಂತೆ ಬಿಂಬಿತವಾಗುತ್ತದೆ.
ಸಮ್ಮುವಿನ ಗೆಳೆತನ ಸೊಳ್ಳೆಗೆ ಖುಷಿಯೋ!, ಸೊಳ್ಳೆಯ ಗೆಳೆತನ ಸಮ್ಮುವಿಗೆ ಆನಂದವೋ! ಇದು ಬೇರೆ ಮಾತು. ಆದರೆ ಕಾದಂಬರಿ ಉದ್ದಕ್ಕೂ ಇವರಿಬ್ಬರ ಸಂಭಾಷಣೆಗಳು ಓದುಗನಿಗೆ ಕೇವಲ ಖುಷಿಯಲ್ಲ ಒಳ್ಳೆಯ ನೈತಿಕ ತಿಳುವಳಿಕೆ, ವಸ್ತು ನಿಷ್ಠವಾಗಿ ಅನೇಕ ವೈಜ್ಞಾನಿಕ, ತಂತ್ರಜ್ಞಾನ, ಸಾಮಾಜಿಕ ತಿಳುವಳಿಕೆಯನ್ನು ಮೂಡಿಸುತ್ತವೆ. ಓದುತ್ತಾ ಸಾಗಿದಂತೆ ಖಂಡಿತ ನಮಗೇ ರೆಕ್ಕೆ ಪುಕ್ಕ ಬಂದ ಅನುಭವ, ನಾವೇ ಸೊಳ್ಳೆ, ಏಲಿಯನ್ಸ್ ಲೋಕದಲ್ಲಿ ತಿರುಗಾಡಿದ ಅನುಭವ, ನಾವೇ ಬೇಕರಿಯಲ್ಲಿ, ರಾಜಕಾರಣಿಯ ಮನೆಯಲ್ಲಿ ಸಮ್ಮು ಸೊಳ್ಳೆಯಾಗಿ ಮಾಡಿದ ರಾದ್ಧಾಂತದ ಪ್ರತ್ಯಕ್ಷ ದರ್ಶಿಗಳು ಎನ್ನುವಂತೆ ಭಾಸವಾಗುತ್ತವೆ.
ಈ “ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು” ಕಾದಂಬರಿ ನಿಜವಾಗಿಯೂ ಮುಂದಿನ ದಿನಮಾನಗಳಲ್ಲಿ Animation ಲೋಕದಲ್ಲಿ ಚಲನಚಿತ್ರವಾಗಿಯೋ, ಧಾರಾವಾಹಿಯಾಗಿಯೋ ನಮ್ಮ ಚಿಂಟೂ ಟಿ.ವಿ ಯಲ್ಲಿ ಪ್ರದರ್ಶನವಾಗುತ್ತದೆಂದು ಮತ್ತು ಎಲ್ಲಾ ಶಾಲಾ ಮಕ್ಕಳಿಗೆ ತೋರಿಸಬಹುದಾದ ಚಲನಚಿತ್ರವಾಗಿ ಹೊರಹೊಮ್ಮುತ್ತದೆ ಎಂದು ನನ್ನ ಮನಸಲ್ಲಿ ಮೊದಲ ಓದಿನಲ್ಲಿಯೇ ಅನಿಸಿದ್ದು ಸುಳ್ಳಲ್ಲ.
ಎಲೆಗಳಲ್ಲಿ ಪತ್ರಹರಿತ್ತು ಇರುವಂತೆ ಮಾನವನಲ್ಲೂ ಪತ್ರಹರಿತ್ತು ಇದ್ದರೆ ಆಹಾರಕ್ಕಾಗಿ ಶ್ರಮ ಪಡುವ ಜಂಜಾಟವೇ ಇರುವುದಿಲ್ಲ ಎಂಬ ವಿಶಿಷ್ಟವಾದ ಯೋಚನೆ ಕಥಾ ನಾಯಕ ಸಮ್ಮುವಿನ ಮೂಲಕ ತಿಳಿಸಿದ್ದು ಲೇಖಕರ ವಿಭಿನ್ನವಾದ ಆಲೋಚನಾ ಶಕ್ತಿಯನ್ನು ತಿಳಿಸುತ್ತದೆ.
ಜೊತೆಗೆ ಶಾಲೆಯಲ್ಲಿ, ಮನೆಯಲ್ಲಿ, ಸಮ್ಮು ಮತ್ತು ಸೊಳ್ಳೆಯ ನಡುವೆ ನಡೆಯುವ ಬಹುತೇಕ ಮಾತುಕತೆಗಳು ಚಿಂತನಾಶೀಲವಾಗಿವೆ ಮತ್ತು ಮನುಷ್ಯನ ದುರಾಲೋಚನೆಗೆ, ಕೆಟ್ಟ ನಡವಳಿಕೆಗೆ ಕನ್ನಡಿಯಂತಿವೆ. ಯಾವುದನ್ನೂ ಅಲ್ಲಗಳೆಯಲು ಸಾಧ್ಯವೇ ಇಲ್ಲ ಅನ್ನುವಂತಿವೆ. ಈ ಕಾದಂಬರಿ. ಓದಿದರೆ ಇದು ಕಾಲ್ಪನಿಕವಾದುದು ಎನ್ನಿಸಿದರೂ ಇದರಲ್ಲಿ ಬರುವ ಆರೋಗ್ಯ ಸಂಬಂಧಿತ ವಿಷಯಗಳನ್ನು, ಸೊಳ್ಳೆ ಪ್ರಭೇದದ ಮಾಹಿತಿಗಳನ್ನು, ವೈಜ್ಞಾನಿಕ ಚಿಂತನೆಗಳನ್ನು, ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನು ನೋಡಿದರೆ ಲೇಖಕರು ಇದಕ್ಕೆ ಪೂರ್ವ ತಯಾರಿಯಾಗಿ ಬಹಳಷ್ಟು ಅಧ್ಯಯನಶೀಲರಾಗಿದ್ದರು ಎಂಬುದು ಖಾತ್ರಿಯಾಗುತ್ತದೆ.
ಕಾಲ್ಪನಿಕವಾಗಿ ಸಂಸಾರದ್ದೋ, ಗೆಳೆಯರದ್ದೋ, ಪ್ರೇಮಿಗಳದ್ದೋ, ಮಕ್ಕಳ ನಡೆಯ ಬಗ್ಗೆಯೋ ಬರೆಯುವ ಕಾದಂಬರಿಗಳಿಗಿಂತ, ಈ ತರಹದ ಸತ್ಯವನ್ನು ಪ್ರತಿಬಿಂಬಿಸುವ ಕಾದಂಬರಿ ಬರೆಯುವಲ್ಲಿ, ಅದರಲ್ಲೂ ಮಕ್ಕಳಿಗಾಗಿ ಬರೆಯುವ ಸಂದರ್ಭಗಳಲ್ಲಂತೂ ಸತ್ಯಾಂಶಗಳಲ್ಲಿ ವ್ಯತ್ಯಾಸವಾಗದಂತೆ ನಿಗಾವಹಿಸಬೇಕಾಗುತ್ತದೆ. ಅಂತಹ ವಿಷಯಗಳನ್ನು ಕೃತಿಕಾರರು ಜಾಗ್ರತೆಯುಕ್ತವಾಗಿ ರಚಿಸಿರುವುದು ಪ್ರತಿಹಂತದಲ್ಲೂ ಕಾಣುತ್ತೇವೆ.
ಇದು ಮಕ್ಕಳ ಕಾದಂಬರಿ ಎಂದೋ, ಹಾಸ್ಯ ಬರಹಗಾರರ ಕಾದಂಬರಿಯೆಂದೋ ಓದಲು ಕುಳಿತವರಿಗೆ ಈ ಕೃತಿ ಅನೇಕ ಗಂಭೀರವಾದ ವಿಷಯಗಳನ್ನೂ ಸಹ ಪರಿಚಯಿಸುವುದರ ಜೊತೆಗೆ ಮುಂದಿನ ತಲೆಮಾರುಗಳ ದುಸ್ಥಿತಿಯನ್ನು ಕಣ್ಣಮುಂದೆ ತರಿಸಿ ಅರೆಕ್ಷಣ ಭಯವನ್ನು ಹುಟ್ಟಿಸುವುದರ ಜೊತೆಗೆ ನಾವು ಎಸಗುತ್ತಿರುವ ತಪ್ಪುಗಳನ್ನೂ ಪ್ರಮಾಣಬದ್ಧವಾಗಿ ತೋರಿಸುತ್ತದೆ.
ಕಾದಂಬರಿಯಲ್ಲಿನ ವಿಜ್ಞಾನ ಶಿಕ್ಷಕರು ನೀಡುವ ಪ್ರಾಜೆಕ್ಟ್ ವರ್ಕ್, ತಾರ್ಕಿಕ ಚಿಂತನೆಗೆ ಹಚ್ಚುವ ಸೊಳ್ಳೆಯ ಮಾತುಗಳು, ಸಮ್ಮು ಸೊಳ್ಳೆಯಾಗಿ ಭೂ ಲೋಕದಲ್ಲಿ ಮಾಡಿದ ರಾದ್ಧಾಂತದಿಂದ ತೊಂದರೆ ಎದುರಿಸುವ ಪರಿಸ್ಥಿತಿಗೆ ಬಂದ ಏಲಿಯನ್ಸ್ ಗಳೊಂದಿಗಿನ ಸಮ್ಮುವಿನ ಮಾತು ಕತೆ, ಏಲಿಯನ್ಸ್ಗಳಿಂದ ಮುಂದುವರೆಯುತ್ತಿರುವ ತಂತ್ರಜ್ಞಾನದ ಅಡ್ಡ ಪರಿಣಾಮ, ಪರಿಸರ ನಾಶ, ಮಾನವರು ವಿಕೃತ ಜೀವಿಗಳಾಗಿ ಬದಲಾಗುವ ಪರಿಯನ್ನು ತಿಳಿದದ್ದು ಓದುಗರ ನೆನಪಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ.
ಮುಂದುವರೆದು, ಸಮ್ಮುವಿನ ಮಾನವರಲ್ಲಿ ಪತ್ರಹರಿತ್ತು ಇದ್ದರೆ ಎಂಬ ಆಲೋಚನೆಗೆ ತಕ್ಕಂತೆ ಏಲಿಯನ್ಸ್ ಲೋಕದಲ್ಲಿ ಅದನ್ನು ಕಂಡದ್ದು, ಇದು ಪರಿಸರ ನಾಶದ ತರುವಾಯ ಹೊಟ್ಟೆ ಪಾಡಿಗಾಗಿ ಕಂಡುಕೊಂಡ ಉಪಾಯ ಎಂಬ ಅರಿವು ಜಾಗೃತವಾದದ್ದು, 4ಜಿ, 5ಜಿ ಇಂದ ಖುಷಿಪಡುತ್ತಿರುವ ಮಾನವ ಸಂಕುಲ ಮುಂದೆ ಜಿ.. ಜಿ.. ಗಳು ಹೆಚ್ಚಾದಂತೆಲ್ಲ ಗಂಜಿಗೂ ಗತಿ ಇರದ ಸ್ಥಿತಿಗೆ ತಲುಪುತ್ತೇವೆ ಎಂಬುದು ಕೃತಿಕಾರರು ಸಮ್ಮು ಮತ್ತು ಅನ್ಯಗ್ರಹ ಜೀವಿಗಳ ಮಾತಿನ ಮುಖೇನ ತಿಳಿಸುತ್ತಾರೆ. ಈ ಹಂತದಲ್ಲಿ ಓದುಗರು ಫೋನ್ ತೊರೆದು ಪುಸ್ತಕದ ಜೊತೆಗೆ ರಾಜಿಯಾಗಿ ಆಹಾರ ಆರೋಗ್ಯದ ಬಗೆಗೆ ಕಾಳಜಿವಹಿಸುವುದು ಕ್ಷೇಮ ಎಂಬ ಭಾವಕ್ಕೆ ತಲುಪುತ್ತಾರೆ.
ಇನ್ನುಳಿದಂತೆ ಅತ್ತೆ, ಮಾಮ ಮನೆಗೆ ಬಂದಾಗಿನ ಖುಷಿ, ಪತ್ತೇದಾರಿ ಅಶು ಕೆಲಸದಿಂದ ಸಿಕ್ಕಿ ಬೀಳುವ ಪ್ರಸಂಗ, ಗೆಳೆಯನಂತಹ ರಾಜು ಮಾಮನೊಂದಿಗಿನ ಒಡನಾಟ, ವಿಧು, ಪ್ರಿಯಾ ಮನೆಗೆ ಬಂದಾಗ ಆಡಿ ನಲಿದು ಪಟ್ಟ ಖುಷಿ ಒಂದೇ ಎರಡೇ ಹೇಳುತ್ತಾ ಹೋದರೆ ಮುಗಿಯದ ಓದಿನನುಭವ ನೀಡುವ ಈ ಕಾದಂಬರಿಗೆ, “2023ರ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ” ಲಭಿಸಿದ್ದು ಕೃತಿಯ ಮೌಲ್ಯಕ್ಕೆ ಸಂದ ಗೌರವವಾಗಿದೆ.
ಇಷ್ಟೇ ಅಲ್ಲದೆ ಡ್ರೈ ಲೀಫ್, ಸೋಲಾರ್ ಪ್ಲಾಸ್ಮಾ, ಸ್ಟೀಮ್ ಮಶಿನ್, ಗೂಗಲ್ ಟ್ರಾನ್ಸ್ ಲೇಟರ್ ಮುಂತಾದ ಅನೇಕ ತಂತ್ರಜ್ಞಾನ, ವೈಜ್ಞಾನಿಕ ವಿಚಾರಗಳೊಂದಿಗೆ ಕೃತಿ ಆಸಕ್ತಿದಾಯಕ ಅನಿಸುತ್ತದೆ. ನಮ್ಮ ಸಂಶೋಧನೆಗಳು ಜೀವಿಗಳ ಉಳಿವಿಗೆ, ಪರಿಸರದ ಸಂರಕ್ಷಣೆಗೆ ಪೂರಕವಾಗಿರಬೇಕೇ ಹೊರತು ಜೈವಿಕ ಸಂತತಿಯ ಅವನತಿಗೆ, ವಿಕೃತ, ವ್ಯತಿರಿಕ್ತ ಪರಿಸರ ನಿರ್ಮಾಣಕ್ಕೆ ಕಾರಣವಾಗಬಾರದೆಂಬುದನ್ನು ಮುಂದಿನ ಭವಿಷ್ಯದ ನೇತಾರರಾದ ಮಕ್ಕಳಿಗೆ ಈ ಕೃತಿ ಮುಖೇನ ಗುಂಡುರಾವ್ ದೇಸಾಯಿಯವರು ತಿಳಿಸಿದ್ದಾರೆ.
ವೃತ್ತಿಯಿಂದ ಶಿಕ್ಷಕರಾದ ಶ್ರೀಯುತರು ತಮ್ಮ ಬರಹದಲ್ಲೂ ತಮ್ಮ ವೃತ್ತಿಪರ ಕಾಳಜಿಯನ್ನು ತೋರಿದ್ದಾರೆ.
ಹೀಗೆ ಸೊಳ್ಳೆಯೊಂದಿಗಿನ ಸ್ನೇಹದ ಪ್ರಭಾವದಿಂದ ಕಥಾ ನಾಯಕ ತಾನೂ ಸೊಳ್ಳೆಯಾಗಿ ಪರಿವರ್ತನೆ ಆಗಿ ಏನೆಲ್ಲಾ ಮಾಡಿದ, ಎಷ್ಟು ಸಂಚಾರ ಮಾಡಿದ, ಮಾಡಿದ ರಂಪ ಯಾವ ಮಟ್ಟಿಗೆ ಸುದ್ದಿಯಾಯಿತು ಎಂಬುದನ್ನು ಹಾಸ್ಯಭರಿತ ಸಾಲುಗಳ ಪೋಣಿಕೆಯೊಂದಿಗೆ ಸದ್ವಿಚಾರಗಳನ್ನೂ ಸಹ ಹಂಚಿಕೊಳ್ಳುತ್ತಾರೆ.
ಈ ಕೃತಿಯಲ್ಲಿ ಕೃತಿಕಾರರು ತಮ್ಮ ಮಗ, ಮಗಳು, ಸೊಸೆ, ಅಳಿಯ ಮತ್ತಿತರ ಆಪ್ತರ ಹೆಸರುಗಳನ್ನು ಬಳಸುವುದರ ಜೊತೆಗೆ ತಮ್ಮ ಮನೆಯಿಂದಲೇ ಕಥೆಯನ್ನು ಪ್ರಾರಂಭಿಸಿ ಊರಲ್ಲೆಲ್ಲಾ ಸುತ್ತಿ, ಭೂ ಲೋಕದಿಂದ ಹೊರಗೆಲ್ಲಾ ಸಂಚರಿಸಿ ಮತ್ತೆ ತಮ್ಮ ಮನೆಯಲ್ಲಿಯೇ ಕಥೆಯನ್ನು ಅಂತ್ಯಗೊಳಿಸುತ್ತಾರೆ. ಹಾಗಾಗಿ ಈ ಕೃತಿಯಲ್ಲಿ ಬರುವ ಪಾತ್ರಗಳೆಲ್ಲ ನಮ್ಮ ಸುತ್ತಲಿನವೇ ಎಂಬ ಭಾವ ಕೃತಿಕಾರರ ಆಪ್ತ ಓದುಗ ಬಳಗಕ್ಕೆ ಅನಿಸುತ್ತದೆ. ಇಂತಹ ಒಡನಾಡಿಗಳಿಗೆ ಈ ಸದ್ಭಾವದ ಓದು ಕೇವಲ ಯಾಂತ್ರಿಕವಾಗಿ ಸಾಗದೆ ಹೃದಯಕ್ಕೆ ಹತ್ತಿರವಾಗುತ್ತಾ ಹೋಗುವುದರ ಜೊತೆಗೆ ಕಾದಂಬರಿಯ ಸನ್ನಿವೇಶಗಳು ಕಣ್ಣಲ್ಲೇ ದೃಶ್ಯೀಕರಣವಾಗಿ ಕಾಣಸಿಗುತ್ತವೆ.
ಇದರ ಹೊರತಾಗಿ, ಸೊಳ್ಳೆಯೊಂದಿಗಿನ ಸ್ನೇಹ ಎಂದ ಕೂಡಲೆ, ಇದೆಂತಹ ಕಾದಂಬರಿ ಎಂದು ಅಸಹ್ಯಪಟ್ಟುಕೊಳ್ಳುವ ಮನಸ್ಥಿತಿಯವರೂ ಇರುತ್ತಾರೆ. ಹೀಗೆ ಹಿಂಜರಿಯುವ ಮನಸ್ಥಿತಿಯಿಂದ ಕೊಂಚ ಹೊರಬಂದು ಪ್ರಾರಂಭದ ಪುಟಗಳನ್ನು ಓದುತ್ತಾ ಸಾಗಿದರೆ ಮನಸು ಸೊಳ್ಳೆಯ ಮೋಡಿ ಮಾತಿಗೆ ಶರಣಾಗುತ್ತದೆ. ಸಮ್ಮುವಿನ ಜಾಗದಲ್ಲಿ ನಾನಿದ್ದರೆ? ಎಂಬ ಆಲೋಚನೆ ಕ್ಷಣ ಕ್ಷಣಕ್ಕೂ ಮೂಡಿ ನಾವೇ ಸಮ್ಮುವಾಗುತ್ತೇವೆ. ಕೊನೆಯಲ್ಲಿ ಸೊಳ್ಳೆಯ ಆಯುಷ್ಯ ಪೂರ್ಣವಾಗಿ ಅದು ಅಸ್ತಂಗತವಾಗುವ ಹೊತ್ತಿಗೆ ಹೃದಯ ತುಂಬಿ ಬರುತ್ತದೆ. ಆತ್ಮೀಯ ಗೆಳೆಯನನ್ನು ಕಳೆದುಕೊಳ್ಳುತ್ತಿದ್ದೇವಲ್ವಾ, ಈ ಕಾದಂಬರಿ ಅಂತ್ಯವಾಗಲೇಬಾರದು, ಹೀಗೆ ನಿರಂತರ ಸ್ನೇಹದ ಒಡನಾಟದ ಅನುಭವದ ಸಾರ ನಮಗೆ ಮುದ ನೀಡುತ್ತಲೇ ಇದ್ದರೆ ಚೆನ್ನ ಎನಿಸಿಬಿಡುತ್ತದೆ.
ಈ ಭಾವ ತೀವ್ರತೆಯನ್ನು ಹುಟ್ಟುಹಾಕಿ ಓದುಗರನ್ನು ಕಥೆಯಲ್ಲಿ ತಲ್ಲೀನರಾಗಿಸುವ ಪ್ರಬುದ್ಧ ಬರಹದ ಈ ಕೃತಿ ಮಕ್ಕಳಿಂದ ಖಂಡಿತವಾಗಿ ಓದಲ್ಪಡಬೇಕಾದುದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಹೃದಯ ಓದುಗರು ಶಾಲೆಯಾದಿಯಾಗಿ ಎಲ್ಲ ಹಂತದ ವಿದ್ಯಾರ್ಥಿಗಳಿಗೆ ಈ ಕೃತಿಯನ್ನು ತಲುಪಿಸಬೇಕಾದುದು ಅವಶ್ಯವಾಗಿದೆ, ಅಗತ್ಯವಾದ ಕರ್ತವ್ಯವಾಗಿದೆ. ಒಬ್ಬ ಜವಾಬ್ದಾರಿಯುತ ಶಿಕ್ಷಕನಾಗಿ ನಾನು ಈ ಸಾಹಿತ್ಯ ಪ್ರಸಾರದ ಕಾರ್ಯ ಮಾಡುವುದಕ್ಕೆ ಖುಷಿ ಅನಿಸುತ್ತದೆ.
ಈ ಕೃತಿಗೆ ಮತ್ತಷ್ಟು ಪ್ರಶಸ್ತಿಗಳು ಲಭಿಸಲಿ, ರಾಜ್ಯದ ಅಷ್ಟ ದಿಕ್ಕುಗಳ ಸು-ಮನಸಿನ ಓದುಗರನ್ನು ತಲುಪಲಿ, ಇಂತಹ ಮತ್ತಷ್ಟು ಕೃತಿಗಳು ಲೇಖಕರಿಂದ ಲೋಕಾರ್ಪಣೆಗೊಳ್ಳಲಿ ಎಂಬ ಆಶಯದೊಂದಿಗೆ ವಿರಾಮ ನೀಡುತ್ತೇನೆ. ತಾವೆಲ್ಲರೂ ಕೃತಿಯನ್ನು ಕೊಂಡು ಓದಿ.
“ಧನ್ಯವಾದಗಳೊಂದಿಗೆ”
ವರದೇಂದ್ರ ಕೆ ಮಸ್ಕಿ
- 9945253030