ರೈತ ಸತ್ಯಾಗ್ರಹಿಯ ಹೋರಾಟ ರಾಜಕಾರಣದ ಸುತ್ತಮುತ್ತ
ಹೋರಾಟಗಾರ ನಾಮಾಂಕಿತ ಕೇದಾರಲಿಂಗಯ್ಯ ಮುತ್ಯಾ ಅವರದು ಜೇವರ್ಗಿ ಶಾಸಕ ಮತಕ್ಷೇತ್ರದಲ್ಲಿ ಮನಾಮನಿ ಹೆಸರು. ೨೦೨೩ ರ ಚುನಾವಣೆಗೆ ಮೊದಲು ಅವರು ಕಾಂಗ್ರೆಸ್ ಸೇರಿ ಖರೇವಂದ್ರ ಶ್ಯಾಣೇರಾದರು. ಅದಕ್ಕೆ ಮುನ್ನ ಅವರು ದೇವೇಗೌಡರ ಪರಮ ಭಕ್ತರು. ಜೆಡಿಎಸ್ ಪಾರ್ಟಿಯಿಂದ ಅವರು ಜೇವರ್ಗಿ ಕ್ಷೇತ್ರದ ಎಮ್ಮೆಲ್ಲೆ ಸ್ಥಾನದ ನಿರಂತರ ಸ್ಪರ್ಧಾಳು. ಪಾಪ ಅವರು ಒಮ್ಮೆಯಾದರೂ ಗೆಲ್ಲಬೇಕಿತ್ತೆಂದು ಕೆಲವರಿಗಾದರೂ ಅನ್ನಿಸದಿರಲಾರದು.
ಹಾಗಂತ ಜೇವರ್ಗಿ ವಿಧಾನಸಭಾ ಕ್ಷೇತ್ರದ ನನ್ನಂಥ ಕೆಲವರು ಅಂದುಕೊಂಡವರುಂಟು. ಆನುಷಂಗಿಕವಾದ ಒಂದು ಖಚಿತ ಸಂಗತಿಯೆಂದರೆ : ಜೇವರ್ಗಿ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸುವಲ್ಲಿ ಕಾಂಗ್ರೆಸಿಗಿಂತ ಕೇದಾರಲಿಂಗಯ್ಯನವರ ಚುನಾವಣಾ ಲೆಕ್ಕಾಚಾರದ ಅಮೂರ್ತ ಕೊಡುಗೆ ಅಮೋಘವಾದುದು. ಖುದ್ದು ಕಾಂಗೈ ಹುರಿಯಾಳು ಅಂದಿನ ಧರ್ಮಸಿಂಗ್ ಅವರೇ ” ಹಣಕೊಟ್ಟು ಕೇದಾರಲಿಂಗಯ್ಯ ಅವರನ್ನು ಎಲೆಕ್ಷನ್ನಿಗೆ ನಿಲ್ಲಿಸುತ್ತಾರೆಂದು ಆ ಮೂಲಕ ತಮ್ಮ ಗೆಲುವಿನ ದಾರಿ ನಿರಾಳ ಮಾಡಿಕೊಳ್ಳುತ್ತಾರೆಂದು ” ಜನ ಸಾಮಾನ್ಯರು ಮಾತಾಡಿಕೊಳ್ಳುವಷ್ಟು ಆಗ ವದಂತಿಗಳ ಪರಾಕಾಷ್ಠೆ ಹಬ್ಬಿದ್ದು ಸುಳ್ಳೇನಲ್ಲ.
ಒಂದಷ್ಟು ಅಗ್ರೆಸ್ಸಿವ್ ಆಗಿದ್ರೆ ಕೇದಾರಲಿಂಗಯ್ಯ ಎಂದೋ ಎಮ್ಮೆಲ್ಲೆ ಆಗ್ತಿದ್ರು. ಹೀಗಂತ ಕೆಲವು ರಾಜಕೀಯ ವಿಶ್ಲೇಷಕರ ಸೂಕ್ಷ್ಮ ವಿಶ್ಲೇಷಣೆ. ಸೋಜಿಗದ ಸಂಗತಿಗಳೇನೇ ಇರಲಿ, ತುಸು ಮೈಲ್ಡ್ ಮತ್ತು ಸಾಫ್ಟ್ ಹಿಂದೂ ತರಹ ಕಾಣಿಸುವ ಧರ್ಮಸಿಂಗ್ ಪುತ್ರ ಡಾಕ್ಟರ್ ಅಜೇಯಸಿಂಗ್ ಗೆಲ್ಲುತ್ತಿರುವ ಒಳಗುಟ್ಟು ನಮ್ಮ ಕೇದಾರಲಿಂಗಯ್ಯನವರ ಸ್ಪರ್ಧೆಯೇ. ಹಾಗಂತ ಅದೊಂದು ಸಾಂಕೇತಿಕ ಸ್ಪರ್ಧಾ ಪೈಪೋಟಿ ಅಂತಲೂ ಪರಿಗಣಿಸಲಾಗದು. ಏಕೆಂದರೆ ೨೦೧೮ ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇದಾರ ಮುತ್ಯಾ ಮುವತ್ತೇಳು ಸಾವಿರ ಮತ ಪಡೆದಿದ್ದರೆಂಬುದು ತುಂಬಾ ಗಮನಾರ್ಹ ವಿಷಯ. ಕೋಮುವಾದಿಗಳು ಗೆಲ್ಲಬಾರದೆಂಬ ಒಳಹೇತು ಉದ್ದೇಶಕ್ಕಾಗಿ ಅಲ್ಪಸಂಖ್ಯಾತ ಮುಸ್ಲಿಮರ ಮತಗಳು ಜೇವರ್ಗಿ ಮತ ಕ್ಷೇತ್ರದಲ್ಲಿ ನಿರ್ಣಾಯಕ. ಲಿಂಗಾಯತರ ನಂತರ ಎರಡನೇ ಸ್ಥಾನದಂಚಿನಲ್ಲಿರುವ ಮುಸ್ಲಿಂ ಮತಗಳದ್ದು ಯಾವ ರಾಜಕೀಯ ಪಕ್ಷವೂ ನಿರಾಕರಿಸಲಾಗದ ನಿರ್ಧಾರಕ ಶಕ್ತಿ ಸಾಮರ್ಥ್ಯ.
ಮೂರನೇ ಸ್ಥಾನದ ಸನಿಹದಲ್ಲಿರುವ ಕುರುಬ ಸಮುದಾಯದ ಪರವಾಗಿ ಹುಲ್ಲೂರೆಂಬ ಪೋಲಿಸ್ ಅಧಿಕಾರಿ ಅದೇ ಆಗ ವಯೋನಿವೃತ್ತಿ ಹೊಂದುತ್ತಲಿದ್ದು ಜೆ.ಡಿ. ಎಸ್. ಇಲ್ಲವೇ ಬಿ.ಜೆ.ಪಿ. ಅಭ್ಯರ್ಥಿಯಾಗುವ ಪುಕಾರುಗಳಿದ್ದವು. ಅದೇನೇ ಇರಲಿ ಬಿಜೆಪಿ ವಿರುದ್ದದ ಸರಳ ಗೆಲುವಿನ ಅಂತರದ ಕಾಂಗ್ರೆಸ್ ಎಂಬ ಜಯದ ಕುದುರೆಯ ಬೆನ್ನು ಹತ್ತುವ ಸಣ್ಣ ಲೆಕ್ಕಾಚಾರ ಮುಸ್ಲಿಮರದು. ತೆನೆ ಹೊತ್ತ ಮಹಿಳೆಗಿರುವ ಮುಸ್ಲಿಮರ ಮನವೊಲಿಕೆ ಸಾಮರ್ಥ್ಯ ಶಕ್ತಿಯ ಮೇಲೆ ಗೆಲುವಿನ ನಿರ್ಧಾರ. ಇದೆಲ್ಲವೂ ೨೦೨೩ ರ ಚುನಾವಣಾ ಪೂರ್ವದ ಲೆಕ್ಕಾಚಾರವಾಗಿತ್ತು. ಸಮಯೋಚಿತವಾಗಿ ಕೇದಾರಲಿಂಗಯ್ಯ ಕಾಂಗ್ರೆಸ್ ಸೇರದೇ ಹೋಗಿದ್ರೇ ೨೦೨೩ ರ ಅಜಯಸಿಂಗ್ ಗೆಲುವು ಅಕ್ಷರಶಃ ದುಃಸಾಧ್ಯವಿತ್ತು.
ಕೇದಾರಲಿಂಗಯ್ಯ ಜಾತಿಯಿಂದ ಜಂಗಮರು. ಅದಕ್ಕೆಂದೇ ಅವರಿಗೆ ಮುತ್ಯಾ ಎಂಬ ಜನಾನುರಾಗಿ ವಿಶೇಷಣ. ಆಗ ಅವರು ಪ್ರತಿನಿಧಿಸುವ ಪಾರ್ಟಿ ಅದೆಷ್ಟು ಪ್ರಮಾಣದಲ್ಲಿ ಸೆಕ್ಯುಲರ್ ಅಂತ ನನಗೆ ತಿಳಿಯದು, ಆದರೆ ಕೇದಾರಲಿಂಗಯ್ಯ ಮಾತ್ರ ಅವರ ಅಂದಿನ ಪಕ್ಷದ ಹೆಸರಿನಂತೆ ಸೆಕ್ಯುಲರ್. ರಾಜ್ಯಮಟ್ಟದ ಜೆ.ಡಿ.ಎಸ್. ಪಕ್ಷದ ಬಹುದೊಡ್ಡ ಕೊಂಡಿಗಳು ಒಂದೊಂದಾಗಿ ಉದುರಿ ಹೋಗುತ್ತಿರುವಾಗ ಇವರು ಮಾತ್ರ ಅಳುಗ್ಯಾಡಿಲ್ಲ ಎನ್ನುವಾಗಲೇ ಸಿಂದಗಿ ಉಪ ಚುನಾವಣೆಯಲ್ಲಿ ಕುಟುಂಬ ಪಕ್ಷದ ವರಿಷ್ಠರಾದ ಅಪ್ಪ ಮಗನ ಜೊತೆಗೆ ಕೇದಾರ ಮುತ್ಯಾ ಜೋರಾಗಿ ಕಾಣಿಸಿಕೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಗಳ ಘೋಷಣೆಗೆ ಮುನ್ನ ಕೇದಾರಲಿಂಗಯ್ಯ ಕಾಂಗ್ರೆಸ್ ಸೇರುವ ಮೂಲಕ ರಾಜಕಾರಣದ ಜಾಣತನ ಮೆರೆದರು.
ಈಗ್ಗೆ ಆರೇಳು ವರುಷಗಳ ಹಿಂದೆ ಜೇವರ್ಗಿ ಪಟ್ಟಣದಲ್ಲಿ ವೈದಿಕ ನೆಲೆಯ ಖಾನೇಷುಮಾರಿ ಶರಣ ಸನಾತನಿಗಳ ಅಡ್ಡಪಲ್ಲಕ್ಕಿ ಉತ್ಸವದ ಭಾನಗಡಿ ಜರುಗಿತು. ಆ ಸಂದರ್ಭದಲ್ಲಿ ಕೇದಾರಲಿಂಗಯ್ಯನವರ ನಿಲುವು ಪ್ರಗತಿಪರ ಮತ್ತು ಜೀವಪರವಾಗಿತ್ತು. ಸನಾತನಿ ಮತ್ತು ಮನುವಾದಿ ಧರ್ಮಪ್ರಭುತ್ವದ ವಿರೋಧಿ ಧ್ವನಿ ಅವರದಾಗಿತ್ತು. ಹಾಗಂತ ಸಾರಾಸಗಟಾಗಿ ಅಂತಹದ್ದೊಂದು ಜಗದ್ಗುರು ಪರಂಪರೆಯನ್ನೇ ತಿರಸ್ಕರಿಸುವ ಇಲ್ಲವೇ ಸೌಮ್ಯವಾಗಿ ನಿರಾಕರಿಸುವಷ್ಟು ಧಾರ್ಷ್ಟ್ಯ ಅವರದಲ್ಲವೇ ಅಲ್ಲ. ಹಾಗೆಂದು ಅವರದು ವೈದಿಕ್ಯದ ಪರ ವಕಾಲತ್ತು ಅಂತಲೂ ಅಲ್ಲ. ಒಮ್ಮೊಮ್ಮೆ ಅವರದು ಬಾರ್ಡರ್ ಲೈನ್ ವೈಚಾರಿಕ ನಿಲುವು ಎನ್ನುವಂತಿರುತ್ತದೆ.
ಯಡ್ರಾಮಿ ತಾಲೂಕು ರಚನೆಗೆ ಮುನ್ನ ಅವರು ಅವಿಭಜಿತ ಜೇವರ್ಗಿ ತಾಲೂಕಿನ ಕಡಕೋಳ ಗ್ರಾಮ ಪಂಚಾಯತಿಗೆ ಸೇರಿದ ಮಾಣಸುಣಗಿಯ ಹಿರೇಮಠ ಮನೆತನದ ಮೂಲದವರು. ಮಾಣಸುಣಗಿ ಅದೀಗ ನೂತನ ಯಡ್ರಾಮಿ ತಾಲೂಕಿಗೆ ಸೇರಿದ ಮೊಗಲಾಯಿ ನೆಲದ ಕಡೆಯಹಳ್ಳಿ. ಆದರೆ ಕೇದಾರಲಿಂಗಯ್ಯ ಹಿರೇಮಠ ಹುಟ್ಟಿ (೧೯೫೯)ಬೆಳೆದದ್ದು ಜೇವರ್ಗಿ ತಾಲೂಕಿನ ಹುಲ್ಲೂರು ಎಂಬ ಹಳ್ಳಿಯಲ್ಲಿ. ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರಾದ ಅವರ ತಂದೆ ಸಂಗನಬಸಯ್ಯನವರು ರಜಾಕಾರರ ಸಪಾಟಿ ಮುಜೇತಿ ಹುಲ್ಲೂರು ಎಂಬ ಹಳ್ಳಿಯ ನಿವಾಸಿಗಳು. ಕೇದಾರಲಿಂಗಯ್ಯ ಓದಿದ್ದು ಬಿ. ಎ. ಎಲೆಲ್. ಬಿ. ಆದರೆ ಯಾವತ್ತೂ ಅವರು ವಕೀಲರಂತೆ ಕಾಣಿಸಿಕೊಂಡವರಲ್ಲ.
ಅವರ ಬಳಿ ಕಚಗುಳಿಯಿಡುವ ಗುಳುಗುಳು ಮಾತುಗಳ ಸುಳಿವಿಲ್ಲ. ಅದರ ಬದಲು ಎರೆಮಣ್ಣಿನ ಬಿಳಿಜೋಳದ ಜವಾರಿತನ. ಅದು ಈಗೀಗ ಅಂಚಿಗೆ ಸರಿಯುತ್ತಿರುವ ಮೊಗಲಾಯಿತನ. ಮೊದಲ ಅಲೆಯ ಕೊರೊನಾ ಅಲೆಯಲ್ಲಿ ಕೆಲಕಾಲ ನರಳಿದರು. ಸರಳ, ಸಜ್ಜನಿಕೆಯ ಬಿಚ್ಚಿಟ್ಟ ರೊಟ್ಟಿಬುತ್ತಿಯಂತಹ ನೆಲಮೂಲದ ಮಾತುಗಳು. ಜೇವರ್ಗಿ ತಾಲೂಕಿನ ತುಂಬಾ ರೈತಾಪಿ ಜನಗಳ ವಯಕ್ತಿಕ ಹೆಸರು ಹಿಡಿದು ಕರೆಯುವಷ್ಟು ದಟ್ಟಪರಿಚಯ ಮತ್ತು ಜನ ಬಳಕೆಯ ಪ್ರೀತಿ ಕೇದಾರ ಮುತ್ಯಾನದು. ಆದರೆ ಅವರೊಬ್ಬ ರಾಜಕಾರಣಿ ಎಂಬ ನೆನಹು ನನ್ನಂಥವರೂ ಅರಿಯದೇ ಉಳಿಯುವಂತಹ ಸನ್ನಿವೇಶಗಳು.
ಹಾಗೆ ನೋಡಿದರೆ ಎಂಬತ್ತರ ದಶಕದಲ್ಲಿ ಬಸವರಾಜ ತಂಬಾಕೆ ಅಂಥವರು ಜೇವರ್ಗಿ ತಾಲೂಕಿನಲ್ಲಿ ರೈತ ಸಂಘಟನೆ ಕಟ್ಟಿದರು. ಅವರ ತರುವಾಯ ಕೆಲವು ಕಾಲ ಅದು ಹಸಿರು ಬಿಸುಪಿನ ಕಳೆಯನ್ನೇ ಕಳಕೊಂಡಿತು. ಅಂತಹ ಚಳವಳಿಯ ಹಳೆಯ ಜಾಡು ಹಿಡಿದು ರೈತ ಹೋರಾಟ ರೂಪಿಸಿದ್ದು ನಮ್ಮ ಕೇದಾರಲಿಂಗಯ್ಯ.
ಸ್ಥಳೀಯ ರೈತರ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಶಾಸಕರಿಗಿಂತ ಕೇದಾರಲಿಂಗಯ್ಯ ಅವರೇ ಹೆಚ್ಚು ಸಮರ್ಥ. ಆತ ಖರೇ ಖರೇ ಒಕ್ಕಲಿಗರ ಒಡನಾಡಿ. ಹುಡುಕಿದರೆ ಅಲ್ಲೆಲ್ಲೋ ಉಗುರು ಬೆಚ್ಚಗಿನ ತವರು ನೆಲಧರ್ಮದ ಪ್ರೀತಿ ಸಿಕ್ಕೀತು. ಬೆಳೆವಿಮೆ ಎಂಬ ಪದದ ಪರಿಚಯವೇ ಇಲ್ಲದ ಕಲಬುರ್ಗಿ ಜಿಲ್ಲೆಯ ರೈತಾಪಿ ಜನಗಳಿಗೆ ಅದರ ಫಲಾನುಭವ ದಕ್ಕಿಸಿಕೊಡುವಲ್ಲಿ ಕೇದಾರಲಿಂಗಯ್ಯ ಪರಿಶ್ರಮ ಗಮನಾರ್ಹ. ಆದಾಗ್ಯೂ ಅಂತಹ ಅಳುಕಿನ ಪರಿಶ್ರಮದಲ್ಲೂ ಹುಳುಕು ಹುಡುಕುವವರಿದ್ದಾರೆ.
ರೈತಪರ ಹೋರಾಟಗಳಿಗಾಗಿ ಹಲವು ಸಲ ಸೆರೆಮನೆವಾಸ ಅನುಭವಿಸಿದ್ದಾರೆ. ಉರುಳು ಸೇವೆಗೈಯ್ದ ನಿದರ್ಶನಗಳಿವೆ. ಅವೆಲ್ಲ ಅವರ ಕಲರ್ಫುಲ್ ಪೊಲಿಟಿಕಲ್ ಕರಿಯರ್ ಬಿಲ್ಡಪ್ಗೆ ಸಹಾಯಕಾರಿ ಎಂದು ಎದುರಾಳಿಗಳು ಗುನುಗುಟ್ಟುತ್ತಾರೆ. ಅದರ ರಾಜಕೀಯ ಫಾಯದೆ ಅವರಿಗೆ ಹೆಚ್ಚು ದೊರಕಿದೆಯೆಂಬ ವಿರೋಧಿಗಳ ಮಾತುಗಳು ಮತ್ತೊಂದೆಡೆ. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ತಾಲೂಕಿನ ಸ್ವಾಮೀಜಿಗಳನ್ನೆಲ್ಲ ಒಗ್ಗೂಡಿಸಿ ಮಲ್ಲಾಬಾದಿ ಏತ ನೀರಾವರಿ ಹೋರಾಟಕ್ಕೆ ಹಾದಿ ರೂಪಿಸಿದ ರೂವಾರಿ ಕೇದಾರ ಮುತ್ಯಾ. ತಮ್ಮ ರೈತ ಹೋರಾಟದ ಲಾಭ ಚುನಾವಣಾ ಮತಗಳಾಗಿಸಿಕೊಳ್ಳುವ ಚಾಲಾಕಿತನವೂ ಅವರದಲ್ಲ.
*ಒಂದುಮಾತು ಮಾತ್ರ ಖರೇವಂದ್ರ : ಅವರು ಖಾದಿಗೆ ಬದಲು ಪೂರ್ಣ ಪ್ರಮಾಣದ ಹಸಿರು ಶಾಲನ್ನೇ ಎಕ್ಸ್ ಕ್ಲುಸಿವಾಗಿ ಹೊದ್ದುಕೊಂಡಿದ್ದರೇ ನಮ್ಮಭಾಗ ಮಾತ್ರವಲ್ಲದೆ ರಾಜ್ಯಮಟ್ಟದ ಬಹುದೊಡ್ಡ ರೈತನಾಯಕರಾಗಿ ಅವರು ಹೊರ ಹೊಮ್ಮುತ್ತಿದ್ದರು.*
ಅದೀಗ ನೀಗದ ಮಾತು. ಅದೇನಿದ್ದರೂ ಬತ್ತದ ತೆನೆ ಹೊತ್ತ ಹೆಣ್ಣುಮಗಳೇ ‘ಒನ್ ಆ್ಯಂಡ್ ಓನ್ಲೀ’ ಎನ್ನುವಂತಿದ್ದ ಒಂದುಕಾಲದ ಅವರೀಗ ಕೈಪಕ್ಷ ಸೇರಿದ್ದಾರೆ. ಆದರೆ ಕೈಗೊಂಬೆ ಆಗದಿರಲಿ ಎಂದು ಕರಾರುವಾಕ್ಕಾಗಿ ಹೇಳ ಬಯಸುವೆ. ಏಕೆಂದರೆ ತಲೆಯ ಮೇಲೆ ತೆನೆಯ ಪೆಂಡಿ ಹೊತ್ತ ಮಹಿಳೆಯೇ “ಕಮಲ” ಳೆಂಬುದು ಜಗಜ್ಜಾಹೀರು ಆಗಿದೆ. ರಾಜ್ಯ ಮತ್ತು ಜೇವರ್ಗಿ ತಾಲೂಕು ರಾಜಕಾರಣ ಹಲವು ಭಿನ್ನ ಬೆಳವಣಿಗೆಗಳಿಗೆ ಹೆಗಲೆಣೆಯಾಗಲಿದೆ.
ಬಹಳ ಮಂದಿ ಸಾಮಾನ್ಯರಿಗೆ ಗೊತ್ತಿರದ ಮತ್ತೊಂದು ಸಂಗತಿ ಇಲ್ಲಿದೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕೇದಾರಲಿಂಗಯ್ಯ “ಕಲಬುರ್ಗಿವಾಣಿ” ಎಂಬ ದಿನಪತ್ರಿಕೆ ಸಂಪಾದಕರು. ಸುದೀರ್ಘ ಕಾಲ ದೈನಿಕವೊಂದರ ಸಂಪಾದಕ, ಪತ್ರಕರ್ತನೆಂಬ ಗತ್ತು ಗೈರತ್ತು ಪ್ರದರ್ಶಿಸುವ ಜಾಯಮಾನ ಅವರದಲ್ಲವೇ ಅಲ್ಲ. ಮಾಸಲು ಬಿಳಿಪೈಜಾಮ, ಅದೇ ಬಣ್ಣದ ನೆಹರೂ ಜುಬ್ಬಾ ಅಂಗಿ. ಅರ್ಧ ಹಣೆ ಮುಚ್ಚುವಂತೆ ಬಾಚಿದ ಕೂದಲು. ಇಂತಹ ಸಾದಾ ಉಡುಪಿನ ಆತನೊಳಗೆ ಜಂಭದ ಪತ್ರಿಕೋದ್ಯಮಿ ಇರುವುದು ಹೇಗೆ ಸಾಧ್ಯ?
ಜೇವರ್ಗಿ ಕ್ಷೇತ್ರದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಕೇದಾರಲಿಂಗಯ್ಯನವರ ಮಗ ಶ್ರೀವಿಜಯ, ಹೆಸರು ಮುನ್ನೆಲೆಯಲ್ಲಿದೆ. ಮುಂಬರುವ ಬಹುತೇಕ ಮಹತ್ವದ ಚುನಾವಣೆಗಳು ಮತ್ತು ರಾಜಕೀಯ ಸ್ಥಿತ್ಯಂತರಗಳಲ್ಲಿ ಮಗನಿಗೆ ಅವಕಾಶ ಕಲ್ಪಿಸಿಕೊಡುವ ಉಮೇದು ಅವರಿಗಿರುವುದು ಸಹಜ. ಚುನಾವಣೆಗಳ ನಿರಂತರ ಸೋಲು, ಅವರನ್ನು ವಿಫಲ ಹೋರಾಟದ ಪಟ್ಟಕ್ಕೇರಿಸಿದ ಹಳೆಯ ಕಹಿನೆನಪು. ಆದರೆ ನೆನಪಿರಲಿ ಪ್ರಥಮ ಜಿಲ್ಲಾ ಪರಿಷತ್ತಿನ ಸದಸ್ಯರಾಗಿ ೧೯೮೭ ರಲ್ಲಿ ಗೆದ್ದ ಹೆಗ್ಗಳಿಕೆ ಅವರದು. ಅದೂ ಧರ್ಮಸಿಂಗ್ ಅವರ ಹುಟ್ಟೂರಾದ ನೆಲ್ಲಿಗೆ ಜಿ.ಪ. ಕ್ಷೇತ್ರದಿಂದ.
ಅಲ್ಲಿ ಆಗ ಧರ್ಮಸಿಂಗ್ ಅವರ ಖಾಸಾಶಿಷ್ಯ ಅಲ್ಲಮಪ್ರಭು ಪಾಟೀಲರನ್ನು ಸೋಲಿಸಿರುವ ಅಂತಹದೇ ಸಿಹಿಕಹಿ ಕ್ರೆಡಿಟ್ ಕೇದಾರಲಿಂಗಯ್ಯರದು. ಅದಕ್ಕೆ ಪೂರ್ವದಲ್ಲಿ ಇಪ್ಪತ್ತಾರನೇ ವಯಸ್ಸಿಗೆ ತಾಲೂಕಾ ಎ.ಪಿ.ಎಂ.ಸಿ. ಅಧ್ಯಕ್ಷನಾದ ದಾಖಲೆ ಅವರದು. ಅರವತ್ತೈದರ ಏರು ವಸಂತಗಳಿಗೆ ಕಾಲಿಡುತ್ತಿರುವ ಅವರಿಗೆ ಇನ್ನೊಂದು ”ಕೈ” ಎಮ್ಮೆಲ್ಲೆ ಎಲೆಕ್ಷನ್ ನೋಡಬಾರದೇಕೆಂಬ ‘ಮಗ’ದೊಂದು ಆಲೋಚನೆ ಕಾಡದಿರಲಾರದು. ಜೇವರ್ಗಿ ಎಂಬ ಮೊಗಲಾಯಿ ನೆಲದ ರೈತ ಸಹಕಾರಿ ‘ಸತ್ಯಾಗ್ರಹಿ’ ಗೆ ಅದೇ ಹೆಸರಿನ ಅಭಿನಂದನ ಸಮಾರಂಭ ಮತ್ತು ಗ್ರಂಥ ಲೋಕಾರ್ಪಣೆ. ೧೦.೧೧.೨೦೨೩ ರಂದು ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಸಮಾರಂಭ ಜರುಗಲಿದೆ. ಸಧ್ಯಕ್ಕೆ ಸನ್ಮಿತ್ರ ಕೇದಾರ ಸ್ವಾಮಿಗಳಿಗೆ ಶುಭವಾಗಲೆಂಬ ಹದುಳ ಹಾರೈಕೆಗಳು.
ಮಲ್ಲಿಕಾರ್ಜುನ ಕಡಕೋಳ
9341010712