ನಿನ್ನಿಂದಲೇ
ನೀ ಬಂದಾಗಲೇ ದೀಪಾವಳಿ
ನೀ ನುಡಿದಾಗಲೇ ಚೈತ್ರಾವಳಿ..
ನೀ ನಕ್ಕಾಗಲೇ ಪ್ರಭಾವಳಿ…
ಪುಸ್ತಕದ ಪುಟದಲ್ಲಿ ಮುಖ
ಹುದುಗಿಸಿ ಮುದುಡಿ
ಮಲಗಿದ್ದ ನನ್ನ ಕವಿತೆಗೆ
ಉಸಿರು ಬಂದು
ಜೀವ ತಳೆದಿದ್ದು…
ನೀ ಓದಿದಾಗಲೇ…
ಎದೆ ಕದವ ತೆರೆದು
ಪದಗಳು ಹೊರಗಿಣುಕಿ
ಮುದದಿಂದ ನಗು ನಗುತ
ಕುಳಿತು ಒಪ್ಪವಾಗಿ
ಭಾವ ಜೀವ ಅಪ್ಪಿಕೊಂಡು
ಕವನವಾದದ್ದು…
ಜೀವ ಮಲ್ಲಿಗೆಯಾದದ್ದು
ನೀ ಬಂದಾಗಲೇ…
ಕನಸೊಂದು ಮೂಡಿದ್ದು…
ನನಸಾಗಿ ಮಾತಾಡಿದ್ದು..
ಮೌನ ಮಾತಾಗಿದ್ದು…
ಮಾತು ಹಾಡಾಗಿದ್ದು…
ಯುಗಾದಿ ಉರುಳಿ
ನೀ ಹೊರಳಿ ಬಂದು ನಕ್ಕಾಗಲೇ
ನನ್ನ ದೀಪಾವಳಿ….
ನೀ ಬಂದಾಗಲೇ….
— ಇಂದಿರಾ ಮೋಟೆಬೆನ್ನೂರ. ಬೆಳಗಾವಿ