ರೈತರು ನಾವು
ರೈತರು ನಾವು, ಈ ಮಣ್ಣಿನ ಮಕ್ಕಳು ನಾವು,
ಭೂಮಿತಾಯಿಗೆ ಶರಣೆಂದು ಬದುಕುವವರು. ||ಪ||
ಎಲ್ಲ ದೇಶದವರು ನಾವು, ಎಲ್ಲ ಭಾಷೆಯವರು ನಾವು.
ಎಲ್ಲ ಜನಾಂಗದವರು ನಾವು, ಎಲ್ಲ ಧರ್ಮಗಳವರು.
ಆಳುವ ನಾಯಕರಿಗೆ ಕಾಯಲು ಸಮಯವಿಲ್ಲ ನಮಗೆ.
ಕಾಯುತ್ತೇವೆ ನಾವು ಮಳೆಗಳಿಗೆ ಉತ್ತಮ ಬೆಳೆಗಳಿಗೆ.
ಬದುಕುತ್ತೇವೆ ನಾವು ಸರ್ವ ಋತುಮಾನಗಳ ಜೊತೆ,
ಸಾಗುತ್ತೇವೆ ಸಾಲಶೂಲಗಳ ಜೊತೆ, ಕಷ್ಟಗಳ ಜೊತೆ.
ಹಸು, ನಾಯಿ, ಕುರಿ, ಕೋಳಿ, ಬಂಧು ಬಳಗ ನಮಗೆ,
ನೆರೆಹೊರೆಯೆ ತಂದೆ ತಾಯಿ ಅಣ್ಣ ಅಕ್ಕ ಭಾವಬೆಸುಗೆ.
ಭೂಮಿ ಆಕಾಶ ಮಳೆ ಸೂರ್ಯ ಜೊತೆ ನಮ್ಮ ಬದುಕು
ಮೋಡಗಳ ಜೊತೆ ಜೊತೆಯಲಿ ಸಾಗಿವೆ ನಮ್ಮ ಕನಸು.
ಪಶು ಪಕ್ಷಿ ಸಕಲ ಜೀವರಾಶಿಯ ಜತೆ ಒಂದಾಗಿ ನಾವು
ಹೊತ್ತಿದ್ದೇವೆ ನಮ್ಮ ಸಂಸಾರಭಾರ ಅರಿಯಿರಿ ನೀವು.
ಆಡುತ್ತೇವೆ ನಾವು ಮನ್ಸೂನಗಳ ಜೊತೆ ಜೂಜಾಟವ.
ಬೆಳೆ ಕಳೆದುಕೊಂಡರೂ ಸಹಿಸುತ್ತೇವೆ ಸಂತರ ಹಾಗೆ.
ತಿಳಿಯಿರಿ ಎಲ್ಲವನೂ ತಾಳುತ್ತೇವೆ ನಾವು ಮಾನಕ್ಕಾಗಿ.
ದೊರೆಯೆ ತಾಳೆವು ನಾವು ಅಪಮಾನವನು ಎಂದಿಗೂ.
–ರಂಜಾನ್ ದರ್ಗಾ, ಪತ್ರಕರ್ತರು,
ಬಸವ ಧರ್ಮ ಚಿಂತಕರು, ಕಲಬುರಗಿ