e-ಸುದ್ದಿ, ಮಸ್ಕಿ
ಕೃಷ್ಣ ಭಾಗ್ಯ ಜಲನಿಗಮದ 5 ಎ ಕಾಲುವೆ ಯೋಜನೆಯನ್ನು ಜಾರಿಗೊಳಿಸದಿದ್ದರೆ ಡಿ.27 ರಂದು ನಡೆಯುವ ಗ್ರಾಮ ಪಂಚಾಯಿತಿ ಹಾಗೂ ಮುಂಬರುವ ಮಸ್ಕಿ ಕ್ಷೇತ್ರದ ಉಪಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಬುದ್ದಿನ್ನಿ(ಎಸ್) ಗ್ರಾಮಸ್ಥÀರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಹಸೀಲ್ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಬಲರಾಮ ಕಟ್ಟಮನಿ ಅವರಿಗೆ ಸಲ್ಲಿಸಿದರು.
ಬುದ್ದನ್ನಿ ಗ್ರಾಮಸ್ಥ ಹಾಗೂ ತಾಪಂ ಸದಸ್ಯ ಮೌನೇಶ ಮಾತನಾಡಿ ನಮ್ಮಲ್ಲಿ ರೈತರು ಹೆಚ್ಚಾಗಿ ಒಣ ಬೇಸಾಯವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದರಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಸಾವಿರಾರು ರೈತರು ಹಾಗೂ ಕಾರ್ಮಿಕರು ಹಳ್ಳಿ ತೊರೆದು ಪಟ್ಟಣ ಪ್ರದೇಶಗಳಿಗೆ ಗೂಳೆ ಹೋಗಿದ್ದಾರೆ. ಇದರಿಂದ ಮಕ್ಕಳು ವಿಧ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಮಸ್ಕಿ ತಾಲೂಕಿನ ರೈತರ ಹಿತಕ್ಕಾಗಿ ಎನ್ನಾರ್ಬಿಸಿ 5ಎ ಕಾಲುವೆಯನ್ನು ಅನುಷ್ಠಾನಗೊಳಿಸುವಂತೆ ದಶಕದಿಂದ ಹೋರಾಟ, ಮನವಿ ಪತ್ರ, ಕಾಲ್ನಡಿಗೆ ಚಳುವಳಿಗಳನ್ನು ನಡೆಸಿದ್ದಾರೆ ಆದರೆ ಸರ್ಕಾರಗಳು ಮಾತ್ರ ರೈತರ ಸಂಕಷ್ಟವನ್ನು ಕೇಳುತ್ತಿಲ್ಲ ಕೂಡಲೇ ಸರ್ಕಾರ ರೈತರ ಅನೂಕೂಲಕ್ಕಾಗಿ 5ಎ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನಂತರ 5ಎ ಹೋರಾಟ ಸಮಿತಿಯ ಸದಸ್ಯ ನಾಗರಡ್ಡೆಪ್ಪ ದೇವರಮನಿ ಮಾತನಾಡಿ 5ಎ ನಾಲೆ ಜಾರಿಗಾಗಿ ಸಾಕಷ್ಟು ಹೋರಾಟಗಳು ನಡೆಸಿದರೂ ನೀರಾವರಿ ಇಲಾಖೆ ಮತ್ತು ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಡಿ.27 ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಮುಂಬರುವ ಮಸ್ಕಿ ಕ್ಷೇತ್ರದ ಉಪಚುನಾವಣೆಯನ್ನು ಬಹಿಷ್ಕರಿಸಬೇಕೆಂದು ಗ್ರಾಮಸ್ಥರು ಒಗ್ಗಟ್ಟಿನಿಂದ ತಿರ್ಮಾನಿಸಿ 5ಎ ನಾಲೆ ಜಾರಿಯಾಗುವವರೆಗೆ ಮತದಾನವನ್ನು ಮಾಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಗ್ರಾಮಸ್ಥÀರಾದ ಹಂಪಯ್ಯ ದೇವರಮನಿ, ಗೌಡಪ್ಪ ಇಳಿಗೇರ್, ರಾಜಪ್ಪ, ಅಂಬಣ್ಣ, ದೇವೇಂದ್ರಪ್ಪ, ಪರಸಪ್ಪ ಸೇರಿದಂತೆ ಇತರರು ಇದ್ದರು.