ಮಹತ್ವಕಾಂಕ್ಷೆ ತಾಲೂಕು ಮಸ್ಕಿಗೆ ಪ್ರಥಮ ಸ್ಥಾನ

ಮಹತ್ವಕಾಂಕ್ಷೆ ತಾಲೂಕು ಮಸ್ಕಿಗೆ ಪ್ರಥಮ ಸ್ಥಾನ
ಝೋನ್‌ 3 ರಲ್ಲಿ ಸಾಧನೆ | 1. 50 ಕೋಟಿ ನಗದು ಪುರಸ್ಕಾರ | ಗರಿಗೆದರಿದ ನಿರೀಕ್ಷೆ

e-ಸುದ್ದಿ ಮಸ್ಕಿ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದಲ್ಲಿ (ಎಬಿಪಿ) ಮಸ್ಕಿ ತಾಲೂಕು ಪ್ರಥಮ ಸ್ಥಾನ ಪಡೆದಿದೆ.
ಡಿಸೆಂಬರ್‌ 7 ರಂದು ಪ್ರಕಟಿಸಿದ ನೀತಿ ಆಯೋಗದ ಮಾನದಂಡಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣ ಭಾರತದ (ಝೋನ್‌-3ರ) ಮೌಲ್ಯಮಾಪನದಲ್ಲಿ ಮಸ್ಕಿ ತಾಲೂಕು, ಪ್ರಥಮ ಶ್ರೇಣಿ ಪಡೆದಿದೆ. ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯ ನರನೂರ್‌ ತಾಲೂಕು ದ್ವೀತಿಯ ಸ್ಥಾನ ಪಡೆದಿದೆ.
ಸುಸ್ಥಿರ ಅಭಿವೃದ್ಧಿ ಗುರಿಗಳ ಜೊತೆಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಈ ಯೋಜನೆಯಡಿ ಜಿಲ್ಲಾಧಿಕಾರಿಗಳ ಖಾತೆಗೆ 1 ಕೋಟಿ 50 ಲಕ್ಷ ರೂ. ಜಮೆಯಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬಡತನ ನಿರ್ಮೂಲನೆ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ಕೃಷಿ, ಜಲ ಮೂಲಗಳ ಸಂರಕ್ಷಣೆ ಸೇರಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಉಮೇಶ್‌ ತಿಳಿಸಿದ್ದಾರೆ.
ಗುಂಡ, ಬಪ್ಪೂರು ಕೆರೆ ಅಭಿವೃದ್ಧಿ : ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಅಂತರ್ಜಲ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗುಂಡ ಗ್ರಾಪಂಯ ರತ್ನಾಪುರ ಹಟ್ಟಿ, ಬಪ್ಪೂರು ಗ್ರಾಪಂಯ ಗುಡಗಲದಿನ್ನಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಪಂ ಯೋಜನಾ ನಿರ್ದೇಶಕರು ಚರ್ಚಿಸಿದ್ದು, ಕೆಲ ದಿನಗಳಲ್ಲಿಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
ಏನಿದು ಯೋಜನೆ : ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ನೀತಿ ಆಯೋಗ ದೇಶದ ನಾನಾ ರಾಜ್ಯಗಳ 329 ಜಿಲ್ಲೆಗಳನ್ನು ಮಹತ್ವಕಾಂಕ್ಷೆ ಜಿಲ್ಲೆ ಯೋಜನೆಯಡಿ ಆರು ವಲಯಗಳಲ್ಲಿ 40 ಬಗೆಯ ವಿವಿಧ ಅಭಿವೃದ್ಧಿ ಸೂಚಿಗಳನ್ನು ಪೂರೈಸಲು ಯೋಜನೆ ರೂಪಿಸಿದೆ. ಅದೇ ರೀತಿ ಹಿಂದುಳಿದ ತಾಲೂಕು ಅಭಿವೃದ್ಧಿಗಾಗಿ ಸೆಪ್ಟೆಂಬರ್‌ 30 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮ (ಎಬಿಪಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.


ಯಾವ್ಯಾವ ತಾಲೂಕು?: ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮಕ್ಕೆ ರಾಜ್ಯದ ಬೀದರ ಜಿಲ್ಲೆಯ ಔರದ್‌, ಚಿಟಗುಪ್ಪಾ, ಹುಮನಬಾದ್‌, ಕಮಲನಗರ, ಕಲಬುರಗಿ ಜಿಲ್ಲೆಯ ಅಫ್ಜಲಪುರ, ಕಾಳಗಿ, ಶಹಬಾದ್‌, ರಾಯಚೂರು ಜಿಲ್ಲೆಯ ಮಸ್ಕಿ, ಸಿರವಾರ, ಉತ್ತರ ಕನ್ನಡದ ಮುಂಡಗೋಡ, ಸೋಪಾ, ವಿಜಯಪುರ ಜಿಲ್ಲೆಯ ತಾಳಿಕೋಟಿ, ಯಾದಗಿರಿ ಜಿಲ್ಲೆಯ ವಡಗೇರಾ ಈ ಯೋಜನೆಗೆ ಆಯ್ಕೆಯಾಗಿವೆ.

ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ನೀತಿ ಆಯೋಗ ಆಯ್ಕೆ ಮಾಡಿದ ದಕ್ಷಿಣ ಭಾರತದ 180 ತಾಲೂಕುಗಳ ಪೈಕಿ ಮಸ್ಕಿ ತಾಲೂಕು ಪ್ರಥಮ ಸ್ಥಾನ ಪಡೆದಿರುವುದು ಖುಷಿಯ ವಿಚಾರ. 1.50 ಕೋಟಿ ರೂ. ಅನುದಾನದಲ್ಲಿ ಆಯೋಗ ನಿಗದಿಪಡಿಸಿದ ಅಭಿವೃದ್ಧಿ ಸೂಚಿಗಳನ್ನು ಪೂರೈಸಲಾಗುವುದು.


-ರಾಹುಲ್‌ ತುಕಾರಾಂ ಪಾಂಡ್ವೆ
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ರಾಯಚೂರು

Don`t copy text!