ಕರ್ನಾಟಕ ಸಂಭ್ರಮ ರಥ ಯಾತ್ರೆಗೆ ಅದ್ದೂರಿ ಸ್ವಾಗತ

ಕರ್ನಾಟಕ ಸಂಭ್ರಮ ರಥ ಯಾತ್ರೆಗೆ ಅದ್ದೂರಿ ಸ್ವಾಗತ
ಗಮನ ಸೆಳೆದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ

e-ಸುದ್ದಿ ಮಸ್ಕಿ 

ನಾಡಿನ ಹಿರಿಮೆ ಗರಿಮೆಯನ್ನು ಸಾರಲು ಕರ್ನಾಟಕ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿರುವ ಕರ್ನಾಟಕ ರಥ ಯಾತ್ರೆಯನ್ನು ಮುದ್ದಾಪುರ ಕ್ರಾಸ್ ನಲ್ಲಿ ಅದ್ದೂರಿಯಾಗಿ ಶುಕ್ರವಾರ ಸ್ವಾಗತಿಸಲಾಯಿತು.

ತಹಸೀಲ್ದಾರ್ ರಾದ ಅರಮನೆ ಸುಧಾ, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಉಮೇಶ್ ಅವರು ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಿದರು.

ನಂತರ ತಹಸೀಲ್ದಾರ್ ಅರಮನೆ ಸುಧಾ ಮಾತನಾಡಿ, ಅನೇಕ ಮಹನೀಯರ ಶ್ರಮದ ಫಲವಾಗಿ ಕನ್ನಡ ಭಾಷೆ ಸಮೃದ್ಧವಾಗಿದೆ. ಅತ್ಯಧಿಕ ಜ್ಞಾನ ಪೀಠ ಪ್ರಶಸ್ತಿ ಒಲಿದಿರುವುದು ಕನ್ನಡಕ್ಕೆ ಮಾತ್ರ. ಹೀಗಾಗಿ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಂಡು ನಿತ್ಯ ಜೀವನದಲ್ಲಿ ಕನ್ನಡ ಬಳಸುವುದರ ಜೊತೆಗೆ ಸಾಹಿತ್ಯ ಅಧ್ಯಯನಕ್ಕೆ ಮುಂದಾಗಬೇಕು. ಪ್ರಾಥಮಿಕ ಶಾಲೆ ಹಂತದಲ್ಲಿಯೇ ಮಕ್ಕಳಿಗೆ ಕನ್ನಡ ಬಳಸುವಂತೆ ತಿಳಿ ಹೇಳಬೇಕು. ಭಾಷೆ, ಜಲ, ಗಡಿ ರಕ್ಷಣೆಗೆ ಕಂಕಣ ಬದ್ಧರಾಗಬೇಕು. ಜನ ಸಾಮಾನ್ಯರಲ್ಲಿ ಭಾಷೆ ಅಭಿಮಾನ ಮೂಡಿಸಲು ರಾಜ್ಯಾದ್ಯಂತ ರಥ ಯಾತ್ರೆ ಸಂಚರಿಸಲಿದೆ ಎಂದರು.

ಮಸ್ಕಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಉಮೇಶ್ ಮಾತನಾಡಿ, ಈ ವಿಶೇಷ ಕನ್ನಡ ರಥ ಯಾತ್ರೆ ಉದ್ದಕ್ಕೂ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರತಿಯೊಬ್ಬರು ಭಾಗವಹಿಸಿ, ಕಳೆ ಹೆಚ್ಚಿಸಬೇಕು. ಈ ಯಾತ್ರೆಯೂ ಡಿ. 9 ರಂದು ಮಸ್ಕಿ ಪಟ್ಟಣ, ಬಳಗಾನೂರಿನಲ್ಲಿ ಸಂಚರಿಸಿ ಲಿಂಗಸುಗೂರಿಗೆ ತೆರಳಲಿದೆ ಎಂದರು.‌
ಕನ್ನಡ ರಥ ಯಾತ್ರೆಯೂ ವಿವಿಧ ಗ್ರಾಮಗಳ ಮೂಲಕ ಮಸ್ಕಿ ತಲುಪಿತು. ಒನಕೆ ಒಬ್ಬವ್ವ, ಸಂಗೊಳ್ಳಿ ರಾಯಣ್ಣ, ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರ ಛದ್ಮ ವೇಷ ಧರಿಸಿದ್ದ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು.

ಈ ವೇಳೆ ಉಪ ತಹಸೀಲ್ದಾರ್ ನಾಗರಾಜ್, ತಾಪಂ ಯೋಜನಾ ನಿರ್ದೇಶಕರಾದ ಇಬ್ರಾಹಿಂ ಪಟೇಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅಶೋಕ್, ಮಸ್ಕಿ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸಿಆರ್ ಪಿ ಜಗದೀಶ್, ಕೊಳಬಾಳ ಗ್ರಾಪಂ ಅಧ್ಯಕ್ಷ ಇ. ರಾಜೇಶ್, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸಂದೇಶ್, ಮಲ್ಲಯ್ಯ, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ತಾಪಂ ಸಿಬ್ಬಂದಿ, ವಿವಿಧ ಶಾಲೆಗಳ ಶಿಕ್ಷಕರು, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಇದ್ದರು.

Don`t copy text!