ಹುನ್ನೂರಿನ ಅಣ್ಣಾ..
ಏನ ಹೇಳಲಿ, ಏನ ಕೇಳಲಿ ಹುನ್ನೂರಿನ ಅಣ್ಣಾ
ಎನ್ನ ಮನ ತುಂಬಿ ಭಾವ ತುಂಬಿ ತನುವೆಲ್ಲ
ಆಧ್ಯಾತ್ಮದ ಚುಳಕ ತುಂಬಿ ನಿಂದೆ
ನಿಮ್ಮ ನಿರಂತರ ನಿರರ್ಗಳ ವಾಣಿಗೆ ಬೆರಗಾದೆ
ಇದ ಸಾಕ್ಷಾತ್ಕಾರಕ್ಕೆ ನಿಮಗಾಗಿದ್ದು ಅದಾವ ಬೋಧೆ
ಶರಣನಾಗಬೇಕೆಂಬುದು ಬಾಲ್ಯದ ಕನಸೇ
ಬಸವ ಗುರುಕುಲದ ಕೂಸಿಗೆ ನಡೆದಿದೆ ನಿರಂತರ ತಪಸ್ಸು
ಚಿಕ್ಕ ವಯಸ್ಸಿನಲ್ಲಿ ಮೇರು ಪರ್ವತವಾದದ್ದು ಎಂಥ ಸೊಗಸು
ಈ ಗುರಿಯ ಹಿಂದಿನ ಗುರುವಿಗೆ ನಮಿಸಿದೆ ಶಿರಸ್ಸು
ಎಲ್ಲವೂ ನಿನ್ನದೇ ಬಸವಾ ಎಂಬ ಅರ್ಪಣೆಯ ಮನಸ್ಸು
ಕೋಟಿ ಕೊಟ್ಟರೂ ಸಿಗದ ನಿರ್ಮಲ ನಗೆ ಸಿಕ್ಕಿದೆ
ನಿರಂತರ ಚೈತನ್ಯ ಆಧ್ಯಾತ್ಮದ ಬಲ್ಮೆ ದಕ್ಕಿದೆ
ಸೊಗಸಾಗಿ ಪ್ರವಚನ ನೀಡುವ ಜ್ಞಾನ ಚಕ್ಸು ಒಲಿದಿದೆ
ಶ್ವೇತ ವಸ್ತ್ರಧಾರಿ ನಿಮ್ಮದು ಅಧ್ಯಾತ್ಮದ ಬುನಾದಿ.
ನಿಮ್ಮ ನಿಲುವಿಗೆ ಮನಬಾಗಿದೆ ಹಣೆ ಮಣಿದಿದೆ
ನಮ್ಮ ಮುಚ್ಚಿರುವ ಮುಸುಕು ಸರಿಸುವ ಗಾನ
ಕಂಚಿನ ಕಂಠದ ಕರ್ಣ ಮಧುರ ಸ್ವರಾಲಾಪನ
ಆಲಿಸುತ್ತಾ ಭಾವ ಪರವಶವಾಗುವವು ನಮ್ಮಿ ನಯನ
ಎಸ್.ಪಿ.ಬಿ.ಗೆ.ಒಲಿದ ಗಾನಕ್ಕೆ ಬೇಕಿಲ್ಲ ಯಾವ ಬಹುಮಾನ
ಹೀಗೆ ಸಾಗುತ್ತಿರಲಿ ರಾಗಸುಧೆಯ ನವ ಋತುಮಾನ
ಅರಿವಿನ ಹೊಳವುಳ್ಳ ಹಲವು ಹೊತ್ತಿಗೆಗಳು
ಓದುತ್ತಾ ಓದುತ್ತಾ ಸರಿದದ್ದು ತಿಳಿಯುವುದಿಲ್ಲ ಹೊತ್ತು
ಪ್ರತಿಯೊಂದು ಹೊತ್ತಿಗೆ ಸಾಗರದಾಳದ ಮುತ್ತು
ಓದಿದಾಗ ತಿಳಿಯುತ್ತದೆ ಮುತ್ತಿನ ವಿಶಿಷ್ಟ ಗಮ್ಮತ್ತು
ಅರಿಯಬೇಕಾಗಿದೆ ಮುತ್ತುಗಳ ಜಾಣ್ಮೆಯ ಜಗತ್ತು
ಕ್ಷಣಗಳಂತೆ ಉರುಳಿದವು ಅಕ್ಕನ ನವಮಿ
ಅಕ್ಕನ ಮಂಟಪದಲ್ಲಿ ಮಂಟೂರರ ಪ್ರವಚನ ಪೌರ್ಣಮಿ
ಮರೆತಿದ್ದೆವು ನಾವೆಲ್ಲ ಮನದ ನೋವುಗಳ ಸುನಾಮಿ
ಮತ್ತೆ ಕಾಯೋಣ ಇಂತಹ ಪ್ರವಚನದ ಮಹಾನವಮಿ
ಕಾಯುವುದೇ ನಲುಮೆ ಇರಲಿ ಅಣ್ಣಾ ನಿಮ್ಮ ಒಲುಮೆ.
ನಿಮ್ಮ ಬಣ್ಣಿಸಬೇಕೆಂಬ ಆಸೆ ಇಲ್ಲ ನನಗೆ
ಇರುವುದನ್ನೇ ಇದ್ದಂತೆ ಕಾವ್ಯವಾಗಿಸಿದೆ ನಿಮ್ಮ ಬಗ್ಗೆ
ಅದು ಬಣ್ಣನೆ ಎನ್ನಿಸಿದರೆ ನನ್ನ ತಪ್ಪಿಲ್ಲ ನೋಡಾ ಹೇಮಕೂಟೇಶಾ…
ಎಲ್ಲರಿಗೂ ಬೇಕಾದವರು ದೇವರಿಗೂ ಬೇಕಂತೆ
ಹೇಮಕೋಟೆಶ ಅದಕ್ಕೇ ಏನೋ ಬೇಗ ಎತ್ತಿಕೊಂಡುಬಿಟ್ಟ
–ಜಯಶ್ರೀ.ಭ.ಭಂಡಾರಿ.
ಬಾದಾಮಿ.