ಮನುಷ್ಯನ ಆತ್ಮ ಬಲ

ಮನುಷ್ಯನ ಆತ್ಮ ಬಲ

ಯಾರಾದರೂ ಇಬ್ಬರು ವ್ಯಕ್ತಿಗಳ ನಡುವೆ ಜಗಳವಾದಾಗ ಅವರು ತಮ್ಮ ತಮ್ಮ ತಾಕತ್ತನ್ನು ತೋರಿಸುತ್ತಾರೆ. ತೋಳ್ಬಲ, ಹಣಬಲ, ಜನಬಲ, ಅಧಿಕಾರ ಬಲ ಎಂದು ಹಲವಾರು ವಿಧದ ಬಲಗಳ ಮೂಲಕ ತಮ್ಮ ಎದುರಿಗಿರುವ ವ್ಯಕ್ತಿಗಳನ್ನು ಗೆಲ್ಲಲು ಪ್ರಯತ್ನಿಸುತ್ತಾರೆ.
ದೈಹಿಕ ಶಕ್ತಿಯುಳ್ಳವನು ಬೇರೆಯವರನ್ನು ತನ್ನ ತೋಳ್ಬಲದಿಂದ ಎದುರಿಸಿದರೆ, ಆರ್ಥಿಕವಾಗಿ ಬಲಿಷ್ಠನಾದವನು ತನ್ನೆದುರಿಗಿರುವವನನ್ನು ಹಣದ ಬಲದಿಂದ ಗೆಲ್ಲಲು ಪ್ರಯತ್ನಿಸುತ್ತಾನೆ. ಮತ್ತೆ ಕೆಲವರು ತಮಗಿರುವ ಸಾಕಷ್ಟು ಅಭಿಮಾನಿಗಳು, ಜನರ ಬೆಂಬಲವನ್ನು ತೋರಿಸಿದರೆ, ಇನ್ನು ಕೆಲವರು ತಾವು ಹೊಂದಿರುವ ಅಧಿಕಾರ, ಅದರ ವ್ಯಾಪ್ತಿ, ಆಳ, ಅಗಲಗಳನ್ನು ಉಪಯೋಗಿಸಿ ತಮ್ಮ ಕೆಲಸ ಪೂರೈಸಿಕೊಳ್ಳಲು ಪ್ರಯತ್ನಿಸುತ್ತಾರೆ. ವಾಸ್ತವ ಪ್ರಪಂಚದಲ್ಲಿ ನಡೆಯುತ್ತಿರುವುದು ಇದೇ.

ಆದರೆ ಮನುಷ್ಯನ ನಿಜವಾದ ತಾಕತ್ತು ಇರುವುದು ಆತನ ಆತ್ಮಬಲದಲ್ಲಿ. ಆತನ ಶ್ರದ್ದೆ, ಕೆಲಸದೆಡೆಗಿನ ನಿಷ್ಠೆ, ಕಾರ್ಯ ತತ್ಪರತೆಗಳಲ್ಲಿ. ಜಗತ್ತಿನಲ್ಲಿ ಎಲ್ಲರನ್ನೂ ಕಳೆದುಕೊಂಡಾಗ ನಮ್ಮೊಂದಿಗೆ ಇರುವುದು ಕೇವಲ ನಮ್ಮ ಆತ್ಮಬಲ ಮಾತ್ರ. ಹಾಗಾದರೆ ನಿಜವಾದ ಆತ್ಮಬಲವನ್ನು ನಾವು ಎಲ್ಲೆಲ್ಲಿ ಕಾಣಬಹುದು ಎಂಬುದನ್ನು ತುಸು ನಿಖರವಾಗಿ ಅರಿಯೋಣ.
*ಅದೆಷ್ಟೇ ನೋವು ನಿರಾಸೆಗಳನ್ನು ಅನುಭವಿಸಿದ್ದರೂ ಆ ಹ್ ನೋವಿನ ಗಾಯವನ್ನು ಮತ್ತೆ ಕೆದಕದೆ, ಅವುಗಳಿಗೆ ಮುಲಾಮು ಸವರಿ ವಾಸಿಗೊಳಿಸಿಕೊಳ್ಳುವುದು ಮನುಷ್ಯನ ಅತಿ ದೊಡ್ಡ ಶಕ್ತಿ ಅದುವೇ ಆತನ ಆತ್ಮಬಲ.

ನಮ್ಮೆದುರಿಗಿರುವ ವ್ಯಕ್ತಿ ನಮ್ಮನ್ನು ತಿರಸ್ಕಾರದಿಂದ ನೋಡಿದಾಗ, ನಮ್ಮನ್ನು ಅವಹೇಳನ ಮಾಡಿದಾಗಲೂ ಕೂಡ ಪದೇ ಪದೇ ಅವರ ಸ್ನೇಹಕ್ಕಾಗಿ ಕೈ ಚಾಚುವುದು ನಮ್ಮ ಬಲಹೀನತೆಯಾಗುತ್ತದೆ. ಅದರ ಬದಲಾಗಿ ಅಂತಹವರನ್ನು ದೂರವಿರಿಸಿ ನಮ್ಮ ವೈಯುಕ್ತಿಕ ಘನತೆ ಗೌರವವನ್ನು ಕಾಪಾಡಿಕೊಳ್ಳುವುದು ನಿಜವಾದ ಆತ್ಮಬಲ.
ಜಗತ್ತಿನ ಉಳಿದೆಲ್ಲರೂ ನಮ್ಮನ್ನು ನಂಬದೇ ಇದ್ದಾಗಲೂ ಕೂಡ ನಮ್ಮನ್ನು ನಾವು ನಂಬುವುದು, ನಮ್ಮಿಂದ ಈ ಕೆಲಸ ಸಾಧ್ಯ ಎಂಬ ವಿಶ್ವಾಸ ಮೂಡಿಸುವುದು ನಮ್ಮಲ್ಲಿರುವ ಆತ್ಮ ಬಲ.

ಕೆಲವೊಮ್ಮೆ ಸಂಬಂಧಗಳಲ್ಲಿ ಕೂಡ ಜನರು ನಮ್ಮನ್ನು ಬೇಕೆಂದೆ ಕೀಳಾಗಿ ತೋರಿಸಲೆಂದು ಅವಹೇಳನ ಮಾಡುತ್ತಾರೆ. ಸ್ನೇಹಿತರನ್ನು ನಮ್ಮ ವಲಯದಿಂದ ದೂರವಿರುವುದು ಸರಳ ಆದರೆ ಸಂಬಂಧಿಕರು ಪದೇಪದೇ ನಮ್ಮ ಪರಿಚಯದ ಪರಿಧಿಯಲ್ಲಿ ಕಾಣಿಸುತ್ತಾರೆ. ಇನ್ನು ಕೆಲವೊಮ್ಮೆ ಮನೆಯಲ್ಲಿಯೇ ಇರುವ ಸಂಗಾತಿ, ಮಕ್ಕಳು, ಅತ್ತೆ, ಮಾವ, ನಾದಿನಿ ಹೀಗೆ ಅವರವಲ್ಲಿಯೇ ಯಾವುದಾದರೂ ಒಂದು ರೀತಿಯ ಅನಪೇಕ್ಷಿತ ಮಾತುಕತೆ ನಡೆದು ಮನಸ್ಸು ಕಹಿಯಾಗಿರುತ್ತದೆ. ಅಂತಹ ಸಮಯದಲ್ಲಿ ಜೊತೆಗಿದ್ದು ಅವರೊಂದಿಗೆ ಅಂತರ ಕಾಯ್ದುಕೊಳ್ಳುವುದು ಸುಲಭ ಸಾಧ್ಯವಲ್ಲ ನಿಜ, ಆದರೆ ಕುಳಿತು ಮಾತನಾಡಿ ಕೆಲವಷ್ಟು ವಿಷಯಗಳನ್ನಾದರೂ ಬಗೆಹರಿಸಿಕೊಳ್ಳುವುದು ಉತ್ತಮ. ಆ ಕಾರ್ಯವು ಕೂಡ ಯಶಸ್ವಿಯಾಗದಿದ್ದರೆ ಖಂಡಿತವಾಗಿಯೂ ನಿಮ್ಮ ಮನಸ್ಸು ಆಗ ಅವರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಬಯಸುತ್ತದೆ. ಹಾಗೆ ನಿಮ್ಮ ಬಯಕೆಯನ್ನು ಕಾರ್ಯರೂಪಕ್ಕೆ ತರುವುದು ಕೂಡ ನಿಮ್ಮ ಆತ್ಮ ಬಲವನ್ನು ಸೂಚಿಸುತ್ತದೆ.

ಕೆಲವೊಮ್ಮೆ ನಾವು ಕೆಲಸ ಮಾಡುವ ಸ್ಥಳಗಳಲ್ಲಿ ನಾವು ಅನುಚಿತ ಮತ್ತು ಅನಪೇಕ್ಷಿತ ಘಟನೆಗಳಿಗೆ ಈಡಾಗಬಹುದು ಅಂತಹ ಘಟನೆಗಳು ಆಗದಂತೆ ಎಚ್ಚರ ವಹಿಸಬೇಕು. ಇನ್ನು ಕೆಲವೊಮ್ಮೆ ಆ ಘಟನೆಯ ಹಿಂದೆ ಇರುವ ಕಾರಣಗಳನ್ನು ಅರಿತು ಸಂಬಂಧಪಟ್ಟವರೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು.

ಮನುಷ್ಯನ ಜೀವನ ಅತ್ಯಂತ ಸರಳವಾದುದು…. ನಾವು ಹೇಳುವ ಕೆಲ ಸುಳ್ಳುಗಳು, ತಪ್ಪು ಅಭಿಪ್ರಾಯಗಳು, ತೆಗೆದುಕೊಳ್ಳುವ ಅವಸರದ ನಿರ್ಧಾರಗಳು ಬದುಕನ್ನು ಜಟಿಲಗೊಳಿಸುತ್ತವೆ. ಆದ್ದರಿಂದ ಮನುಷ್ಯ ತನ್ನ ವ್ಯವಹಾರಗಳಲ್ಲಿ ನೇರವಾಗಿ ಮತ್ತು ಸತ್ಯಪರನಾಗಿ ಇರಬೇಕು. ಒಂದು ಸುಳ್ಳನ್ನು ಹೇಳಿ ಹಲವು ಬಾರಿ ಒದ್ದಾಡುವುದಕ್ಕಿಂತ ನಿಜವನ್ನು ಹೇಳುವುದು ಒಳ್ಳೆಯದು… ಇರುವ ಸತ್ಯವನ್ನು ಒಪ್ಪಿಕೊಳ್ಳುವುದು ಕೂಡ ನಮ್ಮ ಆತ್ಮ ಬಲವನ್ನು ಸೂಚಿಸುತ್ತದೆ. ನಮ್ಮ ದೃಷ್ಟಿಯಲ್ಲಿ ನಮ್ಮನ್ನು
ಸಣ್ಣವರನ್ನಾಗಲು ಬಿಡುವುದಿಲ್ಲ.

ತಪ್ಪನ್ನು ತಪ್ಪು ಎಂದು ಹೇಳುವಾಗಲು ಸರಿಯನ್ನು ಸರಿಯೆಂದು ಪರಿಗಣಿಸುವಾಗಲೂ ಬೇಕಾಗುವುದು ಆತ್ಮ ಬಲ. ಯಾರದ್ದೋ ಭಿಡೆಗೆ,ಹಿರಿಯರೆಂಬ ಅನುಸರಣೆಗೆ, ಕಿರಿಯರೆಂಬ ಸಲಿಗೆಗೆ ಒಳಗಾಗಿ ಹೋಗಲಿ ಬಿಡಿ ಎಂಬ ಭಾವ ಬೇಡ. ಹೀಗೆ ಮಾಡುವುದರಿಂದ ತತ್ ಕ್ಷಣಕ್ಕೆ ನಿರಾಳವೆನಿಸಿದರೂ ಇದರ ಪರಿಣಾಮ ಹಿರಿಯರಲ್ಲಿ ನಮ್ಮ ಬಗ್ಗೆ ಅಸಡ್ಡೆ, ಏನು ಹೇಳಿದರೂ ನಡೆಯುತ್ತದೆ ಎಂಬ ಭಾವ, ಸತ್ಯವನ್ನು ಒಪ್ಪಿಕೊಳ್ಳದ ಅದಕ್ಕೆ ಮೇಲ್ಮುಸುಗು ಹಾಕುವ ನಮ್ಮ ಪ್ರಯತ್ನ ಮೂಗು ಮುರಿಯುವಂತೆ ಮಾಡುತ್ತದೆ.ಮಕ್ಕಳಲ್ಲಿ ನಮ್ಮ ಕುರಿತು ಅನಾದರ ಮತ್ತು ಉಪೇಕ್ಷೆ ಬೆಳೆಯುತ್ತದೆ ಅವರಷ್ಟೇ ಬಿಡು ಎಂಬಂತಹ ಉದಾಸ ಭಾವ ಸಹಿಸುವುದು ಬಹಳ ಕಷ್ಟ. ಇದರ ಬದಲಾಗಿ ನಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ಇರುವುದನ್ನು ಇರುವಂತೆಯೇ ಹೇಳುವುದರಲ್ಲಿ ಒಳಿತಿದೆ.
ಏನಂತೀರಾ ಸ್ನೇಹಿತರೆ??

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ

Don`t copy text!