ನಿರಾಕರಣೆ ಎಂಬ ನೋವು (ರಿಜೆಕ್ಷನ್ )
ಬಹಳ ಸೂಕ್ಷ್ಮವಾದ ವಿಚಾರವಾಗಿದೆ. ನಾವು ಬಹಳಷ್ಟು ವಸ್ತು ಪಡೆಯಲು ಅಥವಾ ವ್ಯಕ್ತಿಗಳ ಜೊತೆಗೆ ಸ್ನೇಹದಿಂದ ಇರಲು ಬಯಸುತ್ತೇವೆ. ಆದರೆ ನಮ್ಮ ಎದುರಿನವರು ನಮ್ಮನ್ನು ನಿರಾಕರಿಸಿರುತ್ತಾರೆ. ಅಥವಾ ವಸ್ತು ನಮಗೆ ಸಿಗುವಂತೆ ಇರುವುದಿಲ್ಲ. ಈ ನಿರಾಕರಣೆ ಕೆಲವು ಬಾರಿ ನೋವು ಕೊಟ್ಟರೆ, ಇನ್ನು ಕೆಲವೊಮ್ಮೆ ಛಲವನ್ನು, ಕೆಲವೊಮ್ಮೆ ಹೊಸದಾರಿಯನ್ನು, ಇನ್ನು ಕೆಲವು ಬಾರಿ ದ್ವೇಷವನ್ನು ತರುತ್ತದೆ.
ಯಾರದೇ ಭಾವನೆ ಅಥವಾ ವ್ಯಕ್ತಿತ್ವವನ್ನು ನೇರವಾಗಿ ನಿರಾಕರಿಸಬಾರದು. ಹಾಗೆಂದು ನಮ್ಮ ಮೇಲೆ ಹೇರಿಕೊಳ್ಳಲು ಬಾರದು. ಜನರಲ್ಲಿ ಇದೆ ಅಥವಾ ಇಲ್ಲ ಎಂಬ ಕಡ್ಡಿ ತುಂಡು ನಿರ್ಧಾರ ಮಾಡಲು ಎಲ್ಲರಿಗೂ ಸಾಧ್ಯ ಇರುವುದಿಲ್ಲ. ನಿಷ್ಠುರ ಮತ್ತು ನೇರವಾಗಿ ಇರುವವರಿಗೆ ಮಾತ್ರ ಸಾಧ್ಯ ಇದು ನಿರಾಕರಿಸುವವರಿಗೆ ಸುಲಭ. ಆದರೆ ನಿರಾಕರಣೆ ಅನುಭವಿಸುವವರಿಗೆ ನೋವು ಅವಮಾನದ ಅನುಭವ ಆಗುತ್ತದೆ.
ಈ ರೀತಿ ನಿರಾಕರಣೆ ಕಂಡಾಗ ವಯಸ್ಸಿನ ಹುಡುಗರು ಕ್ರೂರಿಯಾಗಿ ವರ್ತಿಸುತ್ತಾರೆ (ವೈಲೆಂಟ್) ಆಗಿ ಸಿಟ್ಟು ಅಥವಾ ಜಗಳದವರೆಗೂ ಅಡ್ಡಿ ಇಲ್ಲ. ಆದರೆ ಆಸಿಡ್ ಹಾಕುವುದು ಕೊಲೆ ಮಾಡುವುದು ಅಥವಾ ಚರಿತ್ರ ಹನನ ಮಾಡುವುದು (ಹೆಸರು ಕೆಡಿಸುವ ಪ್ರಯತ್ನ ) ಬಹಳಷ್ಟು ಸಮಸ್ಯೆಗೆ ಈಡು ಮಾಡುತ್ತವೆ.
ಕೆಲವು ಜನ ನ್ಯಾಯ ಸಮ್ಮತವಲ್ಲದ ಅಸಭ್ಯ ಭಾವನೆ ಅಥವಾ ಆಸೆಗಳನ್ನು ವ್ಯಕ್ತ ಪಡಿಸಿದಾಗ ನಿರಾಕರಣೆಯ ಹೊರತೂ ಬೇರೆ ಉಪಯವೇ ಇರುವುದಿಲ್ಲ. ಬಲ ಇರುವ ಜನ ನಿರಾಕರಣೆಯನ್ನು ಕ್ರೂರವಾಗಿ ಉತ್ತರಿಸಿದರೆ, ಬಲಹೀನರು ಮೌನ, ದುಃಖ ಅಥವಾ ಮಾನಸಿಕ ಹಿಂಸೆಯೊಂದಿಗೆ ಅನುಭವಿಸುತ್ತಾರೆ. ಆದರೆ ಈ ಯಾವ ವಿಧಗಳು ನಿರಾಕರಣೆಗೆ ಉತ್ತರವಲ್ಲ.
ಯಾರದ್ದೇ ಆಗಲಿ ನಿರಾಕರಣೆ ಬಂದಾಗ, ನಮ್ಮ ಮನಸ್ಸಿಗೆ ನೋವು ಮಾಡಿಕೊಳ್ಳುವ ಬದಲು ಅವರಿಗೆ ನನ್ನಂತ ಒಳ್ಳೆ ವ್ಯಕ್ತಿ ಜೊತೆಗೆ ಇರುವ ಅದೃಷ್ಟವಿಲ್ಲ ಎಂತಲೂ, ನನಗೆ ಇನ್ನು ಉತ್ತಮವಾದದ್ದು ಕಾದಿದೆ ಎಂತಲೂ ಯೋಚಿಸಬೇಕು. ಸಕರಾತ್ಮಕವಾಗಿ ಯೋಚಿಸಿ ಬದುಕುವಾಗ ಬದುಕು ಸುಂದರವಾಗಿ ಮತ್ತು ಸುಲಭವಾಗಿ ಕಾಣಿಸುತ್ತದೆ. ಪ್ರೀತಿ, ಸಹಾಯ, ಸ್ನೇಹ, ಸಂಬಂಧ, ವ್ಯವಹಾರ, ವ್ಯಾಪಾರ ಎಲ್ಲ ಕಡೆಯೂ ನಿರಾಕರಣೆಯ ಹಾವಳಿ ಇರುತ್ತದೆ.
ನಿರಾಕರಣೆಗೂ ಸೂಕ್ತ ಕಾರಣ ಇರಬಹುದಲ್ಲವೇ? ಒಂದೇ ರೀತಿ ಯೋಚಿಸಬೇಡಿ. ಪ್ರೀತಿ ನಿರಾಕರಿಸಿದರು ಸ್ನೇಹದಿಂದ ಇರಬಹುದು, ಸಹಾಯ ಪಡೆಯಲು ನಿರಾಕರಿಸಿದರೆ ಕೆಲಸದ ಅಥವಾ ಬೇರೆ ಯಾವುದೋ ಮಾರ್ಗದಿಂದ ಸಹಾಯ ಮಾಡಬಹುದು, ವ್ಯವಹಾರ, ವ್ಯಾಪಾರ ನಿರಾಕರಿಸಿದರೆ ಅದಕ್ಕಿಂತ ಹೆಚ್ಚಿನ ಲಾಭ ದೊರೆಯುವ ವ್ಯವಹಾರ, ವ್ಯಾಪಾರ ಮಾಡಬಹುದು.
ಜೀವನದಲ್ಲಿ ಎಲ್ಲ ಸಮಸ್ಯೆಗೂ ಪರಿಹಾರವಿದೆ. ನಿರಾಕರಣೆ ನಮ್ಮ ಏಳಿಗೆಗೆ ಮೆಟ್ಟಿಲಾಗಬೇಕೇ ಹೊರತೂ ಗೋಡೆಯಾಗ ಬಾರದು. ನಮ್ಮ ಪ್ರಯತ್ನ ನಿಲ್ಲಬಾರದು. ಬನ್ನಿ ನಮ್ಮನ್ನು ನಿರಾಕರಿಸಿದವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು, ಅವರ ದೆಸೆಯಿಂದ ನಿಮ್ಮಾಲ್ಲಾದ ಬದಲಾವಣೆಯನ್ನು ಸಂಭ್ರಮ ಪಟ್ಟು ಅವರೇ ಹಿಂದೆ ಬರುವಂತೆ ಮಾಡಿಕೊಳ್ಳುವ ಕ್ಷಮತೆ ಬೆಳೆಸಿಕೊಳ್ಳೋಣ.
ನಿರಾಕಸಿದವರು ತಮ್ಮನ್ನು ಸ್ವೀಕರಿಸಲಿ ಎನ್ನುವ ಹಂಬಲ ವ್ಯಕ್ತ ಪಡಿಸುವಂತೆ ಬದುಕೋಣ.
–ಮಾಧುರಿ ದೇಶಪಾಂಡೆ, ಬೆಂಗಳೂರು