ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯ ನಿರ್ಮಿಸಿ ಅಧಿಕಾರಿಗಳಿಗೆ ಸಚಿವ ಭೋಸರಾಜು ಸೂಚನೆ
e -ಸುದ್ದಿ ಮಸ್ಕಿ
ಸರ್ಕಾರ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಮತ್ತು ವಸತಿ ನಿಲಯಕ್ಕಾಗಿ ಸಾಕಷ್ಟು ಹಣವನ್ನು ಮಂಜೂರು ಮಾಡುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ವಸತಿ ನಿಲಯದ ನಿರ್ಮಾಣಕ್ಕೆ ಅಂದಾಜು ಪತ್ರಿಕೆ ತಯಾರಿಸುವಾಗ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯ ನಿರ್ಮಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ಎಸ್ ಭೋಸರಾಜು ಹೇಳಿದರು.
ಪಟ್ಟಣದ ಕವಿತಾಳ ರಸ್ತೆಯ ಹೊರವಲಯದಲ್ಲಿ ನಿರ್ಮಿಸಿದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಕರ್ಲರ ೫ ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ವಸತಿ ನಿಲಯವನ್ನು ನಿರ್ಮಿಸಿದೆ. ಆದರೆ ಪಟ್ಟಣದಿಂದ ೫ ಕೀಮೀ.ದೂರವಿದ್ದು ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಹೋಗುವದರಲ್ಲಿ ಸುಸ್ತಾಗಿ ಮಲಗುವ ಅಪಾಯವಿದೆ. ಇಲಾಖೆಯಲ್ಲಿ ಸಾಕಷ್ಟು ಹಣ ಇದ್ದು ಎರಡು ಬಸ್ ಖರೀದಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಓಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಮಹೇಶ ಪೋತದಾರ ಅವರಿಗೆ ಸಚಿವರು ಸೂಚನೆ ನೀಡಿದರು.
೧೫೦ ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಿರುವ ವಸತಿ ನಿಲಯ ನಿರ್ಮಿಸಿದ್ದು ವಸತಿ ನಿಲಯದಲ್ಲಿ ೩೦೦ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲ ಒತ್ತಡದಲ್ಲಿದ್ದರೆ ವಿದ್ಯೆ ಪಡೆಯಲು ಹೇಗೆ ಸಾಧ್ಯ. ಅಧಿಕಾರಿಗಳು ಎರಡು ವಸತಿ ನಿಲಯ ನಿರ್ಮಾಣಕ್ಕೆ ಮುಂದಾಗಬೇಕಿತ್ತು. ಮುಖ್ಯ ರಸ್ತೆಯಿಂದ ವಸತಿ ನಿಲಯದ ವರೆಗೆ ಸರಿಯಾದ ರಸ್ತೆ ಇಲ್ಲ. ಕೇವಲ ವಸತಿ ನಿಲಯ ಕಟ್ಟಿದರೆ ಸಾಲದು ಅದಕ್ಕೆ ಬೇಕಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯೂತ್ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಟಿಕ ಆಹಾರ ಒದಗಿಸಬೇಕು ಎಂದರು.
ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ ದಲಿತ,ನಾಯಕ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಉನ್ನತ ಸ್ಥಾನ ಹೊಂದಿ ಉತ್ತಮ ನಾಗರಿಕರಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಉಮೇಶ ಸಿದ್ನಾಳ, ಕ್ರೆಸ್ಟ್ ಸಂಸ್ಥೆಯ ಅಧಿಕಾರಿ ಸುರೇಶ ಗುಪ್ತಾ, ತಾ.ಪಂ.ಇಒ ಮಹೇಶ, ಗುತ್ತಿಗೆದಾರ ಮಹೇಂದ್ರಕರ್ ಇದ್ದರು.
————————————————–
ಮಾಸ್ಕ್ ಧರಿಸಿ, ಮುಖ್ಯಮಂತ್ರಿ ಬೈತಾರೆ
ಕೋವಿಡ್‌ನ ರೂಪಾಂತರಿ ತಳಿ ರಾಜ್ಯಕ್ಕೆ ಒಕ್ಕರಿಸಿದೆ. ಆದರೆ ಜೀವಕ್ಕೆ ಅಪಾಯವಿಲ್ಲದಿದ್ದರು ಹಿರಿಯ ನಾಗರಿಕರು ಕೆಮ್ಮು, ನೆಗಡಿ, ಜ್ವರದಿಂದ ಬಳಲುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ಎಸ್ ಭೋಸರಾಜು ಹೇಳಿದರು.
ನಾನು ಕೂಡ ಮಾಸ್ಕ್ ಧರಿಸಬೇಕು. ಮುಖ್ಯಮಂತ್ರಿಗಳು ನಮಗೆಲ್ಲ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದಾರೆ. ನಾನು ಮಾಸ್ಕ ಹಾಕಿಲ್ಲ ಎಂದು ನಾಳೆ ಪೇಪರನಲ್ಲಿ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೈತಾರೆ ಎಂದು ಮುಖ್ಯಮಂತ್ರಿಗಳ ಸೂಚನೆಯನ್ನು ನೆನಪಿಸಿ ಕೊಂಡರು.
——————————————————-