ಕನ್ನಡಿಗರ ಹೃನಮನ
ಕುವೆಂಪು ನೀವು ಬರೆದಿರಿ ಕನ್ನಡದೀ
ಇಪ್ಪತ್ತಮೂರು ಕವನ ಸಂಕಲನ
ಮೆರೆದಾಡಿದವು ಕಬ್ಬಿಗರ
ಸಾಹಿತ್ಯದಂಕಣ
ಕೊಳಲು ನುಡಿಸಿದಿರಿ
ಮೊಳಗಿತು ಕನ್ನಡದ
ಪಾಂಚಜನ್ಯ ಪಕ್ಷಿಕಾಶಿ
ಕುಣಿಯಿತು ಶಬ್ದ ದರ್ಪಣದಿ
ನವಿಲು ಕಲಾಸುಂದರಿ
ನುಡಿದವು ಕಥನ ಕವನಗಳು
ಪಕ್ಷಿ ಇಂಚರ ದಾಟಿತು
ಕೋಗಿಲೆ ಮತ್ತು ಸೋವಿಯಟ್ ರಷ್ಯಾ
ಅದೆಷ್ಟು ನೋವು ಅಪಮಾನ
ಅಗ್ನಿಹಂಸ ಬೆದರಲಿಲ್ಲ
ಮೌನದಲಿ ಅರಳಿದವು
ಕೃತ್ತಿಕೆ ಕಿಂಕಿಣಿ.
ಅವಳ ಚೆಲುವು ಷೋಡಶಿ
ಕರೆದಳು ಭಾವ
ಚಂದ್ರಮಂಚಕೆ ಬಾ ಚಕೋರಿ
ಒಳಗೊಳಗೇ ಕೊರೆದ ಅನುಭಾವ
ಇಕ್ಷುಗಂಗೋತ್ರಿ ಜ್ಞಾನ ನಿಧಿ
ಮನೆ ಬಿಟ್ಟು ಹೋರಾಟ
ದಿವ್ಯ ಚೇತನ ಅನಿಕೇತನ
ಮನಸು ಜೇನಾಗುವ ಕ್ಷಣ
ಮೌನ ಅನುತ್ತರಾ
ಸರಳತೆಯಲಿ ಮದುವೆ
ಮಂತ್ರಾಕ್ಷತೆ
ಗಟ್ಟಿ ಗೊಂಡಿರಿ ಕದರಡಕೆ
ಹೆದರಲಿಲ್ಲ ಪ್ರೇತಕ್ಯೂ
ತೋರಿದಿರಿ ಕುಟೀಚಕ
ಮಸುಕು ಹರಿದ
ಹೊನ್ನ ಹೊತ್ತಾರೆ
ಇಳುವಿದಿರಿ ಭಾವ ಭಾರ
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ
ನಿಮಗಿದೋ ನನ್ನ ನಮನ
ಕುವೆಂಪು ಕನ್ನಡಿಗರ ಹೃನ್ಮನ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ