ಮೆದಿಕಿನಾಳ ಶ್ರೀಚೆನ್ನಮಲ್ಲ ಶಿವಯೋಗಿಗಳ ಮಠ- ಒಂದು ಅವಲೋಕನ
ಲೇಖಕರು- ಗುಂಡುರಾವ್ ದೇಸಾಯಿ
ಸುಸಂಸ್ಕೃತ ಗ್ರಾಮವಾದ ಮೆದಕಿನಾಳ ಒಂದು ಕಾಲದ ಮಸ್ಕಿ ತಾಲೂಕಿನ ಪ್ರಮುಖ ವ್ಯಾಪಾರಿ ಕೇಂದ್ರ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲಿಯ ಹಲವು ಮನೆತನಗಳಲ್ಲಿ ಸಿಗುವ ಸಾಕಷ್ಟು ಕಿರ್ದಿಪುಸ್ತಕಗಳು, ಮೊದಲಿದ್ದ ಮುಖ್ಯಸ್ತೆಯಲ್ಲಿದ್ದ ಹಳೆಮಳಿಗೆಗಳು ನಿದರ್ಶನ. ಮಸ್ಕಿಯ ಜನರೂ ಮಾರುಕಟ್ಟೆಗೆ ಮೆದಿಕಿನಾಳ ಹಾಗೂ ಬಳಗಾನೂರನ್ನು ಆಶ್ರಯಿಸಿದ್ದರು. ಮಸ್ಕಿಗೆ ಹೆದ್ದಾರಿ ಬಂದದ್ದಕ್ಕಾಗಿ ಅದು ಮುಖ್ಯಪಟ್ಟಣವೆನಿಸಿತು.
ಮೇದ ಎನ್ನುವ ಬಿದುರು ಜಾತಿಯ ಸಸ್ಯ ಬೆಳೆಯುವ ಹಿನ್ನಲೆಯಲ್ಲಿ ಮೆದಿಕಿನಾಳ ಎನ್ನುವ ಹೆಸರು ಬಂದಿರಬೇಕೆಂದು ಪದನಿಷ್ಪತ್ತಿಕಾರರು ಹೇಳುತ್ತಾರೆ..ಎರಡು ದಿನ್ನೆಗಳೆ ಮಧ್ಯ ಊರು ಮಡಕೆ ಆಕರದಲ್ಲಿ ಇರುವ ಕಾರಣಕ್ಕಾಗಿ, ಕುಂಬಾರ ದಿಬ್ಬ ಎನ್ನುವ ಸ್ಥಳ ಊರಿಗೆ ಹತ್ತಿರ ಇರುವ ಹಿನ್ನಲೆಯಲ್ಲಿ ಮಡಿಕೆ ತಯಾರಿಕಾ ಕೇಂದ್ರವಾಗಿದ್ದಿರಬಹುದೆಂಬ ಲೆಕ್ಕಾಚಾರದಿಂದ ಮೆದಿಕಿನಾಳ ಹೆಸರು ಬಂದಿರಬಹುದು.
ಐತಿಹಾಸಿಕವಾಗಿಯೂ ಕರಿಗುಡ್ಡದ ಬಂಡೆಗಳಲ್ಲಿ ನವಶಿಲಾಯುಗದ ಕಾಲಕ್ಕೆ ಸೇರಿದ ಸಾರಂಗ,ಗೂಳಿ,ಹುಲಿ,ಆನೆ ಮಾನವ ಬೇಟೆಯಲ್ಲಿ ತೊಡಗಿರುವ ಚಿತ್ರಗಳು ಕಂಡುಬಂದಿವೆ…ಕರಿಗುಡ್ಡದ ಸುತ್ತಲೂ ಕೋಟೆ ಇದೆ. ಗದುಗಿನ ಮಠದ ಹತ್ತಿರದ ಚಪ್ಪಡಿಕಲ್ಲು ವೀರಮಾಸ್ತಿಗಲ್ಲು. ಇಲ್ಲಿ ವೀರನೊಬ್ಬ ಯುದ್ಧಭೂಮಿಯಲ್ಲು ಮರಣಿಸಿದಾಗ ಆತನ ವೀರನ ಚಿತೆಯಲ್ಲೂ ಪ್ರಾಣಾರ್ಪಣೆ ಮಾಡಿದ ಸನ್ನಿವೇಷವಿದೆ. 18ನೇ ಶತಮಾನದ ಮದಿಕಿನಾಳ ನಾಡಗೌಡರ ಮನೆತನಕ್ಕೆ ಸೇರಿದ ಶಾಸನವೊಂದರಲ್ಲಿ ಮಸಿಗಿ ಹೊಳೆ, ಬೆಲ್ಲದ ಮರಡಿ ಸೀಮೆ ಎಂದಿದೆ…
ಮೆದಕಿನಾಳದ ಇನ್ನೂ ಮುಖ್ಯ ವಿಷಯವೆಂದರೆ ಗದುಗಿನಮಠ,ಕಲ್ಮಠ,ಸುವರ್ಣಗಿರಿ ಮಠ ಮೊದಲಾದ ಐದು ಮಠಗಳಿವೆ.
ಶ್ರೀ ಚನ್ನಮಲ್ಲ ಶಿವಯೋಗಿಗಳು:
11ನೇ ಶತಮಾನದಅಂ ತ್ಯದಲ್ಲಿ ಕಲ್ಲಗಿರಿ ( ಕನಕಗಿರಿ) ನಿರಂಜನ ಪಟ್ಟವನ್ನು ಅಲ್ಲಮ ಪ್ರಭುದೇವರು ರುದ್ರಾರ್ಯವಟುವಿಗೆ ಕಟ್ಟಿ ‘ ನಿರಂಜನ ಪ್ರಭು ರುದ್ರಯೋಗಿ ನೀ ಬೆಳಗು’ ಎಂದು ಆಶೀರ್ವದಿಸಿದರಂತೆ. ಚರಿತ್ರೆಗಿಂತ ನಮ್ಮವರು ಚಾರಿತ್ರ್ಕ್ಕೆ ಮಹತ್ವ ಕಾರಣಕ್ಕಾಗಿ ಆ ನಂತರದ ದಾಖಲೆಗಳು ಲಭ್ಯವಿಲ್ಲ… ಇದೆ ಪರಂಪರೆಯ 25 ನೇ ಪೀಠಾಧಿಪತಿಗಳು ಗುರುರುದ್ರಸ್ವಾಮಿಗಳು ನಂತರ ಸುವರ್ಣಗಿರಿ ಸಂಸ್ಥಾನ ಮಠದ 26 ನೇ ಪೀಠಾದೀಶರಾದ ಪೂಜ್ಯ ಶ್ರೀ ಚೆನ್ನಮಲ್ಲಶಿವಯೊಗಿಗಳು. ಇವರ ಕರ್ತು ಗದ್ದುಗೆಯಿಂದಾಗಿ ಮೆದಿಕಿನಾಳ ತಾಲೂಕಿನ ಮಹತ್ವದ ಮಠವಾಗಿ ಗುರುತಿಸಿಕೊಂಡಿದೆ.
ಪೂಜ್ಯ ಚೆನ್ನಮಲ್ಲ ಶಿವಯೋಗಿಗಳು ಹುಟ್ಟಿದ್ದುದ ಸೈಯ್ಯಡಿ ಗ್ರಾಮ ಪೀಠವೇರಿದ್ದು ಕನಕಗಿರಿ ಸಂಸ್ಥಾನಕ್ಕೆ.ಸಂಚಾರರ್ಥ ಬಂದಾಗ ಅಂತಿಮ ಸ್ಥಾನ ಆಯ್ಕೆ ಮಾಡಿಕೊಂಡು ಲಿಂಗೈಕ್ಯರಾಗಿ ಉದ್ಧರಿಸಿದ್ದು ಮೆದಿಕಿನಾಳ ಗ್ರಾಮವನ್ನು.
ಪೂಜ್ಯರು ಬಹುಭಾಷಾ ವಿಶಾರದರು.ಕನ್ನಡ,ಸಂಸ್ಕೃತ,ಉರ್ದು,ತೆಲಗು,ಹಿಂದಿಇ ಇಂಗ್ಲೀಷ್ ಭಾಷೆಗಳನ್ನು ಚೆನ್ನಾಗಿ ಬಲ್ಲವರು.
ಇವರ ಮಹತ್ವ ಕಂಡುಕೊಂಡ ಹೈದ್ರಾಬಾದರ ನಿಜಾಮರು ಶ್ರೀಮಠಕ್ಕೆ ಏಳು ಗ್ರಾಮಗಳನ್ನು ಉಂಬಳಿಯಾಗಿ ಕೊಟ್ಟ ದಾಖಲೆಗಳು ಶ್ರೀಮಠದಲ್ಲಿವೆ.
ಶ್ರೀಗಳು ಸಂಗೀತ ಪ್ರೇಮಿಗಳು, ಕಾನೂನು ತಜ್ಞರು, ಭವರೋಗ ವೈದ್ಯರೆನಿಸುವಂತಹ ಆಯುರ್ವೇದ ಪಂಡಿತರಾಗಿದ್ದರು. ಮುಂಬೈಕೋರ್ಟನಲ್ಲಿ ಮೂರು ವರ್ಷದಿಂದಲೂ ಗೆಲ್ಲಲಾರದ ದೇವಿಹೊಸೂರು ಶೆಟ್ಟರ ಹೊಲದ ವ್ಯಾಜ್ಯವು ಅಲ್ಲಿಯ ಕೊರ್ಟಿಗೆ ಇವರು ಇಂಗ್ಲೀಷನಲ್ಲಿ ಬರೆದು ಕೊಟ್ಟ ಕಾನೂನು ಮಾಹಿತಿ ವಕೀಲರಿಗೆ ನೆರವಾಗಿ ಗೆಲುವಿಗೆ ಕಾರಣವಾಯಿತು.
ಪೂಜ್ಯರು ಸ್ವಾತಂತ್ರ ಹೋರಾಟಗಾರರಾದ ಪಂಪನಗೌಡ, ಈಶಯ್ಯ,ಜಯತೀರ್ಥ ರಾಜಪುರೋಹಿತ ಮೊದಲಾದವರಿಗೆ, ಅವರ ಚಟುವಟಿಕೆಗಳಿಗೆ ಬೆಂಬಲ ನೀಡಿದರು. ತಮ್ಮ ಆಯುರ್ವೇದ ಜ್ಞಾನದ ಮೂಲಕ ಹರಿಹರದ ಬ್ರಹ್ಮೆಂದ್ರ ಸ್ವಾಮಿಗಳಿಗೆ ಬಂದ ವ್ಯಾಧಿಯನ್ನು ಪರಿಹರಿಸಿದರು. ಕಾಲಾರಾ ರೋಗ ಬಂದಾಗ ಅನೇಕರ ಬದುಕನ್ನು ರಕ್ಷಿಸಿದರು…
ಪೂಜ್ಯರದು ಎಂತಹ ಮೃದತ್ವ ಮನಸಸ್ಸುಳ್ಳವರು ಎನ್ನುವುದಕ್ಕೆ ಮಠದಲ್ಲಿ ಆಕಳು ಅನಾರೋಗ್ಯದಿಂದ ಮಲಗಿದ್ದಾಗ ‘ ನಮ್ಮ ಪೂಜೆಗೆ ಹಾಲು ಕೊಡುವ ಗೋಮಾತೆ ಏನು ತಿನ್ನದೆ ಮಲಗಿರುವಾಗ ನಾನು ಪೂಜೆ ಪ್ರಸಾದ ಮಾಡಬೇಕೆ’ ಎನ್ನುವ ನಿಲುವಿನಲ್ಲಿ ಉಪವಾಸ ಇದ್ದು ಅದರ ಸೇವೆ ನಿಂತಿದ್ದು ನಿದರ್ಶನ. ಶರಣರ ಆಶಯದಂತೆ ಸರ್ವರನ್ನು,ಸರ್ವ ಜನಾಂಗವನ್ನು ಒಂದೆ ದೃಷ್ಟಿಯಲ್ಲಿ ನೋಡಿ ಪೊರೆದವರು. .ನನ್ನ ಐಕ್ಯ ಸ್ಥಳ ಮಂಗಳಧಾಮವಾಗಬೇಕೆಂದು ರಾಧಾ ರಾಮಚಂದ್ರ ಗಿರಿಜಾ ರುದ್ರಗೌಡ ಎನ್ನುವವರ ವಿವಾಹವನ್ಙು ಇದೆ ಮೆದಿಕಿನಾಳದಲ್ಲಿ ಮಾಡಿ ಮಾರ್ಗಶಿರ ಬಹುಳ ಸಪ್ತಮಿ ನಾಲ್ಕನೇ ಜನವರಿ 1956 ರ ಬೆಳಗಿನ ಜಾವ ಲಿಂಗಪೂಜೆಯ ಕಾಲಕ್ಕೆ ಲಿಂಗಾರ್ಪಿತರಾದರು….
ಪ್ರಸ್ತುತ ಪೀಠಾಧೀಶರಾದ ಡಾ.ಚೆನ್ನಮಲ್ಲ ಮಹಾಸ್ವಾಮಿಗಳು.:
ಶ್ರೀಮಠದ 26ನೇ ಪೀಠಾದಿಪತಿಗಳ ನಂತರ 27 ನೇ ಪೀಠಾಧಿಪತಿಗಳಾಗಿ ಪೂಜ್ಯ ರುದ್ರಮುನಿಸ್ವಾಮಿಗಳು ಬಂದರು ಅವರ ನಂತರದಲ್ಲಿ 28 ನೇ ಪೀಠಾಧಿಗಳಾಗಿ ಡಾ.ಚೆನ್ನಮಲ್ಲ ಮಹಾಸ್ವಮಿಗಳು ಅವರ ಆಶಯದಂತೆ ತಮ್ಮ ಆದೀನ ಕಂದಗಲ್ಲ,ಕನಕಗಿರಿ,ಮುದುಗಲ್ಲ ಮಠದ ಜೊತೆಗೆ ಮೆದಿಕಿನಾಳ ಮಠವನ್ನು ತಮ್ಮ ಧೀಶಕ್ತಿಯಿಂದ ವಿಭಿನ್ನವಾಗಿ ಬೆಳಗಿಸಿದ್ದಾರೆ. ಸ್ವತಃ ಕವಿಗಳು, ಸಾಹಿತಿಗಳು ಆಗಿರುವ ಪೂಜ್ಯರು ‘ಶೂನ್ಯ ಸಂಪಾದನೆ’ ಬಗೆಗೆ “ ನಿರ್ಬಲ ನೇಯ್ಗೆ” ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದವರು. ಸುವರ್ಣಗಿರಿ ಜ್ಣಾನಮಾಲೆ ಆರಂಭಿಸಿ ಮಹತ್ವದ ಕೃತಿಗಳನ್ನು ಹೊರತಂದಿರುವಂತಹವರು.ಇದುವರೆಗೂ 12 ಗ್ರಂಥಗಳು, 6 ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. ಮೆದಿಕಿನಾಳದಲ್ಲಿ ಅಕ್ಕನ ಅನುಭವ ಮಂಟಪವನ್ನು ಮಹಿಳೆಯರಿಂದ ಸ್ಥಾಪಿಸಿ ಪ್ರತಿ ಹುಣ್ಣಿಮೆ ಅನುಭಾ ಗೋಷ್ಠಿಯನ್ನು ಮಹಿಳೆಯರೆ ನಿರ್ವಹಿಸುವಂತೆ ಮಾಡಿದ್ದಾರೆ.
ಪ್ರಸ್ತುತ ಅವರು ಮೆದಿಕಿನಾಳ ಹಳೆಯ ಮಠವನ್ನು ಅಮೂಲಾಗ್ರವಾಗಿ ಪುನರುಜ್ಜೀವನ ಗೊಳಿಸಿ 28 ಮಠದ ಪೀಠಾಧಿಪತಿಗಳು ಮಠವನ್ನು ಮುನ್ನೆಡಿಸಿದ ಹಿನ್ನಲೆಯಲ್ಲಿ 28 ಕಂಬಗಳ ಶಿಲಾಮಂಟಪ ಸಿಂಗರಣಿ ಕಲ್ಲಿನಲ್ಲಿ ನಿರ್ಮಿಸಿದ್ದಾರೆ. ವಿರಕ್ತಮಠವಾದ ಶ್ರೀಮಠ ಎಲ್ಲರ ಮಠ ಎನ್ನುವ ಭಾವದಲ್ಲಿ ನೂತನವಾಗಿ ಸರ್ವ ಧರ್ಮ,ಸರ್ವ ಜಾತಿ ಜನಾಂಗಗಳ ಸಂತರ,ಮಹಾಂತರ ಚಿತ್ರವಿರುವ 23 ಅಡಿ ಎತ್ತರ 9 ಅಡಿ ಅಗಲದ ರಥವನ್ನು ನಿರ್ಮಿಸಿ 68ನೇ ಪುಣ್ಯಸ್ಮರಣೆಯ ಈ ದಿನ ಪ್ರಥಮಬಾರಿಗೆ ವಿ಼ಶಿಷ್ಟವಾದ ಭಾವೈಕ್ಯತೆ ರಥ ಎಳೆಯಲಾಗಿತ್ತಿದೆ. ಇಂತಹ ರಥ ನಾಡಿನ ಪ್ರಥಮ ರಥವೂ ಹೌದು.
ಜಾತ್ರೆಯಂದರೆ ಉತ್ತರ ಕರ್ನಾಟಕದಲ್ಲಿ ಸರ್ವಜನಾಂಗಗಳನ್ನು ಬೆಸೆಯುವ ಹಬ್ಬ. ಮೆದಿಕಿನಾಳ ಊರಿನ ಶಾಲೆಯ ಯಾವುದೆ ಕಾರ್ಯಕ್ರಮವಿರಲಿ ಪಕ್ಷಬೇಧ ಮರೆತು ಕೂಡಿ ಯಶಸ್ವಿಗೊಳಿಸುವ ಸುಮನಸ್ಸುಳ್ಳ ಜನರ ಊರು. ಈಗ ಭಾವೈಕ್ಯತೆಯ ರಥದ ಮೂಲಕ ಗ್ರಾಮಕ್ಕೆ ಹೊಸ ಜೀವಕಳೆಬಂದಿದೆ. ಊರಲ್ಲಿ ಬಹು ವರ್ಷಗಳ ನಂತರ ಜಾತ್ರೆಯ ವಾತಾವರಣ ಮೂಡಿದೆ.ಇಂತಹ ವಾತಾವರಣ ನಿರ್ಮಿಸಿದ ಪೂಜ್ಯಡಾ.ಚೆನ್ನಮಲ್ಲ ಸ್ವಾಮಿಗಳ ಕಾರ್ಯ ನಿಜಕ್ಕೂ ಮಾದರಿಯ ನಡೆಯಾಗಿದೆ.. ತಾವು ಬನ್ನಿ ಬಹುತ್ವದ ಜಾತ್ರೆಗೆ