ಪೂಜ್ಯ ಸಿದ್ದೇಶ್ವರ *ಶ್ರೀಗಳ ಚರಣಗಳಿಗೆ ನುಡಿ ನಮನ
ಕಾರಿರುಳ ಮುಸುಕಿರುವ
ಕಾವಳವ ಕರಗಿಸಲು
ನೇಸರನ ಹೊಂಗದಿರ ಒಂದು ಸಾಕು
ಮನವನಾವರಿಸಿರುವ
ವಿಷಯಂಗಳು ಕಳೆಯಲು
ನಿನ್ನ ದರುಶನ ಸಾಕು ಸಿದ್ಧಗುರುವೆ..!
ಶಿವನ ಡಂಗುರ ದನಿಯು
ಪ್ರವಚನದಿ ಹರಿಯುತಿದೆ
ಶಿವಶಕ್ತಿ ಕಾರುಣ್ಯ ತನು ತುಂಬಿದೆ
ಆ ದೇವ ಈ ದೇವ
ನನಗೇತರಾ ಗೊಡವೆ
ನೀನೆನ್ನ ದೇವನು ಸಿದ್ಧಗುರುವೆ..!
ಧರೆಗಿಳಿದ ಪುಣ್ಯಾತ್ಮ
ನಡೆದಾಡೋ ಭಗವಂತ
ನಿನ್ನಡಿಯ ಧೂಳು ಪಾವನ ಭಸ್ಮವು
ನಗುಮೊಗದೆ ನೀಡಿರುವೆ
ಕರುಣಧಾರೆಯ ನೀನು
ಜನ್ಮ ಸಾರ್ಥಕವಾಯ್ತು ಸಿದ್ಧಗುರುವೆ..!
ಜಾತಿ ಮತಗಳ ಮೀರಿ
ಲಿಂಗಭೇದವ ಕಳೆದು
ಸಮತೆ ಭಾವವ ತುಂಬಿ ಎಲ್ಲರಲ್ಲೂ
ನೀತಿ ಮಮತೆಯ ಹೂವ
ನೀಡುತಲಿ ಜಗಕೆಲ್ಲ
ನಿರಾಭಾರಿಯು ನೀನು ಸಿದ್ಧಗುರುವೆ..!
ನಾನು ಎಂಬುದ ಅಳಿದು
ನೀನು ಎಂಬುದ ಉಳಿದು
ಮನ ಹಸನವಾಯಿತ್ತು ಬೆಸನ ನೀಗಿ
ಗಂಧ ಪುಷ್ಪವನಗಲಿ
ಇರಲಹುದೇ ಅರೆಗಳಿಗೆ
ಮಾನಸದಿ ತುಂಬಿರುವೆ ಸಿದ್ಧಗುರುವೆ..!
🌷: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 🙏