ಕ್ರಾಂತಿ ಸಂಕ್ರಾಂತಿ
ಬಿದ್ದ ಜಾಗದಲ್ಲೇ ಮತ್ತೆ ಕುಸಿಯದೆ
ಎದ್ದು ನಿಲ್ಲುವ ಛಲವು…
ಕುದ್ದ ಭಾವದಲೇ ಮತ್ತೆ
ಗೆದ್ದು ಬರುವ ಒಲವು…
.
ಭೂತಾಯಿ ಹಸಿರಿನಲಿ
ಕುಸುಬಿ ಹೂ ಕುಸುರು…
ಒಡಲು ತುಂಬಿದ ಉಸಿರಿನಲಿ
ಪ್ರೀತಿ ಸ್ನೇಹದ ಬಸಿರು…
ಹಳದಿ ಹೊನ್ನ ಹೂ ಹಾಸಲಿ
ನವಿಲ ಬಣ್ಣ ಕಣ್ಣ ಕಣವಿ…
ಚಿಟ್ಟೆ ಮುತ್ತ ಕೆನ್ನೆ ಸೋಕಲಿ
ಅವರಿಹೂ ನಾಜೂಕ ನಗಿ ಬಣವಿ…
ಕಬ್ಬು ಕಡಲೆ ಅವರೆ ತವರಲಿ
ಕುಸುರೆಳ್ಳು ಬೆಲ್ಲ ಕೊಬ್ಬರಿ ಘಮವು..
ಹಳತು ಹರಿದು ಹೊಸತು ಚಿಗುರಲಿ
ಬಾಡಿದಲ್ಲೇ ಬೆಳಗೋ ಸಂಭ್ರಮವು…
ಚರಗ ಚೆಲ್ಲಿ ಸುರಗಿ ಸುರಿವ
ಬೆಳಕು ಹರಿವ ಪರಿಯು….
ಕತ್ತಲು ಕರಗಿ ಬೆಳಕು ಮೈ ಮುರಿವ
ಭೂಮಿ ತಾಯ ನಗೆಯು…
ಕುಸುರೆಳ್ಳು ಬೆಲ್ಲದ ಘಮ ಘಮ
ಹಳದಿ ಹೊನ್ನ ಹೂ ಪರಿಮಳ…
ಹಸಿರು ಉಸಿರು ಬೆರೆತ ಕುಸುಮ
ಬನರಾಣಿಯ ಮೊಗದಿ ಚೆಲುವು ಫಳ ಫಳ…
ಸಿಹಿ ಕಹಿಯ ಸಂಗಮವೀ ಸವಿಭ್ರಮಣ
ಕೆಡುಕಿನಿಂದ ಒಳಿತಿನೆಡೆಗೆ
ಹೆಜ್ಜೆ ಹಾಕುತ ಪ್ರಕೃತಿಯ ಕಣ ಕಣ
ಕತ್ತಲಿಂದ ಬೆಳಕಿನೆಡೆಯ ಆಲಿಂಗನ…
ಹಸಿರುಹೊನ್ನ ಹಣ್ಣ ಕಣ್ಣ ರಿಂಗಣ
ಕ್ರಾಂತಿ ಶಾಂತಿ ಮಿಲನ ಪರಿಭ್ರಮಣ
ಮನಸು ಕನಸು ನನಸಿನ ಸೊಬಗ ಕ್ಷಣ
ರಾತ್ರಿ ಹಗಲ ಹೆಗಲನೇರಿ ನಲಿವ ಸಂಕ್ರಮಣ…
— ಇಂದಿರಾ ಮೋಟೆಬೆನ್ನೂರ.ಬೆಳಗಾವಿ