ನನ್ನವ.. ನಲ್ಲ

  • ನನ್ನವ.. ನಲ್ಲ

ನಿನ್ನ ನಗೆಯ ಕಾರಣ ನಾ… ನಲ್ಲ
ನಿಜವೋ ಸುಳ್ಳೋ ನಾನರಿತಿಲ್ಲ
ನನ್ನ ನಗೆಯ ಕಾರಣ ನೀ.. ನಲ್ಲ
ನಿನಗೆ ಮಾತ್ರ ಇದು ಗೊತ್ತಲ್ಲ…
ಇವ ನನ್ನವ…. ನಲ್ಲ

ದೀವಳಿಗೆಯ ದಿನದಂದು
ಅಗಲಿಕೆಯ ಅನುಪಮ
ಕಾಣಿಕೆಯ ನೋವ ನೀಡಿ
ಕಂಗಳ ಕನಸ ಕಿತ್ತು ನಡೆದವ….
ಇವ ನನ್ನವ… ನಲ್ಲ

ಮೊಗದ ನಗೆ ಕಸಿದು
ಮುಗಿಲ ಮನೆಯ ಚಂದಿರ
ಮನೆಯಂಗಳ ಮುಂದೆ ನಡೆದು
ದೂರದ ತನ್ನೂರಿಗೆ ಸಾಗಿದ..
ಇವ ನನ್ನವ… ನಲ್ಲ

ಬೆಳದಿಂಗಳ ಕಂಗಳಲಿ
ಕಡು ಕತ್ತಲೆಯ ಕಾಡಿಗೆಯ
ಹಚ್ಚಿ ಕಂಬನಿಯಲಿ
ಮುಳುಗಿಸಿ ಕಾಡಿಸಿದವ…..
ಇವ ನನ್ನವ….ನಲ್ಲ

ಹುಣ್ಣಿಮೆಯ ದಿನಕಾಗಿ
ಕಾದ ಕಣ್ಣುಗಳ ಮರೆಮಾಚಿ
ಮೋಡದಲಿ ಮರೆಯಾಗಿ
ದೀವಳಿಗೆಗೆ ಮೌನ ನೀಡಿದವ..
ಇವ ನನ್ನವ….ನಲ್ಲ

ಇಂದು ಬಂದು ನಿಂದ… ನಲ್ಲ
ಮೌನ ಸೊಲ್ಲ…ಹೃದಯ ಬಲ್ಲ
ಮನೆ ಮನದಂಗಳದಿ ನೀನೇ ಎಲ್ಲ..
ಶಶಿಬೆಳದಿಂಗಳ ಕಂಗಳ ದುಂಬಿ ಚೆಲ್ಲಿ…
ಗುಳಿಗಲ್ಲ ತುಂಬೆಲ್ಲ ಸವಿ ಸ್ನೇಹ ಬೆಲ್ಲ

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Don`t copy text!