ದೇವ ಬಂದಡೆ ದೇಗುಲ ಓಡಿತ್ತಾ ಕಂಡೆ ಗುಹೇಶ್ವರ.
ತುಂಬಿ ಬಂದಡೆ ಪರಿಮಳ ಓಡಿತ್ತಾ ಕಂಡೆ ಏನು ಸೋಜಿಗ ಹೇಳಾ? ಮನ ಬಂದಡೆ ಬುದ್ದಿ ಓಡಿತ್ತಾ ಕಂಡೆ ದೇವಬಂದಡೆ ದೇಗುಲ ಓಡಿತ್ತಾ ಕಂಡೆ ಗುಹೇಶ್ವರ.
(ಅಲ್ಲಮನ ವಚನ ಚಂದ್ರಿಕೆ ವ. ಸಂ. ೪೨೯)
ಅಲ್ಲಮಪ್ರಭುವಿನ ಈ ಬೆಡಗಿನ ವಚನದಲ್ಲಿ ಮನದ ತುಂಬಿ ಪರಿಮಳದ ಬಗ್ಗೆ ಚರ್ಚೆಯನ್ನು ಕಾಣಬಹುದು. ಇಲ್ಲಿ ಕಂಡು ಬರುವ ಒಂದೊಂದು ಶಬ್ದಗಳಿಗೂ ತಾತ್ವಿಕ ಅರ್ಥಗಳಿವೆ. ತುಂಬಿ ತಾನು ಪರಿಪೂರ್ಣ ಎಂಬ ಅಹಂಕಾರದಲ್ಲಿ ಓಲಾಡುವ ಮನಸ್ಸಾಗಿದೆ. ಅಂತಃಕರಣದ ಈ ಮನಸ್ಸು ಆಧ್ಯಾತ್ಮದಲ್ಲಿ ಸಂಕಲ್ಪಿಸುವುದು ವಿಕಲ್ಪಿಸುವುದು ಅದರ ಸ್ವಭಾವ ಭಕ್ತಿಯ ಮೇರು ತನದಲ್ಲಿ ಓಲಾಡುವ ಮನಸ್ಸು ಪಂಚೇಂದ್ರಿಯಗಳನ್ನು ಪರವಶಗೊಳಿಸುತ್ತದೆ. ಮನೋ ಮಯವಾದ ಈ ಮನಸ್ಸು ಬುದ್ಧಿಯೇ ಆಗಿರುತ್ತದೆ.
ಸ್ವಾನುಭಾವವೆಂಬ ವಾಸನೆ ಗ್ರಹಿಸಿದ ಮನವೆಂಬ ತುಂಬಿ ಹೃದಯ ಕಮಲದ ಹೂವಿನಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಳ್ಳುತ್ತದೆ. ಅದುವೇ ಪ್ರಾಣ ಲಿಂಗವಾಗಿ ಪ್ರತಿಧ್ವನಿಸುತ್ತದೆ. ಗುಹೇಶ್ವರನೆಂಬ ಶಬ್ದವು ದೈವತ್ವದ ಮೂಲಕ ಮೋಕ್ಷವನ್ನು ಬಯಸುತ್ತದೆ. “ತುಂಬಿ ಬಂದಡೆ ಪರಿಮಳ ಏನು ಸೋಜಿಗ” ತಾತ್ವಿಕ ಭಾಷೆಯ ಅರಿವಿನ ಸ್ಥಾನ ಹೃದಯ ಕಮಲದ ಹೂ. ಗುಹೇಶ್ವರನ ಸ್ವಸ್ಥಾನವದು. ಸ್ಥೂಲ ಕಾಯ ಪರಿಮಳದಿಂದ ಆವೃತವಾದ ಸುಗಂಧವಾಗಿದೆ. ಸೂಕ್ಷ್ಮಕಾಯವು ಆಧ್ಯಾತ್ಮಿಕ ಶಕ್ತಿಯ ಕೇಂದ್ರ ಸ್ಥಾನ ಪಡೆದಿದೆ.
ಮನ ಚಿತ್ತ ಬುದ್ಧಿ ಅಹಂಕಾರಗಳು ಕರುಣೆಂದ್ರಿಯಗಳಾಗಿ ಕೆಲಸ ಮಾಡುತ್ತವೆ. ಮನ ಕೇವಲ ಬುದ್ದಿಯಲ್ಲ. ಅದು ಮನೋಮಯ ಕೋಶ.ಬುದ್ಧಿಯನ್ನು ಗ್ರಹಿಸುವ ಶಕ್ತಿ ಇರುವುದು ಚಿತ್ತಕ್ಕೆ ಮಾತ್ರ ಚಿತ್ತ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ನಮ್ಮ ಪ್ರಜ್ಞೆಗೆ ದಕ್ಕದ ಅಗೋಚರ ಶಕ್ತಿಯದು. ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ ಮನಸ್ಸಿನ ಸಂವೇದನೆಯನ್ನು ಸ್ಪರ್ಶಿಸಿದಾಗ ಮಾತ್ರ ಗುಹೇಶ್ವರನಿಗೆ ಸೇವಕನಾಗಲು ಸಾಧ್ಯವಾಗುವುದು.
ಸ್ಥಾವರ ದೇವರ ನಿರಾಕರಣೆ ಶರಣರ ಮೂಲ ಆಶಯ.. ದೈವ ಶ್ರದ್ಧೆಗಿಂತ ನೈತಿಕ ಶ್ರದ್ಧೆಯಲ್ಲಿ ಒಲಪುಳ್ಳ ಶರಣರು ದೇಹವನ್ನೇ ದೇಗುಲವಾಗಿ ಸ್ವೀಕರಿಸಿದವರು. ಗುಹೇಶ್ವರನ ತತ್ವವು ಅದ್ವೈತವಾದರೂ ವಿಸ್ಮಯ ಮತ್ತು ಭಕ್ತಿಯ ಆನಂದ…ದೇವಬಂದಡೆ ದೇಗುಲ ಓಡಿತ್ತಾ ಕಂಡೆ. ದೈವ ನಿರಾಕರಣೆ ಶರಣ ಧರ್ಮದ ವೈಚಾರಿಕ ಸ್ವಾತಂತ್ರವೆಂದು ಹೇಳಬಹುದು.
ಪ್ರಭುವಿನ ಈವಚನದಲ್ಲಿ ಚಿಟ್ಟೆ ಇಲ್ಲದ ತುಂಬಿ ಇದೆ. ಪರಿಮಳವಿಲ್ಲದ ಹೂವಿದೆ. ಮನದ ಅಂತಕರಣದಲ್ಲಿ ಮನುಷ್ಯನ ಮೆದುಳಿದೆ. ಅದೇ ಬುದ್ಧಿ ಓಡಿತ್ತಾ ಕಂಡೆ ಕರುಣೆಂದ್ರಿಯ ತತ್ವಗಳು ಅಧ್ಯಾತ್ಮದ ಭಾಷೆಯಲ್ಲಿ ಒಂದಾಗುತ್ತವೆ. ಪಂಚಭೂತಗಳಿಂದ ಕೂಡಿದ ಈ ಶರೀರಕ್ಕೆ ಭಾಹ್ಯ ಪ್ರಪಂಚದ ಸಂವೇದನೆಗಳನ್ನು ಒಂದುಗೂಡಿಸುವ ಶಕ್ತಿ ಇದೆ ಸಾಕಾರ ದೈವತ್ವಕ್ಕೆ ಮನಸ್ಸು ಒಂದು ಸಾಧನೆಯಷ್ಟೇ ಜೀವನದ ಭೌತಿಕ ವ್ಯವಸ್ಥೆಗಳು ನಿರಾಯಸವಾಗಿ ನಡೆದರೆ ಮನದ ಗುಹೇಶ್ವರನನ್ನು ಅಧ್ಯಾತ್ಮದಲ್ಲಿ ಬಂಧಿಸಲು ಸಾಧ್ಯವಾಗುತ್ತದೆ.
-ಡಾ. ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು,
ರಾಯಚೂರು