ವೀರ ಗಣಾಚಾರಿ ಮಡಿವಾಳ ಮಾಚಿದೇವ
12 ನೇ ಶತಮಾನ ಜಗತ್ತಿನಲ್ಲಿಯೇ ಸಮಾನತೆಯನ್ನು ಬಿತ್ತಿಬೆಳೆದ ಹಾಗೂ ನುಡಿದಂತೆ ನಡೆ ಎಂಬ ಸಂದೇಶವನ್ನು ತತ್ವಶಃ ಪಾಲಿಸಿದ ಕಾಲ. ಅಂದು ಶರಣರು ಜಾತಿ, ವರ್ಗ ಹಾಗೂ ಲಿಂಗಬೇದಭಾವವನ್ನು ಅಳಿಸಿ, ದೀನದಲಿತರ, ಬಡವರ, ಮಹಿಳೆಯರ, ನಿರ್ಗತಿಕರ, ದಮನಿತರ ಹಾಗೂ ಶೋಷಿತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದರು .
ಮಾನವೀಯತೆಯ ತತ್ವದ ತಳಹದಿಯಲ್ಲಿ ವಿಶ್ವದಲ್ಲಿಯೇ ಅವೈದಿಕ ಮತ್ತು ಸಾಂಸ್ಥೀಕರಣವಲ್ಲದ ಧರ್ಮ ಸ್ಥಾಪನೆ ಮಾಡಿ, ಆಚರಣೆಯಲ್ಲಿ ತಂದ ಚಿರಸ್ಮರಣೀಯ ಕಾಲವದು. ಈ ಸಾಮಾಜಿಕ ಚಳುವಳಿಗೆ ಅನೇಕ ಶರಣ ಶರಣೆಯರು ಜಗತ್ತಿನ ವಿವಿಧಡೆಯಿಂದ ಕಲ್ಯಾಣಕ್ಕೆ ಆಗಮಿಸಿ, ಇದಕ್ಕೆ ಸಾಕ್ಷಿಯಾಗಿದ್ದಾರೆ. ಕೆಲವರು ತಮ್ಮ ದಿಟ್ಟ ನಡೆ, ನುಡಿ ಆಚಾರಗಳಿಂದ ಗಣಾಚಾರಿಗಳೆಂದೇ ಪ್ರಸಿದ್ಧಿಯಾಗಿದ್ದರು ಅಂತವರಲ್ಲಿ ಪ್ರಮುಖರಾದವರೆಂದರೆ, ಮಡಿವಾಳ ಮಾಚಿದೇವ, ಅಕ್ಕನಾಗಮ್ಮ ಮತ್ತು ಅಂಬಿಗರ ಚೌಡಯ್ಯ ಎನ್ನಬಹುದು.
ಮಡಿವಾಳ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ದಿಟ್ಟ ಗಣಾಚಾರಿ ಶರಣರು. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ಶಿವಶರಣರ ಬಟ್ಟೆಗಳನ್ನು ಶುಚಿಯಾಗಿಸುವ ಕಾಯಕದೊಂದಿಗೆ, ಅನುಭಾವದ ನುಡಿಗಳ ಮೂಲಕ ಸಮಾಜದ ಕಳೆಕಿತ್ತಿ, ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾದ ದಿಟ್ಟ ಗಣಾಚಾರಿಗಳಾಗಿದ್ದರು.
ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , ‘ಮಡಿ’ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಮಹಾ ಘನತೆಗೆ ಸಾಕ್ಷಿಯಾಗಿದೆ. ಕಲ್ಯಾಣಕ್ರಾಂತಿಯ ಕೊನೆಯ ಘಟ್ಟದ ಹೋರಾಟದಲ್ಲಿ ವಚನ ಸಾಹಿತ್ಯ ಉಳಿಸುವಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಪ್ರಮುಖ ಪಾತ್ರವಹಿಸಿದ್ದಾರೆ.
ಶ್ರೀ ಮಾಚಿದೇವರು ಕಲ್ಯಾಣಕ್ಕೆ ಎಲ್ಲಿಂದ ಬಂದರು ಎಂಬುದನ್ನು ಮಹಾಕವಿ ಷಡಕ್ಷರದೇವರು ತಮ್ಮ” ವೃಷಭೇಂದ್ರ ವಿಜಯ” ದಲ್ಲಿ “ಆತ್ಮಪುರದಿಂ ಕಲ್ಯಾಣಕೇಳ್ತಂದು” ಎಂದಿದ್ದಾರೆ. ಅವರು ಎಲ್ಲಿಂದಲೇ ಬಂದಿರಲಿ ಕಲ್ಯಾಣಕ್ಕೆ ಬಂದ ಮೇಲೆಯಂತೂ ಅವರ ದಿನಚರಿಯ ಕಾರ್ಯಕಲಾಪ ಜೀವನ ವಿಧಾನಗಳಿಂದ ಸಮಸ್ತ ಶರಣರ ಭಕ್ತಿ, ಗೌರವ ಅಭಿಮಾನಗಳಿಗೆ ಪಾತ್ರರಾಗಿ ಬಾಳಿದ್ದಾರೆ.
ಗೋರಕ್ಷಾದಿ ಸಿದ್ಧರುಗಳಿಂದ ಪೂಜಿತರೂ ಸಮಸ್ತ ಶರಣ ಸಂಕುಳಕ್ಕೆ ಪೂಜ್ಯರೂ ಶೂನ್ಯಸಿಂಹಾಸನದ ಅಧ್ಯಕ್ಷರು ಆದ ಅಲ್ಲಮಪ್ರಭುಗಳೂ ಸಹ ಮಾಚಿದೇವರನ್ನು
ಕತ್ತಲೆಯೊಳಗೆ ಬೆಳಕು ಹೊಕ್ಕಂತಾಯಿತ್ತು ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಯ ಕೃಪೆಯಿಂದ….. ಎಂದಿದ್ದಾರೆ.
ಪಾಲ್ಕುರಿಕೆ ಸೋಮನಾಥ, ಭೀಮಕವಿ, ವಿರೂಪಾಕ್ಷಪಂಡಿತ,ಸಿಂಗಿರಾಜ, ಚೆನ್ನಪ್ಪ ಕವಿ ಮುಂತಾದ ಕವಿಗಳೆಲ್ಲರೂ ಶ್ರೀ ಮಾಚಿದೇವರನ್ನು ಸ್ತುತಿಸಿದ್ದಾರೆ. ಇತ್ತೀಚಿನ ಮಡಿವಾಳಯ್ಯನ ಚರಿತ್ರೆ, ಮಡಿವಾಳಯ್ಯನ ತಾರಾವಳಿ, ಮಡಿವಾಳಯ್ಯನ ಸಾಂಗತ್ಯ ಎಂಬುವೆಲ್ಲ ಮಾಚಿದೇವರನ್ನು ಸ್ತುತಿಸುತ್ತಿವೆ. 1955 ರಲ್ಲಿ ರಚಿತವಾದ “ ಮಾಚಿದೇವ ಚರಿತಾಮೃತ” ಎಂಬ ಪುಸ್ತಕ ಪ್ರಚಲಿತವಿದೆ. “ ಮಾಚಿದೇವ ಮನೋವಿಲಾಸ” ಎಂಬುದೊಂದು ಪ್ರಾಚೀನ ಗ್ರಂಥ ಸಹ ಅನೇಕ ಮಾಹಿತಿಗಳನ್ನು ಒದಗಿಸುತ್ತಿದೆ. ಆದಾಗ್ಯೂ ಮಡಿವಾಳ ಮಾಚಯ್ಯನ ಬಗ್ಗೆ, ಸಂಸಾರದ ಬಗ್ಗೆ ಜನಪದ ಸಾಹಿತ್ಯ ಬಿಟ್ಟರೆ ಬೇರೆಡೆ ಉಲ್ಲೇಖಗಳಿಲ್ಲ.
ಹಿಪ್ಪರಗಿ ಮೆರೆಯುತಲಿ ಉಪ್ಪರಿಗೆ ಆಗೆಂದು/ ತುಪ್ಪದ ಹೊಳೆಯಾಗಿ ಹರಿಯುತಲಿ/ ಊರೊಳು/ ಅಪ್ಪ ಮಾಚಣ್ಣ ಜನಿಸಿದನು’ ಎಂದು ಮಾಚಯ್ಯ ಹಿಪ್ಪರಿಗೆಯಲ್ಲಿ ಜನಿಸಿದ ಬಗ್ಗೆ ಜನಪದ ಸಾಹಿತ್ಯದಲ್ಲಿ ಉಲ್ಲೇಖವಿದೆ. ‘ಶೂನ್ಯ ಸಂಪಾದನೆ’ಯಲ್ಲಿ ‘ಮಡಿವಾಳಯ್ಯಗಳ ಸಂಪಾದನೆ’ ಎಂಬ ಒಂದು ಅಧ್ಯಾಯವೇ ಇದೆ.
ಜನಪದ ಸಾಹಿತ್ಯದಲ್ಲಿ ಮಾಚಯ್ಯನ ಮಡದಿ ಮಲ್ಲಿಗಮ್ಮ ಎಂದೂ, ತನ್ನ ಪತಿಯ ಮಡಿ ಕಾಯಕದಲ್ಲಿ ನೆರವಾಗುವಲ್ಲಿ ತನ್ನನ್ನೇ ಅರ್ಪಿಸಿಕೊಂಡಳೆಂದೂ ಹೇಳಿದೆ.
ಮಡಿವಾಳ ಮಾಚಯ್ಯನವರು ಕರ್ನಾಟಕದ ಬಿಜಾಪುರ ಜಿಲೆಯ ಸಿಂಧಗಿ ತಾಲೂಕಿನ ‘ದೇವರ ಹಿಪ್ಪರಗಿಯಲ್ಲಿ’ ಪರುವತಯ್ಯ -ಸುಜ್ಞಾನವ್ವ ದಂಪತಿಗಳ ಪುತ್ರ ರತ್ನ -ಶರಣ ಕಿರಣ ಮಡಿವಾಳ ಮಾಚಿದೆವರು ಕ್ರಿ .ಶ ೧೧೨೦-೧೧೩೦ ರ ನಡುವೆ ಜನಿಸಿದರು ಮಾಚಿದೇವರ ವ್ಯಾಸಂಗ- ಅಪಾರ ಜ್ಞಾನವನ್ನು ಅವಲೋಕಿಸಿದಾಗ ಉತ್ತಮ ಗುರುಗಳ ಬೋಧನೆ ಸಿಕ್ಕಿದ್ದು ಮನವರಿಕೆಯಾಗುತ್ತದೆ.
ಶೂದ್ರರಿಗೆ ಶಿಕ್ಷಣ ನಿಷೇಧಿಸಲ್ಪಟ್ಟ ಕಾಲದಲ್ಲಿ ಅಕ್ಷರ ಜ್ಞಾನ -ಸಕಲ ಶಾಸ್ತ್ರಗಳನ್ನು ಹೇಳಿಕೊಟ್ಟ ಗುರು ‘ ಮಲ್ಲಿಕಾರ್ಜುನಯ್ಯ ಸ್ವಾಮಿಗಳು’ ನಿಜಕ್ಕೂ ಒಬ್ಬ ಕ್ರಾಂತಿಕಾರಿ ಗುರುಗಳೆಂಬುದು ಸ್ಪಷ್ಟವಾಗುತ್ತದೆ. ಮಡಿವಾಳ ಮಾಚಿದೇವರ ಪೂರ್ವಾಶ್ರಮದ ದೈವವು ಕಲ್ಲಿನಾಥ. ಹೀಗಾಗಿ ಇವರ ವಚನಗಳಲ್ಲಿ ಕಲಿದೇವರ ದೇವಾ ಎಂಬ ಅಂಕಿತವನ್ನು ಕಾಣುತ್ತೇವೆ. ಮಡಿವಾಳ ಮಾಚಿದೇವರ ಒಟ್ಟು 346 ವಚನಗಳು ದೊರತಿವೆ. ಎಲ್ಲ ವಚನಗಳೂ ನೇರ, ನಿಷ್ಠುರ ಹಾಗೂ ಸಮಾಜದ ಕಳಕಳಿಯನ್ನು ಹೊಂದಿರುವ ಅನುಭಾವದ ನುಡಿಗಳಾಗಿವೆ.
ಒಂದು ಐತಿಹ್ಯದ ಪ್ರಕಾರ ಹಿಪ್ಪರಿಗೆಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ಕಟ್ಟಿರಲು, ಹರಿಗೋಲ ಹಂಗಿಲ್ಲದೆ ಶಿವನನ್ನು ನೆನೆಯಲು ನದಿ ಇಬ್ಬಾಗವಾಯ್ತು. ಆ ಮಾರ್ಗ ಮಧ್ಯದಿಂದ ಮಾಚಿ ತಂದೆ ನಡೆದುಕೊಂಡು ಬರುತ್ತಾನೆ ಎಂಬ ಪೌರಾಣಿಕ ಕಥೆ ಇರುವದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಪೌರಾಣಿಕವಾಗಿ 3 ಪ್ರಸಂಗಗಳ ಉಲ್ಲೇಖಗಳೂ ಸಹ ಕಾಣಬಹುದಾಗಿದೆ ಅವುಗಳೆಂದರೆ,
ಮೊದಲನೆಯ ಪ್ರಸಂಗ
ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಬೇಕಾದ ಹುಲ್ಲನ್ನು ಕೆರೆಯಲ್ಲಿ ಕುಯ್ಯುತ್ತಿದ್ದಾಗ ಧರಿಸಿದ ‘ಇಷ್ಟ ಲಿಂಗ ‘ ಜಾರಿ ಕೆರೆಯೊಳಗೆ ಬೀಳುತ್ತದೆ. ಜಾರಿ ಬಿದ್ದ ಲಿಂಗ ಮತ್ತೇಕೆ? ಭಾವ ಲಿಂಗವೊಂದನ್ನೇ ಪೂಜಿಸಿದರೆ ಸಾಕೆಂದು ಹುಲ್ಲಿನ ಹೊರೆ ಹೊತ್ತು ಮನೆಗೆ ಮರಳುವರು. ಆಗ ಲಿಂಗದೇವ, ಮಾಚಿದೇವರ ಮೊರೆ ಹೋಗುತ್ತಾರೆ. ಮಾಚಿ ತಂದೆಗಳು ‘ಸವಿ ಬೇಕು- ಹಣ್ಣು ಬೇಡವೆಂದರೆ’ ಹೇಗೆ? ಗುರು ಪೂಜೆ ಅರಿದೊಡೆ ಲಿಂಗ ಪೂಜೆ ಬಿಡಲಾಗದೆಂದು ಚಂದ್ರಯ್ಯನವರ ತಪ್ಪನ್ನು ಅರಿವನ್ನುಂಟುಮಾಡುವರು – ಅದೊಂದು ದಿವ್ಯ ಪ್ರಸಂಗ.
ಎರಡನೆಯ ಪ್ರಸಂಗ
ʼಬೇಡುವ ಭಕ್ತರಿಲ್ಲದೆ ಬಡವನಾದೆನೆಂಬ’ ಬಸವಣ್ಣನವರು ‘ಅಹಂ’ ಭಾವನೆಯಿಂದ ಮಾತನಾಡಿರುತ್ತಾರೆ, ಆಗ ಮಾಚಿದೆವರು ಬಸವಣ್ಣನವರಿಗೆ ‘ ನೀವೊಬ್ಬರೇ ದಾನ ಮಾಡಲು ಹುಟ್ಟಿದ ದಾನಿಗಳು , ಉಳಿದೆಲ್ಲ ಭಕ್ತರು ಭಿಕಾರಿಗಳು, ದರಿದ್ರರೆ’ ? ಎಂದು ಪ್ರಶ್ನಿಸುತ್ತಾರೆ. ಮುಂದೆ ಎನ್ನ ಮಹಾನುಭಾವರ ಬಡತನದಿರವ ನಿನಗೆ ತೋರುವೆನೆಂದು ಪಾದದಿಂದ ನೀರನ್ನು ಚಿಮ್ಮಲು ಆ ನೀರು ಹನಿಗಳೆಲ್ಲ ಮುತ್ತು ರತ್ನಗಳಾದವು. ಹೀಗೆ ವಿನಯ, ಇಂದ್ರಿಯ ನಿಗ್ರಹ, ನಿರಹಂಕಾರಗಳು ಭಕ್ತಿಯ ಕುರುಹು ಎಂದು ತಿಳಿಸುತ್ತ ಅಹಂಕಾರ ನಿರ್ಮೂಲನೆಗೊಳಿಸಿದರು.
ಮೂರನೆಯ ಪ್ರಸಂಗ
ಮತ್ತೊಂದು ಸಂದರ್ಭದಲ್ಲಿ ಮೇದರ ಕೇತಯ್ಯ ಬಿದಿರು ಕಡಿಯುವಾಗ ಕೆಳಗೆ ಬೀಳುತ್ತಾನೆ. ಎದೆಗೆ ಬಿದಿರು ಮೊಳೆ ಚುಚ್ಚಿ ಕೇತಯ್ಯ ಶಿವ ಸನ್ನಿಧಿ ಸೇರುತ್ತಾರೆ. ಆಗ ಬಸವಣ್ಣ ಮಾಚಯ್ಯನನ್ನು ಕರೆಸುವರು, ಮಾಚಯ್ಯ ಬಂದು ಶಿವಶರಣರ ಪ್ರಾಣವೇ ತನ್ನ ಪ್ರಾಣವೆಂದು ನಂಬಿದ ಬಸವಣ್ಣ ಇನ್ನೂ ಜೀವಂತವಾಗಿದ್ದು ತನ್ನ ವಚನ ಪಾಲಿಸಿಲ್ಲವೆಂದರು. ಇದನ್ನರಿತ ಬಸವಣ್ಣ ಪ್ರಾಣ ಬಿಡುವರು. ಆ ಪ್ರಾಣ ಕೇತಯ್ಯನನ್ನು ಹಿಂಬಾಲಿಸುತ್ತದೆ. ಬಸವಣ್ಣನವರ ನಿಷ್ಠೆ ಮೆಚ್ಚಿದ ಮಾಚಯ್ಯ, ಶಿವನನ್ನು ಕುರಿತು ಕೆರಳಿ ನುಡಿದು ‘ಇಬ್ಬರ ‘ ಪ್ರಾಣಗಳನ್ನು ಮರಳಿ ಪಡೆದನೆಂದು ತಿಳಿದು ಬರುತ್ತದೆ. ಇವೆಲ್ಲ ಪೌರಾಣಿಕ ಕಥೆಗಳು. ಅದೇನೇ ಇರಲಿ ಮಡಿವಾಳ ಮಾಚಿದೇವರು ಅತ್ಯಂತ ನಿಷ್ಠುರ ಹಾಗೂ ಧೀರರು ಎಂಬುವದರಲ್ಲಿ ಸಂಶಯವಿಲ್ಲ.
ಮಾಚಯ್ಯನವರು ಹುಟ್ಟಿನಿಂದಲೂ ಮಡಿವಾಳರಾಗಿದ್ದು, ಅಚಲ ಕಾಯಕ ನಿಷ್ಟನಾಗಿದ್ದರು, ಹಿಮಾಲಯದಷ್ಟು ಧೃಢನಾಗಿದ್ದು , ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದವರು. ಜಂಗಮ ವೇಷದಲ್ಲಿ ಬಂದ ಶಿವನ ಬಟ್ಟೆಗಳನ್ನು ಆತನ ಷರತ್ತಿನ ಮೇರೆಗೆ ತನ್ನ ಹೆಂಡತಿ ‘ಮಲ್ಲಿಗೆಮ್ಮಳ’ ಎದೆ ಬಗೆದ ರಕ್ತದಲ್ಲಿ ಒಗೆದು ಒಣಗಿಸಿಕೊಂಡು ಬಂದ ಸಂದರ್ಭದ ದಂತ ಕಥೆ ಹಿಮಾಚಲಕ್ಕಿಂತಲೂ ಗಟ್ಟಿ ಕಾಯಕದ ಹಿರಿಯಾಳು ಮಾಚಿದೇವನಾಗಿದ್ದ ಎಂಬುದನ್ನು ತಿಳಿಸುತ್ತದೆ. ಕಾಯಕ ಮಾಡದ -ಸೋಮಾರಿಗಳ-ಬಡವರನ್ನು ಶೋಷಿಸುವ -ಸೋಮಾರಿಗಳ- ದುರ್ಗುಣವುಳ್ಳವರ ಬಟ್ಟೆಗಳನ್ನೆಂದು ಆತ ಮುಟ್ಟುತ್ತಿರಲಿಲ್ಲ. ‘ಅರಸುತನ ಮೇಲಲ್ಲ-ಅಗಸತನ ಕೀಳಲ್ಲ ‘ ಎಂಬುದನ್ನು ಜನಕ್ಕೆ ಸಾರಿ ಹೇಳುತ್ತಿದ್ದ.
ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ. ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ, ಅದನ್ನು ಲೆಕ್ಕಿಸದೆ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ. ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳಯ್ಯ ಕೋಪಗೊಂಡು, ತಾನು ಕೇವಲ ಸತ್ಯ ಶುದ್ಧ ಕಾಯಕ ಮಾಡುವ ಶರಣರ ಬಟ್ಟೆಯನ್ನು ಮಾತ್ರ ಮಡಿ ಮಾಡುವದಾಗಿ ಹೇಳಿ, ಅದನ್ನು ಸಿಟ್ಟಿನಿಂದ ತಿರಸ್ಕರಿಸುತ್ತಾನೆ. ಇದು ಮಡಿವಾಳಯ್ಯನ ‘ಅಹಂಕಾರವೆಂದು’ ಭಾವಿಸಿದ ಬಿಜ್ಜಳ , ಇದರಿಂದ ಉರಿದೆದ್ದು ‘ಮದೋನ್ಮತ್ತ’ ಆನೆಯನ್ನ ಮಾಚಯ್ಯನವರ ಮೇಲೆ ಹರಿ ಹಾಯಲು ಬಿಟ್ಟ. ಸೈನಿಕರ ತುಕಡಿಯೊಂದನ್ನೂ ಕಳುಹಿಸಿದ. ಆನೆ ಹಾಗೂ ಅವರನ್ನೆಲ್ಲ ಸದೆ ಬಡಿದು ಜಯ ಶಾಲಿಯಾದ. (ಬಹುತೇಕ ಮಡಿವಾಳ ಬಂಧುಗಳ ಮನೆಯಲ್ಲಿ ಈ ಸನ್ನಿವೇಶದ ಫೋಟೋ ಇರುವುದು – ಆದ್ರೆ ಬಹು ಜನರಿಗೆ ಅದರ ಹಿನ್ನೆಲೆ ಗೊತ್ತಿಲ್ಲ..) ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ಶರಣಾಗತನಾಗುವನು…ಎಂಬ ಪೌರಾಣಿಕ ವಿಷಯವನ್ನು ಇತಿಹಾಸದ ಪುಟಗಳನ್ನು ಕಾಣಸಿಗುತ್ತದೆ. ಅದು ಏನೇ ಇರಲಿ ಇದು ವರ್ಗ ಸಂಘರ್ಷದ ಕ್ರಾಂತಿಯ ಕಹಳೆ ಎನ್ನುವದರಲ್ಲಿ ಸಂಶಯವಿಲ್ಲ.
ಮುಂದೆ ‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಮಾಚಿದೇವರು ಹೊತ್ತ ‘ಜವಾಬ್ಧಾರಿ’ ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು. ಬಸವಣ್ಣನವರ ಗಡಿಪಾರಿನ ನಂತರ ಕಲ್ಯಾಣ ಕ್ರಾಂತಿಯ ಹೋರಾಟದಲ್ಲಿ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ ಮುನ್ನಡೆಯುತ್ತಾರೆ. ಮಾದನ ಹಿಪ್ಪರಗಿ, ಬೆಳಗಾವಿ, ಕಾದ್ರೊಳ್ಳಿ, ಹುಣಶೀಕಟ್ಟಿ, ಮೂಗಬಸವ, ಮುರಗೋಡ, ತಲ್ಲೂರು, ಕಾರಿಮನಿ, ಕಟಕೋಳ, ಚಂದರಗಿ ಮಾರ್ಗವಾಗಿ ಬಂದು ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಸಾಹಸಿ ಮಾಚಯ್ಯನವರು. ನಂತರ ಗೊಡಚಿಯಲ್ಲಿ ಮಾಚಿದೇವರು ಐಕ್ಯರಾಗುತ್ತಾರೆ. ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ 15 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿರುವ ಮುದಿ ವೀರಣ್ಣನ ಗುಡಿಯೇ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ ಮೇಲೆ ಇಷ್ಟಲಿಂಗದ ಕರಡಗಿ ಇದೆ. ಮಡಿವಾಳ ಮಾಚಿದೇವನನ್ನು ಪುರಾಣಗಳಲ್ಲಿ ವೀರಭದ್ರನ ಅವತಾರವೆಂದು ಬಿಂಬಿಸುತ್ತಾರೆ. ಹೀಗಾಗಿ ಜಾನಪದ ಸಾಹಿತಿಗಳು, ಅನೇಕ ಸಂಶೋಧಕರು, ತಜ್ಞರು ಮಡಿವಾಳ ಮಾಚಿದೇವರ ಐಕ್ಯಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬಂದಿದ್ದಾರೆ. ಮಡಿವಾಳ ಮಾಚಿದೇವರ ಶಿಲ್ಪ ಕಲೆಯ ಮೂರ್ತಿಗಳನ್ನು ಗದಗ, ಮುಳಗುಂದ, ಶಿಂಗಟಾಲೂರು ಮುಂತಾದ ಪ್ರದೇಶಗಳಲ್ಲಿ ಕಾಣುತ್ತೇವೆ.
ಶರಣರ ಒಂದು ತಂಡ ತೊರಗಲ್ಲ, ಮುನವಳ್ಳಿ, ಸವದತ್ತಿ, ಧಾರವಾಡ ಮಾರ್ಗದಲ್ಲಿ ಉಳವಿಗೆ ಹೋಯಿತು. ಇನ್ನೊಂದು ತಂಡದ ಶರಣರು ಉಣಕಲ್, ಹುಬ್ಬಳ್ಳಿ, ಎಣ್ಣೆ ಹೊಳೆ, ನುಲಿಗನೂರು ಮುಂತಾದ ಪ್ರದೇಶಗಳಲ್ಲಿ ಚದುರಿದರು. ವೀರಭದ್ರ ದೇವರ ಗುಗ್ಗಳದಲ್ಲಿಯೂ ಅಂಬಿಗರ ಚೌಡಯ್ಯನವರ ವಚನ, ಮಡಿವಾಳ ಮಾಚಿದೇವರ ವಚನ, ಅಲ್ಲಮರ ಬೆಡಗಿನ ವಚನಗಳು ಹೇಳಲ್ಪಡುತ್ತವೆ. ಗುಗ್ಗಳದಲ್ಲಿನ ಪುರವಂತರ ಉಡುಪು, ಅಲ್ಲಿರುವ ಸಂಬಾಳ ವಾದ್ಯಗಳು ಕಲ್ಯಾಣದ ಚಾಲುಕ್ಯ ಕಳಚೂರ್ಯರ ಸೈನಿಕ ಸೇನೆಯ ವಾದ್ಯ ಪೋಷಾಕುಗಳಾಗಿವೆ.
ಮಾಚಯ್ಯನನ್ನು ಕುರಿತು ಬಸವಣ್ಣ ‘ಎನ್ನ ಕಾಯವ ಶುದ್ಧ ಮಾಡಿದಾತ ಮಡಿವಾಳ, ಎನ್ನ ಮನವ ಶುದ್ಧ ಮಾಡಿದಾತ ಮಡಿವಾಳ’ ಎಂದು ಬಣ್ಣಿಸಿದ್ದಾನೆ. ಆಧುನಿಕ ಜಗತ್ತಿನಲ್ಲಿ ಮಾಲಿನ್ಯಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಮಾಚಯ್ಯನ ನೆನಪು ಔಷಧಿಯಂತೆ ಕಾಣಿಸುತ್ತದೆ. ಮಾಚೀದೇವರ ವಚನಗಳಲ್ಲಿ ನಿಷ್ಠುರತೆ, ಗಣಾಚಾರ, ಕಲಿತನ, ಸಾಮಾಜಿಕ ಕಳಕಳಿ, ವಿಡಂಬನೆ ಮತ್ತು ಟೀಕೆಗಳನ್ನು ಕಾಣುತ್ತೇವೆ. ಅವರ ಕೆಲವು ವಚನಗಳನ್ನು ಉದಾಹರಿಸಬೇಕೆಂದರೆ,
ಮಧುರದ ಗುಣವ ಇರುಹೆ ಬಲ್ಲುದು.
ವಾಯುವಿನ ಗುಣವ ಸರ್ಪ ಬಲ್ಲುದು.
ಗೋತ್ರದ ಗುಣವ ಕಾಗೆ ಬಲ್ಲುದು.
ವೇಳೆಯ ಗುಣವ ಕೋಳಿ ಬಲ್ಲುದು.
ಇದು ಕಾರಣ, ಮನುಷ್ಯಜನ್ಮದಲ್ಲಿ ಬಂದು,
ಶಿವಜ್ಞಾನಾನುಭವವನರಿಯದಿರ್ದಡೆ,
ಆ ಕಾಗೆ ಕೋಳಿಗಿಂದ ಕರಕಷ್ಟ ಕಾಣಾ, ಕಲಿದೇವರದೇವ
ಆಹಾರ, ನಿದ್ರೆ, ಭಯ ಇತ್ಯಾದಿಗಳು ಮನುಷ್ಯ, ಪಶು, ಪಕ್ಷಿ ಮುಂತಾದ ಪ್ರಾಣಿಗಳಲ್ಲಿ ಸಮಾನವಾಗಿದ್ದರೂ, ಜಗತ್ತಿನ ಒಂದೊಂದು ಪ್ರಾಣಿಯಲ್ಲಿ ಒಂದೊಂದು ವಿಶೇಷ ಗುಣವಿರುವುದನ್ನು ಕಾಣಬಹುದಾಗಿದೆ. ಹಾಗೆಯೇ ಮನುಷ್ಯನಲ್ಲಿಯೂ “ಶಿವಜ್ಞಾನ” ವಿಶೇಷಗುಣ ಇರಲೇಬೇಕೆಂಬ ಆಶಯದ ಈ ವಚನ ರಜಕರತ್ನ ಮಡಿವಾಳ ಮಾಚಿತಂದೆಯದು.
ಜಗತ್ತಿನ ಜೀವಜಂತುಗಳಲ್ಲಿ ಇರುವೆ ಅಥವಾ ಇರುವೆ ಅತ್ಯಂತ ಚಿಕ್ಕದಾಗಿರುವ ಪ್ರಾಣಿ. ಕೆಲವು ಜಾತಿಯ ಇರುವೆಗಳು ಬರಿಗಣ್ಣಿಗೆ ಕಾಣದಷ್ಟು ಚಿಕ್ಕದಾಗಿರುವುದುಂಟು. ಅಷ್ಟು ಚಿಕ್ಕಗಾತ್ರದ ಇರುವೆಯೂ ಸಿಹಿ ಪದಾರ್ಥವನ್ನು ಗುರುತಿಸುವ ವಿಶೇಷ ಗುಣವನ್ನು ಹೊಂದಿದೆ. ನಾವು ಸಿಹಿ ಪದಾರ್ಥವನ್ನು ಎಷ್ಟೇ ಸುರಕ್ಷಿತವಾಗಿಟ್ಟಿದ್ದರೂ ಈ ಚಿಕ್ಕ ಇರುವೆಗಳು ಮಾತ್ರ ಅಲ್ಲಿ ಬಂದೇ ತೀರುತ್ತವೆ. ನಮ್ಮ ಬರಿಗಣ್ಣಿಗೆ ಕಾಣದ ಈ ಇರುವೆಗಳು ತಮ್ಮ ಕಣ್ಣು, ಮೂಗುಗಳ ಮೂಲಕ ವಸ್ತುಗಳನ್ನು ನೋಡುವ, ವಾಸನೆಯನ್ನು ಅಘ್ರಾಣಿಸುವ, ನಾಲಿಗೆಯಿಂದ ಆ ವಸ್ತುವಿನ ಸವಿಯನ್ನು ಸವಿಯುವ ಕ್ರಿಯೆಯನ್ನು ಗಮನಿಸಿದಾಗ ನಮಗೆ ಆಶ್ಚರ್ಯವಾಗದೇ ಇರದು. ಹಾಗೆಯೇ ಸರಿಸೃಪಗಳಾದ ಸರ್ಪಗಳಲ್ಲಿಯೂ ವಾಯುವಿನ ಕುರಿತಾದ ವಿಶೇಷ ಜ್ಙಾನವಿರುವದನ್ನು ಸರ್ಪ ತಜ್ಞರು ಗುರುತಿಸಿದ್ದಾರೆ. ಬದಲಾದ ಹವಾಮಾನಕ್ಕನುಗುಣವಾಗಿ ಹೊಂದಿಕೊಳ್ಳುವ, ಪೊರೆ ಕಳಚಿಕೊಳ್ಳುವ ಅನೇಕ ದಿನಗಳವರೆಗೆ ಆಹಾರವಿಲ್ಲದೇ ಕೇವಲ ಉಸಿರಾಟದ ಬಲದಿಂದಲೇ ಬದುಕಬಲ್ಲ ವಿಶೇಷತೆ ಸರ್ಪಗಳದು. ಅವುಗಳ ಘ್ರಾಣಶಕ್ತಿ ಅತ್ಯಂತ ಸಂವೇದನಾಶೀಲವಾದುದು.
ವೈದಿಕ ಧರ್ಮದ ಪರಂಪರೆಯಲ್ಲಿ ಗೋತ್ರ ಸೂತ್ರಗಳ ಪ್ರಾಮುಖ್ಯತೆಯ ವಿಶೇಷವಾದುದು. ಭಾರದ್ವಜ,ಕಶ್ಯಪ, ವಶಿಷ್ಟ ಮುಂತಾದ ಋಷಿ-ಮುನಿಗಳ ಹೆಸರಿನಲ್ಲಿ ಅನೇಕ ಗೋತ್ರಗಳಿರುವುದನ್ನು ಕಾಣುತ್ತೇವೆ. ಆಯಾ ಗೋತ್ರಗಳಿಗೆ ಸಂಬಂಧಪಟ್ಟ ವೈದಿಕ ಧರ್ಮಾಚರಣೆಯುಳ್ಳ ಜನರು ತಮ್ಮ ಸಂಬಂಧಿಗಳ ಮರಣಾನಂತರ ನಡೆಸುವ ಶ್ರಾದ್ಧ ಕರ್ಮದಲ್ಲಿ ಅನ್ನದಿಂದ ಪಿಂಡವನ್ನು ಮಾಡಿ ನದಿ-ತೀರ್ಥಗಳ ದಡದ ಎತ್ತರವಾದ ಸ್ಥಳದಲ್ಲಿ ಇಡುವುದುಂಟು. ಆಯಾ ಗೋತ್ರಕ್ಕೆ ಸಂಬಂಧಿಸಿದ ಕಾಗೆಗಳು ಅದನ್ನು ಸ್ವೀಕರಿಸುತ್ತವೆಯೆಂದೂ ಅದರಿಂದ ಮೃತ ವ್ಯಕ್ತಿಗಳ ಆತ್ಮ ಸಂತೃಪ್ತಗೊಳ್ಳುವುದೆಂದೂ ಅನೇಕ ವೈದಿಕ ಧರ್ಮಾನುಯಾಯಿಗಳು ನಂಬಿಕೆ. ಇದರ ಸತ್ಯಾಸತ್ಯತೆ ಏನೇ ಇರಲಿ ಕಾಗೆ ಮಾತ್ರ ಒಂದು ವಿಶಿಷ್ಟ ಪಕ್ಷಿ ಎನ್ನುವುದನ್ನು ಮರೆಯಲಾಗದು. ಏನಾದರೂ ಆಹಾರ ಪದಾರ್ಥಗಳು ಕಂಡಾಗ ತನ್ನ ಕುಲ ಬಂಧುಗಳನ್ನೆಲ್ಲ ಕರೆದು ತಿನ್ನುವ ಇದು ಬಸವಣ್ಣನವರ ದೃಷ್ಟಿಯಲ್ಲಿ “ ದಾಸೋಹ ಪಕ್ಷಿ” ಹಾಗೆಯೇ ವೇಳೆಯನ್ನು ಅರಿಯುವ ವಿಶೇಷ ಗುಣ ಕೋಳಿಗುಂಟು. ಎಲ್ಲ ದೇಶ, ಎಲ್ಲ ಕಾಲಗಳಲ್ಲಿ ಕೋಳಿ ಮಾತ್ರ ನಿಗದಿತ ಸಮಯಕ್ಕೆ ಕೂಗುವದನ್ನು ಕಂಡು ಆಶ್ಚರ್ಯವೆನಿಸದೇ ಇರದು.
ಹೀಗೆ ಇರುವೆ, ಸರ್ಪ, ಕಾಗೆ, ಕೋಳಿಗಳಲ್ಲಿ ತಮ್ಮ ಬದುಕಿನ ನಿರ್ವಹಣೆಯ ಜೊತೆಗೆ ಒಂದೊಂದು ವಿಶೇಷ ಗುಣ ಇರುವದನ್ನು ಗಮನಿಸಿದ ಮಡಿವಾಳ ಮಾಚಿದೇವರು ಮನುಷ್ಯನಲ್ಲಿಯೂ ಶಿವಜ್ಞಾನವನ್ನು ಅರಿಯುವ ವಿಶೇಷ ಗುಣವಿರಬೇಕೆಂದು ಬಯಸುತ್ತಾರೆ. ಜ್ಞಾನವೊಂದೇ ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ಭಿನ್ನವೆಂಬುದನ್ನು ತೋರಿಸುವ ಸಾಧನ. ಆ ಜ್ಞಾನವೇ ಇಲ್ಲದಿದ್ದರೆ ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವೇ ಉಳಿಯದು. ಆದ್ದರಿಂದ ಜ್ಞಾನವನ್ನು ಅದರಲ್ಲಿಯೂ ಶಿವಜ್ಞಾನವನ್ನು ಮನುಷ್ಯ ಪಡೆಯಬೇಕಾದುದು ಅತ್ಯವಶ್ಯಕ. ಇಲ್ಲಿ ಶಿವಜ್ಞಾನ ಎಂದರೆ ಅರಿವು, ಅನುಭಾವ ಎಂದರ್ಥ, ಚೈತನ್ಯದ ಅರಿವು ಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ಈ ವಚನ ನೀಡುತ್ತದೆ.
ಜ್ಞಾನ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದುದು. ಅದರಿಂದ ನಮ್ಮ ಅಜ್ಞಾನ ನಿವಾರಣೆಯಾಗುತ್ತದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂಬುದು ಬಸವಣ್ಣನವರ ಸ್ಪಷ್ಟ ನುಡಿ. ಜ್ಞಾನ ನಮ್ಮ ಮುಕ್ತಿಗೆ ಸಾಧನ. ಇಲ್ಲಿ ಮುಕ್ತಿ ಎಂದರೆ ಬಯಲಲ್ಲಿ ಬಯಕಾಗುವಿಕೆ ಅಥವಾ ಚೈತನ್ಯದಲ್ಲಿ ಲೀನವಾಗುವಿಕೆ ಎಂದರ್ಥ . ಜ್ಞಾನದ ಅನುಭವ ನಮ್ಮ ಸ್ವರೂಪವನ್ನು ನಮಗೆ ತಿಳಿಸುವಲ್ಲಿ ಸಮರ್ಥವಾದುದು. ಅದನ್ನು ಪಡೆಯುವಲ್ಲಿಯೇ ಮನುಷ್ಯ ಜನ್ಮದ ಸಾರ್ಥಕತೆ ಇರುವುದು. ಶಿವಜ್ಞಾನವನ್ನು ಸಂಪಾದಿಸುವುದು ಅನುಭಾವವನ್ನು ಮಾಡುವುದು ಅರಿವಿನ ಜನ್ಮವಾದ ಈ ಮನುಷ್ಯ ಜನ್ಮದಲ್ಲಿ ಮಾತ್ರ ಸಾಧ್ಯ. ಆದ್ದರಿಂದ ಕಾಗೆ ಕೋಳಿಗಳಿಗಿಂತ ಕೀಳಾಗದೇ ಅಮೂಲ್ಯವಾದ ಮನುಷ್ಯ ಜನ್ಮವನ್ನು, ಶಿವಜ್ಞಾನವನ್ನು ಸಂಪಾದಿಸುವದರ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕೆಂಬ ಆಶಯ ಈ ವಚನದಲ್ಲಿರುವದನ್ನು ನಾವು ಕಾಣಬಹುದಾಗಿದೆ.
ಆಶಾಪಾಶವ ಬಿಟ್ಟಡೇನಯ್ಯಾ
ರೋಷಪಾಶವ ಬಿಡದನ್ನಕ್ಕರ
ರೋಷಪಾಶವ ಬಿಟ್ಟಡೇನಯ್ಯಾ
ಮಾಯಾಪಾಶವ ಬಿಡದನ್ನಕ್ಕರ
ಇಂತೀ ತ್ರಿವಿಧಪಾಶವ ಹರಿದು
ನಿಜನಿಂದ ಲಿಂಗೈಕ್ಯರ ತೋರಾ ಕಲಿದೇವರದೇವಾ.
ವ್ಯಕ್ತಿಯು ತನ್ನ ಮನದಲ್ಲಿ ಮೂಡುವ ಆಸೆ/ಕೋಪ/ಮೋಹದ ಒಳಮಿಡಿತಗಳೆಲ್ಲವನ್ನೂ ಒಟ್ಟಾಗಿ ಹತೋಟಿಯಲ್ಲಿಟ್ಟುಕೊಂಡಾಗ ಮಾತ್ರ ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನು ರೂಪಿಸಿಕೊಳ್ಳಲು ಆಗುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
ಆಶೆಯೆಂಬ ಬಲೆ. ವ್ಯಕ್ತಿಯ ಮನದಲ್ಲಿ ಮೂಡುವ ಆಸೆಗಳಲ್ಲಿ ‘ಒಳ್ಳೆಯ ಆಸೆ’ ಮತ್ತು ‘ಕೆಟ್ಟ ಆಸೆ’ ಗಳೆಂಬ ಎರಡು ಬಗೆಗಳಿವೆ. ‘ಒಳ್ಳೆಯ ಆಸೆ’ ಎಂಬುದು ವ್ಯಕ್ತಿಗೆ ಒಲವು ನಲಿವನ್ನು ತಂದುಕೊಡುವುದರ ಜತೆಗೆ ಇತರರಿಗೂ ಒಳಿತನ್ನು ಉಂಟುಮಾಡುವಂತೆ ಇರುತ್ತದೆ.
‘ಕೆಟ್ಟ ಆಸೆ’ ಎಂಬುದು ವ್ಯಕ್ತಿಯ ಮನದ ಹಂಬಲವನ್ನು ಈಡೇರಿಸಿದರೂ, ಅದರಿಂದ ಇತರರಿಗೆ ಕೇಡು/ಹಾನಿ/ನೋವು ತಟ್ಟುತ್ತದೆ.ಆದ್ದರಿಂದ ವ್ಯಕ್ತಿಯು ಕೆಟ್ಟ ಆಸೆಯ ಬಲೆಗೆ ಬೀಳಬಾರದು
ಆಶಾಪಾಶವ ಬಿಟ್ಟಡೇನಯ್ಯಾ ರೋಷಪಾಶವ ಬಿಡದನ್ನಕ್ಕರ=ವ್ಯಕ್ತಿಯು ಕೆಟ್ಟ ಆಸೆಗಳನ್ನು/ಕಾಮನೆಗಳನ್ನು ಬಿಡುವುದರ ಜತೆಗೆ, ಮನದಲ್ಲಿ ಕೆರಳುವ ಕೋಪತಾಪದ ನಡೆನುಡಿಗಳನ್ನು ಹತ್ತಿಕ್ಕಿಕೊಂಡು/ಹತೋಟಿಯಲ್ಲಿಟ್ಟುಕೊಂಡು ಬಾಳಬೇಕು. ಕೆಟ್ಟ ಆಸೆಗಳ ಜತೆಗೆ ಕೆಟ್ಟ ಕೋಪವನ್ನು ಬಿಡದಿದ್ದರೆ ಜೀವನದಲ್ಲಿ ಒಳಿತನ್ನು ಪಡೆಯಲಾಗುವುದಿಲ್ಲ
ವ್ಯಕ್ತಿಯು ತಾನು ಪಡೆಯಲು ಹಂಬಲಿಸುತ್ತಿರುವ ವಸ್ತು/ಜೀವಿ/ವ್ಯಕ್ತಿಯನ್ನು ತನ್ನದನ್ನಾಗಿಸಿಕೊಳ್ಳಲು ಹೆಣಗುತ್ತಿರುವುದು/ಸೆಣಸುತ್ತಿರುವುದು;
ರೋಷಪಾಶವ ಬಿಟ್ಟಡೇನಯ್ಯಾ ಮಾಯಾಪಾಶವ ಬಿಡದನ್ನಕ್ಕರ=ವ್ಯಕ್ತಿಯು ತನ್ನನ್ನು ತೀವ್ರವಾಗಿ ಕಾಡುತ್ತಿರುವ/ಸೆಳೆಯುತ್ತಿರುವ ವಸ್ತು/ಜೀವಿ/ವ್ಯಕ್ತಿಗಳನ್ನು ಮನಸ್ಸಿನಿಂದ ಹೊರಹಾಕದೆ, ಕೇವಲ ಕೋಪವನ್ನು ತ್ಯಜಿಸಿದ ಮಾತ್ರದಿಂದಲೇ ಒಳಿತಿನ ನಡೆನುಡಿಗಳನ್ನು ರೂಪಿಸಿಕೊಳ್ಳಲು ಆಗುವುದಿಲ್ಲ;
ಈ ತ್ರಿವಿಧ ಪಾಶ=1) ಕೆಟ್ಟ ಆಸೆ. 2) ಕೋಪದ ನಡೆನುಡಿ.3) ವಸ್ತು/ಜೀವಿ/ವ್ಯಕ್ತಿಗಳ ಬಗೆಗಿನ ಮೋಹ/ಸೆಳೆತ, ಇಂತೀ ತ್ರಿವಿಧಪಾಶವ ಹರಿದು ನಿಜನಿಂದ ಲಿಂಗ್ಯೆಕ್ಯರ ತೋರಾ, ಅಂದರೆ ತಮ್ಮ ನಿಜ ಜೀವನದಲ್ಲಿ ಕೆಟ್ಟ ಆಸೆಗಳನ್ನು ತೊರೆದು/ಕೋಪತಾಪಗಳನ್ನು ಹತೋಟಿಯಲ್ಲಿಟ್ಟುಕೊಂಡು/ಮನದಲ್ಲಿ ಮೂಡುವ ಮೋಹದ ಒಳಮಿಡಿತಗಳನ್ನು ತೊರೆದು ಬಾಳುತ್ತಿರುವ ಗುಣವಂತರನ್ನು ನನಗೆ ತೋರಿಸು ಎಂದು ವಚನಕಾರನು ದೇವರಲ್ಲಿ ಮೊರೆಯಿಡುತ್ತಿದ್ದಾನೆ.
ಉಡಿಯ ಲಿಂಗವ ಬಿಟ್ಟು,
ಗುಡಿಯ ಲಿಂಗಕ್ಕೆ ಶರಣೆಂಬ
ಮತಿಭ್ರಷ್ಟರನೇನೆಂಬೆನಯ್ಯಾ ಕಲಿದೇವರದೇವ.
ಉಡಿಯಲ್ಲಿ ಕಟ್ಟಿಕೊಂಡಿರುವ ಲಿಂಗವನ್ನು ಬಿಟ್ಟು, ಗುಡಿಯಲ್ಲಿ ನೆಲೆಗೊಂಡಿರುವ ಲಿಂಗವನ್ನು ಪೂಜಿಸುವ ವ್ಯಕ್ತಿಗಳನ್ನು ‘ತಿಳುವಳಿಕೆ ಇಲ್ಲದವರು’ ಎಂದು ಈ ವಚನದಲ್ಲಿ ಟೀಕಿಸಲಾಗಿದೆ. ಗುಡಿಯ ಲಿಂಗ ಎಂದರೆ ಸ್ಥಾವರ ಲಿಂಗ, ಶಿವನ ಸಂಕೇತವಾದ ವಿಗ್ರಹ
ಉಡಿಯ ಲಿಂಗ ಎಂದರೆ, ವ್ಯಕ್ತಿಯು ತನ್ನ ಕೊರಳಿನಲ್ಲಿ ಕಟ್ಟಿಕೊಳ್ಳುವ ಲಿಂಗ, ಇಷ್ಟಲಿಂಗ. ದೇವರಾದ ಶಿವನನ್ನು ಪ್ರತಿ ನಿತ್ಯ ಪೂಜಿಸುವಾಗ ಅಂದರೆ ಚೈತನ್ಯವನ್ನು ಆರಾಧಿಸುವಾಗ, ಉಡಿಯಲ್ಲಿರುವ ಲಿಂಗವನ್ನು ಅಂದರೆ ಇಷ್ಟಲಿಂಗವನ್ನು ತನ್ನ ಅಂಗೈ ಮೇಲೆ ಇಟ್ಟುಕೊಂಡು, ವ್ಯಕ್ತಿಯು ತಾನೇ ಪೂಜಿಸುತ್ತಾನೆ. ಈ ಬಗೆಯ ಪೂಜೆಯಲ್ಲಿ ತನ್ನ ಮತ್ತು ನಿರಾಕಾರ ಶಿವನ ಅಥವಾ ಚೈತನ್ಯದ ನಡುವೆ ಪೂಜಾರಿಯ ಅಗತ್ಯವಿರುವುದಿಲ್ಲ. ಇದನ್ನು ‘ಇಷ್ಟ ಲಿಂಗ’ ವೆಂದು ಕರೆಯುತ್ತಾರೆ
ಗುಡಿಯ ಲಿಂಗ ಎಂದರೆ ಗುಡಿಯಲ್ಲಿ ನೆಲೆಗೊಂಡಿರುವ ದೊಡ್ಡ ಆಕಾರದ ಲಿಂಗ. ಇದನ್ನು ‘ಸ್ಥಾವರ ಲಿಂಗ’ ವೆಂದು ಕರೆಯುತ್ತಾರೆ. ಸ್ಥಾವರ ಎಂದರೆ ಒಂದು ಜಾಗದಲ್ಲಿ ನೆಲೆಗೊಂಡಿರುವುದು;
ಮತಿಭ್ರಷ್ಟ್ರರು ಎಂದರೆ ತಿಳುವಳಿಕೆ ಇಲ್ಲದವರು; “ತಿಳುವಳಿಕೆ ಇಲ್ಲದವರು” ಎಂದರೆ ಜೀವನದಲ್ಲಿ “ಯಾವುದು ಸರಿ-ಯಾವುದು ತಪ್ಪು; ಯಾವುದು ವಾಸ್ತವ-ಯಾವುದು ಕಲ್ಪಿತ; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬ ಅರಿವು ಮತ್ತು ಎಚ್ಚರವಿಲ್ಲದವರು;
ಏನೆಂಬೆನಯ್ಯಾ=ಇಂತಹ ತಿಳಿಗೇಡಿಗಳನ್ನು ಕುರಿತು ಏನೆಂದು ತಾನೇ ಹೇಳಲಿ. ಇಂತಹ ವ್ಯಕ್ತಿಗಳಿಗೆ ದೇವರು ಕೇವಲ ಜಡರೂಪಿಯಾಗಿ ಕಾಣುತ್ತಾನೆಯೇ ಹೊರತು, ಜೀವನದಲ್ಲಿ ಒಳಿತಿನ ನಡೆನುಡಿಗಳತ್ತ ಕರೆದೊಯ್ಯುವ ಚೇತನರೂಪಿಯಾಗಿ ಕಂಡುಬರುವುದಿಲ್ಲ ಎಂಬ ತಿರುಳಿನಲ್ಲಿ ಈ ನುಡಿಗಳು ಒಳಗೊಂಡಿವೆ.
ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಗುಡಿಯಲ್ಲಿನ ಸ್ತಾವರಲಿಂಗದ ಪೂಜೆಯನ್ನು ನಿರಾಕರಿಸುತ್ತಾರೆ. ಇಂತಹ ನಿಲುವನ್ನು ತಳೆಯಲು ಅನೇಕ ಕಾರಣಗಳಿವೆ.
ಶಿವಶರಣಶರಣೆಯರು ತಮ್ಮ ಅಂಗೈ ಮೇಲೆ ಇಟ್ಟುಕೊಂಡು ಪೂಜಿಸುತ್ತಿದ್ದ ಇಷ್ಟಲಿಂಗವು, ಅವರ ಪಾಲಿಗೆ ಜೀವನದ ಉದ್ದಕ್ಕೂ ಪ್ರತಿಗಳಿಗೆಯಲ್ಲಿಯೂ ಒಳಿತಿನ ನಡೆನುಡಿಗಳ ಕಡೆಗೆ ದಾರಿ ತೋರುವ ಸಾಂಕೇತಿಕ ದೇವರಾಗಿತ್ತು. ನಿಜ ಜೀವನದಲ್ಲಿ ಅವರ ಪಾಲಿನ ದೇವರು ಕಲ್ಲು, ಮಣ್ಣು, ಲೋಹ, ಮರದಿಂದ ಮಾಡಿದ ಜಡರೂಪಿಯಾದ ವಿಗ್ರಹವಾಗಿರಲಿಲ್ಲ. ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವ ನಡೆನುಡಿಗಳನ್ನು ದೇವರೆಂದು ನಂಬಿದ್ದರು. ವಿಗ್ರಹ ರೂಪದಲ್ಲಿ ದೊಡ್ಡದಾಗಿ ಕಡೆದಿರುವ ಲಿಂಗವನ್ನು ದೇಗುಲದ ಒಳಗುಡಿಯಲ್ಲಿ ನೆಲೆಗೊಳಿಸುತ್ತಿದ್ದಂತೆಯೇ, ವಿಗ್ರಹದ ಹತ್ತಿರಕ್ಕೆ ಹೋಗಿ ಪೂಜಿಸಲು ಪೂಜಾರಿಯು ಮಾತ್ರ ತಕ್ಕವನಾಗುತ್ತಾನೆ. ಇನ್ನುಳಿದವರು ಒಳಗುಡಿಯಿಂದ ಹೊರನಿಲ್ಲಬೇಕಾಗುತ್ತದೆ. ಇಲ್ಲಿಂದಲೇ ಮಾನವ ಸಮುದಾಯದಲ್ಲಿ ಮೇಲು-ಕೀಳಿನ ವಿಂಗಡಣೆಯು ಮೊದಲಾಗುತ್ತದೆ. ಮೇಲು-ಕೀಳಿನ ಜಾತಿಗಳ ಮೆಟ್ಟಿಲುಗಳಿಂದ ಕೂಡಿರುವ ನಮ್ಮ ಸಮಾಜದ ಜಾತಿರಚನೆಯ ಕಟ್ಟುಪಾಡುಗಳನ್ನು ದೇವರಗುಡಿಯಲ್ಲಿ ನಡೆಯುವ ಆಚರಣೆಗಳು ಮುಂದುವರೆಸಿಕೊಂಡು ಬರುತ್ತಿವೆ. ಮೇಲು ಜಾತಿಯವರಿಗೆ, ಸಿರಿವಂತರಿಗೆ ಹಾಗೂ ರಾಜಕೀಯವಾಗಿ ದೊಡ್ಡ ದೊಡ್ಡ ಗದ್ದುಗೆಯಲ್ಲಿರುವವರಿಗೆ ಮೊದಲ ಮನ್ನಣೆಯನ್ನು ನೀಡುವ ದೇಗುಲದ ಆಚರಣೆಗಳು, ಕೆಳ ಜಾತಿ ಮತ್ತು ದುಡಿಯುವ ಶ್ರಮಜೀವಿಗಳಾದ ಬಡವರನ್ನು ಕಡೆಗಣಿಸಿವೆ. ಈ ರೀತಿ ಮೇಲು-ಕೀಳಿನ ತಾರತಮ್ಯ ಮುಂದುವರೆಸಿಕೊಂಡು ಹೋಗಲು ಕಾರಣವಾಗಿರುವ ಮತ್ತು ನೆರವಾಗುತ್ತಿರುವ ಗುಡಿಯ ಆಚರಣೆಗಳ ನೆಲೆಯಿಂದ ಶಿವಶರಣಶರಣೆಯರು ದೂರಸರಿದಿದ್ದರು.
ಹೀಗೆ ಮಡಿವಾಳ ಮಾಚಿದೇವರ ಎಲ್ಲ ವಚನಗಳು ಸಮಾಜದ ಓರೆಕೊರೆಗಳನ್ನು ತಿದ್ದಿ ಹೇಳುವ ಅನುಭಾವದ ಆಚರಣೆಗಳಾಗಿದ್ದವು. ಒಟ್ಟಾರೆಯಾಗಿ ಮಡಿವಾಳ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ, ದಿಟ್ಟ ಗಣಾಚಾರಿಯಾಗಿದ್ದರು.
–ಡಾ. ದಾನಮ್ಮ ಝಳಕಿ, ಬೆಳಗಾವಿ
ಆಧಾರ ಗ್ರಂಧಗಳು:
1. ಬಸವೇಶ್ವರರ ಸಮಕಾಲೀನರು – ಬಸವ ಸಮಿತಿ
2. ಎತ್ತ ಹೋದರು ಶರಣರು – ಡಾ ಶಶಿಕಾಂತ ಪಟ್ಟಣ
3. ಸಂಕೀರ್ಣ ವಚನ ಸಂಪುಟ, (ಸಮಗ್ರ ವಚನ ಸಂಪುಟ ೮) – ಡಾ ಬಿ ಆರ್
ಹಿರೇಮಠ
4. ವಚನಾರ್ಥ ಚಿಂತನ – ಸಿದ್ಧರಾಮ ಸ್ವಾಮಿಗಳು
5. https://lingayatreligion.com/K/Sharanaru/Madivaala_Maachideva
6. ಚಿತ್ರದುರ್ಗದ ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದಿಂದ ಪ್ರಕಾಶಿತ “ಶ್ರೀ ಮಾಚಿದೇವ ಪ್ರಕಾಶ” ಕಿರುಗ್ರಂಥ , ಪ್ರಕಟಣೆ ವರ್ಷ : 2009, ಸಂಪಾದಕರು : ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು ಮತ್ತು ಡಾ ಸಂಗಮೇಶ ಮ. ಕಲಹಾಳ