ಸಾಮಾಜಿಕ ಜಾಲತಾಣವೆಂಬ ವಿಶ್ವವಿದ್ಯಾಲಯಗಳು!!??
ಓರ್ವ ಮಹಿಳೆ ತನ್ನ ದೂರದ ಸಂಬಂಧಿಗೆ ಉಂಟಾದ ಕಾಯಿಲೆಯ ಬಗ್ಗೆ ಅರಿತುಕೊಳ್ಳಲು ಸಾಮಾಜಿಕ ಜಾಲತಾಣದ ಮೊರೆ ಹೊಕ್ಕಳು. ಪ್ರಾರಂಭಿಕ ಹಂತದಲ್ಲಿರುವ ಆ ಕಾಯಿಲೆಯ ಭೀಕರತೆಗಳನ್ನು ವಿಧ ವಿಧವಾಗಿ ವರ್ಣಿಸಿದ ರೀತಿ ಮತ್ತು ಚಿತ್ರಣವನ್ನು ಕಂಡು ಆಕೆ ಭಯಭೀತಳಾದಳು. ಮುಂದೆ ಆ ಕಾಯಿಲೆಯನ್ನೇ ಹೋಲುವ ಸಣ್ಣ ತೊಂದರೆ ತನ್ನ ಸಂಬಂಧಿಗೆ ಇರುವುದು ಎಂದು ಅರಿತಾಗ ನಿರಾಳಗೊಂಡಳು
ಇನ್ನೊಂದು ಪ್ರಕರಣದಲ್ಲಿ ಒಬ್ಬ ವ್ಯಕ್ತಿ ತನ್ನ ವಿರೋಧಿಯನ್ನು ಸಾಯಿಸಿದ ನಂತರ ಆತನನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟ ವಿಷಯವನ್ನ ದೃಶ್ಯ ಮಾಧ್ಯಮದಲ್ಲಿ ವೀಕ್ಷಿಸಿದ ಮತ್ತೋರ್ವ ವ್ಯಕ್ತಿ ಈ ಮಾಹಿತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ತನ್ನ ಜೊತೆ ಲಿವಿಂಗ್ ಟು ಗೆದರ್ ನಲ್ಲಿ ಇದ್ದ ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿ, ಆಕೆಯನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಸಾಗಿಸುವಾಗ ಸಿಕ್ಕು ಬಿದ್ದನು.
ಅನೈತಿಕ ಸಂಬಂಧಗಳಲ್ಲಿ ಜೋಡಿಗಳಲ್ಲಿ ಇಬ್ಬರಲ್ಲಿ ಒಬ್ಬರು ತಮ್ಮ ಸಂಬಂಧಗಳನ್ನು ಕೊನೆಗಾಣಿಸಿಕೊಳ್ಳಲು ಮತ್ತೊಬ್ಬರ ಕೊಲೆ ಮಾಡುವುದು ಸಾಮಾನ್ಯ ಎಂಬಂತೆ ಪದೇ ಪದೇ ವಾಹಿನಿಗಳಲ್ಲಿ ತೋರಿಸುವುದು ಅನಪೇಕ್ಷಣೀಯ.
ಮತ್ತೊಂದು ಪ್ರಕರಣದಲ್ಲಿ ರಾಜಧಾನಿಯಲ್ಲಿ ಆದ ದರೋಡೆಯೊಂದರ ಮುಖ್ಯ ಆಪಾದಿತನನ್ನು ಬಂಧಿಸಿದ ಹಿರಿಯ ಪೊಲೀಸ್ ಮೇಲಧಿಕಾರಿಗೆ ದೊರೆತ ಮಾಹಿತಿ ಆತ ಚಲನಚಿತ್ರವೊಂದರ ಪ್ರಭಾವಕ್ಕೊಳಗಾಗಿ ಆ ರೀತಿ ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿದನೆಂದು.
ಇನ್ನು ಕೊರೊನ ಹೆಮ್ಮಾರಿ ನಮ್ಮ ದೇಶವನ್ನು ಆವರಿಸಿಕೊಂಡಾಗ ಮನೆಯಲ್ಲಿ ದೂರದರ್ಶನದ 24/7 ಚಾನಲ್ ಗಳನ್ನು ನೋಡದೆ, ಸಾಮಾಜಿಕ ಜಾಲತಾಣಗಳ ಮೊರೆ ಹೋಗದೆ ತಮ್ಮ ಪಾಡಿಗೆ ತಾವು ಕೆಲಸ ತಂತಮ್ಮ ಕೆಲಸಗಳಲ್ಲಿ ಮಗ್ನರಾಗಿ ದಿನಗಳೆದವರಿಗೆ ಯಾವುದೇ ತೊಂದರೆ ಆಗದಿದ್ದರೂ, ಮುಂಜಾನೆಯಿಂದ ಸಂಜೆಯವರೆಗೂ ಜಾಲತಾಣಗಳನ್ನು ಜಾಲಾಡುವವರಿಗೆ ಸುದ್ದಿ ವಾಹಿನಿಗಳನ್ನು ವೀಕ್ಷಿಸುತ್ತಾ ಕುಳಿತ ಜನರಿಗೆ ಕ್ಷಣ ಕ್ಷಣಕ್ಕೂ ಬರುವ ಬ್ರೇಕಿಂಗ್ ನ್ಯೂಸ್ ಗಳ ಮೂಲಕ ಭೀತಿಯನ್ನು ಬಿತ್ತಿದ್ದು ಸಾಮಾಜಿಕ ಜಾಲತಾಣಗಳು ಮತ್ತು ವಾಹಿನಿಗಳು ಎಂಬುದು ಸುಳ್ಳಲ್ಲ. ನಿಖರವಾದ ಮಾಹಿತಿ ಇಲ್ಲದೆ ಬೇರೆ ಬೇರೆ ಕಡೆಗಳಲ್ಲಿ ನಡೆದ ವಿಷಯಗಳನ್ನು ತಾವು ವಸ್ತುತಃ ನೋಡಿರುವಂತೆ,ಕಣ್ಕಟ್ಟುವಂತೆ ವಿವರಿಸಿ ಜನರ ಮಾನಸಿಕ ಆರೋಗ್ಯವನ್ನು, ನೆಮ್ಮದಿಯನ್ನು ಇವರು ಕಸಿದಿದ್ದರೆಂಬುದು ಅಕ್ಷರಶಃ ನಿಜ. ಜನರಿಗೆ ಮಾಹಿತಿ ನೀಡುತ್ತೇವೆ ಎಂಬ ಹುಡುಗಾಟಿಕೆಯಲ್ಲಿ ನಮ್ಮದೇ ಚಾನಲ್ನಲ್ಲಿ ಮೊಟ್ಟಮೊದಲ ಎಕ್ಸ್ ಕ್ಲೂಸಿವ್ ನ್ಯೂಸ್ ಬಿಡುಗಡೆಗೊಂಡಿತು ಎಂಬ ಟಿ ಆರ್ ಪಿ ಗಳ ಮೇಲಾಟದ ಚಾನೆಲ್ಗಳ ಹಾವಳಿಗೆ ತುತ್ತಾಗಿ ಜನರ ಎದೆ ಬಡಿತ ಏರುಪೇರಾಗಿ ಗುಂಡಿಗೆ ಬಾಯಿಗೆ ಬಂದದ್ದು ಸುಳ್ಳಲ್ಲ.ಎಷ್ಟೋ ಜನರು ವಿವಿಧ ಜಾಲತಾಣಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯುವ ಕುತೂಹಲಕ್ಕೆ ಒಳಗಾಗಿ ಮಾನಸಿಕವಾಗಿ ಧೈರ್ಯ ಕಳೆದುಕೊಂಡು ಮುಂದೆ ಕಾಯಿಲೆ ತಮ್ಮನ್ನು ಒಕ್ಕರಿಸಿಕೊಂಡಾಗ ಸಹಜವಾಗಿಯೇ ಎದೆಗುಂದಿ ಕರೋನಾ ತೊಂದರೆಗಿಂತ ಹೆಚ್ಚಾಗಿ ಭಯದಿಂದಾಗಿ ಹೃದಯಾಘಾತ, ಹೃದಯ ಸ್ತಂಭನಕ್ಕೆ ಒಳಗಾಗಿ ಸತ್ತು ಹೋದರು.
ಇದು ಇನ್ಫೋ ಯುಗ…. ಮಾಹಿತಿಗಳು ಸುನಾಮಿಯಂತೆ ಎಲ್ಲ ಕಡೆಯಿಂದ ಹರಿದು ಬರುತ್ತಿವೆ. ಅನವಶ್ಯಕ ಮಾಹಿತಿಗಳು ಹೆಚ್ಚು ಸದ್ದು ಮಾಡುತ್ತವೆ.ಇದೆಲ್ಲಕ್ಕೂ ಕಾರಣ ಸಾಮಾಜಿಕ ಜಾಲತಾಣಗಳು ಎಂದು ಹೇಳಿದರೆ ಅದು ಒಮ್ಮುಖ ಹೇಳಿಕೆಯಾಗಿ ಪರಿಣಮಿಸುತ್ತದೆ ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮನಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಜಾಲತಾಣಗಳಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿಗಳು ನೂರು ಪ್ರತಿಶತ ನಿಜವಲ್ಲ ಎಂಬುದರ ಅರಿವು, ತಪ್ಪು ಸರಿಗಳನ್ನು ತುಲನೆ ಮಾಡುವ ಶಕ್ತಿ ನಮಗೆ ಇರಬೇಕು. ತಾನು ಕುಡಿಯುತ್ತಿರುವುದು ಹಾಲೋ, ನೀರೋ ಎಂಬುದನ್ನು ಪರೀಕ್ಷಿಸಿ ಬೇರ್ಪಡಿಸುವ ಹಂಸ, ತಾನು ತಿನ್ನುತ್ತಿರುವ ಹಣ್ಣು ರುಚಿ ಇಲ್ಲದಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ಎಸೆಯುವ ಮಂಗ, ತನಗೆ ಬೇಡದ ಆಹಾರವನ್ನು ತಿರಸ್ಕರಿಸುವ ನಾಯಿ, ಸಿಂಹ ಮತ್ತಿತರ ಪಶು ಪಕ್ಷಿಗಳು ನಮಗೆ ಈ ವಿಷಯದಲ್ಲಿ ಮಾರ್ಗದರ್ಶನ ತೋರಬಲ್ಲವು. ಮಾತು ಬಾರದ ಮೂಕ ಪ್ರಾಣಿಗಳಿಗೆ ಇರುವ ಬುದ್ಧಿ, ತಿಳುವಳಿಕೆ ಜಗತ್ತಿನ ಅತ್ಯಂತ ಬುದ್ಧಿವಂತ ಸೃಷ್ಟಿ ಎಂದು ಕರೆಸಿಕೊಳ್ಳುವ ಮನುಷ್ಯನಲ್ಲಿ ಇಲ್ಲದೆ ಇರುವುದು ಸೋಜಿಗವೇ ಸರಿ.
ಎಷ್ಟೋ ಬಾರಿ ದೇಶದಲ್ಲಿ ಕೋಮು ಗಲಭೆಯನ್ನು ಹರಡಲು, ಜನರ ಮನಸ್ಸಿನಲ್ಲಿ ವಿಷದ ಭಾವನೆಗಳನ್ನು ಬಿತ್ತಲು, ಇಲ್ಲದ ಅನರ್ಥಗಳನ್ನು ಸೃಷ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಅತಿರಂಜಿತ ವಿಷಯಗಳು ಕಾರಣವಾಗುತ್ತವೆ. ಮಾನಸಿಕವಾಗಿ ತಾವು ಮಾತ್ರ ಸರಿ, ತಮ್ಮ ಅಭಿಪ್ರಾಯಗಳು ತಮ್ಮ ಧರ್ಮ ಮಾತ್ರ ಸರಿ ಎಂಬ ಏಕಪಕ್ಷೀಯವಾದ ಚಿಂತನೆಗಳು ಸಮಾಜದ ಆರೋಗ್ಯವನ್ನು ಕೆಡಿಸುತ್ತವೆ.
ಶೀರ್ಷಿಕೆಯಲ್ಲಿ ಉದ್ಗಾರವಾಚಕ ಮತ್ತು ಪ್ರಶ್ನಾರ್ಥಕ ಚಿಹ್ನೆಗಳು ಇವೆಯಷ್ಟೇ…. ಎಷ್ಟೋ ಬಾರಿ ಕೆಲ ಪ್ರಶ್ನಾರ್ಥಕ ಚಿಹ್ನೆಗಳ ಮೂಲಕ ಜನರಲ್ಲಿ ಗೊಂದಲ ಹುಟ್ಟಿಸುವ ಸಾಮಾಜಿಕ ಜಾಲತಾಣಗಳು ಕೂಡ ಇವೆ. ಉದಾಹರಣೆಗೆ…
* ಖ್ಯಾತ ಅಭಿನೇತ್ರಿ ವಿಚ್ಛೇದನ ಮಾಡಿಕೊಳ್ಳುತ್ತಿದ್ದಾಳೆ?? ಮಾಹಿತಿಗಾಗಿ ಪರಿಶೀಲಿಸಿ,
*ಆಟಗಾರನ ಕ್ರಿಕೆಟ್ ಜೀವನ ಅಂತ್ಯ??
* ಪ್ರಖ್ಯಾತ ದಂಪತಿಗಳ ವಿವಾಹ ವಿಚ್ಛೇದನದಲ್ಲಿ ಪರ್ಯವಸಾನ!
ಮೇಲಿನ ವಾಕ್ಯಗಳ ಮುಂದೆ ಇರುವ ಪ್ರಶ್ನಾರ್ಥಕ ಚಿಹ್ನೆಗಳು ಉದ್ಘಾರವಾಚಕಗಳು ಮಾಹಿತಿಯ ಅಧಿಕೃತತೆಯ ಕುರಿತು ಗೊಂದಲವನ್ನು ಹುಟ್ಟಿಸುತ್ತವೆ. ಸತ್ಯಾಸತತೆಗಳ ನಡುವಿನ ಕೂದಲೆಳೆಯ ಅಂತರವನ್ನು ಮರೆಮಾಚುತ್ತವೆ.
ಇನ್ನೂ ಕೆಲವರು ಎಲ್ಲಾ ವಿಷಯಗಳಿಗೂ ಪುಸ್ತಕದ ಮೊರೆ ಹೋಗದೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಹುಡುಕುವುದು ಸುಲಭ, ಅಲ್ಲದೆ ಚಿತ್ರಸಹಿತ ವಿವರಣೆ ಸಿಗುತ್ತದೆ ಎಂಬುದು ಮತ್ತೊಂದು ಕಾರಣ.
ಇನ್ನು ರಾಜಕಾರಣಿಗಳಾದರೂ ಅಷ್ಟೇ…. ಯಾರೋ ಒಬ್ಬರು ಬಾಯಿ ತಪ್ಪಿ ತಮ್ಮ ವೈಯುಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಮಂಡಿಸಿದಾಗ ಅದು ಅವರ ಪಕ್ಷಕ್ಕೆ ನುಂಗಲಾರದ ತುತ್ತಾಗುತ್ತದೆ. ಎಷ್ಟೋ ಬಾರಿ ಆವೇಶದಲ್ಲಿ ಉಂಟಾಗುವ ಮಾನವ ಸಹಜ ತಪ್ಪುಗಳು ಸಾರ್ವಜನಿಕ ಜೀವನದಲ್ಲಿರುವವರ ಪಾಲಿಗೆ ಬೃಹತ್ ಪ್ರಮಾದಗಳಾಗಿ ಮಾರ್ಪಡುತ್ತವೆ. ತಮ್ಮ ಪಕ್ಷದ ಹಿರಿಯ ಮುಖಂಡರ ಒಂದು ತಪ್ಪು ಮಾತನ್ನು ಸಮರ್ಥಿಸಲು ಇಡೀ ದೇಶಾದ್ಯಂತ ಆಯಾ ಪಕ್ಷಗಳ ಕಾರ್ಯಕರ್ತರು ಪ್ರಯತ್ನಗಳನ್ನು ಮಾಡುತ್ತಾರೆ. ಇನ್ನೂ ಹಲವು ಬಾರಿ ಇವುಗಳ ಕುರಿತೆ ಹೆಚ್ಚಿನ ಚರ್ಚೆಗಳು ನಡೆದು ಅಭಿವೃದ್ಧಿ ಕಾರ್ಯಗಳೆಡೆಗಿನ ಚರ್ಚೆಗಳಿಗೆ ಅವಕಾಶವಿಲ್ಲದೆ ಹೋಗುತ್ತದೆ.ಇಲ್ಲಿ ದೇಶದ ಅಭಿವೃದ್ಧಿಯ ಕುರಿತಾದ ಕನಸನ್ನು ಹೊತ್ತು ಬಂದ ಅಭ್ಯರ್ಥಿಗಳ ಜೊತೆ ಜೊತೆಗೆ ಅಧಿಕಾರ ದಾಹಿ ಜನರು ಕೂಡ ಚುನಾವಣೆಯಲ್ಲಿ ಗೆದ್ದು ಬಂದಿರುತ್ತಾರೆ. ಇವರ ರಾಜಕೀಯ ಕೆಸರೆರಚಾಟದಲ್ಲಿ ಲಾಭವಾಗುವುದು ಇವರನ್ನು ಕರೆಸಿ ಪ್ಯಾನಲ್ ಡಿಸ್ಕಶನ್ ಮಾಡುವ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳನ್ನು ಏರ್ಪಡಿಸುವ ಜನರಿಗೆ ಮಾತ್ರ. ಕಾರ್ಯಕ್ರಮ ಮುಗಿದ ನಂತರ ಆ ಎಲ್ಲಾ ಪರ ವಿರೋಧ ಚರ್ಚೆ ಮಾಡುವವರು ಒಟ್ಟಿಗೆ ಕುಳಿತು ತಮಾಷೆ ಮಾಡುತ್ತಾ ಊಟ ಮಾಡಿ ಹೊರಟರೆ ಅವರವರ ಪಕ್ಷಗಳ ಕಾರ್ಯಕರ್ತರುತಂತಮ್ಮ ವಲಯಗಳಲ್ಲಿ ಈ ವಿಷಯದ ಕುರಿತಾಗಿ ಬಿಸಿ ಬಿಸಿ ವಾಗ್ವಾದಗಳನ್ನು ನಡೆಸಿ ಆ ವಾಗ್ವಾದಗಳು ತೀವ್ರ ಮನಸ್ಥಾಪಕ್ಕೆ ಎಡೆ ಮಾಡಿ ಮುಂದೆ ವೈಯಕ್ತಿಕ ದ್ವೇಷಕ್ಕೆ ಕಾರಣವಾಗುತ್ತದೆ.
ಇನ್ನು ಕೆಲವು ಸಾಮಾಜಿಕ ಜಾಲತಾಣಗಳು ಕಲಿಕಾ ಕೇಂದ್ರಗಳಾಗಿ ಮಾರ್ಪಾಡಾಗಿವೆ ಇದು ಉನ್ನತ ಬದಲಾವಣೆ ಏನೋ ಸರಿ. ಲಕ್ಷಾಂತರ ಜನರು ತಮ್ಮ ಜ್ಞಾನದಾಹವನ್ನು ಹಿಂಗಿಸಿಕೊಳ್ಳಲು ದೂರ ಕಲಿಕೆಯಲ್ಲಿ ಹಲವಾರು ವಿಷಯಗಳಲ್ಲಿ ಪರಿಣತಿಯನ್ನು ಪಡೆಯಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ ಇದು ಕೂಡ ಒಳ್ಳೆಯ ಮನೆಯ ಚೌಕಟ್ಟಿನೊಳಗೆ ಇದ್ದುಕೊಂಡು ನಮ್ಮ ಉದ್ಯೋಗ ಮನೆ ಕೆಲಸಗಳ ಜೊತೆ ಜೊತೆಗೆ ದೂರ ಶಿಕ್ಷಣ ಪಡೆಯುವ ಮೂಲಕ ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ.
ಆದರೆ ತಮ್ಮ ಧರ್ಮವನ್ನು ಹೊಗಳುವ ನಿಟ್ಟಿನಲ್ಲಿ ಅನ್ಯ ಧರ್ಮವನ್ನು ತೆಗಳುವ, ಹೀಯಾಳಿಸುವ ಹಕ್ಕು ಯಾರಿಗೂ ಇಲ್ಲ. ಸಂವಿಧಾನ ಬದ್ಧ ಅಧಿಕಾರವನ್ನು ಹೊಂದಿರುವ ಎಲ್ಲ ಭಾರತೀಯ ಪ್ರಜೆಗಳು ಸರಿ ಸಮಾನರು ಎಂಬುದನ್ನು ನಾವು ಇಲ್ಲಿ ಮರೆತುಬಿಡುತ್ತೇವೆ ಇದಕ್ಕೆ ಕೂಡ ಜಾಲತಾಣಗಳು ಬಿತ್ತುವ ಅಪೂರ್ಣ ಮಾಹಿತಿಗಳೇ ಕಾರಣ.
ಎಲ್ಲೋ ನಡೆಯುವ ಒಂದು ಕೊಲೆ, ಮತ್ತೆಲ್ಲೋ ನಡೆಯುವ ಒಂದು ಬಾಲಾಪರಾಧ, ಒಬ್ಬ ವ್ಯಕ್ತಿಯ ವೈಯುಕ್ತಿಕ ಹನನ ದೇಶಾದ್ಯಂತ ಪ್ರಸಾರವಾಗಿ ಚರ್ಚೆಗೆ ಗ್ರಾಸವಾಗುತ್ತದೆ. ಇತ್ತೀಚಿಗಂತೂ ಸೆಲೆಬ್ರಿಟಿಗಳು ಎಂದು ಕರೆಯಲ್ಪಡುವ ಜನರ ಮನೆಯ ವೈಯುಕ್ತಿಕ ಸಮಾರಂಭಗಳು ಅವರ ಮಕ್ಕಳ ಜೀವನದ ಮೋಜು ಮಸ್ತಿಗಳು, ಮದುವೆ ವಿಚ್ಛೇದನಗಳಂತಹ ಸುದ್ದಿಗಳು ಹೆಚ್ಚು ಚರ್ಚೆಗೆ ಗ್ರಾಸವಾಗಲು ಕಾರಣ ಇಂತಹ ವಿಷಯಗಳು ಜನರ ಮನಸ್ಸನ್ನು ಸೆಳೆಯುತ್ತವೆ ಆ ಮೂಲಕ ತಮ್ಮ ಚಾನೆಲ್ನ ಟಿ ಆರ್ ಪಿ ಹೆಚ್ಚಿಸಿಕೊಳ್ಳಬಹುದು ಎಂಬ ವೈಯುಕ್ತಿಕ ಲಾಭದ ಲೆಕ್ಕಾಚಾರ. ಇನ್ನೂ ಹಲವಾರು ಬಾರಿ ಪ್ರಖ್ಯಾತ ವ್ಯಕ್ತಿಗಳ ಸಾವು ಮತ್ತು ಅದಕ್ಕೆ ಸಂಬಂಧಪಟ್ಟ ಹಲವಾರು ಘಟನೆಗಳು ಸುಮಾರು ಎರಡು ಮೂರು ದಿನಗಳ ಕಾಲ ಜಾಲತಾಣಗಳಲ್ಲಿ ಹರಿದಾಡುತ್ತಾ ಜನರು ಅವರ ಮನೆಯ ಸಂಕಟವನ್ನು ನೋವನ್ನು ಹಂಚಿಕೊಳ್ಳಲು ಬರುವ ನೂರಾರು ಸಾವಿರಾರು ಸೆಲೆಬ್ರಿಟಿಗಳನ್ನು ನೋಡಲು ಈ ಜಾಲತಾಣಗಳ ಮೊರೆ ಹೋಗುತ್ತಾರೆ. ಅಲ್ಲಿಯೂ ಕೂಡ ಕೆಲವರು ಶೋಕದ ಮನೆಯಲ್ಲಿ ಮರಣ ಹೊಂದಿದ ವ್ಯಕ್ತಿಯ ಬಳಿ ಹೋಗುವಾಗ ಕೂಡ ತಮ್ಮ ಮೊಬೈಲ್ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುತ್ತಾರೆ. ಇದೊಂದು ರೀತಿಯ ಗೀಳು ರೋಗವಾಗಿ ಪರಿಣಮಿಸಿದೆ…. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾವುದೇ ರೀತಿಯ ಹಿಂಜರಿಕೆಗಳಿಲ್ಲದೆ ಸಾಕಷ್ಟು ಜನರು ತಾವು ಕೂಡ ಕಾಲ ಪ್ರವಾಹದ ಹೊಸ ಅಲೆಯಲ್ಲಿ ತೇಲುತ್ತಿದ್ದೇವೆ ಎಂಬುದನ್ನು ತೋರಿಸಲೋಸುಗವೇ ತಮ್ಮದಲ್ಲದ, ತಾವು ಇದುವರೆಗೂ ಮಾಡಿರದ ತಮ್ಮ ಸಂಸ್ಕೃತಿಗೆ ಒಗ್ಗದ ದಿರಿಸುಗಳನ್ನು ಧರಿಸಿ ಚಿತ್ರ ವಿಚಿತ್ರವಾಗಿ ಆಡುವುದು ಒಂದು ಚೋದ್ಯವೇ ಸರಿ. ಯುವ ಜನತೆಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಲನಚಿತ್ರಗಳಲ್ಲಿ ತೋರಿಸುವ ಗಿಚ್ಚ ಎಂದು ಹೇಳಲ್ಪಡುವ ಡೈಲಾಗುಗಳನ್ನು ತಾವೇ ಅಭಿನಯಿಸಿ ಖುಷಿಪಡುತ್ತಾರೆ. ಒಂದು ಹಂತದವರೆಗೆ ಇವೆಲ್ಲವೂ ಸರಿಯೇ ಎಷ್ಟೋ ಬಾರಿ ಈ ರೀತಿ ನಿರಂತರ ಪ್ರಯತ್ನ ಮಾಡಿದ ವ್ಯಕ್ತಿ ತನ್ನ ಅಭಿನಯದಲ್ಲಿ ಪರಿಣಿತಿ ಪಡೆಯಬಹುದು ಇನ್ನು ಕೆಲವರು ತಮ್ಮ ಲ್ಲಿ ಹುದುಗಿದ ಪ್ರತಿಭೆಗಳನ್ನು ಹೊರಹಾಕಬಹುದು ಆದರೆ ಮತ್ತೆ ಕೆಲವರು ತಮ್ಮನ್ನು ತಾವು ವೈಭವಿಕರಿಸಿಕೊಳ್ಳುವ ಭರದಲ್ಲಿ ಸಾಮಾಜಿಕ ಶಿಷ್ಟಾಚಾರಗಳನ್ನು ಮರೆಯುತ್ತಾರೆ.
ಎಷ್ಟೋ ಬಾರಿ 24 /7 ಲಭ್ಯವಾಗುವ ಚಾನೆಲ್ಗಳಲ್ಲಿ ತೋರಿಸಲು ಏನೂ ಇಲ್ಲದೆ ಇದ್ದಾಗ ಪಾಪ ಅವರಾದರೂ ಏನು ಮಾಡಿಯಾರು!! ಈ ಹಿಂದೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳನ್ನು, ಸುದ್ದಿಗಳನ್ನು ಮತ್ತೆ ಮತ್ತೆ ಮರು ಪ್ರಸಾರ ಮಾಡುತ್ತಾರೆ. ನೋಡುವವರು ಇರುವವರೆಗೂ ಇದು ನಡೆಯುತ್ತಲೇ ಇರುತ್ತದೆ. ವಿವಿಧ ಆಯಾಮಗಳಿಂದ ದುರ್ಘಟನೆಗಳನ್ನು , ದುರ್ವ್ಯವಹಾರಗಳನ್ನು,ಅಶ್ಲೀಲ ವಿಷಯಗಳನ್ನು ಪದೇ ಪದೇ ಚರ್ಚಿಸುವುದು ಮನೆಯವರೆಲ್ಲರ ಜೊತೆ ಕುಳಿತು ವೀಕ್ಷಿಸಲು ಸಾಧ್ಯವಿಲ್ಲದಂತಹ ವಿಡಿಯೋಗಳು ಮತ್ತೆ ಮತ್ತೆ ಪ್ರಸಾರಗೊಳ್ಳುವ ಮೂಲಕ ಮನೆ ಮನೆಗಳಲ್ಲಿ ಮಕ್ಕಳು ಹಿರಿಯರೆನ್ನದೆ ಎಲ್ಲರೂ ಇವುಗಳಿಗೆ ಬಲಿಪಶು ಆಗಿರುವುದು.
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು??
* ಚಲನಚಿತ್ರಗಳನ್ನ ಬಿಡುಗಡೆ ಮಾಡುವ ಮುನ್ನ ಅವುಗಳನ್ನು ಸೆನ್ಸಾರ್ ಮಂಡಳಿಯು ಪರಿಶೀಲಿಸಿ ಅನಗತ್ಯ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವಂತೆಯೇ ಈ ರೀತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುವ ಮುನ್ನ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅನುಮತಿ ಕಡ್ಡಾಯವಾಗಿ ಇರಬೇಕು.
* ಮನೆ ಮಂದಿಯೆಲ್ಲಾ ಕುಳಿತು ನೋಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಈ ಜಗತ್ತಿನಲ್ಲಿ ಕೆಟ್ಟದ್ದು ಇರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ವಿಷಯಗಳು ಇವೆ. ಅವುಗಳನ್ನು ಹೆಚ್ಚು ಹೆಚ್ಚಾಗಿ ಪ್ರಸರಿಸುವುದರಿಂದ ಧನಾತ್ಮಕ ಸಮಾಜ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.
* ನಮ್ಮ ದೇಶದ ಸಂಸ್ಕೃತಿ, ಇತಿಹಾಸ, ವೈಜ್ಞಾನಿಕ ಮತ್ತು ಸಾಮಾಜಿಕ ವಿಷಯಗಳ ಕುರಿತಾದ ಮಾಹಿತಿಗಳನ್ನು ಹಂಚಿಕೊಳ್ಳುವ ಕಾರ್ಯ ಸಾಮಾಜಿಕ ಜಾಲತಾಣಗಳಿಂದ ಆಗಬೇಕು.
*ಯಾವುದನ್ನು ವೈಭವೀಕರಿಸದೆ ವಸ್ತು ಸ್ಥಿತಿಯನ್ನು ಹೇಳುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ಕ್ರಮ ಕೈಗೊಳ್ಳಬೇಕು.
ಇದೆಲ್ಲದರ ಜೊತೆಗೆ ಮುಖ್ಯವಾಗಿ….. ಸಾಮಾಜಿಕ ಜಾಲತಾಣಗಳನ್ನು ಎಷ್ಟರಮಟ್ಟಿಗೆ ಬಳಸಬೇಕು ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಬೇಕು. ಅರಿವಿನ ಆಚಾರ ಉನ್ನತ ಬದುಕಿಗೆ ಸೋಪಾನವಾಗುತ್ತದೆ. ಊಟದಲ್ಲಿ ಉಪ್ಪಿನಕಾಯಿ ಇರಬೇಕೆ ಹೊರತು ಉಪ್ಪಿನಕಾಯಿಯೇ ಊಟವಾಗಬಾರದು ಅಂತೆಯೇ ಬದುಕಿಗೆ ಸುದ್ದಿಗಳು ಬೇಕೆ ಹೊರತು ಅವುಗಳೇ ಬದುಕಾಗಬಾರದು ಎಂಬುದನ್ನು ಅರಿತು ಸಾಮಾಜಿಕ ಜಾಲತಾಣಗಳನ್ನು ನಾವು ಬಳಸಿಕೊಳ್ಳಬೇಕು. ಬೇಕು ಬೇಡಗಳ ಆಯ್ಕೆ ನಮ್ಮದಾಗಿರಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಲಿ ಎಂಬ ಆಶಯದೊಂದಿಗೆ
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್