ಸ್ಮರಣೆ
ಎಸ್.ನಿಜಲಿಂಗಪ್ಪ
ಎಸ್. ನಿಜಲಿಂಗಪ್ಪನವರು ಹಿಂದೆ ಮೈಸೂರು ರಾಜ್ಯವೆಂಬ ಹೆಸರಿದ್ದ ಕರ್ನಾಟಕ ಮುಖ್ಯಮಂತ್ರಿಗಳಾಗಿ, ಪ್ರಾಮಾಣಿಕ ರಾಜಕಾರಣಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಹೋರಾಟಗಾರರಾಗಿ ಮಹತ್ವದ ಸೇವೆ ಸಲ್ಲಿಸಿದವರು.
ನಿಜಲಿಂಗಪ್ಪನವರು 1902ರ ಡಿಸೆಂಬರ್ 10ರಂದು ಜನಿಸಿದರು. ತಂದೆ ಅಬ್ಬಲೂರು ಅಡಿವೆಪ್ಪ ಅವರು ಮತ್ತು ತಾಯಿ ನೀಲಮ್ಮ. ಬಳ್ಳಾರಿ ಜಿಲ್ಲೆಯ ಹಲುವಾಗಲು ಎಂಬ ಹಳ್ಳಿಯಲ್ಲಿ ತಂದೆ ಒಬ್ಬ ಸಣ್ಣ ವರ್ತಕರಾಗಿದ್ದರು. ತಾಯಿ ಶಿವಭಕ್ತೆ. ಇವರ ಅಣ್ಣ ವೀರಪ್ಪ. ಅಕ್ಕ ಪುಟ್ಟಮ್ಮ.
ನಿಜಲಿಂಗಪ್ಪನವರಿಗೆ ಆರು ವರ್ಷ ಆಗಿದ್ದಾಗ ತಂದೆ ತೀರಿಕೊಂಡರು. ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯಲ್ಲಿದ್ದ ಚಿಕ್ಕಪ್ಪ ರುದ್ರಪ್ಪನವರ ಆಶ್ರಯದಲ್ಲಿ ನಿಜಲಿಂಗಪ್ಪನವರು ಬೆಳೆದರು. ಅಂತೆಯೇ ಇವರು ಸಿದ್ದವನಹಳ್ಳಿ ನಿಜಲಿಂಗಪ್ಪ ಎನಿಸಿಕೊಂಡರು.
ನಿಜಲಿಂಗಪ್ಪನವರು ಸಿದ್ದವನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನೂ, ದಾವಣಗೆರೆಯ ಆಂಗ್ಲೊ-ವನ್ರ್ಯಾಕ್ಕುಲರ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನೂ ಪಡೆದು ಚಿತ್ರದುರ್ಗದಲ್ಲಿ ಪ್ರೌಢಶಾಲೆ ಸೇರಿದರು. 1924ರಲ್ಲಿ ಸೆಂಟ್ರಲ್ ಕಾಲೇಜಿನಿಂದ ಪದವಿ ಗಳಿಸಿ, 1926ರಲ್ಲಿ ಪುಣೆಯ ನ್ಯಾಯಶಾಸ್ತ್ರ ಕಾಲೇಜಿನಿಂದ ಎಲ್.ಎಲ್.ಬಿ ಗಳಿಸಿ ವಕೀಲಿ ವೃತ್ತಿಯಲ್ಲಿ ತೊಡಗಿದರು. ನಿಜಲಿಂಗಪ್ಪನವರ ಮೇಲೆ ಇವರ ಚಿಕ್ಕಂದಿನಲ್ಲಿ ಪ್ರಭಾವ ಬೀರಿದವರು ಶಿವಭಕ್ತೆಯಾಗಿದ್ದ ತಾಯಿ ಹಾಗೂ ಇವರ ಉಪಾಧ್ಯಾಯರಾಗಿದ್ದ ವೀರಪ್ಪ ಮಾಸ್ತರ್. ಬಸವೇಶ್ವರರ ವಚನಗಳೂ ಮತ್ತು ಶಂಕರಾಚಾರ್ಯರ ದರ್ಶನವೂ ನಿಜಲಿಂಗಪ್ಪನವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಆನಿಬೆಸೆಂಟ್ ಅವರ ಬರಹಗಳೂ ಅವರ ಮೇಲೆ ಪ್ರಭಾವ ಬೀರಿದ್ದವು.
ನಿಜಲಿಂಗಪ್ಪನವರು ವಿದ್ಯಾರ್ಥಿಯಾಗಿದ್ದಾಗ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾಂವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಸ್ವಯಂಸೇವಕರಾಗಿ ಹೋಗಿದ್ದರು. ಆ ಸಂದರ್ಭದಿಂದ ಅವರ ಮೇಲೆ ಗಾಂಧೀಜಿಯವರ ಪ್ರಭಾವ ಆವರಿಸಿತು.
1931ರಲ್ಲಿ ಗಾಂಧೀಜಿಯವರು ನಡೆಸಿದ ದಾಂಡೀ ಯಾತ್ರೆಯೂ ಇವರ ಮೇಲೆ ಪ್ರಭಾವ ಬೀರಿತು.
1936ರಲ್ಲಿ ನಿಜಲಿಂಗಪ್ಪನವರು ನೇರ ರಾಜಕಾರಣಕ್ಕಿಳಿದರು. ಆ ವರ್ಷ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಹಲವು ಸತ್ಯಾಗ್ರಹಗಳಲ್ಲಿ ಭಾಗವಹಿಸಿ ಅನೇಕ ಸಲ ಕಾರಾಗೃಹವಾಸ ಮಾಡಿದರು. ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು.
ನಿಜಲಿಂಗಪ್ಪನವರು ಒಳ್ಳೆಯ ವಾಗ್ಮಿ. ರಾಜಕೀಯ ವಿಮೋಚನೆ, ಸಮಾಜ ಸುಧಾರಣೆ, ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಏಕೀಕರಣ, ಗ್ರಾಮೀಣ ಅರ್ಥ ವ್ಯವಸ್ಥೆಯ ಪುನರುದ್ಧಾರ ಇವುಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಸ್ತ್ರೀ ಪುರುಷ ಸಮಾನತೆ ಮತ್ತು ವಿಧವಾ ವಿವಾಹವನ್ನು ಪ್ರತಿಪಾದಿಸಿದರು. ಅರಣ್ಯ ಸತ್ಯಾಗ್ರಹದ ನಿಮಿತ್ತವಾಗಿ ನಿಜಲಿಂಗಪ್ಪನವರನ್ನು ಆಗಿನ ಮೈಸೂರು ಸರ್ಕಾರ ಬಂಧಿಸಿ ಒಂದೂವರೆ ವರ್ಷಗಳ ಕಾಲದ ಸಶ್ರಮ ಕಾರಾಗೃಹವಾಸ ಶಿಕ್ಷೆ ವಿಧಿಸಿದ್ದರ ಜೊತೆಗೆ, ಇವರ ವಕೀಲಿಯ ಸನದನ್ನೂ ಹಿಂದಕ್ಕೆ ತೆಗೆದುಕೊಂಡಿತು. ಮತ್ತೆ 1942ರ ಚಲೇಜಾವ್ ಚಳವಳಿಯ ಕಾಲದಲ್ಲಿ ಸರ್ಕಾರ ಇವರನ್ನು ಸ್ಥಾನಬದ್ಧತೆಯಲ್ಲಿಟ್ಟಿತ್ತು.
ನಿಜಲಿಂಗಪ್ಪನವರು 1945-1946ರಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಗೂ 1948-54ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೂ ಅಧ್ಯಕ್ಷರಾದರು. 1945-47ರಲ್ಲಿ ಸಂವಿಧಾನ ಸಭೆಗೂ 1952-56ರಲ್ಲಿ ಲೋಕಸಭೆಗೂ ಸದಸ್ಯರಾಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿತವಾದ ಮೇಲೂ ಇವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮುಂದುವರಿಸಿದರು. 1956ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಮುಂಬಯಿ ಮತ್ತು ಮದರಾಸು ಕರ್ನಾಟಕ ಭಾಗಗಳು, ಕೊಡಗು ಹಾಗೂ ಆಗಿನ ಮೈಸೂರು ರಾಜ್ಯ ಸೇರಿ ವಿಶಾಲ ಮೈಸೂರು ರಾಜ್ಯವಾದಾಗ ಇವರು ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ, 1958ರ ಏಪ್ರಿಲ್ ವರೆಗೂ ಆ ಹೊಣೆ ನಿರ್ವಹಿಸಿದರು.
1958ರಲ್ಲಿ ನಿಜಲಿಂಗಪ್ಪನವರು ಸಹಕಾರಿ ಕೃಷಿ ಪದ್ದತಿಯ ಅಧ್ಯಯನ ತಂಡದ ಮುಖ್ಯಸ್ಥರೂ, ದಿ ಇಂಡಿಯನ್ ಆಯಿಲ್ ಕಂಪೆನಿಯ ಗೌರವಾಧ್ಯಕ್ಷರೂ ಆದರು. ಆ ಸಮಯದಲ್ಲಿ ಇವರು ಮತ್ತೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ, 1961ರಲ್ಲಿ ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡಿನ ಸದಸ್ಯರಾಗಿಯೂ ಆಯ್ಕೆಯಾದರು.
1962-68ರಲ್ಲಿ ನಿಜಲಿಂಗಪ್ಪನವರು ಮತ್ತೆ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ವೇಳೆಗೆ ಅಖಿಲ ಭಾರತ ಖ್ಯಾತಿ ಪಡೆದಿದ್ದ ಇವರು 1968ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬೇಕಾಯಿತು. ಕಾಂಗ್ರೆಸ್ ಸಂಸ್ಥೆಗೆ ಪುನಶ್ಚೈತನ್ಯ ತುಂಬಲು ಬಹುವಾಗಿ ಶ್ರಮಿಸಿದರು. ಆದರೆ, 1969ರಲ್ಲಿ ಕಾಂಗ್ರೆಸಿನ ವಿವಿಧ ಬಣಗಳಲ್ಲಿ ಭಿನ್ನಾಭಿಪ್ರಾಯಗಳು ಬೆಳೆದು ಆ ಸಂಸ್ಥೆ ಒಡೆಯಿತು.
ನಿಜಲಿಂಗಪ್ಪನವರು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿದು 1971ರಲ್ಲಿ ಅದರಿಂದ ನಿವೃತ್ತರಾದರು. ಅನಂತರ ಅದರ ಕೋಶಾಧ್ಯಕ್ಷರಾಗಿದ್ದರು. 1977ರಲ್ಲಿ ಸಂಸ್ಥಾ ಕಾಂಗ್ರೆಸ್ಸು ಇತರ ಕೆಲವು ಪಕ್ಷಗಳೊಡನೆ ಸೇರಿತು, ಜನತಾ ಪಕ್ಷದ ಸ್ಥಾಪನೆಯಾಯಿತು.
ಜನತಾಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ಮಾರ್ಗದರ್ಶಕರಾಗಿ ದುಡಿದರೂ ಅಲ್ಲಿಯೂ ಅವರು ಅಶುದ್ಧತೆಗಳನ್ನು ಸಹಿಸಲಿಲ್ಲ.
ಮುಂದೆ ನಿಜಲಿಂಗಪ್ಪನವರು
ರಾಜಕೀಯದಿಂದ ಹಿಂದೆ ಸರಿದು ಸರ್ದಾರ್ ವಲ್ಲಭಭಾಯ್ ಸೊಸೈಟಿಯ ಆಧ್ಯಕ್ಷರಾಗಿದ್ದರು.
ನಿಜಲಿಂಗಪ್ಪನವರಿಗೆ ಕರ್ನಾಟಕ ವಿಶ್ವವಿದ್ಯಾಲಯವು 1968ರಲ್ಲಿ ಗೌರವ ಎಲ್.ಎಲ್.ಡಿ. ಪದವಿಯನ್ನಿತ್ತು ಸನ್ಮಾನಿಸಿತು. ನನ್ನ ಬದುಕು ಮತ್ತು ರಾಜಕೀಯ (My Life and Politics) ಅವರ ಆತ್ಮಚರಿತ್ರೆ.
ಸರಳತೆ ಮತ್ತು ಪ್ರಾಮಾಣಿಕತೆಗಳಿಂದ ಜನಸಾಮಾನ್ಯರಾಗಿ ಬಾಳ್ವೆ ನಡೆಸಿದ ನಿಜಲಿಂಗಪ್ಪನವರು 2000ದ ಆಗಸ್ಟ್ 8ರಂದು ಈ ಲೋಕವನ್ನಗಲಿದರು.
ಮಾಹಿತಿ -ಕನ್ನಡ ಸಂಪದ.