ಭಾವನೆ

ಭಾವನೆ

ಕೆಲವು ಸಂಬಂಧಗಳು ನಮಗೆ ಹುಟ್ಟಿನಿಂದ ರಕ್ತದ ಸಂಬಂಧಗಳು ಇನ್ನು ಕೆಲವು ನಾವು ನಂತರ ಮಾಡಿಕೊಂಡ ಸಂಬಂಧಗಳು. ಸ್ನೇಹಿತರು, ಮುದವೆಯ ನಂತರದ ಸಂಬಂಧಗಳು. ಜೀವನದಲ್ಲಿ ಯಾವುದೇ ಸಂಬಂಧ ಪರಿಪೂರ್ಣ ಸಂಬಂಧವಾಗಿರುವುದಿಲ್ಲ.

ಭಿನ್ನಾಭಿಪ್ರಾಯ ಮನಸ್ತಾಪಗಳು ಎಲ್ಲ ಸಂಬಂಧಗಳಲ್ಲೂ ಇರುತ್ತವೆ. ಆದರೆ ಯಾವುದೇ ಸಂಬಂಧವು ದೀರ್ಘಕಾಲ ಬಾಳಬೇಕಾದರೆ ಪರಸ್ಪರರ ತಪ್ಪು ಮತ್ತು ಬಲಹೀನತೆಯನ್ನು ಕ್ಷಮಿಸ ಬೇಕು. ಇದು ಒಂದು ವಿಧಾನ ಇನ್ನೊಂದು ವಿಧಾನವೆಂದರೆ ಅಂತಹ ಕೀಳು ಮಟ್ಟದ ವಿಚಾರ ಅಥವಾ ಭಾವನೆ ಹೊಂದಿರುವ ಜನರೊಂದಿಗೆ ಸಂಪರ್ಕವನ್ನು ಕಡಿಮೆ ಮಾಡಿಕೊಳ್ಳಬೇಕು.

ನಮ್ಮ ಜೀವನದ ಕಾಲಮಾನ 100 ವರ್ಷಗಳಿಂದ ಕಡಿಮೆಯಾಗಿ, 70-80 ವರ್ಷಗಳಿಗೆ ಸೀಮಿತವಾಗುತ್ತಾ ಬರುತ್ತಿದೆ. ಇರುವವರೆಗೂ ಎಲ್ಲರೊಂದಿಗೂ ಸಂತೋಷದಿಂದ ಬಾಳುವ ಪ್ರಯತ್ನ ಮಾಡುತ್ತಲೇ ಇರಬೇಕು. ಅವಮಾನ, ಅಪವಾದ, ಅನುಮಾನ ಇಂತಹ ಎಷ್ಟೊಂದು ವಿಷಯಗಳು ಜೀವನದುದ್ದಕ್ಕೂ ನಡೆದುಕೊಂಡು ಬರುತ್ತಲೇ ಇರುತ್ತದೆ. ನಾವು ನಮ್ಮ ಎದುರಿನವರನ್ನು ತಿದ್ದಲು ಸಾಧ್ಯವಿಲ್ಲ, ನಾವೇ ನಮ್ಮ ಸ್ವಭಾವದಲ್ಲಿ ಸ್ವಲ್ಪ ಅನುಸರಣೆ ಮಾಡಿಕೊಂಡರೆ ಜೀವನ ಅನುಕರಣೀಯವಾಗುತ್ತದೆ.

ನಮ್ಮ ಪ್ರೀತಿ ಪಾತ್ರರನ್ನು ಮಾತ್ರವೇ ಕ್ಷಮಿಸ ಬೇಕೆಂಬ ವಾದವನ್ನು ಬಿಟ್ಟು ಆದಷ್ಟು ಸ್ಥಿತ ಪ್ರಜ್ಞತೆಯನ್ನು ಅನುಸರಿಸುವುದು ಉತ್ತಮ. ನಾವೆಲ್ಲರೂ ಉಪ್ಪು-ಖಾರಗಳನ್ನು ತಿನ್ನುತ್ತಾ ಕಾಮ-ಕ್ರೋಧಾದಿಗಳು ಇರುವ ಜನರು ಇದೆಲ್ಲಾ ಆಗದು ಎನ್ನುವ ಭಾವನೆ ಎಲ್ಲರಿಗೂ ಬರಬಹುದು. ಯೌವ್ವನದ ಹುಮ್ಮಸ್ಸಿನಲ್ಲಿ ಎಲ್ಲವೂ ಹೆಚ್ಚಾಗಿಯೇ ಇರುತ್ತದೆ. “ಇಳಿತಾ ಬಂದ ಹಾಗೆ ತಿಳಿತಾ” ಬಂದು ಎಂಬ ಗಾದೆ ಇದೆ. ನಮ್ಮ ಜೀವನದಲ್ಲಿ ಅನುಭವವಾದಾಗ ಮಾತ್ರ ನಾವು ಬದಲಾಗಬೇಕೆಂದಿಲ್ಲ. ಬೇರೆಯವರ ಜೀವನವೂ ನಮಗೆ ಒಂದು ಪಾಠವೇ. ಎಲ್ಲರಿಂದಲೂ ಉತ್ತಮ ಗುಣಗಳನ್ನು ಆಯ್ದು ಕೊಂಡು ಅಳವಡಿಸಿ ಕೊಳ್ಳುವ ಪ್ರಯತ್ನ ಮಾಡಬೇಕು. ಕೆಲವೊಂದನ್ನು ಓದಿ, ತಿಳಿ, ಇನ್ನು ಕೆಲವನ್ನು ಮಾಡಿ ತಿಳಿ ಮತ್ತು ಕೆಲವನ್ನು ಹಿರಿಯರ ಅನುಭವದಿಂದ ಅರಿತು ತಿಳಿ ಎಂತೆಲ್ಲಾ ಹೇಳುತ್ತಾರೆ. ಜೀವನ ಸದಾ ಕಾಲಕ್ಕೆ ದೊಡ್ಡ ಪಾಠ ಶಾಲೆ ಹುಟ್ಟಿದಾಗಿನಿಂದ ಸಾಯುವವರೆಗೂ ಕಲಿಯುತ್ತಲೇ ಇರುತ್ತೇವೆ ಹಾಗೆಂದ ಮಾತ್ರಕ್ಕೆ ನಮಗೆ ಬುದ್ಧಿ ಕಮ್ಮಿ ಎಂದಲ್ಲ. ಭಾಗವತದ ಹನ್ನೊಂದನೆ ಸರ್ಗದಲ್ಲಿ 24 ಜನ/ ವಸ್ತುಗಳಿಂದ ಪಾಠವನ್ನು ಕಲಿಯಬೇಕೆಂದು ಹೇಳುತ್ತಾರೆ. ನಮ್ಮಲ್ಲಿ ಜೀವ – ಜಡಗಳಿಗೂ ಸಮನಾದ ಮಹತ್ವವಿದೆ. ಪ್ರಕೃತಿಯು ನಮಗೆ ಪಾಠ ಶಾಲೆ ಸದಾ ಕಾಲ ಅಧ್ಯಯನಶೀಲಾಗಿರೋಣ.

ನಮ್ಮ ಭಾವನೆಗಳಿಗೆ ಪೆಟ್ಟು ಕೊಟ್ಟಾಗ ಕ್ಷಮಿಸೋಣ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ವಿರೋಧಿಸೋಣ. ದಬ್ಬಾಳಿಕೆಯನ್ನು ಮಾಡುವುದರಷ್ಟೇ ಅಪರಾಧ ಸಹಿಸುವುದು ಕೂಡ. ನಮ್ಮನ್ನು ಉಪಯೋಗಿಸಿ ಬಿಟ್ಟು ಬಿಡುವವರ ಬಗೆಗೆ ನಮಗೆ ಪ್ರತೀಕಾರ ಬೇಡ ಇನ್ನೊಮ್ಮೆ ನಮ್ಮನ್ನು ಬಳಸಿಕೊಳ್ಳಲು ಬಿಡುವುದು ಬೇಡ. ನಮ್ಮನ್ನು ಅಪಹಾಸ್ಯ ಮಾಡುವವರ ಮುಂದೆ ನೊಂದು ನಿಲ್ಲವುದು ಬೇಡ ಅವರ ಉದ್ಧಟತನವನ್ನು ನಿಲಕ್ಷಿಸೋಣ. ನಾವು ಉತ್ತಮವಾಗಿ ಬಾಳೋಣ. ಬೇರೆಯವರನ್ನು ನಮ್ಮೊಂದಿಗೆ ಕರೆದುಕೊಂಡು ಹೋಗೋಣ.

-ಮಾಧುರಿ

Don`t copy text!